ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳು ಜಾರಿಯಾದ ನಂತರ ಜನಸಾಮಾನ್ಯರ ಬದುಕಿನಲ್ಲಿ ಕೆಲವು ಬದಲಾವಣೆಗಳಾಗಿವೆ. ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಅನ್ನಭಾಗ್ಯ ಮತ್ತು ನಿರುದ್ಯೋಗಿ ಯುವಕರಿಗೆ ಯುವ ನಿಧಿ. ಮೇಲ್ನೋಟಕ್ಕೆ ಇವೆಲ್ಲವೂ ಜನಪರ ಯೋಜನೆಗಳಂತೆ ಕಾಣುತ್ತವೆ. ನಿಜಕ್ಕೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಇವುಗಳಿಂದ ನೆರವು ಸಿಕ್ಕಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಈ ಯೋಜನೆಗಳ ಇನ್ನೊಂದು ಮುಖವನ್ನೂ ನಾವು ಗಂಭೀರವಾಗಿ ಚರ್ಚಿಸಬೇಕಾಗಿದೆ. ಜನರಿಗೆ ಸೌಲಭ್ಯ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಜನರನ್ನು ಸದಾ ಸರ್ಕಾರದ ನೆರವಿನ ಮೇಲೆ ಅವಲಂಬಿತರನ್ನಾಗಿ ಮಾಡುವುದೇ ಆಡಳಿತದ ಗುರಿಯಾಗಬಾರದು. ಜನರಿಗೆ ದುಡಿಯುವ ಅವಕಾಶ ಕಲ್ಪಿಸಿ, ಸ್ವಂತ ದುಡಿಮೆಯಿಂದ ಬದುಕು ಕಟ್ಟಿಕೊಳ್ಳುವ ಶಕ್ತಿ ತುಂಬುವುದೇ ನಿಜವಾದ ಜನಪರ ಆಡಳಿತವಲ್ಲವೇ?
ಇಂದು ನಮ್ಮ ಸಮಾಜದಲ್ಲಿ ದುಡಿಯುವ ಸಾಮರ್ಥ್ಯವಿದ್ದರೂ ದುಡಿಯಲು ಆಸಕ್ತಿ ತೋರದ ಮನೋಭಾವ ಬೆಳೆಯುತ್ತಿದೆಯೇ ಎಂಬ ಆತಂಕ ಮೂಡುತ್ತಿದೆ. ಯಾವುದೇ ಕೆಲಸ ಸಣ್ಣದಲ್ಲ, ದುಡಿಮೆಯೇ ಗೌರವ ಎಂಬ ಮನೋಭಾವ ನಮ್ಮ ಹಿಂದಿನ ತಲೆಮಾರಿನವರಲ್ಲಿತ್ತು. ಆದರೆ ಯಾವುದೇ ಶ್ರಮವಿಲ್ಲದೆ ಸೌಲಭ್ಯ ಸಿಗುತ್ತದೆ ಎಂಬ ನಿರೀಕ್ಷೆ ಬೆಳೆದರೆ, ಅದು ಮುಂದಿನ ಪೀಳಿಗೆಯ ದುಡಿಮೆಯ ಸಂಸ್ಕೃತಿಯ ಮೇಲೆ ಪರಿಣಾಮ ಬೀರಬಹುದು. ಎಲ್ಲಾ ಫಲಾನುಭವಿಗಳೂ ದುಡಿಯುವುದನ್ನು ಬಿಟ್ಟಿದ್ದಾರೆ ಎನ್ನುವುದು ತಪ್ಪು. ಆದರೆ ನಿರಂತರ ಉಚಿತ ಸೌಲಭ್ಯಗಳು ಕೆಲಸ ಮಾಡುವ ಪ್ರೇರಣೆಯನ್ನು ಕುಗ್ಗಿಸುತ್ತಿವೆಯೇ ಎಂಬುದನ್ನು ಸರ್ಕಾರ ಅಧ್ಯಯನ ಮಾಡಬೇಕಾಗಿದೆ. 2026 -27ನೇ ಸಾಲಿನ ಕರ್ನಾಟಕ ಬಜೆಟ್ನಲ್ಲಿ ಐದು ಗ್ಯಾರಂಟಿ ಯೋಜನೆಗಳಿಗಾಗಿ ರೂ 51,286 ಕೋಟಿ ಮೀಸಲಿಡಲಾಗಿದೆ. ಇದು ರಾಜ್ಯದ ಸಾಲ ಮರುಪಾವತಿಯನ್ನು ಹೊರತುಪಡಿಸಿದ ಒಟ್ಟು ವೆಚ್ಚದ ಸುಮಾರು ಶೇ.12ರಷ್ಟಾಗಿದೆ. 