ಒಬ್ಬ ಮನುಷ್ಯನ ಸಾಧನೆಯನ್ನು ನಾವು ಹೇಗೆ ಅಳೆಯಬೇಕು? ಅವನು ಯಾವ ಜಾತಿಯಲ್ಲಿ ಹುಟ್ಟಿದ್ದಾನೆ ಎಂಬುದರ ಆಧಾರದ ಮೇಲೆಯೇ? ಅವನು ಯಾವ ಧರ್ಮವನ್ನು ಅನುಸರಿಸುತ್ತಾನೆ ಎಂಬುದರ ಆಧಾರದ ಮೇಲೆಯೇ? ಅಥವಾ ಅವನ ಸಾಮರ್ಥ್ಯ, ಪರಿಶ್ರಮ, ಧೈರ್ಯ ಮತ್ತು ಸಾಧನೆಯ ಆಧಾರದ ಮೇಲೆಯೇ? ಈ ಪ್ರಶ್ನೆಯನ್ನು ಮತ್ತೊಮ್ಮೆ ಗಂಭೀರವಾಗಿ ಕೇಳಿಕೊಳ್ಳುವ ಸಂದರ್ಭ ಇಂದು ನಮ್ಮ ಮುಂದೆ ಬಂದಿದೆ. ಇತ್ತೀಚೆಗೆ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ತೋರಿದ ಧೈರ್ಯ ಇಡೀ ಜಗತ್ತಿನ ಗಮನ ಸೆಳೆದಿದೆ. ದುಬೈಯಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈ ದುಬೈ ವಿಮಾನದಲ್ಲಿ ಕಾಕ್ಪಿಟ್ನಲ್ಲಿ ಗಂಭೀರ ಘಟನೆ ಸಂಭವಿಸಿದಾಗ, ಅವರು ಗಾಯಗೊಂಡಿದ್ದರೂ ಪರಿಸ್ಥಿತಿಯನ್ನು ನಿಭಾಯಿಸಲು ಧೈರ್ಯದಿಂದ ಪ್ರಯತ್ನಿಸಿದರು. ಕಾಕ್ಪಿಟ್ ಬಾಗಿಲು ತೆರೆಯಲು ಸಾಧ್ಯವಾಗಿದ್ದರಿಂದ ಸಿಬ್ಬಂದಿ ಮತ್ತು ಪ್ರಯಾಣಿಕರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಯಿತು. ವಿಮಾನದಲ್ಲಿದ್ದ 174 ಜನರು ಸುರಕ್ಷಿತವಾಗಿ ಹೊರಬಂದರು ಎಂದು ವರದಿಯಾಗಿದೆ. ಇದು ಸಾಮಾನ್ಯ ಸಾಧನೆಯಲ್ಲ. ಇದು ಜೀವ ಮರಣದ ನಡುವಿನ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ. ಇಲ್ಲಿ ಮುಖ್ಯವಾಗಿದ್ದು ಅವರ ತರಬೇತಿ, ಅನುಭವ, ಧೈರ್ಯ, ಕರ್ತವ್ಯಪ್ರಜ್ಞೆ ಮತ್ತು ಪ್ರಸಂಗಾವಧಾನ. ಆದರೆ ನಮ್ಮ ಸಮಾಜದಲ್ಲಿ ಕೆಲವೊಮ್ಮೆ ಇಂತಹ ಸಾಧನೆಗಳನ್ನೂ ಜಾತಿ ಮತ್ತು ಧರ್ಮದ ಕನ್ನಡಕದಿಂದ ನೋಡುವ ಮನೋಭಾವ ಕಂಡು ಬರುತ್ತಿದೆ. ಒಬ್ಬ ಸಾಧಕನನ್ನು ಮೊದಲು ಮನುಷ್ಯನಾಗಿ ನೋಡುವ ಬದಲು, ಅವನು ಯಾವ ಜಾತಿಯವನು?, ಯಾವ ಧರ್ಮದವನು?, ಯಾವ ಸಮುದಾಯಕ್ಕೆ ಸೇರಿದವನು? ಎಂಬ ಪ್ರಶ್ನೆಗಳು ಮುಂದೆ ಬರುತ್ತಿರುವುದು ನಿಜಕ್ಕೂ ಆತ್ಮಾವಲೋಕನಕ್ಕೆ ಕಾರಣವಾಗಬೇಕು. ಸಾಮಾಜಿಕವಾಗಿ ಹಿಂದುಳಿದವರಿಗೆ ನ್ಯಾಯ ದೊರಕಬೇಕು.




