ಸಾಮಾಜಿಕ ಮಾಧ್ಯಮಗಳು ಬಂದ ಮೇಲೆ ಆವರೆಗೆ ನಮ್ಮಲ್ಲಿ ಕಾಣಿಸಿಲ್ಲದ ದೃಶ್ಯಗಳನ್ನು ಎಲ್ಲರೂ ನೋಡಲಾರಂಭಿಸಿದರು. ಕೇಳಬಾರದ ಮಾತುಗಳನ್ನು ಕೇಳಲಾರಂಭಿಸಿದರು. ಅಗೋಚರ ಸತ್ಯಗಳು ಗೋಚರವಾಗತೊಡಗಿದವು. ಗಂಡು ಹೆಣ್ಣಿನ ಪಿಸು ಮಾತುಗಳು, ದಂಪತಿಗಳ ಜಗಳಗಳು, ರಾಜಕಾರಣಿಗಳ ಬೈದಾಟಗಳು, ಬೇಕಾದುದು ಬೇಡವಾದುದು, ಒಂದಾ ಎರಡಾ? ಅಂಗೈಯಗಲದ ಯಂತ್ರ ಬಿಚ್ಚಿದರೆ ಸಾಕು, ಈಗಂತೂ ಭೂಗತ ಹೆಣಗಳೆಲ್ಲ ಒಂದೊಂದೇ ಎದ್ದು ಬರುತ್ತವೆ. ನೋಡಿದ ನೋಡಬಾರದ ಕೇಳದ ಕೇಳಬಾರದ ದೃಶ್ಯಗಳೆಲ್ಲ ಬೇಡವೆಂದರೂ ಮನಸ್ಸಿನ ಒಳಗಡೆ ತೂರಿಕೊಂಡು ಎಲ್ಲೆಂದರಲ್ಲಿ ಲಾಗ ಹೊಡೆದು ತಲೆ ಕೆಡಿಸುತ್ತವೆ. ಅಪರಾಧಿಗಳಿಗೆ ಶಿಕ್ಷೆ ಆಗುತ್ತೋ ಇಲ್ಲವೋ.. ಅದಕ್ಕಿಂತ ಮುಂಚೆಯೇ ಮಾಧ್ಯಮ ಕೊಡುವ ಈ ಲೋಕಶಿಕ್ಷೆ ಜೈಲಿಗಿಂತ ದೊಡ್ಡ ಅವಮಾನ ಸಂಕಟವಾಗಿರುತ್ತದೆ.

ನಮ್ಮ ಪೂರ್ವಜ ಪ್ರಾಚೀನ ಮಾನವ ಗವಿಮನೆಯ ಗೋಡೆ ಮೇಲೆ ಚಿತ್ರ ಬಿಡಿಸುತ್ತಿದ್ದ. ಸಮ್ಮುಖ ಚಿತ್ರ, ದೇಹ ಭಾಷೆ ಮಾತ್ರ ಸಂವಹನಕ್ಕೆ ಒಗ್ಗುತ್ತಿದ್ದ ಸಮಯವದು. ನಂತರ ಶಿಲೆ, ಗೋಡೆ, ತಾಮ್ರಪಟ, ತಾಳೆಗರಿ, ಕಾಗದ, ರೇಡಿಯೋ, ಟಿವಿ ಮತ್ತು ಈಗ ಸೋಶಿಯಲ್ ಮೀಡಿಯಾ ಎಂಬಂತೆ ಮಾಧ್ಯಮಗಳು ಬದಲಾಗುತ್ತಾ ಬಂದಿವೆ. ಪ್ರತಿ ಹಂತದಲ್ಲೂ ಹೊಸ ಮಾಧ್ಯಮ ಬಂದಾಗ ಹಳೆಯ ಮಾಧ್ಯಮದವರು ಹೊಸತನ್ನು ಅನುಮಾನದಿಂದಲೇ ನೋಡಿದ್ದಾರೆ. “ಇದು ಅತಿಮಾತು ಸತ್ಯವಲ್ಲ, ಗಂಭೀರ ಅಭಿವ್ಯಕ್ತಿ, ಬರವಣಿಗೆ ಅಲ್ಲವೇ ಅಲ್ಲ” ಎಂಬ ಮುದ್ರಿಕೆಯನ್ನೂ ಹಳಬರು ಹೊಸ ಅವತರಣಿಕೆಯ ಮೇಲೆ ಹಾಕಿದರು. ಗವಿಬಾಗಿಲ ಕರಗದ ಕಲ್ಲಿನ ಮೇಲೆ ಬರೆದ ಚಿತ್ರಗಳಷ್ಟೇ ಮಾತನಾಡುತ್ತಿದ್ದ ಕಥೆಗಳಲ್ಲಿ ಇವತ್ತಿನ ಯಾವ ರೋಚಕತೆಯೂ ಇರಲಿಲ್ಲ. ಮೋಸ ನಂಜು ಉತ್ಪ್ರೇಕ್ಷೆ ಅತಿರೇಕ ಯಾವುದೂ ಇರಲಿಲ್ಲ. ಮುಂದೆ ತಾಮ್ರಪಟ ಬಂತು. ಅನಂತರ ತಾಳೆಗರಿ, ತದ ಆನಂತರ ಕಾಗದ. ಈಗ ಸೋಶಿಯಲ್ ಮೀಡಿಯ ಕಾಲ.
