
ಮೊನ್ನೆಯ ಪತ್ರಿಕೆಯಲ್ಲಿನ ಒಂದು ಸುದ್ದಿ ಹೀಗಿತ್ತು. ಲಕ್ನೋದಲ್ಲಿ ನೀಟ್ ಪರೀಕ್ಷೆಗೆ ಓದು ಎಂದ ತಂದೆಯನ್ನೇ ಮಗ ಗುಂಡಿಕ್ಕಿ ಕೊಂದ. ಒಮ್ಮೆ ಆಶ್ಚರ್ಯವೆನಿಸಬಹುದು. ಆದರೆ ಹೀಗೆ ಕೊಂದು ಪ್ರಾಣ ತೆಗೆದ ಪ್ರಕರಣಗಳು ಕೆಲವೇ ಇದ್ದರೆ, ತಂದೆ ತಾಯಿಯ ಮಾತು ಕೇಳದ ಇಂತಹ ಇಚ್ಚಾನುಸಾರಿ, ಬೇಜವಾಬ್ದಾರಿ ಮಕ್ಕಳ ವಿಪರೀತ ಬುದ್ದಿಗೆ ಬದುಕಿಯೂ ಸತ್ತ ಮಂದಿಗಳಿರುವ ಮನೆಗಳ ಕತೆ ಬಹಳಷ್ಟಿದೆ. ಬಡತನ, ಹೀಯಾಳಿಕೆ, ಕಷ್ಟ ನಷ್ಟಗಳಿಂದ ಬಳಲಿ ಕೊರಗಿ ಕೊನೆಗೆ ಪ್ರಯತ್ನ ಮತ್ತು ಹಠದಿಂದ ನೆಲದಿಂದ ಮೇಲಕ್ಕೆದ್ದು ಹಾಗೋ ಹೀಗೋ ತಮ್ಮ ಮಕ್ಕಳನ್ನು ರಾಜನ ತರಹ ಬೆಳೆಸಿದ ತಂದೆ ತಾಯಿಯಂದಿರು ತಾವು ಪಟ್ಟ ಪಡಿಪಾಟೀಲು ತಮ್ಮ ಮಕ್ಕಳು ಅನುಭವಿಸಬಾರದು ಎಂದು ಹೈಫೈ ಇಂಗ್ಲೀಷ್ ಮಾಧ್ಯಮ ಶಾಲೆ ಕಾಲೇಜ್ ಗಳಲ್ಲಿ ಓದಿಸುತ್ತಾರೆ. ಉದ್ದೇಶ ಇಷ್ಟೇ ತಾನು ಅನುಭವಿಸಿದ ಯಾತನೆ ನಮ್ಮ ಮಕ್ಕಳು ಅನುಭವಿಸಬಾರದು. ಸಮಾಜದಲ್ಲಿ ಯೋಗ್ಯತೆಯ ಉನ್ನತ ಸ್ಥಾನಮಾನ ಪಡೆದುಕೊಂಡು ತಮ್ಮ ಮಕ್ಕಳು ಗುರುತಿಸಿಕೊಳ್ಳಬೇಕು ಮತ್ತು ಆ ಮಕ್ಕಳ ತಂದೆ ತಾಯಿ ಎಂದು ನಮ್ಮನ್ನು ನಾಲ್ಕು ಜನ ಗುರುತಿಸುವಂತಾಗಬೇಕು ಎಂಬ ಮಹದಾಸೆ ಮತ್ತು ಒಂದು ರೀತಿಯ ಸ್ವಾರ್ಥವೂ ಅದರಲ್ಲಿ ಅಡಗಿದೆ. ಅದಕ್ಕಾಗಿ ತಮ್ಮ ಮಕ್ಕಳನ್ನು ಸಿಕ್ಕಾಗ ಸಿಕ್ಕಾಗ ಓದು ಓದು ಎಂದು ಪೂರ್ತಿ ದಿನವೂ ಗೋಳುಪಡಿಸುವ ತಂದೆ ತಾಯಿ ಹೆಚ್ಚಿನ ಮನೆಯಲ್ಲಿ ಇದ್ದೇ ಇರುತ್ತಾರೆ. ಮಕ್ಕಳ ಭವಿಷ್ಯ ಉಜ್ವಲವಾಗಬೇಕು ಎಂಬ ಇಚ್ಛೆ ಎಲ್ಲಾ ಮಾತಾಪಿತರಿಗೆ ಇದ್ದೇ ಇದೆ. ಆದರೆ ಅದರ ಜೊತೆಗೆ ಅವರಿಗೆ ತಮ್ಮ ಮಕ್ಕಳ ಆಸಕ್ತಿ ಯಾವುದಿದೆ ಎಂದು ಕೇಳುವ ವ್ಯವಧಾನವೂ ಬೇಕು