ಪ್ರಸಿದ್ಧ ಕಲಾವಿದರು ಅಭಿನಯಿಸುತ್ತಿರುವ ವಿವಿಧ ತಂಡಗಳ ತುಳು ನಾಟಕಗಳು ತುಳುನಾಡಿನಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿರುವುದು ಜನಜನಿತ ವಿಚಾರವಾಗಿದೆ. ಈ ನಡುವೆ ಗ್ರಾಮೀಣ ಪ್ರದೇಶದ ಯಾವುದೇ ಸ್ಟಾರ್ ಕಲಾವಿದರಿಲ್ಲದ ತಂಡವೊಂದು ಅಪೂರ್ವ ನಾಟಕವೊಂದನ್ನು ತುಳು ರಂಗಭೂಮಿಯಲ್ಲಿ ಸದ್ದಿಲ್ಲದೆ ಪ್ರಸ್ತುತ ಪಡಿಸಿದೆ. ತುಳು ನಾಟಕರಂಗ ಹಾಗೂ ಚಲನಚಿತ್ರದ ಖ್ಯಾತ ಕಲಾವಿದ, ನಿರ್ದೇಶಕ, ಸಂಭಾಷಣೆಕಾರ ಪ್ರಸನ್ನ ಶೆಟ್ಟಿ ಬೈಲೂರು ಅವರ ನೇತೃತ್ವದ ಚೈತನ್ಯ ಕಲಾವಿದರು ಬೈಲೂರು ಅವರ ಹೊಸ ನಾಟಕ ‘ಊರು ಬೋಡು, ಪುದರ್ ಬೊಡ್ಚಿ’ ನಾಟಕದ 6ನೇ ಪ್ರದರ್ಶನ ಇತ್ತೀಚೆಗೆ ತುಂಬಿದ ಪ್ರೇಕ್ಷಕರ ಸಮ್ಮುಖದಲ್ಲಿ ಮಂಗಳೂರಿನ ಪುರಭವನದಲ್ಲಿ ಪ್ರದರ್ಶನ ಕಂಡಿತು. ಪ್ರಸನ್ನ ಶೆಟ್ಟಿ ಬೈಲೂರು ಅವರ ಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ ಸಾದರಪಡಿಸಿದ ಈ ವಿಶಿಷ್ಟ ಶೈಲಿಯ ನಾಟಕ ಪ್ರೇಕ್ಷಕ ವರ್ಗದ ಬಾರೀ ಮೆಚ್ಚುಗೆಗೆ ಪಾತ್ರವಾಯಿತು. ವಿಭಿನ್ನವಾದ ಕಥಾವಸ್ತು, ದೃಶ್ಯದಿಂದ ದೃಶ್ಯಕ್ಕೆ ಕ್ಷಿಪ್ರ ಗತಿಯಲ್ಲಿ ಬದಲಾಗುವ ರಂಗ ವಿನ್ಯಾಸ, ದ್ವಂದಾರ್ಥ ರಹಿತ ಸಂಭಾಷಣೆ, ಹೊಟ್ಟೆ ಹುಣ್ಣಾಗಿಸುವ ಹಾಸ್ಯ ಸನ್ನಿವೇಶಗಳು, ಕಲಾವಿದರ ಲವಲವಿಕೆಯ ಅಭಿನಯ ಹಾಗೂ ಮೌಲ್ಯಯುತ ಸಂದೇಶದ ಮೂಲಕ ಈ ನಾಟಕ ಕಲಾಭಿಮಾನಿಗಳ ಮನಸೂರೆಗೊಂಡಿತು. ಆ ದಿನ ಪುರಭವನದಲ್ಲಿ ಬಹುತೇಕ ಮಂದಿ ನಾಟಕ ಕಲಾವಿದರು, ನಿರ್ದೇಶಕರು, ಕಲಾ ಸಂಘಟಕರು ಪ್ರೇಕ್ಷಕರಾಗಿ ಉಪಸ್ಥಿತರಿದ್ದು, ನಾಟಕದ ಕೊನೆಯಲ್ಲಿ ನಿಂತು ಪ್ರಚಂಡ ಕರತಾಡನಗೈದು ಅಭಿನಂದಿಸಿದ್ದು ಇಲ್ಲಿ ಉಲ್ಲೇಖನೀಯವಾಗಿದೆ.




ಈ ನಾಟಕದ ಕಥಾ ನಾಯಕನ ಹೆಸರು ಸುಧಾಕರ ಶಂಭೂರು. ಈತ ತನ್ನಲ್ಲಿರುವ ಉತ್ತಮ ಸ್ವಭಾವ, ಸಮಾಜಸೇವೆಯ ತುಡಿತ ಹಾಗೂ ನಾಯಕತ್ವದ ಗುಣದಿಂದ ಊರಲ್ಲಿ ಜನಾನುರಾಗಿಯಾಗಿರುತ್ತಾನೆ. ತನ್ನ ಸಾಮಾಜಿಕ ಚಟುವಟಿಕೆಗಳಿಂದ ಅತ್ಯಂತ ಜನಪ್ರಿಯನಾಗಿದ್ದರೂ ಈತ ಉತ್ತಮ ಕೆಲಸ-ಕಾರ್ಯದ ಮೂಲಕ ತನ್ನ ಹೆಸರಿಗಿಂತಲೂ ಹೆಚ್ಚು ತನ್ನ ಊರಿನ ಹೆಸರು ಜನಪ್ರಿಯವಾಗಬೇಕೆನ್ನುವ ಹಪಹಪಿಕೆಯುಳ್ಳ ನಿಸ್ವಾರ್ಥಿ. ನಾಟಕದ ಮೊದಲ ದೃಶ್ಯದಲ್ಲಿ ಈತನ ಸಂದರ್ಶನ ನಡೆಸಲು ಬರುವ ಪತ್ರಕರ್ತನ ಮೂಲಕ ಪ್ರೇಕ್ಷಕರಿಗೆ ಈತನ ಮನೆ ಮಂದಿಯ ಹಾಗೂ ನೆರೆಮನೆಯಲ್ಲಿ ಬದುಕುವ ಬಡ ಕುಟುಂಬವೊಂದರ ಬಗ್ಗೆ ಪರಿಚಯವಾಗುತ್ತದೆ. ಇದು ಈ ನಾಟಕದ ಪ್ರಮುಖ ಅಂಶವಾಗಿ ಮೂಡಿಬಂದಿದೆ. ಸುಧಾಕರ ಶಂಭೂರು ಅವರ ಸಹೋದರರಾದ ಭಾಸ್ಕರ ಹಾಗೂ ಕರುಣಾಕರ ಅವರ ಹಾಸ್ಯ ಚಟಾಕಿಗಳು ಪ್ರೇಕ್ಷಕರಿಗೆ ಕಚಗುಳಿ ಇಡುತ್ತದೆ. ಭಾಸ್ಕರ ಅವರು ನಾಟಕ ಕಲಾವಿದನಾದರೆ, ಕರುಣಾಕರ ಕಾರ್ಯಕ್ರಮ ನಿರೂಪಕನಾಗಿ ಎಲ್ಲರ ಗಮನ ಸೆಳೆಯುತ್ತಾರೆ. ಈಗಿನ ಅನೇಕ ನಿರೂಪಕರು ಮಿತಿಗಿಂತ ಅಧಿಕ ಮಾತಿನ ಮಲ್ಲರಾಗುತ್ತಿರುವುದು ಸಮಂಜಸವಲ್ಲ ಎಂಬ ಎಚ್ಚರಿಕೆ ನೀಡುವಲ್ಲಿಯೂ ಈ ನಾಟಕ ಸಫಲವಾಗಿದೆ. ಇವರ ನೆರೆಮನೆಯಲ್ಲಿ ಬದುಕು ಕಟ್ಟಿಕೊಂಡ ಬಡ ತಾಯಿ ಮಗನ ಕುಟುಂಬದ ಕತೆಯಂತೂ ರೋಮಾಂಚಕಾರಿ ಅನುಭವ ನೀಡುತ್ತದೆ. ಕುಡುಕ ಮಗನ (ಭವಿಷ್) ಕಾಲೇಜು ಜೀವನ ಎನ್ನುವುದು ನಾಟಕದುದ್ದಕ್ಕೂ ಒಂದೊಂದು ಅವಾಂತರಗಳನ್ನೇ ಸೃಷ್ಟಿಸುತ್ತಾ ಸಾಗುತ್ತದೆ. ಭವಿಷ್ನ ಉತ್ತಮ ಭವಿಷ್ಯಕ್ಕಾಗಿ ವಿವಿಧ ಸಮಸ್ಯೆ ಎದುರಿಸಿ ಬದುಕುವ ತಾಯಿಯ ದೈನ್ಯ ಸ್ಥಿತಿ ಮನಕರಗುವಂತಿದೆ. ತಾಯಿ ಮಗನ ಪಾತ್ರಗಳಲ್ಲಿ ನಟಿಸಿದ ಕಲಾವಿದರ ಅಮೋಘ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ.

ತಾಯಿಯ ಪೂರ್ವ ವೃತ್ತಾಂತವನ್ನು ಸಿನಿಮಾ ಶೈಲಿಯಲ್ಲಿ ಚಿತ್ರೀಕರಿಸಿ ತೋರಿಸಿದ್ದು ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಕ್ಷಣಮಾತ್ರದಲ್ಲಿ ಬದಲಾಗುತ್ತಿದ್ದ ದೃಶ್ಯಗಳು ಪ್ರೇಕ್ಷಕರನ್ನು ನಿಬ್ಬೆರಗಾಗಿಸುತ್ತದೆ. ಈ ನಡುವೆ ನಾಟಕದ ನಡುವೆ ಬರುವ ನೇತ್ರದಾನಗೈದವಳ ಪತಿಯ ಹಾಗೂ ಭವಿಷ್ ಪ್ರಿಯತಮೆಯ ತಂದೆಯ ಹಾಸ್ಯ ದೃಶ್ಯಗಳು ನಗು ಮೂಡಿಸುತ್ತವೆ. ನಾಟಕ ಆಡಿಸಲು ದೇಣಿಗೆ ನೀಡುವ ದಾನಿಯೊಬ್ಬರ ಮನೆಯಲ್ಲಿ ನಡೆಯುವ ಹಾಸ್ಯ ದೃಶ್ಯವಂತೂ ಇಡೀ ನಾಟಕದ ಹೈಲೈಟ್ ಎನ್ನಬಹುದು. ಗಾಯನದ ಹವ್ಯಾಸವುಳ್ಳ ಈ ದಾನಿಯಿಂದ ದೇಣಿಗೆ ಪಡೆಯಲು ಪಡುವ ಪಾಡು ಈ ದೃಶ್ಯದುದ್ದಕ್ಕೂ ಅನಾವರಣಗೊಂಡು ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ನಗುವಿನ ಅಲೆ ಭೋರ್ಗರೆಯುವಂತೆ ಮಾಡುತ್ತದೆ. ಈ ನಾಟಕದೊಳಗೊಂದು ನಾಟಕದ ವೇದಿಕೆಯ ದೃಶ್ಯ ಅತ್ಯಂತ ನೈಜವಾಗಿ ಕಾಣಿಸುತ್ತದೆ. ಈ ವೇದಿಕೆಯ ಬಳಿಯಲ್ಲಿ ಚರುಮುರಿ ಅಂಗಡಿ ಸೇರಿದಂತೆ ಇಡೀ ರಂಗವಿನ್ಯಾಸ ಬಹಳ ನೈಜತೆಯಿಂದ ಮೂಡಿ ಬಂದಿದೆ. ಈ ನಾಟಕದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರೂ ತಮ್ಮ ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದಾರೆ. ಖಳನಾಯಕನ ಪಾತ್ರವೇ ಇಲ್ಲದಿರುವುದು ಈ ನಾಟಕದ ಪ್ರಮುಖ ಅಂಶವಾಗಿದೆ. ಓರ್ವ ಕಲಾವಿದರಂತೂ ಮೂರು ಪಾತ್ರಗಳಲ್ಲಿ ನಟಿಸಿ ಮಿಂಚಿರುವುದು ಈ ನಾಟಕದ ವಿಶೇಷತೆಯಾಗಿದೆ. ಕಿರಣ್ ಗರಡಿಮಜಲ್ ಅವರ ಹಿತಮಿತವಾದ ಸಂಗೀತ ಹಾಗೂ ಉತ್ತಮ ಬೆಳಕಿನ ಸಂಯೋಜನೆ ಈ ನಾಟಕದ ಪೂರಕ ಅಂಶಗಳಾಗಿವೆ. ಒಂದೇ ನಾಟಕದ ಮೂಲಕ ಸಮಾಜಕ್ಕೆ ಅನೇಕ ಸಂದೇಶಗಳನ್ನು ಪರಿಣಾಮಕಾರಿಯಾಗಿ ಹೇಗೆ ನೀಡಬಹುದು ಎನ್ನುವುದನ್ನು ಈ ನಾಟಕದ ಮೂಲಕ ನಾಟಕದ ರಚನೆಗಾರ, ಸಂಭಾಷಣೆಕಾರ, ನಿರ್ದೇಶಕ ಪ್ರಸನ್ನ ಶೆಟ್ಟಿ ಬೈಲೂರು ಅವರು ತೋರಿಸಿಕೊಟ್ಟಿರುವುದು ನಿಜಕ್ಕೂ ಅಭಿನಂದನೀಯವಾಗಿದೆ. ಸಮರ್ಥ ನಿರ್ದೇಶಕ ದೊರೆತರೆ ಯಾವುದೇ ಕಲಾವಿದರ ಪ್ರತಿಭೆಯನ್ನು ಹೊರಗೆಡಹಲು ಸಾಧ್ಯ ಎಂಬುದನ್ನು ಈ ನಾಟಕ ಸಾಬೀತುಪಡಿಸಿದೆ. ಒಟ್ಟಿನಲ್ಲಿ ‘ಊರು ಬೋಡು ಪುದರ್ ಬೊಡ್ಚಿ’ ನಾಟಕ ಇತ್ತೀಚಿನ ವರ್ಷಗಳಲ್ಲೇ ಬಂದ ಅಪೂರ್ವ ದೃಶ್ಯ ಕಾವ್ಯ ಎಂದರೆ ಅತಿಶಯೋಕ್ತಿಯಾಗಲಾರದು. ಈ ನಾಟಕ ಸೂಪರ್ ಹಿಟ್ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಬರಹ : ಸತೀಶ್ ಶೆಟ್ಟಿ ಕೊಡಿಯಾಲ್ಬೈಲ್


















































































































