ಈ ವರ್ಷ ಮಾರ್ಚ್ 29 ರಿಂದ ಏಪ್ರಿಲ್ 6 ರವರೆಗೆ ನಡೆಯವ ದ್ರೌಪದಿ ಶಕ್ತ್ಯೋತ್ಸವ ಎಂದೇ ಪ್ರಸಿದ್ಧವಾದ ಕರಗ ಮಹೋತ್ಸವ ವಸಂತನ ಆಗಮನದೊಂದಿಗೆ ಮರ ಗಿಡಗಳಲ್ಲಿ ಹೊಸ ಚಿಗುರು ಕಾಣುವ ಚೈತ್ರ ಮಾಸದ ಚಂದಿರ ಪೂರ್ಣವಾಗಿ ಮೂಡಿ ಬರುವ ಹುಣ್ಣಿಮೆಯ ವಿಶೇಷ ಸಂಭ್ರಮದೊಂದಿಗೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಂಗಳೂರು ಕರಗ ಮಹೋತ್ಸವ ಪಾಂಡವರಲ್ಲಿ ಹಿರಿಯನಾದ ಧರ್ಮರಾಯನ ಹೆಸರಿನಲ್ಲಿರುವ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಿಂದಲೇ ಕರಗ ಆರಂಭಗೊಳ್ಳುತ್ತದೆ. ಕರಗ ಶಕ್ತಿಯ ಮೂಲ ಸೆಲೆಯಾದ ದ್ರೌಪದಿಗೆ ಹೆಚ್ಚಿನ ಪ್ರಾಧಾನ್ಯತೆ ಹಾಗೂ ದ್ರೌಪದಿ ಕರಗವೆಂದು ಕರೆಯವುದು ರೂಢಿ. ಆಧ್ಯಾತ್ಮಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಭದ್ರತೆಗಳಿಂದ ಆಚರಿಸುವ ಸಂಪ್ರದಾಯಬದ್ದ ಕರಗದಲ್ಲಿ ವೈವಿಧ್ಯತೆ ಹಾಗೂ ಪರಂಪರೆ ಇದೆ.
ಏನಿದು ಕರಗ? “ಕ” ಎಂದರೆ ಕೈಯಲ್ಲಿ ಮುಟ್ಟದೆ “ರ” ಎಂದರೆ ಕುಂಡದಲ್ಲಿ ತಲೆಯಲ್ಲಿ ಧರಿಸಿದ “ಗ” ಎಂದರೆ ಚಲಿಸುವುದು ಅಂದರೆ ಕೈಯಲ್ಲಿ ಮುಟ್ಟದೆ ಶಿರದಲ್ಲಿ ಧರಿಸಿ ಭಕ್ತಾಧಿಗಳಿಗೆ ದರ್ಶನ ನೀಡುವುದು. ಕರಗದ ಅಗ್ರ ಭಾಗದಲ್ಲಿ ವಿಷ್ಣು, ಕಂಠದಲ್ಲಿ ಶಿವ ತಳಭಾಗದಲ್ಲಿ ಬ್ರಹ್ಮ, ಮಧ್ಯದಲ್ಲಿ ಮಾತೃಗಣಗಳು ವಾಸವಾಗಿರುತ್ತದೆ ಎಂಬ ಪ್ರತೀತಿ ಇದೆ. ಬಿದಿರಿನ ಕಂಬದ ಮೇಲೆ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿ, ವಿವಿಧ ಪೂಜಾ ಆರತಿ, ಹಸಿಕರಗ, ಪೊಂಗಲು ಸೇವೆ ನಡೆಯುತ್ತದೆ.