ಐತಿಹಾಸಿಕವಾಗಿ ಅವಕಾಶಗಳಿಂದ ವಂಚಿತರಾದವರಿಗೆ ಅವಕಾಶ ಸಿಗಬೇಕು. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕು. ಇವೆಲ್ಲವೂ ಪ್ರಜಾಪ್ರಭುತ್ವದ ಮತ್ತು ಸಾಮಾಜಿಕ ನ್ಯಾಯದ ಮುಖ್ಯ ಅಂಶಗಳು. ಆದರೆ ಸಾಮಾಜಿಕ ನ್ಯಾಯ ಎಂದರೆ ಸಮಾಜವನ್ನು ಶಾಶ್ವತವಾಗಿ ಜಾತಿ ಮತ್ತು ಧರ್ಮದ ಗುರುತುಗಳಲ್ಲಿ ಬಂಧಿಸುವುದಲ್ಲ. ಒಬ್ಬ ಬಡ ಕುಟುಂಬದ ಮಗ ದೊಡ್ಡ ವಿಜ್ಞಾನಿಯಾಗಿದ್ದರೆ, ಅವನ ಸಾಧನೆ ಬಡತನವನ್ನು ಮೀರಿ ಬಂದ ಪ್ರತಿಭೆಯ ಸಾಧನೆ. ಒಬ್ಬ ಸಾಮಾನ್ಯ ಕುಟುಂಬದ ಮಗಳು ಕ್ರೀಡೆಯಲ್ಲಿ ದೇಶದ ಹೆಸರನ್ನು ಎತ್ತಿ ಹಿಡಿದರೆ, ಅದು ಆಕೆಯ ಪರಿಶ್ರಮದ ಫಲ. ಒಬ್ಬ ಸೈನಿಕ ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರೆ, ಅವನ ಧೈರ್ಯಕ್ಕೆ ಜಾತಿಯ ಅಳತೆ ಇರಬಾರದು. ಅದೇ ರೀತಿ ಒಬ್ಬ ಪೈಲಟ್ ನೂರಾರು ಪ್ರಯಾಣಿಕರ ಜೀವವನ್ನು ಅಪಾಯದಿಂದ ಪಾರು ಮಾಡಿದಾಗ, ಅವನನ್ನು ಮೊದಲು “ನಮ್ಮವನು” ಅಥವಾ “ಅವರವನು” ಎಂದು ನೋಡುವ ಬದಲು “ಭಾರತೀಯ” ಮತ್ತು “ಧೈರ್ಯಶಾಲಿ ವೃತ್ತಿಪರ” ಎಂದು ನೋಡಬೇಕು. ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಸಂಕಷ್ಟದ ಕ್ಷಣದಲ್ಲಿ ತಾವು ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ ಎಂದು ಸ್ವತಃ ತಿಳಿಸಿದ್ದಾರೆ. ಅದು ಅವರ ವೈಯಕ್ತಿಕ ನಂಬಿಕೆ. ಅವರ ಧಾರ್ಮಿಕ ನಂಬಿಕೆಯನ್ನು ಗೌರವಿಸಬಹುದು. ಆದರೆ ಅವರ ಸಾಹಸವನ್ನು ಕೇವಲ ಧರ್ಮದ ಚೌಕಟ್ಟಿನಲ್ಲೂ ಸೀಮಿತಗೊಳಿಸಬಾರದು. ಅವರ ಧೈರ್ಯ ಎಲ್ಲರಿಗೂ ಸೇರಿದ ಮಾನವೀಯ ಮೌಲ್ಯ.