ಕಲ್ಲಿನಲ್ಲಿ ಅಕ್ಷರ ಚಿಹ್ನೆ ಮಾಹಿತಿಗಳನ್ನು ಕೆತ್ತಿ ಶಾಶ್ವತಗೊಳಿಸುವ, ಮಾಹಿತಿಯನ್ನು ತಲುಪಿಸುವ ಆ ದಾರಿ ಸೀಮಿತವಾದದ್ದು. ಅಲುಗಾಡದೆ ನಿಲ್ಲುವ ಸ್ಥಾವರ ರೂಪದ್ದು. ಆ ಮಾಹಿತಿ ಚಲಿಸುವುದಿಲ್ಲ,ನಿಂತಲ್ಲೇ ನಿಂತಿರುತ್ತದೆ. ಲೇಖನದ ಹತ್ತಿರ ನಾವು ಚಲಿಸಬೇಕು. ಅದು ನಮ್ಮ ಕಡೆಗೆ ಬರುವುದಿಲ್ಲ. ಈಗ ಶಿಲಾಲೇಖ ಬರೆಯುವುದನ್ನಾಗಲೀ ಓದುದವುನ್ನಾಗಿಲೀ ಕಲ್ಪಿಸಿಕೊಳ್ಳುವುದೇ ಕಷ್ಟ. ಮುಂದಿನ ತಾಮ್ರಪಟದ ಕಾಲವೂ ಭಾರೀ ಅಕ್ಷರವಂತರದ್ದಲ್ಲ. ತಾಳೆಗರಿ ಬಂದಾಗ ಅಕ್ಷರದ ಅರಿವು ವಿಸ್ತರಿಸಿತು. ಭಾಗಶಃ ಪಾಮರರಿಗೂ ತಲುಪಿತ್ತು. ಬಸದಿ ಮಠ ಮಂದಿರ ಚಾವಡಿ ಇತ್ಯಾದಿಗಳೆಡೆಯಲ್ಲಿ ಕೂತು ಓದುವವರು ಕೇಳುವವರು ಕೂಡಿಕೊಂಡಾಗ ಸoವಹನ ದಾರಿ ಸುಲಭವಾಯಿತು. ಯಾವಾಗ ಕಾಗದ ಬಂತೋ, ತಾಳೆಗರಿಯ ಲಿಪಿಕಾರ ಸುಲಭವಾಗಿ ಕೈಯಿಂದ ಕೈಗೆ ದಾಟುವ, ಅಗ್ಗದಲ್ಲಿ ಒದಗುವ ಕಾಗದದ ಮೇಲಿನ ಸಾಹಿತ್ಯವನ್ನು ಅನುಮಾನದಿಂದಲೇ ನೋಡಿರಬಹುದು. ಅಗ್ಗದ, ಅಶಾಶ್ವತ ಕಾಗದದಲ್ಲಿ ಬರೆಯುವುದು ಘನತೆಯ ಕಾರ್ಯವಲ್ಲ, ಗಂಭೀರ ಸಾಹಿತ್ಯವೂ ಅಲ್ಲ ಎಂಬ ತೀರ್ಮಾನ ತಾಮ್ರ, ತಾಳೆಗರಿಯ ಲಿಪಿಗಾರರದ್ದಾಗಿರಬಹುದು. ಯಾವಾಗ ಸೋಶಿಯಲ್ ಮೀಡಿಯ ಬಂತೋ ಈಗ ಕಾಗದದಲ್ಲಿ ಬರೆಯುವವರು ಈ ಮಾಧ್ಯಮದವರನ್ನು ಅನುಮಾನದಿಂದ ನೋಡುತ್ತಾರೆ. ಅವರ ಪಾಲಿಗೆ ಇಲ್ಲಿ ಕವಿತೆ, ಲೇಖನ, ಕಥೆ ಪ್ರಬಂಧ ಬರೆಯುವ ಬರಹಗಾರ ಮಹತ್ವದ ಲೇಖಕನಲ್ಲ. ಅಕಾಡೆಮಿ ಪರಿಷತ್ತು ಪ್ರಾಧಿಕಾರಗಳು ಸೋಶಿಯಲ್ ಮೀಡಿಯಾ ಬರಹಗಾರರನ್ನು ಈವರೆಗೆ ಗಂಭೀರವಾಗಿ ಪರಿಗಣಿಸಿಲ್ಲ. ಪ್ರಶಸ್ತಿ ಪರಿಮಾಣಗಳಿಲ್ಲ. ಏನಿದ್ದರೂ ಕಾಗದದ್ದೇ ಬಹಳ ಮೌಲಿಕ ಅನ್ನುವ ಅಭಿಪ್ರಾಯ ಬಹಳಷ್ಟು ಜನರಲ್ಲಿದೆ.
