ಮನುಷ್ಯನಿಗೆ ಎಲ್ಲಾ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತು ಅತೀ ಮುಖ್ಯವಾಗಿದ್ದು, ಆರೋಗ್ಯ ಕಾಳಜಿ ಬಹಳ ಮುಖ್ಯ. ಆರೋಗ್ಯ ಕಾಪಾಡಿಕೊಳ್ಳಲು ಉಪಯೋಗವಾಗುವಂತಹ ಇಂತಹ ಉಚಿತ ವೈದ್ಯಕೀಯ ವಿಚಾರ ಸಂಕಿರಣಗಳಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಸಮಾಜ ಸೇವೆ, ಶಿಕ್ಷಣ, ವೈದ್ಯಕೀಯ ಮೊದಲಾದ ಸಮಾಜಪರ ಕಾರ್ಯಗಳಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ ಅವರು ತಿಳಿಸಿದರು.

ಬೋಂಬೆ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಜುಲೈ 26ರಂದು ಜೂಯಿ ನಗರದ ಬಂಟ್ಸ್ ಸೆಂಟರ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದ ಭಾರತಿ ಡಾ. ವೈ. ಶಿವಾನಂದ ಶೆಟ್ಟಿ ವೇದಿಕೆಯಲ್ಲಿ ನಡೆದ ವೈದ್ಯಕೀಯ ವಿಚಾರ ಸಂಕಿರಣದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಎಲ್ಲಾ ವೈದ್ಯರು ತಮ್ಮ ಅಮೂಲ್ಯ ಸಮಯ ಮತ್ತು ಪರಿಣಿತ ಜ್ಞಾನವನ್ನು ಸಮಾಜ ಬಾಂಧವರೊಂದಿಗೆ ಮುಕ್ತವಾಗಿ ಹಂಚಿಕೊಂಡಿರುವುದು ಅಭಿನಂದನೀಯ. ಅದಕ್ಕಾಗಿ ಅವರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಸಮಾಜ ಬಾಂಧವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಇಂತಹ ವಿಚಾರ ಸಂಕಿರಣಗಳು ಆಗಾಗ ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಕ್ರಿಯಾಶೀಲವಾಗಿದೆ ಎಂದರು.
ಡಾ. ವೈ. ಶಿವಾನಂದ ಶೆಟ್ಟಿ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಗರದ ಪ್ರಸಿದ್ಧ ವೈದ್ಯರಾದ ಶಿಶು ವೈದ್ಯ ಡಾ. ಸತ್ಯಪ್ರಕಾಶ್ ಶೆಟ್ಟಿ, ಸ್ತ್ರೀ ರೋಗ ತಜ್ಞೆ ಡಾ. ಸಂಗೀತಾ ಸತ್ಯಪ್ರಕಾಶ್ ಶೆಟ್ಟಿ, ಅಂಕಾಲಾಜಿ ಸರ್ಜನ್ ಡಾ. ಸುನೀಲ್ ಎಚ್. ಶೆಟ್ಟಿ, ಡಾ. ಶಿಶೀರ್ ಶೆಟ್ಟಿ, ಆರ್ಥೋಪೆಡಿಕ್ ಸರ್ಜನ್ ಡಾ. ಸುನಿಲ್ ಎಚ್. ಶೆಟ್ಟಿ, ದಂತ ವೈದ್ಯೆ ಡಾ. ಅಶ್ವಿತಾ ಶೆಟ್ಟಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ವೈದ್ಯರನ್ನು ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.
ಡಿ. ವೈ ಪಾಟೀಲ್ ದಂತ ಕಾಲೇಜು ನವಿಮುಂಬಯಿ ಇಲ್ಲಿನ ಪ್ರಾಧ್ಯಾಪಕಿ ಡಾ. ಅಶ್ವಿತಾ ಶೆಟ್ಟಿ ಮಕ್ಕಳಿಗೆ ದಂತ ಆರೈಕೆ ಬಗ್ಗೆ ಅಮೂಲ್ಯವಾದ ಮಾಹಿತಿ ನೀಡಿ, ಮೃದುವಾದ ಬ್ರಷ್ ಗಳನ್ನು ಬಳಸಿ ಸರಿಯಾಗಿ ಹಲ್ಲುಜ್ಜುವ ತಂತ್ರಗಳನ್ನು ವಿವರಿಸಿದರು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದನ್ನು ಒತ್ತಿ ಹೇಳಿದ ಅವರು ಪೋಷಕರು ತಮ್ಮ ಮಕ್ಕಳ ಬಾಯಿಯ ಆರೋಗ್ಯವನ್ನು ಚಿಕ್ಕ ವಯಸ್ಸಿನಿಂದಲೇ ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ತಿಳಿಸಿದರು.
ಬೋಂಬೆ ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕಿಶೋರ್ ಶೆಟ್ಟಿ, ಕೋಶಾಧಿಕಾರಿ ಸಿಎ ವಿಶ್ವನಾಥ್ ಎಸ್. ಶೆಟ್ಟಿ, ಜತೆ ಕಾರ್ಯದರ್ಶಿ ಜಯರಾಜ್ ರೈ, ಜತೆ ಕೋಶಾಧಿಕಾರಿ ಸಿಎ ದಿವಾಕರ್ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರತೀಕ್ ಪಿ. ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಜಯ ಸಿ. ಶೆಟ್ಟಿ, ಟ್ರಸ್ಟಿಗಳು, ಮಾಜಿ ಅಧ್ಯಕ್ಷರು, ಉಪಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶೇಖರ್ ಆರ್. ಶೆಟ್ಟಿ ವಂದಿಸಿದರು. ಪ್ರಾರಂಭದಲ್ಲಿ ಮಹಿಳಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷ ನ್ಯಾಯವಾದಿ ಡಿ.ಕೆ. ಶೆಟ್ಟಿ ಅವರನ್ನು ಮಹಿಳಾ ವಿಭಾಗದ ವತಿಯಿಂದ ಗೌರವಿಸಲಾಯಿತು.
ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸಹಾನಿ ಶೆಟ್ಟಿ, ಕಾರ್ಯದರ್ಶಿ ಉಷಾ ಶೆಟ್ಟಿ, ಕೋಶಾಧಿಕಾರಿ ನಾಗವೇಣಿ ಶೆಟ್ಟಿ, ಜತೆ ಕಾರ್ಯದರ್ಶಿ ಮಾಯ ಆಳ್ವ, ಜತೆ ಕೋಶಾಧಿಕಾರಿ ಉಮಾ ಶೆಟ್ಟಿ ಹಾಗೂ ಸದಸ್ಯೆಯರು ಸಹಕರಿಸಿದರು. ಮನೋರಂಜನೆ ಅಂಗವಾಗಿ ಮಹಿಳಾ ವಿಭಾಗದ ಸದಸ್ಯೆಯರಿಂದ ನಾರಾಯಣ ಶೆಟ್ಟಿ ನಂದಳಿಕೆ ಅವರ ಸಲಹೆ ಸಹಕಾರದಲ್ಲಿ ಬಿಸಿಲು ಬೆಳದಿಂಗಳು ನಾಟಕ ಪ್ರದರ್ಶನಗೊಂಡಿತು.