ಇದೇ ನಮ್ಮ ಸಮಾಜ ಕಲಿಯಬೇಕಾದ ದೊಡ್ಡ ಪಾಠ. ಧರ್ಮ ವ್ಯಕ್ತಿಯ ನಂಬಿಕೆ; ಜಾತಿ ಅವನ ಸಾಮಾಜಿಕ ಗುರುತು; ಆದರೆ ಸಾಧನೆ ಅವನ ಸ್ವಂತ ಪರಿಶ್ರಮ. ರಾಜಕೀಯ ಪಕ್ಷಗಳು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳು ತಮ್ಮದೇ ಆದ ವಿಚಾರಧಾರೆಗಳನ್ನು ಹೊಂದಿರಬಹುದು. ಆದರೆ ಆ ವಿಚಾರಧಾರೆಗಳು ಸಾಮಾನ್ಯ ಜನರ ಮನಸ್ಸಿನಲ್ಲಿ ಪರಸ್ಪರ ದ್ವೇಷ ಅಥವಾ ಶಾಶ್ವತ ವಿಭಜನೆಯ ಭಾವನೆಯನ್ನು ಬೆಳೆಸಬಾರದು. ನಮ್ಮ ಮಕ್ಕಳಿಗೆ ನಾವು ಹೇಳಬೇಕಾದದ್ದು ನೀನು ಯಾವ ಜಾತಿಯವನು? ಎನ್ನುವುದಕ್ಕಿಂತ, ನೀನು ಏನು ಸಾಧಿಸಬಲ್ಲೆ? ಎನ್ನುವುದಾಗಿರಬೇಕು. ನೀನು ಯಾವ ಧರ್ಮದವನು? ಎನ್ನುವುದಕ್ಕಿಂತ, ನಿನ್ನೊಳಗೆ ಎಷ್ಟು ಮಾನವೀಯತೆ ಇದೆ? ಎನ್ನುವುದಾಗಿರಬೇಕು. ಏಕೆಂದರೆ ವಿಮಾನ ಆಕಾಶದಲ್ಲಿ ಅಪಾಯಕ್ಕೆ ಸಿಲುಕಿದಾಗ ಪ್ರಯಾಣಿಕರನ್ನು ಉಳಿಸುವುದು ಜಾತಿಯಲ್ಲ. ಧರ್ಮವೂ ಅಲ್ಲ. ಅಲ್ಲಿ ಕೆಲಸ ಮಾಡುವುದು ಜ್ಞಾನ, ತರಬೇತಿ, ಧೈರ್ಯ, ಅನುಭವ ಮತ್ತು ಕರ್ತವ್ಯಪ್ರಜ್ಞೆ. ಹಾಗಿದ್ದರೆ ನೆಲದ ಮೇಲಿರುವ ನಮ್ಮ ಸಮಾಜದಲ್ಲೂ ಮನುಷ್ಯನ ಮೌಲ್ಯವನ್ನು ಇದೇ ಮಾನದಂಡಗಳಿಂದ ಅಳೆಯಲು ನಾವು ಕಲಿಯಬಾರದೇ? ಸಾಧನೆಗೆ ಜಾತಿಯಿಲ್ಲ. ಧೈರ್ಯಕ್ಕೆ ಧರ್ಮವಿಲ್ಲ. ಮಾನವೀಯತೆಗೆ ಪಕ್ಷವಿಲ್ಲ. ಪ್ರತಿಭೆಗೆ ಗಡಿಯಿಲ್ಲ. ಒಬ್ಬ ಭಾರತೀಯನ ಸಾಧನೆಯನ್ನು ಭಾರತೀಯನ ಸಾಧನೆಯಾಗಿಯೇ ಸಂಭ್ರಮಿಸುವ ಮನಸ್ಸು ಬೆಳೆದಾಗ ಮಾತ್ರ ನಾವು ನಿಜವಾದ ಅರ್ಥದಲ್ಲಿ ಜಾತಿ ಧರ್ಮದ ಗೋಡೆಗಳನ್ನು ಮೀರಿ ಮುಂದೆ ಸಾಗಿದ್ದೇವೆ ಎಂದು ಹೇಳಬಹುದು. ಅದೇ ನಮ್ಮ ಮುಂದಿನ ಪೀಳಿಗೆಗೆ ಕೊಡಬಹುದಾದ ಅತ್ಯಂತ ದೊಡ್ಡ ಪರಂಪರೆ.
ಬರಹ : ಶರತ್ ಶೆಟ್ಟಿ ಪಡುಪಳ್ಳಿ














































































































