
ಬ್ರಿಟಿಷರ ಆಡಳಿತದ ಕಾಲದಲ್ಲೇ ಗ್ರಾಮಗಳ ಸುತ್ತಮುತ್ತ ಗೋವುಗಳು ಮೇಯಲು ಗೋಮಾಳ ಭೂಮಿಗಳನ್ನು ಮೀಸಲಿಟ್ಟಿದ್ದರು. ಅದರ ಉದ್ದೇಶ ಸ್ಪಷ್ಟವಾಗಿತ್ತು. ಕೃಷಿ, ಹಾಲು ಉತ್ಪಾದನೆ ಮತ್ತು ಗೋ ಸಂತತಿಯನ್ನು ಉಳಿಸುವುದು. ಕೃಷಿ ಭೂಮಿ ಮತ್ತು ಗೋಮಾಳ ಇದ್ದಾಗ ಮಾತ್ರ ಪಶುಸಂಪತ್ತು ಸಹಜವಾಗಿ ಬೆಳೆಯುತ್ತದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ‘ಗೋಮಾತೆ’ ಎಂಬ ಭಾವನೆಯನ್ನು ಹೇಳುವವರೇ ಕೆಲವೊಮ್ಮೆ ಗೋಮಾಳ ಭೂಮಿಗಳನ್ನು ಕಬಳಿಸುವ ಸ್ಥಿತಿ ಕಾಣಿಸುತ್ತದೆ. ಗೋ ಆಶ್ರಮಗಳ ಹೆಸರಿನಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತವೆ. ಅದರಲ್ಲೂ ಲಾಭ ಮತ್ತು ರಾಜಕೀಯ ಲೆಕ್ಕಾಚಾರ ಕಾಣಿಸಿಕೊಳ್ಳುತ್ತದೆ. ನಿಜವಾಗಿ ಗೋ ರಕ್ಷಣೆ ಎಂದರೆ ಕೇವಲ ಗೋ ಪೂಜೆ ಅಲ್ಲ; ಗೋವುಗಳಿಗೆ ಮೇಯುವ ಭೂಮಿ, ನೀರು ಮತ್ತು ಕೃಷಿಯೊಂದಿಗೆ ಇರುವ ಸಹಜ ಸಂಬಂಧವನ್ನು ಉಳಿಸುವುದೇ ಮುಖ್ಯ. ಕೃಷಿ ಭೂಮಿ ಇಲ್ಲದೆ ಮತ್ತು ಗೋಮಾಳಗಳು ನಾಶವಾದರೆ ಗೋ ಸಂತತಿ ಉಳಿಯುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಆದರೂ ಈ ಮೂಲ ವಿಚಾರವನ್ನು ಅನೇಕ ‘ಗೋ ರಕ್ಷಕರು’ ಗಮನಿಸುವುದಿಲ್ಲ ಎಂಬ ಟೀಕೆ ಕೇಳಿ ಬರುತ್ತಿದೆ. ಕೆಲ ಸಂದರ್ಭಗಳಲ್ಲಿ ಸರ್ಕಾರಗಳು ರಾಜಕೀಯ ಕಾರಣಗಳಿಂದ ಸಂಘಟನೆಗಳಿಗೆ ಜಮೀನು ಮಂಜೂರು ಮಾಡುವ ಉದಾಹರಣೆಗಳೂ ಇವೆ. ಬಿಜೆಪಿ ಸರ್ಕಾರದ ಕಾಲದಲ್ಲೇ ಕಾಂಗ್ರೆಸ್ ಭವನಕ್ಕೆ ಜಮೀನು ಮಂಜೂರು ಮಾಡಿದ ಉದಾಹರಣೆ ಇದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ನಿಜವಾದ ಗೋ ರಕ್ಷಣೆ ಎಂದರೆ ಘೋಷಣೆಗಳು ಅಥವಾ ರಾಜಕೀಯವಲ್ಲ; ಗೋಮಾಳ ಭೂಮಿಗಳನ್ನು ಉಳಿಸುವುದು ಮತ್ತು ಕೃಷಿ ವ್ಯವಸ್ಥೆಯನ್ನು ಬಲಪಡಿಸುವುದೇ ಆಗಿದೆ.
ಲೇಖನ : ಶಶಿಧರ್ ಶೆಟ್ಟಿ


























































































