ಸಾಮರಸ್ಯ ಹಾಗೂ ಭಾವೈಕ್ಯತೆಯ ಹಬ್ಬವೆಂದೇ ಹೆಸರಾದ ಕರಗ ಹಬ್ಬಕ್ಕೆ ಮೈಸೂರಿನ ಯದುವಂಶದ ಅರಸರು ಪ್ರೋತ್ಸಾಹ ನೀಡಿ ಧರ್ಮದೇವರಾಯನ ದೇವಾಲಯವನ್ನು ಕಟ್ಟಿ ಕರಗ ಉತ್ಸವಕ್ಕೂ ನೆರವು ನೀಡಿದರು ಎನ್ನಲಾಗುತ್ತದೆ. ಇಮ್ಮಡಿ ಕೃಷ್ಣ ರಾಜ ಒಡೆಯರ್ ಈ ದೇವಾಲಯಕ್ಕೆ ಭೇಟಿ ನೀಡಿ ಅಲಗು ಸೇವೆಗಾಗಿ ೨ ಖಡ್ಗಗಳನ್ನು ನೀಡಿದ್ದರು. ಇಂದಿಗೂ ಕರಗೋತ್ಸವದಲ್ಲಿ ಅಲಗು ಸೇವೆ ನಡೆಯುತ್ತದೆ. ಅಷ್ಟೇ ಅಲ್ಲದೇ ಹೆಚ್ಚಿನ ಊರುಗಳಲ್ಲಿ ಕರಗ ಹಬ್ಬಕ್ಕೆ ಆಹ್ವಾನ ಪತ್ರಿಕೆ ಅಚ್ಚಾಗುವುದು ಮೈಸೂರು ಅರಸರ ಹೆಸರಿನಲ್ಲಿ. ಕರಗ ತಿಗಳರ ಮುಂದಾಳತ್ವದಲ್ಲಿದ್ದರೂ ಎಲ್ಲಾ ಧರ್ಮಿಯರೂ ಸಕ್ರಿಯವಾಗಿ ಭಾಗವಹಿಸುತ್ತಾರೆ.
ಶಕ್ತಿ ದೇವಿಯ ಉಪಾಸನೆಯ ಕರಗಕ್ಕೂ ಮಲ್ಲಿಗೆ ಹೂವಿಗೂ ಅವಿನಾಭಾವ ನಂಟು. ಸುವಾಸನೆ ಸೂಸುವ ಮಲ್ಲಗೆ ಹೂಗಳ ಪರಿಮಳ ಭಕ್ತಾದಿಗಳನ್ನು ಭಕ್ತಿಯ ಅಲೆಯಲ್ಲಿ ನಿಲ್ಲಿಸುತ್ತದೆ. ಬೆಂಗಳೂರು ಕರಗಕ್ಕೂ ಉಳಿದೆಡೆ ನಡೆಯುವ ಹೂವಿನ ಕರಗಕ್ಕೂ ಆಚರಣೆ ಯಲ್ಲಿ ಹಲವು ವ್ಯತ್ಯಾಸಗಳಿವೆ. ಬೆಂಗಳೂರಿನಲ್ಲಿ ಗೋವಿಂದ ನಾಮಸ್ಮರಣೆ ಶಂಖ ಧ್ವನಿಯ ನಡುವೆ ಕರಗ ಮುಂದೆ ಸಾಗುತ್ತದೆ. ಬೇರೆ ಕೆಲವಡೆ ಗಂಟಾನಾದ ತಮಟೆ ಸದ್ದು ಕರಗದ ಜೊತೆಗಿರುತದೆ. ರಾತ್ರಿ ಎತ್ತುವ ಕರಗ ಸೂರ್ಯೋದಯಕ್ಕೆ ಮೊದಲೇ ಗುಡಿ ಸೇರುವುದು ವಾಡಿಕೆ. ಕರಗ ಹೊರುವವರು ತಾಲೀಮು ಆರಂಭಿಸಿ ದೈಹಿಕ ಹಾಗೂ ಮಾಸಿಕವಾಗಿ ಬಲಗೊಳ್ಳಲು 3 ತಿಂಗಳು ಮೊದಲಿನಿಂದಲೇ ನೇಮ, ನಿಷ್ಠೆ ಕಠಿಣ ವೃತಾಚರಣೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಮಲ್ಲಿಗೆ ಹೂವಿನ ಮಾಲೆ ಚೆಲ್ಲುತ್ತಿರುವ ಹೂವಿನ ಕರಗ ಹೊತ್ತು ನಡೆಯುವ ಪೂಜಾರಿ ಮತ್ತು ವೀರ ಕುಮಾರರ ಉತ್ಸಾಹ ಹಾಗೂ ಗೋವಿಂದ ನಾಮಸ್ಮರಣೆಯೊಂದಿಗೆ ವೀರ ಕುಮಾರರು ಭಕ್ತಿ ಪೂರ್ವಕವಾಗಿ ಅಲಗು ಸೇವೆ ಮಾಡುತ್ತಾರೆ. ಧ್ವಜಾರೋಹಣದಿಂದ ಮೊದಲ್ಗೊಂಡು ವಸಂತೋತ್ಸವ ಮುಗಿಯುವವರೆಗೆ ಕಂಕಣ ಕಟ್ಟಿ ಕೊಂಡು ಗುಡಿಗಳಲ್ಲಿ ವಾಸ್ತವ್ಯ ಹೂಡುತ್ತಾ ಕಚ್ಚೆ ಪಂಚೆ, ಪೇಟಾ, ರುಮಾಲು ಮತ್ತು ವೀರಕುಮಾರರು ಹಳದಿ ಬಣ್ಣದ ಪೋಷಾಕು ಧರಿಸುತ್ತಾರೆ.