ತಾನೇ? ಅದಿಲ್ಲದೆ ಇದ್ದಲ್ಲಿ ನಿತ್ಯದ ಒತ್ತಾಯ ಮಕ್ಕಳಿಂದ ಏನನ್ನೂ ಮಾಡಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೇ. ನಮ್ಮ ಎಳವೆಯಲ್ಲಿ ನಮ್ಮ ಉಪಾಧ್ಯಾಯರು ಹೇಳುತ್ತಿದ್ದ ಮಾತು ಹೀಗಿತ್ತು. “ಕುದುರೆಯನ್ನು ನೀರಿನವರೆಗೆ ಕರೆದುಕೊಂಡು ಹೋಗಬಹುದು ಆದರೆ ನೀರು ಕುಡಿಯಬೇಕು ಮಾತ್ರ ಕುದುರೆಯೇ” ಎಂದು. ಇದರಂತೆ ನಮ್ಮ ಮಕ್ಕಳಿಗೂ ಓದುವ ವಾತಾವರಣ, ಒಳ್ಳೆಯ ಶಾಲೆ, ಅದಕ್ಕೆ ಬೇಕಾದ ವ್ಯವಸ್ಥೆ ಎಲ್ಲವನ್ನೂ ಮಾಡಬಹುದು. ಆದರೆ ಚೆನ್ನಾಗಿ ಕಲಿತು ಪಾಸಾಗಬೇಕು ಎಂಬ ಇಚ್ಚಾಶಕ್ತಿ ನಮ್ಮ ಮಕ್ಕಳಿಗೇ ತನ್ನಿಂದ ತಾನೇ ಬರಬೇಕಲ್ಲದೇ ಅದು ಒತ್ತಾಯದಿಂದ ಬಾರದು. ಹಾಗೂ ಹೀಗೂ ಒಂದು ಹಂತದವರೆಗೆ ಅಂದ್ರೆ ಹೆಚ್ಚೆಂದರೆ SSLCಯವರೆಗೆ ನಾವು ಒತ್ತಡ ಹಾಕಬಹುದು. ಅದೂ ಕೆಲವು ಮಕ್ಕಳು ಅದನ್ನು ಅವರ ಒಳ್ಳೆಯ ಭವಿಷ್ಯಕ್ಕೆ ಎಂದು ತಿಳಿದುಕೊಂಡರೆ ಮತ್ತೆ ಕೆಲವರು ತಿಳುವಳಿಕೆಯ ಕೊರತೆ, ಮೊಬೈಲ್ ಪ್ರಭಾವ ಮತ್ತು ಸಹವಾಸ ದೋಷದಿಂದ ತಂದೆ ತಾಯಿಯನ್ನೇ ವಿಲನ್ ಗಳೆಂದು ತಿಳಿದು ದ್ವೇಷಿಸುವ ಮಟ್ಟಿಗೆ ಬಂದು ಬಿಟ್ಟಿರುತ್ತಾರೆ. ಒಂದೇ ಮನೆಯಲ್ಲೇ ಇದ್ದರೂ ವೈರಿಗಳ ಹಾಗೇ ವರ್ತಿಸುತ್ತಾರೆ. ನಾವು ಎಣಿಸಿದಂತೆ ಸಂಸ್ಕಾರ, ತಿಳುವಳಿಕೆ ಇದು ಕೇವಲ ಮನೆಯಿಂದ, ಹಿರಿಯರಿಂದ ಮಾತ್ರ ಬರುವುದಲ್ಲ ಅಥವಾ ಶಾಲೆ, ಶಿಕ್ಷಕರಿಂದ ಮಾತ್ರ ಬರುವುದಲ್ಲ. ಬದಲಿಗೆ ನಮ್ಮ ದೈನಂದಿನ ಆರೋಗ್ಯಕರ ಚಟುವಟಿಕೆ, ಪರಿಸರದ ಪ್ರಭಾವ ಒಟ್ಟಿಗೆ ಇರುವ ನಮ್ಮ ಸಹಪಾಠಿಗಳ ಚಲನವಲನ ಮಾತು ಮತ್ತು ಅವರು ಪ್ರದರ್ಶಿಸುವ ದರ್ಪ ದೌಲತ್ತು ಇದು ನಮ್ಮ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಇದು ನನ್ನ ವೈಯಕ್ತಿಕ ಅನುಭವದ ಮಾತು ಕೂಡ. ಇನ್ನೊಂದು ಪ್ರಮುಖ ಅಂಶ ನಮ್ಮ ಮಕ್ಕಳು ನಮ್ಮನ್ನು ಗಮನಿಸಿ ಅದನ್ನು ಅನುಸರಿಸುತ್ತಾರೆಯೇ ಹೊರತು ಕೇವಲ ಮಾತು ಮತ್ತು ಪುಸ್ತಕ ಓದಿ ಕಲಿಯುತ್ತಾರೆ ಎಂಬುದು ಭ್ರಮೆ ಅಷ್ಟೇ. ಮಕ್ಕಳು ಎದುರಿನವ ಎಲ್ಲಿಂದ ಹೇಗೆ ತಂದ ಎಂಬ ಬಗ್ಗೆ ಆಲೋಚಿಸುವುದಿಲ್ಲ. ಅಂತೂ ಆತ ತಂದ ಸೊತ್ತು ನನಗೂ ಬೇಕು ಮತ್ತು ನನ್ನ ಅಪ್ಪ ಅದನ್ನು ನನಗೆ ಕೊಡಿಸಬೇಕು ಇಲ್ಲವಾದಲ್ಲಿ ನನ್ನ ಅಪ್ಪ ಬರೀ ಬೆಪ್ಪ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಇದು 90 ಶೇ. ಮನೆಯ ಸತ್ಯ.


ಈ ಎಲ್ಲಾ ವಿದ್ಯಾಮಾನಗಳಿಗೆ ಕಾರಣ ನಾವೇ. ಅಂದ್ರೆ ಅಪ್ಪ ಅಮ್ಮ ಮತ್ತು ಮನೆಯಲ್ಲಿನ ಇತರ ಸಂಬಂಧಿಗಳೂ ಇದಕ್ಕೆ ಸ್ವಲ್ಪ ಕುಮ್ಮಕ್ಕು ನೀಡುವವರೇ. ತಂದೆ ತಾಯಿ ಹೇಗೂ ತಮ್ಮ ಮಕ್ಕಳು ಕಷ್ಟ ಪಡಬಾರದು ಎಂದು ಬೆಳಿಗ್ಗೆ ಬೇಗ ಎದ್ದು ಬ್ರೇಕ್ಫಾಸ್ಟ್, ಬಿಸಿನೀರು, ಯುನಿಫಾರ್ಮ್ ಗೆ ಇಸ್ತ್ರಿ ಇತ್ಯಾದಿ ಮಾಡಿ ಎಲ್ಲವನ್ನೂ ರೆಡಿ ಮಾಡಿ ಬಸ್ಸಿನವರೆಗೆ ಬ್ಯಾಗ್, ಬುತ್ತಿ ಎಲ್ಲವನ್ನೂ ಎತ್ತಿಕೊಂಡು ಹೋಗಿ ರಾಜ ಮರ್ಯಾದೆಯಲ್ಲಿ ಬಸ್ ಹತ್ತಿಸುತ್ತಾರೆ. ಸೂಚ್ಯವಾಗಿ ಎಳವೆಯಿಂದಲೇ ಬದುಕೇ ಹೀಗೇ ಎಂದು ಸುಖದ ಸುಪ್ಪತ್ತಿಗೆ ಹತ್ತಿಸಿರುತ್ತಾರೆ ಎನ್ನಲೂ ಬಹುದು. ಈ ಮಕ್ಕಳಿಗೆ ಮನೆಯಲ್ಲಿನ ವಿಚಾರಗಳೇ ಗೊತ್ತಿಲ್ಲ. ಎಲ್ಲವೂ ಮಾಯಾಜಾಲದಂತೆ ಮ್ಯಾಜಿಕ್ ನಲ್ಲಿ ನಡೆಯುತ್ತದೆ ಎಂದು ಭಾವಿಸಿರುತ್ತಾರೆ. ವಾಪಾಸ್ ಸಂಜೆ ಮನೆಗೆ ಬಂದಾದ ಮೇಲೂ ತಾಯಿ ತಂದೆ ಮಾಡಿಟ್ಟ ಅಡಿಗೆಯೋ ಕೆಲವು ಮನೆಯಲ್ಲಿ ಸ್ವಿಗ್ಗಿ, ಝೋಮೇಟೊ ಇತ್ಯಾದಿಗಳ ಆರ್ಡರ್ ಮಾಡಿಯೋ ಬೇಕಾದ್ದು ತಿನ್ನಲು ಕುಡಿಯಲು