ಕಾಗದದವರೆಗಿನ ಪೂರ್ವ ಮಾಧ್ಯಮಗಳು ಅಥವಾ ಸoವಹನ ಉಪಕರಣಗಳು ಒಂದು ಮಿತಿಯಲ್ಲಿದ್ದರೆ ಇವತ್ತಿನದು ಪಾದರಸದ ಹಾಗೆಯೇ. ಎಲ್ಲೆಂದರಲ್ಲಿ ಜಾರುತ್ತವೆ. ಎಲ್ಲೆಲ್ಲಿಂದಲೂ ಎತ್ತುತ್ತವೆ. ಎಲ್ಲೆಲ್ಲಿಗೂ ತಲುಪಿಸುತ್ತವೆ. ಅತ್ಯಂತ ವೇಗದ ಮಾಧ್ಯಮಗಳಿವು. ಇವುಗಳ ಪರಿಣಾಮಗಳನ್ನು ಊಹಿಸಲಾಗುವುದಿಲ್ಲ. ತಕ್ಷಣವೇ ತಲುಪಿಸುವ, ಪ್ರತಿಕ್ರಿಯೆ ಪಡೆಯುವ, ಪ್ರತಿಫಲನ ನೀಡುವ ವೇಗವಿದೆ. ಇದು ಸೃಷ್ಟಿಸುವ ಪರಿಣಾಮಗಳು ನಿಖರವಾಗಿ ಊಹಿಸಲಾಗದಷ್ಟು ದೊಡ್ಡದೆoಬುದಕ್ಕೆ ಇತ್ತೀಚಿನ ಒಂದೇ ಒಂದು ದೃಷ್ಟಾಂತ ಸಾಕು. ನವ ಮಾಧ್ಯಮಗಳಲ್ಲಿ ಮಾಹಿತಿ ಮತ್ತು ವೇಗದ ಕಾರಣಕ್ಕೆ ಜ್ಞಾನವ್ಯಾಪ್ತಿ ಹೆಚ್ಚಾದರೂ, ಮೌಲ್ಯಮಾಪನದ ಗೊಂದಲ ಅಷ್ಟೇ ದೊಡ್ಡದು. ಇದರಿಂದ ಮನುಷ್ಯನ ಅಭಿವ್ಯಕ್ತಿ, ಭಾಷೆ, ಶಬ್ದಗಳು ಬದಲಾಗುತ್ತಿವೆ. ಸುದ್ದಿ ಹುಟ್ಟುವ ಕಡೆಗಿಂತ ಅದು ಮುಟ್ಟುವಾಗ ಸೃಷ್ಟಿಸಬಹುದಾದ ಕಂಪನ, ಎಚ್ಚರ ಬಹಳ ಸೂಕ್ಷ್ಮವಾದದ್ದು. ಕಳೆದ ಎರಡು ತಿಂಗಳಿಂದ ಸಾವಿರಕ್ಕಿಂತ ಹೆಚ್ಚು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಧರ್ಮಸ್ಥಳದ ವಿಚಾರದಲ್ಲಿ ಕಾಣಿಸಿಕೊಂಡಿದ್ದಾರೆ, ಮುಗಿ ಬಿದ್ದಿದ್ದಾರೆ. ಅವರಿಗೆ ಅವರೇ ವರದಿಗಾರರು, ಅವರಿಗೆ ಅವರೇ ಸಂಪಾದಕರು, ಫೋಟೋಗ್ರಾಫರ್, ಸಹಸಂಪಾದಕರು, ಸುದ್ದಿ ಸಂಪಾದಕರು.. ಎಲ್ಲವೂ ನೇರ ಪ್ರಸಾರವೇ. ಬರೀ ಇಷ್ಟೇ ಅಲ್ಲ ಬಹಳಷ್ಟು ಸಂದರ್ಭದಲ್ಲಿ ಇಲ್ಲಿ ವರದಿಗಾರರೇ ವಕೀಲರಾಗಿದ್ದಾರೆ,. ನ್ಯಾಯಾಧೀಶರಾಗಿದ್ದಾರೆ!. ಕೆಲವರು ನೀರಿನ ಮೇಲೆಯೇ ತೇಲುತ್ತಾ ಕದಡುತ್ತಾ ನಿರಂತರ ಬಾಯಿ ಮುಖ ಮೂಗು ಕಾಣಿಸಿಕೊಳ್ಳಬೇಕೆಂದು ಈಜುತ್ತಿದ್ದರೆ, ಇನ್ನು ಕೆಲವರು ಕಡಲಿನ ಆಳಕ್ಕಿಳಿದು ಮುತ್ತುಗಳನ್ನು ಎತ್ತಿದ್ದಾರೆ. ಆಳವಾದ ಅಧ್ಯಯನ ಒಳನೋಟಗಳುಳ್ಳ ಯೂಟ್ಯೂಬರ್ಸ್ ಗಳು ಇಲ್ಲಿ ಸಾಧಿಸಿರುವುದು ಖಂಡಿತ ಕಡಿಮೆಯಲ್ಲ.
ನೀವು ಒಂದು ಸಲಕ್ಕೆ ಒಂದು ವಿಡಿಯೋವನ್ನು 20 ಸೆಕೆಂಡಿಗಿಂತ ಹೆಚ್ಚು ಸಲ ಸಮಯ ನೋಡಿದ್ರೆ ಸಾಕು, ಮುಂದೆ ಅದೇ ನಿಲುವಿನ ಅದೇ ವಿಷಯದ ನೂರಾರು ವಿಡಿಯೋಗಳು ನಿಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತವೆ. ಆ ಸಂದರ್ಭದಲ್ಲಿ ನಮ್ಮೊಳಗಡೆ ಹುಟ್ಟಬಹುದಾದ ಪ್ರಶ್ನೆಗಳನ್ನು ಸಂದೇಹ ಅನುಮಾನಗಳನ್ನು ಅದುಮಿಡುವ ಬದಲು ನಮ್ಮ ನಿಲುವನ್ನು ಆ ಸರಣಿ ಗಟ್ಟಿ ಮಾಡುತ್ತಾ ಹೋಗುತ್ತವೆ. ಏಕಕಾಲದಲ್ಲಿ ಅದು ನಿಮ್ಮನ್ನು ಆಕರ್ಷಿಸುತ್ತದೆ, ಕುತೂಹಲ ಮೂಡುವ ಹಾಗೆ ಮಾಡುತ್ತದೆ. ನಿಮ್ಮ ಪೂರ್ವಯೋಜಿತ ಕಲ್ಪಿತತೆಯನ್ನು ಗಟ್ಟಿಗೊಳಿಸುತ್ತದೆ. ಅಷ್ಟು ಹೊತ್ತಿಗೆ ಆ ಒಟ್ಟು ಘಟನೆಯ ಬಗ್ಗೆ ನೀವು ಒಂದು ತೀರ್ಮಾನಕ್ಕೆ ಬಂದಿರುತ್ತೀರಿ. ಆ ಇಡೀ ಅಭಿಪ್ರಾಯ ನೀವು ಈ ಹಿಂದೆ ನೋಡಿರುವ ಎಲ್ಲಾ ದೃಶ್ಯಗಳ ಮಾತುಗಳ ಅಭಿಮತದ ಪಾಯದ ಮೇಲೆ ಕೆನೆ ಕಟ್ಟಿರುತ್ತದೆ. ಯಾವುದೇ ಧರ್ಮ ಧಾರ್ಮಿಕ ಕೇಂದ್ರ ನಂಬಿಕೆಯಿಂದಲೇ ಹುಟ್ಟಿ ನಂಬಿಕೆಯಿಂದಲೇ ಜೀವಿಸುತ್ತದೆ. ಈ ಕಾರಣಕ್ಕಾಗಿಯೇ ಅಲ್ಲಿಯ ಅಸ್ಥಿರತೆಗೆ ಪ್ರಶ್ನೆಗಳು ಪ್ರಹಾರಗಳಾಗುತ್ತವೆ,
ಅಭಿಪ್ರಾಯಗಳೆಲ್ಲ ಶಸ್ತ್ರಗಳಾಗುತ್ತವೆ. ಆದರೆ ಇವತ್ತು ಪ್ರಶ್ನೆಗಳು ಮತ್ತು ಉತ್ತರಗಳು ಎರಡೂ ತಾರಕ ಸ್ವರದಲ್ಲಿವೆ. ಈ ಕಾರಣಕ್ಕಾಗಿಯೇ ನಡುವೆ ನಿಂತು ಮಾತನಾಡುವ ಮೃದುತ್ವದ ಶಾಂತಿಯುತ ಸಮನ್ವಯದ ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ಯಾರಿಗೂ ಇಲ್ಲ. ಬಹುಪಾಲು ಆಕ್ರೋಷಿತರು ಸೌಮ್ಯತೆಯನ್ನು ಇಂದು ದೌರ್ಬಲ್ಯವೆಂದು ನೋಡುತ್ತಿದ್ದಾರೆ. ವ್ಯಾಕುಲತೆಯ ವಾತಾವರಣದಲ್ಲಿ ಸಂವೇದನೆಗಳನ್ನು ಕೆರಳಿಸುವ ಮಾತುಗಳಿಗೆ ಹೆಚ್ಚು ಹೆಚ್ಚು ವೇದಿಕೆ ಸಿಗುತ್ತದೆಯೇ ಹೊರತು ಓಡುವವರನ್ನು ನಿಲ್ಲಿಸಿ ತಾಳ್ಮೆಯಿಂದ ಮಾತನಾಡಿಸುವಷ್ಟೂ ನಮ್ಮೊಳಗಡೆ ಸಹನೆ ತಾಳ್ಮೆ ಬತ್ತುತಿದೆ. ಓಡುವ ಒಂಟೆಯ ಕೊರಳಿನಡಿಗೆ ಜೋತು ಬಿದ್ದ ಮಗುವಿನ ಚಿರಾಟದಂತಾಗಿದೆ ಈ ಸ್ಥಿತಿ.
ಈ ಹಿನ್ನೆಲೆಯಲ್ಲಿ, ನಿಜದ ಮರೆಗೆ ಇಣುಕುವ, ಶಿಸ್ತಿನಿಂದ, ಯುಕ್ತಿಯಿಂದ, ಸಹನೆಯಿಂದ ಹೇಳುವ ಮಾತುಗಳು ಮರೆಯಾಗುವ ಅಪಾಯ ಎದುರಾಗಿದೆ. ಸೋಶಿಯಲ್ ಮೀಡಿಯಾಗಳು ಹಂಚುವ ಬರಪೂರ ವೇಗದ ಮಾಹಿತಿಗಳು ಮನುಷ್ಯನೊಳಗಡೆ ವಿಚಾರ ಪೂರ್ಣವಾದುದನ್ನು, ಆಳವಾದ ಚಿಂತನೆಗಳನ್ನು ಕೇಳಿಸಿಕೊಳ್ಳುವ ತಾಳ್ಮೆಯನ್ನೇ ನಾಶಪಡಿಸುತ್ತಿದೆ. ಗಂಭೀರವಾಗಿ ಓದಿ ತಿಳಿದುಕೊಳ್ಳುವ ರುಚಿ ಸೌಲಭ್ಯ ಬತ್ತುತ್ತಿದೆ. ಈಗ ನಾವು ಎಲ್ಲಿ ನಿಂತಿದ್ದೇವೆ ಎಂಬುದು ಮುಖ್ಯ. ನಮ್ಮ ಚರ್ಚೆಗಳು, ಅಂಕಣಗಳು, ಲೇಖನಗಳು, ಭಾಷಣಗಳು ಇವು ಆಕ್ರೋಶದ ತಾಪದಿಂದ ಬೆಂದಿದ್ದರೂ, ಅವುಗಳ ಒಳಗೆ ಬುದ್ಧಿಯ ಶಾಂತಿ, ನೈತಿಕ ದೃಢತೆ ಮತ್ತು ನಂಬಿಕೆಯ ಸತ್ಯ ಇದ್ದೇ ಇದೆ. ಇದನ್ನು ಕಳೆದುಕೊಂಡರೆ ನಾವು ಕೂಡ ಗುಂಡುಗಳು ಉತ್ಪಾದಿಸುವ ಹಾರಿಸುವ ಮತ್ತೊಂದು ಶಿಬಿರವಾಗಿ ಬಿಡುತ್ತವೆ. ಬರೀ ಧರ್ಮಸ್ಥಳದ ವಿಚಾರವೇಕೆ? ಬೇರೆ ಘಟನೆಯಲ್ಲೂ ಇವತ್ತಿನ ನವ ಮಾಧ್ಯಮಗಳಲ್ಲಿ ಹೆಚ್ಚು ಶಬ್ದದಲ್ಲಿ ಮಾತನಾಡುವವನು ಎಲ್ಲರ ಗಮನ ಸೆಳೆಯಬಹುದು ಎಂಬ ಭ್ರಮೆಯನ್ನು ಸೃಷ್ಟಿಸಿದೆ. ನಮ್ಮ ಆಂಕರ್ ಗಳು ಇವತ್ತು ಸಾವಿನ ಮನೆಯಲ್ಲೂ ಶಾಂತ ಚಿತ್ತವಾಗಿ ಮಾತನಾಡುವುದನ್ನು ಮರೆತು ಹೋಗುವಷ್ಟು ಅಬ್ಬರದ ಮಾತಿನ ಚಟಕ್ಕೆ ಒಳಗಾಗಿದ್ದಾರೆ. ನಗು ವಿನಯ ಪ್ರೀತಿ ಲೇಪಿಸಿದ ಪಿಸು ಮಾತುಗಳು ಅವರಿಗೆ ಮರೆತು ಹೋಗಿ ಬಹಳ ದಿನಗಳೇ ಆದವು. ಎಲ್ಲವೂ ಇದೇ ಆದಾಗ ನಿಜವಾದ ಸತ್ಯಕ್ಕಿಂತ ಹೆಚ್ಚು ಇವು ‘ಅನಿಸಿಕೆಗಳ ರಾಜ್ಯ’ ನಿರ್ಮಿಸುತ್ತವೆ. ಪರಿಣಾಮವಾಗಿ, ಮೌಲ್ಯಾಧಾರಿತ ಚರ್ಚೆಗಳಿಗಿಂತ ಭಯ, ಶಂಕೆ, ಆಕ್ರೋಶ ಹೆಚ್ಚು ಜನರಲ್ಲಿ ಸಹಜವಾಗಿಯೇ ಮೂಡುತ್ತಿವೆ. ಒಂದು ಕಾಲದಲ್ಲಿ ಚಾನೆಲ್ ಒಳಗಡೆ ಕೂರುತ್ತಿದ್ದ ಬಿ ಎಲ್ ಶಂಕರ್, ವೈಎಸ್ ದತ್ತ, ಸುದರ್ಶನ್ ಮುಂತಾದ ರಾಜಕಾರಣಿಗಳ ಚರ್ಚಾ ಸಂದರ್ಭದಲ್ಲಿ ಜಾರಿಯಲ್ಲಿರುತ್ತಿದ್ದ ಮೌನ ವಿನಯ ನಿವೇದನೆ ರಾಜಿ ಸೂಕ್ಷ್ಮಗಳನ್ನು ನೀವು ಗಮನಿಸಿರಬಹುದು. ಈ ಮುತ್ಸದ್ದಿತನ ಇವತ್ತಿನ ರಾಜಕಾರಣಿಗಳಲ್ಲೂ ಕಡಿಮೆಯಾಗುತ್ತಿದೆ ಅಥವಾ ಅಂಥ ಸ್ವಭಾವ ನಮ್ಮ ಮಾಧ್ಯಮಗಳಿಗೆ ಬೇಕಾಗಿಲ್ಲ ಅನಿಸುತ್ತದೆ. ಚರ್ಚೆಯ ಸಂದರ್ಭದಲ್ಲಿ ಕಚ್ಚಾಡಿಕೊಳ್ಳುವುದನ್ನೇ ಮೌಲ್ಯ ಮತ್ತು ಟಿ ಆರ್ ಪಿಯ ಭಾಗ ಎಂದು ಭಾವಿಸುವವರಿಗೆ ಮುಂದೆ ಜಗಳಗಂಟರೇ ಬೇಡಿಕೆಯ ವಸ್ತುಗಳಾಗುತ್ತಾರೆ. ಇದರಿಂದ ವ್ಯಕ್ತಿಯ ಮನಸ್ಸಿನಲ್ಲಿ ರೂಪುಗೊಳ್ಳುವ ಕಲ್ಪನೆಗಳು ನೈತಿಕ ಚಿಂತನೆಗೆ ಜಾಗ ಕೊಡದೆ ‘ಅವರು ತಪ್ಪಿತಸ್ಥ’ ಎಂಬ ಜನಪ್ರಿಯ ಅಭಿಪ್ರಾಯವನ್ನು ಕಟ್ಟಿಕೊಡುತ್ತವೆ. ಇನ್ನು ತಪ್ಪಿತಸ್ಥರು ಯಾರು ಎಂಬುದರ ಪಕ್ಕಾ ದಾಖಲೆ ಬರುವ ಮುಂಚೆಯೇ ‘ಜನನ್ಯಾಯಾಲಯ’ ಕೊಡುವ ಈ ತೀರ್ಪು ತನಿಖಾ ಸಂಸ್ಥೆಗಳಿಗೆ ನಿರಪೇಕ್ಷವಾಗಿ ಕೆಲಸ ಮಾಡಲು ಸವಾಲಾಗಬಹುದು. ಒತ್ತಡದ ಪರಿಸರದಲ್ಲಿ ತ್ವರಿತ ನ್ಯಾಯದ ನಿರೀಕ್ಷೆ ತಪ್ಪು ತೀರ್ಮಾನಗಳನ್ನು ಹುಟ್ಟುಹಾಕಲೂ ಬಹುದು.
ಭಾಗಶಃ ಇಂತಹ ಪ್ರಕರಣಗಳಲ್ಲಿ, ನಿಜದ ಸತ್ಯದ ಕಡೆಯವರು ನೋವು ಅನುಭವಿಸುತ್ತಾರೆ, ತಪ್ಪು ಅರೋಪಿತರು ಸಾಮಾಜಿಕವಾಗಿ ನುಸುಳಿಬಿಡುತ್ತಾರೆ. ಇದು ಸಹಾನುಭೂತಿ ಮತ್ತು ಮಾನವೀಯ ಮೌಲ್ಯಗಳ ಪರೀಕ್ಷೆಯ ಕಾಲವಾಗುತ್ತದೆ. ದೇವಾಲಯ ಮಂದಿರ ಮಸೀದಿ ಚರ್ಚಗಳಲ್ಲಿ ನಮಗೆ ದೇವರು ಸಿಗುತ್ತಾರೋ ಗೊತ್ತಿಲ್ಲ. ಆದರೆ ಅಲ್ಲಿಯ ಪಾವಿತ್ರ್ಯತೆ, ದೈವಿಕ ಕಳೆ ಬಹಳ ಮುಖ್ಯವಾದದ್ದು. ಒಂದು ಪವಿತ್ರ ತಾಣದ ಸುತ್ತ ಉಂಟಾದ ಕುತೂಹಲ, ಊಹೆ ಮತ್ತು ಈಗ ಕುರುಹುಗಳ ಆಧಾರದಲ್ಲಿ ನಡೆಯುತ್ತಿರುವ ಸಾಮಾಜಿಕ ಚರ್ಚೆ, ಮಾಧ್ಯಮದ ಪ್ರಸಾರ ಮತ್ತು ಸಾರ್ವಜನಿಕ ಮನಸ್ಸಿನ ತೀವ್ರತೆಗಳು ನಮ್ಮ ಸಮಾಜದ ಮಾನಸಿಕ ಸ್ಥಿತಿಗೆ ಹತ್ತಿರದಿಂದ ಪ್ರತಿಬಿಂಬವಾಗಿವೆ. ಇದರ ದೀರ್ಘಕಾಲಿಕ ಪರಿಣಾಮಗಳು ನೈತಿಕತೆಯ ಮೇಲೆ ಮಾತ್ರವಲ್ಲ, ಈ ದೇಶದ ಧಾರ್ಮಿಕ ಹಾಗೂ ಸಾಮಾಜಿಕ ಹಿತಚಿಂತನೆಗಳ ಮೇಲೆ ಬೀರುವ ಬಲವಾದ ಪ್ರತಿಫಲನವಾಗಬಹುದು. ಆರಾಧನಾ ಕೇಂದ್ರಗಳ ಪಾವಿತ್ರ್ಯತೆಯ ಕುರಿತು ಸಾರ್ವಜನಿಕವಾಗಿ ಹುಟ್ಟುವ ಅನುಮಾನಗಳು ದೇವಸ್ಥಾನ, ತೀರ್ಥಕ್ಷೇತ್ರ, ದೇವಸ್ಥಾನಗಳಿಗೆ ಸಂಬಂಧಿಸಿದ ಆರ್ಥಿಕ ಅಥವಾ ನೈತಿಕ ವಿಚಲನೆಗಳು ಜನ ಸಾಮಾನ್ಯರಲ್ಲಿ ನಂಬಿಕೆಯ ಮೇಲೆಯೇ ಗಂಭೀರವಾದ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಇದರ ಪರಿಣಾಮವಾಗಿ ತಕ್ಷಣಕ್ಕೆ ಮಾತ್ರವಲ್ಲ, ದೀರ್ಘಾವಧಿಯ ನೈತಿಕ ಮತ್ತು ಸಾಮಾಜಿಕ ಅವಾಂತರಗಳು ಉಂಟಾಗುತ್ತವೆ. ಹೌದು, ನಮಗೀಗ ಆಕ್ರೋಶವಿದೆ. ಆದರೆ ನಾವು ಆಕ್ರೋಶವನ್ನು ಮಾತಿನ ಗುಂಡುಗಳಾಗಿ ಪರಿವರ್ತಿಸಿದರೆ, ಏರುದ್ವನಿಯೇ ಸಂವಾದ ಎಂದು ಭಾವಿಸಿದರೆ ಭಾಷೆ ಮತ್ತು ಬದುಕಿನ ಮಧುರತೆ ಸಾಯುತ್ತದೆ. ಬದಲು, ಆಕ್ರೋಶವನ್ನೇ ಆತ್ಮಾವಲೋಕನದ ಶಕ್ತಿಯಾಗಿ ಬಳಸಿಕೊಂಡು, ಧೈರ್ಯದಿಂದ, ಶಾಂತಿಯುತವಾಗಿ, ನೈತಿಕವಾಗಿ ಪ್ರಶ್ನಿಸೋಣ. ಹಾಗಂತ ಶಾಂತಿಯುತ ಮಾತುಗಳನ್ನು ಯಾರೂ ಕೂಡ ದೌರ್ಬಲ್ಯ ಎಂದು ಭಾವಿಸುವುದು ಬೇಡ.ದೇವಾಲಯಗಳ ಪಾವಿತ್ರ್ಯತೆಯ ಮೇಲೆ ವ್ಯಕ್ತವಾಗುವ ಯಾವುದೇ ಅನುಮಾನವು ಕೇವಲ ಒಂದು ಸ್ಥಳದ ಸಮಸ್ಯೆಯಲ್ಲ. ಅದು ನಂಬಿಕೆಯ ಜಾಲವನ್ನೇ ನಡುಗಿಸಬಲ್ಲದು. ಆದ್ದರಿಂದ ಈ ರೀತಿ ಜನರ ಅನುಮಾನಗಳು ಹುಟ್ಟುವುದಕ್ಕಿಂತ ಮುಂಚೆಯೇ, ದೇವಾಲಯಗಳ ಆಡಳಿತವು ಸ್ಪಷ್ಟ, ಪಾರದರ್ಶಕ ಹಾಗೂ ನೈತಿಕತೆಯಿಂದ ಕೂಡಿರಬೇಕಾಗಿದೆ.
ಬರಹ : ನರೇಂದ್ರ ರೈ ದೇರ್ಲ