ತಿಗಳರು ವಾಸಿಸುವ ಹೆಚ್ಚಿನೆಲ್ಲಾ ಊರುಗಳಲ್ಲಿ ಕರಗ ಉತ್ಸವ ನಡೆಯುತ್ತದೆ. ತಮಟೆ, ನಾಗಸ್ವರವಾದನಗಳಿಗೆ ಹೆಜ್ಜೆ ಹಾಕುತ್ತಾ ಸೂರ್ಯ ಮುಳುಗಿದ ಮೇಲೆ ಚಂದಿರನ ಬೆಳಕಿನಲ್ಲಿ ದೇವಾಲಯದ ಮುಂದೆ ಧ್ವಜಾರೋಹಣದೊಂದಿಗೆ ಕರಗೋತ್ಸವಕ್ಕೆ ಚಾಲನೆ ನೀಡುತ್ತಾರೆ. ಕರಗ ಹೊತ್ತು ನಡೆಯುವ ವ್ಯಕ್ತಿಗೆ ವಸನ ಸಂಸ್ಕಾರ ಮಾಡಿ ಕಂಕಣ ಕಟ್ಟಿ ಸಿಂಗರಿಸಿ, ಸೀರೆ ಉಡಿಸಿ, ಆಭರಣ ತೊಡಿಸಿ ನವವಧುವಿನಂತೆ ಶೃಂಗರಿಸುತ್ತಾರೆ. ಕರಗ ಹೊರುವ ಹೊತ್ತಿಗೆ ಹಣೆಗೆ ನಾಮ, ಸೊಂಟಕ್ಕೆ ಪಟ್ಟಿ, ತಲೆಗೆ ಪೇಟ ಧರಿಸಿಕೈಯಲ್ಲಿ ಅಲಗು ಹಿಡಿದ ಅಂಗರಕ್ಷಕ ತಂಡದ ವೀರಕುಮಾರರ ರಕ್ಷಣೆಯಲ್ಲಿ ಕರಗ ಹೊತ್ತ ವ್ಯಕ್ತಿ ಅಚ್ಚ ಮಲ್ಲಿಗೆ ಹೂವಿನಿಂದ ಶೃಂಗಾರವಾದ ಕರಗ ಹೊರುವುದನ್ನು ನೋಡುವುದು ಕಣ್ಣಿಗೆ ಹಬ್ಬ .