2023 -24ರಲ್ಲಿ ಈ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿದ ಪರಿಣಾಮ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೂಲಸೌಕರ್ಯ ವೆಚ್ಚದಲ್ಲಿ ರೂ. 5,229 ಕೋಟಿ ಕಡಿಮೆಯಾಗಿತ್ತು ಎಂದು ಸಿಎಜಿ ವರದಿಯನ್ನು ಉಲ್ಲೇಖಿಸಿ ಪಿಆರ್ಎಸ್ ವಿಶ್ಲೇಷಣೆ ತಿಳಿಸಿದೆ. ಇಲ್ಲಿ ಒಂದು ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಸಾವಿರಾರು ಕೋಟಿ ರೂಪಾಯಿಗಳನ್ನು ರಸ್ತೆ, ನೀರಾವರಿ, ಸರ್ಕಾರಿ ಆಸ್ಪತ್ರೆ, ಶಾಲೆಗಳ ಸುಧಾರಣೆ, ಕೈಗಾರಿಕೆಗಳ ಸ್ಥಾಪನೆ ಮತ್ತು ಉದ್ಯೋಗ ಸೃಷ್ಟಿಗೆ ಬಳಸಿದ್ದರೆ ಎಷ್ಟು ಜನರಿಗೆ ಶಾಶ್ವತ ಆದಾಯದ ಮೂಲ ಸೃಷ್ಟಿಯಾಗುತ್ತಿತ್ತು? ಗ್ಯಾರಂಟಿ ಹಣದಿಂದ ಇಂದಿನ ಕುಟುಂಬದ ಖರ್ಚು ಕಡಿಮೆಯಾಗಬಹುದು. ಆದರೆ ಉದ್ಯೋಗ ಸೃಷ್ಟಿಯಿಂದ ಒಂದು ಕುಟುಂಬದ ಮುಂದಿನ ಹಲವು ದಶಕಗಳ ಬದುಕು ಬದಲಾಗಬಹುದು.ಬಡವರ ಹೆಸರಿನಲ್ಲಿ ಮತಗಳ ರಾಜಕಾರಣವೇ? ಇಲ್ಲಿ ಮತ್ತೊಂದು ಕಟುವಾದ ಪ್ರಶ್ನೆಯನ್ನು ಕೇಳಲೇಬೇಕಾಗಿದೆ. ನಿಜವಾಗಿಯೂ ಬಡವರ ಅಭಿವೃದ್ಧಿಯೇ ರಾಜಕೀಯ ಪಕ್ಷಗಳ ಗುರಿಯಾಗಿದ್ದರೆ, ಅವರಿಗೆ ಶಿಕ್ಷಣ, ಕೌಶಲ್ಯ ತರಬೇತಿ, ಉದ್ಯೋಗ ಮತ್ತು ಸ್ವಾವಲಂಬನೆಯ ಅವಕಾಶಗಳನ್ನು ಏಕೆ ಹೆಚ್ಚು ಒದಗಿಸಬಾರದು? ಚುನಾವಣೆಯ ಸಂದರ್ಭದಲ್ಲಿ ಆಕರ್ಷಕ ಗ್ಯಾರಂಟಿಗಳನ್ನು ಘೋಷಿಸಿ ಜನರ ಮತಗಳನ್ನು ಸೆಳೆಯುವುದು, ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹಣಕಾಸಿನ ಹೊಣೆಗಾರಿಕೆಯನ್ನು ಮುಂದಿನ ಸರ್ಕಾರಗಳ ಮೇಲೆ ವರ್ಗಾಯಿಸುವುದು ಎಷ್ಟು ಸಮರ್ಥನೀಯ?




ಬಡವರ ಸಂಕಷ್ಟವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು. ಬಡವರನ್ನು ಮತದಾರರಾಗಿ ಮಾತ್ರವಲ್ಲ, ಗೌರವಯುತ ಬದುಕು ಕಟ್ಟಿಕೊಳ್ಳಬಲ್ಲ ನಾಗರಿಕರಾಗಿ ನೋಡಬೇಕು. ಜನರ ಸ್ವಾಭಿಮಾನ ಮತ್ತು ಸ್ವಾವಲಂಬನೆಗೆ ಆದ್ಯತೆ ನೀಡಬೇಕು. ನೆರವು ಅಗತ್ಯವಿರುವವರಿಗೆ ನೆರವು ಸಿಗಲಿ; ಆದರೆ ದುಡಿಯುವ ಶಕ್ತಿ ಇರುವವರನ್ನು ನಿರಂತರ ಅವಲಂಬನೆಯತ್ತ ಕೊಂಡೊಯ್ಯುವ ವ್ಯವಸ್ಥೆ ನಿರ್ಮಾಣವಾಗಬಾರದು.
