ದಕ್ಷಿಣ ಕನ್ನಡ ಮೂಲದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಂಗಳೂರಿನ ದಕ್ಷಿಣ ಕನ್ನಡಿಗರ ಸಂಘವು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಎಸ್.ಎಲ್.ಸಿಯಲ್ಲಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಈ ಸಂಧರ್ಭದಲ್ಲಿ ನಿವೃತ್ತ ಡಿಸಿಪಿ ಜಿಎ ಬಾವ, ಶಂಕರ್ ಎಲೆಕ್ಟ್ರಿಕಲ್ಸ್ ಇಂಡಿಯಾ ಪ್ರೈ. ಲಿ ನ ಸಿಎoಡಿ ರಾಜೇಶ್ ಶೆಟ್ಟಿ, ಸಮಾಜ ಸೇವಕರಾದ ಗ್ರೇಶಿಯನ್ ರೋಡ್ರಿಗಸ್ ಹಾಗೂ ಭಾರತೀಯ ಮಹಿಳಾ ಜೈನ್ ಮಿಲನದ ಅಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್ ಅವರಿಗೆ ‘ಕರಾವಳಿ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷ ಡಾ. ಕೆ.ಸಿ ಬಲ್ಲಾಳ್ ಅವರು ಮಾತನಾಡಿ, ಈ ಕಾರ್ಯಕ್ರಮದ ರೂವಾರಿಗಳಾದ ಮಕ್ಕಳೇ ಇಂದು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡಿಗರ ಸಂಘ 66 ವರ್ಷದ ಹಿಂದೆ ಆರಂಭ ಆಯಿತು. ಈವರೆಗೂ 20 ಜನ ಅಧ್ಯಕ್ಷರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ನಮಗೆ ಈವರೆಗೂ ಸ್ವಂತ ಕಚೇರಿ ಮಾಡಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ನಕ್ರೆ ಸತೀಶ್ ಚಂದ್ರ ಶೆಟ್ಟಿಯವರನ್ನು ಕೇಳಿದಾಗ ಅವರು ಬಹಳ ಖುಷಿಯಿಂದ ಬಂದು 10 ಸಾವಿರ ಅಡಿಯ ಜಾಗವನ್ನು 30 ವರ್ಷಕ್ಕೆ ಲೀಸ್ ಗೆ ಕೊಟ್ಟಿದ್ದಾರೆ. ಎಲ್ಲರ ಸಹಕಾರದೊಂದಿಗೆ ಕಟ್ಟಡ ಕಟ್ಟುವ ವಿಶ್ವಾಸವಿದೆ ಎಂದು ಪ್ರಾಸ್ತಾವಿಕ ನುಡಿಯಲ್ಲಿ ಹೇಳಿದರು.





ಕರಾವಳಿ ರತ್ನ ಪ್ರಶಸ್ತಿ ಪುರಸ್ಕೃತರಾದ ರಾಜೇಶ್ ಶೆಟ್ಟಿಯವರು ಮಾತನಾಡಿ, ನನ್ನ ಜನ್ಮಭೂಮಿ ಮೂಡುಬಿದ್ರೆ. ಕರ್ಮಭೂಮಿ ಬೆಂಗಳೂರು. ಕರಾವಳಿ ಮಣ್ಣಲ್ಲಿ ಬಹಳ ವಿಶೇಷ ಇದೆ. ಕಷ್ಟಪಟ್ಟು ಬದುಕುವ ನಮ್ಮ ಮಣ್ಣಿನ ವಿಶೇಷತೆ, ತುಳುನಾಡಿನ ಸಂಸ್ಕೃತಿ, ಕೊಟ್ಟ ಮಾತಿಗೆ ತಪ್ಪದ ಗುಣ ಇವೆಲ್ಲಾ ನಮ್ಮ ಅವಿಭಾಜ್ಯ ಅಂಗಗಳು. ಎಲ್ಲೇ ಹೋದರೂ ನಾವು ಭಗವಂತನನ್ನು ಸ್ಮರಣೆ ಮಾಡುತ್ತೇವೆ. 1998ರಲ್ಲಿ ಆಕಸ್ಮಿಕವಾಗಿ ನನ್ನ ಕಂಪನಿ ಶುರುವಾಯಿತು. ನನಗೆ ಆಗ ಕಂಪೆನಿಯೂ ಇರಲಿಲ್ಲ, ಹೂಡಿಕೆಯೂ ಇರಲಿಲ್ಲ. ಛಲದಿಂದ ಶುರು ಮಾಡಿ ಇವತ್ತಿಗೆ 5 ಸಾವಿರ ಉದ್ಯೋಗಿಗಳಿದ್ದಾರೆ. ನನ್ನ ಪ್ರಶಸ್ತಿಯನ್ನು ದೇವರ ಪಾದಕ್ಕೆ ಸಮರ್ಪಿಸುತ್ತೇನೆ ಎಂದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷ ಸಂಭ್ರಮ ಹುಳಿಮಾವು ತಂಡದ ಬಾಲ ಕಲಾವಿದರು ‘ಅಭಿಮನ್ಯು ಕಾಳಗ’ ಪ್ರಸಂಗವನ್ನು ಶಂಕರ್ ಬಾಳಕುದ್ರು ಭಾಗವತಿಕೆ ಹಾಗೂ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. ಸುಮಾರು 17 ಬಾಲ ಕಲಾವಿದರ ಯಕ್ಷಗಾನ ಸಭಿಕರ ಮನಸೂರೆಗೊಂಡಿತು. ಇಡೀ ಕಾರ್ಯಕ್ರಮದ ನಿರೂಪಣೆಯನ್ನು ರಾಧಾ ಕೇಶವ್ ಹೆಬ್ಬಾರ್ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.


















































































