ಮೊದಲ ದಿನ ಖಡ್ಗ, ವೀರ ಚಾವುಡಿ, ಮತ್ತಿತರ ಪೂಜಾ ಪರಿಕರಗಳೊಂದಿಗೆ ಮೆರವಣಿಗೆ ನಡೆದು ಎರಡನೇ ದಿನ ಪೂಜಾಧಾರಿಗಳು ಹಸಿಕರಗವನ್ನು ಸೊಂಟದ ಮೇಲಿಟ್ಟುಕೊಂಡು ಸಾಗಿದರೆ ಕೆಲವೆಡೆ ಪಟ್ಟಿ ಹಲಗೆ ಅಥವಾ ತಟ್ಟೆಯಲ್ಲಿಟ್ಟುಕೊಂಡು ಕುಣಿಯುತ್ತಾ ಸಾಗುತ್ತಾರೆ. ಹಸಿಕರಗದ ಮರು ದಿವಸ ಪೊಂಗಲ್ ಉತ್ಸವ ಮತ್ತು ದೀಪೋತ್ಸವ ವಹ್ನಿ ಕುಲಕ್ಕೆ ಸೇರಿ ಹೆಂಗಸರು ಹಸಿ ಹಿಟ್ಟಿನಿಂದ ಮಾಡಿದ ದೀಪಗಳನ್ನು ತಲೆಯ ಮೇಲೆ ಹೊತ್ತು ಗುಂಪು ಗುಂಪಾಗಿ ಸಕಲವಾದ್ಯಗಳೊಡನೆ ಆಗಮಿಸಿ ಪೂಜೆ ಮಾಡಿಸುತ್ತಾರೆ. ದೀಪಾರಾಧನೆಯ ಮರುದಿನ ದ್ರೌಪದಿ ಧರ್ಮರಾಯರ ಮದುವೆ. ಹೂವಿನ ಕರಗವನ್ನು ತಲೆ ಮೇಲೆ ಧರಿಸಿದ ಪೂಜಾರಿ ದೇವಳದ ಒಳಗಿನಿಂದ ಬರುವುದು ಎಲ್ಲರೂ ಭಕ್ತಿ ಕಾತರದಿ ಕಾಯುವ ಕ್ಷಣ ಸಂಪೂರ್ಣ ಮಲ್ಲಿಗೆ ಮಾಲೆ ನಡು ನಡುವೆ ಕನಕಾಂಬರದ ಅಲಂಕಾರಗಳೊಂದಿಗೆ ಗರ್ಭಗುಡಿಯಿಂದ ಹೊರಕ್ಕೆ ಹೂವಿನ ಕರಗ ಆವರಣ ಪ್ರದಕ್ಷಿಣೆ ಹಾಕುತ್ತಾ ಹೊರ ಹೋಗುತ್ತದೆ. ಇದರ ಜೊತೆಗೆ ವೀರ ಕುಮಾರರು ಅಲಗು ಸೇವೆ ಶಂಖನಾದ ಗಂಟೆ ಶಬ್ದ ಗೋವಿಂದ ನಾಮಸ್ಮರಣೆ, ಭಕ್ತಿಯಲ್ಲಿ ಮಿಂದೆದ್ದ ಭಕ್ತಗಣ, ಎಲ್ಲೆಡೆ ಹರಡಿರುವ ಮಲ್ಲಿಗೆ ಕಂಪು, ಹೂವಿನ ಕರಗಕ್ಕೆ ಭಕ್ತಿ ಪೂರಕವಾಗಿ ನಮಿಸುವ ಜನಸ್ತೋಮ, ವಿದ್ಯುತ್ ದೀಪಗಳ ಝಗ ಮಗ ಕರಗೋತ್ಸವಕ್ಕೆ ಇಂಬು ನೀಡುತ್ತದೆ. ಬೆಂಗಳೂರು ಕರಗೋತ್ಸವದ ಮೆರವಣಿಗೆ ಸಾಗುತ್ತಾ ಮಸ್ತಾನ್ ಸಾಬ್ ಸಮಾದಿ ಸ್ಥಳದ ದರ್ಗಾದ ಎದುರು ಒಂದು ಗಳಿಗೆ ನಿಂತು ಬಳಿಕ ಮುಂದೆ ಸಾಗುವುದು ವಾಡಿಕೆ. ದಂತಕಥೆ ಪ್ರಕಾರ ಮಸ್ತಾನ್ ಸಾಬ್ ಎಂಬ ಮುಲ್ಲಾ ಸಾಹೇಬರ ಕಾಲಿಗೆ ಗಾಯ ಆದಾಗ ಕರಗ ಹೊತ್ತ ಪೂಜಾರಿ ಗಾಯದ ಮೇಲೆ ಕುಂಕುಮ ಹಚ್ಚಿ ಗಾಯ ವಾಸಿ ಮಾಡಿದಾರಂತೆ. ಅಂದಿನಿಂದ ಇಂದಿನವರೆಗೂ ಈ ಪದ್ದತಿ ಜಾರಿಯಲ್ಲಿದೆ. ಮರುದಿನ ಸಂಜೆ ವಸಂತೋತ್ಸವ ಓಕುಳಿಯಾಟ. ವಹ್ನಿ ಕುಲದ ಮಹಿಳೆಯರು ತಮ್ಮ ಮನೆಗಳಲ್ಲಿ ಸಿದ್ದಪಡಿಸಿದ ಅರಶಿಣ ಕಲಸಿದ ನೀರನ್ನು ಬಿಂದಿಗೆಯಲ್ಲಿ ತುಂಬಿಸಿ ಮೆರವಣಿಗೆಯಲ್ಲಿ ಧರ್ಮರಾಯಸ್ವಾಮಿ ದೇಗುಲಕ್ಕೆ ತಂದು ವೀರ ಕುಮಾರರ ಮೈಗೆ ಓಕುಳಿ ಅರಚುತ್ತಾರೆ. ಕರಗ ಉತ್ಸವ ಆಚರಿಸುತ್ತಿರುವ ತಿಗಳರಲ್ಲಿ ನಾನು ಕೇಳಿ ತಿಳಿದು ಕೊಂಡಂತೆ ಕರಗ ಉಗಮದ ಹಿಂದೊಂದು ಮಹಾಭಾರತದ ಪ್ರಸಂಗವಿದೆ. ಕುರುಕ್ಷೇತ್ರ ಯುದ್ಧದ ನಂತರ ಪಾಂಡವರ ಸ್ವರ್ಗಾರೋಹಣ ಸಂದರ್ಭದಲ್ಲಿ ಪತಿಯರನ್ನು ಹಿಂಬಾಲಿಸುತ್ತಿದ್ದ ದ್ರೌಪದಿ ಮೂರ್ಛೆ ಹೋಗುತ್ತಾಳೆ. ಎಚ್ಚರಗೊಂಡು ನೋಡಿದಾಗ ಪತಿಯರಿಲ್ಲದಿರುವುದನ್ನು ಕಂಡು ಗಾಬರಿಯಾಗುತ್ತಾಳೆ. ಅದೇ ಸಮಯದಲ್ಲಿ ತಿಮಿರಾಸುರನೆಂಬ ರಕ್ಕಸ ಆಕೆಯನ್ನು ಪೀಡಿಸುತ್ತಾನೆ. ಆತನ ನಿಗ್ರಹಕ್ಕೆ ದ್ರೌಪದಿ ವಿಶೇಷ ಶಕ್ತಿ ಹಾಗೂ ವಿರಾಟ ರೂಪ ತಾಳಿದ ಆಕೆ ತಲೆಯ ಮೇಲೆ ಕುಂಭವನ್ನು ಧರಿಸಿದ್ದಳೂ. ಅದಕ್ಕಾಗಿ ಕುಂಭವೇ ಪ್ರಧಾನವಾಗಿ ಕರಗದಲ್ಲಿ ಆರಾಧಿಸಲ್ಪಡುತ್ತಿರುವುದು ಮತ್ತು ಶಕ್ತಿ ದೇವಿ ಅವತಾರ ತಾಳಿದ ದ್ರೌಪದಿ “ವೀರ ಕುಮಾರರು” ಎಂಬ ಸೈನಿಕರನ್ನು ಸೃಷ್ಟಿಸಿ ಅಸುರರನ್ನು ಸೋಲಿಸುತ್ತಾಳೆ.
ಈ ವೀರ ಕುಮಾರರೆ ತಿಗಳರು ಎಂಬ ನಂಬಿಕೆ ಇದೆ. ದ್ರೌಪದಿ ಅಸುರನ ಕೊಂದು ಹೊರಡುವಾಗ ಆಕೆಯನ್ನು ವೀರ ಕುಮಾರರು ಭೂಲೋಕದಲ್ಲಿ ನೆಲೆಸುವಂತೆ ಕೇಳಿಕೊಳ್ಳಲಾಯಿತು ಆದರೆ ದ್ರೌಪದಿ ತಾನು ವರ್ಷ ಕ್ಕೋಮ್ಮೆ ಚೈತ್ರ ಮಾಸದ ಹುಣ್ಣುಮೆಯ ದಿನ ಬರುವುದಾಗಿ ವಾಗ್ದಾನ ನೀಡಿದಂತೆ ಪ್ರತಿ ವರ್ಷ ಭೂಮಿಗೆ ದ್ರೌಪದಿ ಹಿಂತಿರುಗಿ ಬರುವ ದಿನವೇ ಕರಗ ಉತ್ಸವ ಎನ್ನುತ್ತಾರೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.