ಸಂವಿಧಾನದ ಆಶಯ ಏನು?ಭಾರತದ ಸಂವಿಧಾನವು ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಪ್ರತಿಪಾದಿಸುತ್ತದೆ. ಸಂವಿಧಾನದ ರಾಜ್ಯನೀತಿ ನಿರ್ದೇಶಕ ತತ್ವಗಳು ದುರ್ಬಲ ವರ್ಗಗಳ ಕಲ್ಯಾಣ, ಜೀವನೋಪಾಯ ಮತ್ತು ಸಮಾನ ಅವಕಾಶಗಳಿಗೆ ಒತ್ತು ನೀಡುತ್ತವೆ. ಆದ್ದರಿಂದ ಬಡವರಿಗೆ ನೆರವು ನೀಡುವ ಕಲ್ಯಾಣ ಯೋಜನೆಗಳನ್ನು ಸಂಪೂರ್ಣವಾಗಿ ತಪ್ಪು ಎನ್ನಲಾಗದು. ಆದರೆ ಚುನಾವಣಾ ಪ್ರಣಾಳಿಕೆಗಳಲ್ಲಿ ಯಾವುದೇ ಹಣಕಾಸಿನ ಲೆಕ್ಕಾಚಾರವಿಲ್ಲದೆ ಭರವಸೆಗಳನ್ನು ನೀಡುವ ಪದ್ಧತಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಚುನಾವಣಾ ಆಯೋಗದ ಮಾರ್ಗಸೂಚಿಗಳೂ ಭರವಸೆಗಳ ಹಿಂದಿನ ಕಾರಣ ಮತ್ತು ಅವುಗಳಿಗೆ ಬೇಕಾದ ಹಣವನ್ನು ಹೇಗೆ ಹೊಂದಿಸಲಾಗುತ್ತದೆ ಎಂಬುದನ್ನು ಪ್ರಣಾಳಿಕೆಗಳಲ್ಲಿ ವಿವರಿಸುವ ನಿರೀಕ್ಷೆ ವ್ಯಕ್ತಪಡಿಸಿವೆ. ಇಂತಹ ಭರವಸೆಗಳಿಗೆ ಹಣಕಾಸಿನ ಶಿಸ್ತು, ಅರ್ಹತೆಯ ಮಾನದಂಡ ಮತ್ತು ಸಾರ್ವಜನಿಕ ಹೊಣೆಗಾರಿಕೆಯನ್ನು ಕಡ್ಡಾಯಗೊಳಿಸುವ ಪ್ರತ್ಯೇಕ ಕಾನೂನು ರೂಪಿಸಬೇಕಾದ ಅಗತ್ಯವಿದೆ. ಸಂವಿಧಾನವನ್ನು ತಿದ್ದುಪಡಿ ಮಾಡಿ ಕಲ್ಯಾಣ ಯೋಜನೆಗಳನ್ನು ನಿಷೇಧಿಸುವುದಕ್ಕಿಂತ, ಮತಗಳಿಗಾಗಿ ಅಸಾಧ್ಯವಾದ ಭರವಸೆಗಳನ್ನು ನೀಡುವುದನ್ನು ನಿಯಂತ್ರಿಸುವ ವ್ಯವಸ್ಥೆ ಹೆಚ್ಚು ಸೂಕ್ತ.ಜನರಿಗೆ ಉಚಿತ ಸೌಲಭ್ಯವಲ್ಲ, ಭವಿಷ್ಯ ಬೇಕು!.
ಗ್ಯಾರಂಟಿ ಯೋಜನೆಗಳ ಪರವಾಗಿರುವವರೂ ವಿರೋಧಿಸುವವರೂ ಒಂದು ವಿಷಯವನ್ನು ಮರೆಯಬಾರದು. ಸರ್ಕಾರದ ಹಣ ರಾಜಕೀಯ ಪಕ್ಷಗಳ ಸ್ವಂತ ಹಣವಲ್ಲ. ಅದು ತೆರಿಗೆದಾರರ ಹಣ. ಅದರ ಪ್ರತಿಯೊಂದು ರೂಪಾಯಿಗೂ ಜನರಿಗೆ ಉತ್ತರ ನೀಡುವ ಜವಾಬ್ದಾರಿ ಸರ್ಕಾರಕ್ಕಿದೆ. ಬಡವರಿಗೆ ಆಹಾರ, ಆರೋಗ್ಯ, ಶಿಕ್ಷಣ ಮತ್ತು ಅಗತ್ಯ ಸಾಮಾಜಿಕ ಭದ್ರತೆ ಖಂಡಿತವಾಗಿಯೂ ದೊರೆಯಬೇಕು. ಆದರೆ ಅದರ ಜೊತೆಗೆ ದುಡಿಯುವವರಿಗೆ ಉದ್ಯೋಗ, ರೈತರಿಗೆ ನ್ಯಾಯಯುತ ಬೆಲೆ, ಯುವಕರಿಗೆ ಕೌಶಲ್ಯ ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು. ಗ್ಯಾರಂಟಿಗಳ ಫಲಾನುಭವಿಗಳ ಸಂಖ್ಯೆಯನ್ನಷ್ಟೇ ಸಾಧನೆಯ ಮಾನದಂಡವಾಗಿಸದೆ, ಎಷ್ಟು ಜನರು ಸ್ವಂತ ಆದಾಯ ಗಳಿಸುವಂತಾದರು, ಎಷ್ಟು ಕುಟುಂಬಗಳು ಬಡತನದಿಂದ ಹೊರಬಂದವು, ಎಷ್ಟು ಶಾಶ್ವತ ಉದ್ಯೋಗಗಳು ಸೃಷ್ಟಿಯಾದವು ಎಂಬುದನ್ನೂ ಅಳೆಯಬೇಕು. ಕೊನೆಗೆ ಜನರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡುವುದಕ್ಕಿಂತ, ಅವರು ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿ ಸಂಪಾದಿಸುವಂತಹ ಅವಕಾಶ ಸೃಷ್ಟಿಸುವುದು ದೀರ್ಘಕಾಲೀನ ಅಭಿವೃದ್ಧಿಯ ದಾರಿ. ಉಚಿತ ಸೌಲಭ್ಯಗಳಿಂದ ತಾತ್ಕಾಲಿಕ ನೆಮ್ಮದಿ ಸಿಗಬಹುದು; ಆದರೆ ದುಡಿಮೆ, ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಮಾತ್ರ ಶಾಶ್ವತ ನೆಮ್ಮದಿ ಸಾಧ್ಯ. ಜನರನ್ನು ಸರ್ಕಾರದ ನೆರವಿಗಾಗಿ ಕಾಯುವವರನ್ನಾಗಿ ಮಾಡಬೇಡಿ; ತಮ್ಮ ದುಡಿಮೆಯಿಂದ ಬದುಕು ಕಟ್ಟಿಕೊಳ್ಳುವ ಶಕ್ತಿಯುಳ್ಳವರನ್ನಾಗಿ ಮಾಡಿ. ಮತಗಳಿಗಾಗಿ ಭರವಸೆ ನೀಡುವ ರಾಜಕಾರಣಕ್ಕಿಂತ, ಭವಿಷ್ಯ ರೂಪಿಸುವ ಅಭಿವೃದ್ಧಿಯ ರಾಜಕಾರಣ ಕರ್ನಾಟಕಕ್ಕೆ ಬೇಕಾಗಿದೆ. ಮಾಹಿತಿ: (ಅಂಕಿ ಅಂಶಗಳ ಆಧಾರ: ಕರ್ನಾಟಕದ 2026-27ರ ಬಜೆಟ್ ವಿಶ್ಲೇಷಣೆ – PRS India. PRS Legislative Research ಚುನಾವಣಾ ಪ್ರಣಾಳಿಕೆಗಳ ಮಾರ್ಗಸೂಚಿ – ಭಾರತದ ಚುನಾವಣಾ ಆಯೋಗ. Election Commission of India)
ಬರಹ -ಶರತ್ ಶೆಟ್ಟಿ ಪಡುಪಳ್ಳಿ


















































































