ಅವಕಾಶವಿರುತ್ತದೆ. ಇದು ಮತ್ತೆ ದೊಡ್ಡದಾಗುತ್ತಾ ಹೋಗುವ ನಿರೀಕ್ಷೆಯ ಮಾಯಾಮೋಹದ ಒಂದು ಪರದೆ. ಇದರ ಜೊತೆ ತನ್ನ ಶಾಲೆ ಕಾಲೇಜುಗಳ ಸಹಪಾಠಿಗಳ ಆ ವಿಧವಿಧ ಪ್ಯಾಷನ್ ನ ಶೂಸ್, ಬ್ಯಾಗ್, ಇಲೆಕ್ಟ್ರಾನಿಕ್ ಗ್ಯಾಜೆಟ್ ಇತ್ಯಾದಿಗಳನ್ನು ಕಂಡು ತಮಗೂ ಅದು ಬೇಕೇ ಬೇಕು ಎನಿಸುತ್ತದೆ. ಇನ್ನು ಕೆಲವೊಮ್ಮೆ ಕಂಬೈನ್ ಸ್ಟಡಿ, ಪ್ರಾಕ್ಟಿಕಲ್, ಪ್ರಾಜೆಕ್ಟ್ ಎಂದೆಲ್ಲಾ ಈ ಸಹಪಾಠಿಗಳ ಜೊತೆ ಹೊರಗಡೆ ಹೋಗಬೇಕಾಗುತ್ತದೆ. ಆಗ ಸ್ವಲ್ಪ ಹೆಚ್ಚು ಸ್ಥಿತಿವಂತರ ಅಂದ್ರೆ ಶ್ರೀಮಂತ ಮಕ್ಕಳ ಡ್ರೆಸ್, ಹೋಟೆಲ್ ಬಿಲ್ ಕೊಡುವ ಉದಾರಿತನ, ಅವರ ಆಡಂಬರದ ಮಾತು ಕೇಳುವಾಗ ತಮ್ಮ ತಂದೆ ಏನೂ ಪ್ರಯೋಜನವಿಲ್ಲ. ಅವ ಕೇವಲ ಲೆಕ್ಕದ ದುಡ್ಡು ಕೊಡ್ತಾನೆ. ಅವ ಬರೀ ಕಂಜೂಸ್ ಎಂಬ ಭಾವ ಬರಲು ಪ್ರಾರಂಭಿಸುತ್ತದೆ. ತನ್ನ ತಂದೆಯ ತಿಂಗಳ ಸಂಪಾದನೆ ಎಷ್ಟು? ಎಷ್ಟು ಸಾಲ ಮಾಡಿದ್ದಾನೆ? ಹೇಗೆ ತೀರಿಸುತ್ತಾನೆ? ತನ್ನ ತಂದೆ ತನ್ನ ಭವಿಷ್ಯದ ಒಳಿತಿಗಾಗಿ ಎಷ್ಟು ಕಷ್ಟ ಪಟ್ಟಿರಬೇಕು ಮತ್ತು ಅವ ಅವನಿಗಾಗಿ ಏನೂ ಮಾಡಿಲ್ಲ ಎಂಬ ಭಾವವೇ ಬರುವುದಿಲ್ಲ. ಇದು ಎಲ್ಲಾ ಮಕ್ಕಳ ವಿಚಾರ ಅಲ್ಲವಾದರೂ ಬಡ ಮತ್ತು ಮಧ್ಯಮ ವರ್ಗದ ಹೆಚ್ಚಿನ ಮಕ್ಕಳು ಇಂತಹ ದೊಡ್ಡ ಶಾಲಾ ಕಾಲೇಜು ಹತ್ತಿದ ಕೂಡಲೇ ತಮ್ಮ ತಂದೆಯ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುವುದು ಹೀಗೆಯೇ. ಇದು ಒಂದು ಗುಂಗಾಗಿ ಮನಸ್ಸಿನಲ್ಲಿ ಕುದಿಯುತ್ತಾ ಇರುತ್ತದೆ. ಕೆಲವೊಮ್ಮೆ ಉದ್ವೇಗದಿಂದ ಇದು ಹೊರಗೆಯೂ ಬಂದು ಬಿಡುತ್ತದೆ. ಇದು ತಿಳಿದಾಗ ಆ ಬಡಪಾಯಿ ತಂದೆಯ ಮನಸ್ಸಿಗೆ ಎಷ್ಟು ಘಾಸಿಯಾಗಿರಬೇಡ? ಆದರೆ ಇದರ ಪರಿವೆಯೇ ಈ ಮಕ್ಕಳಿಗೆ ಇಲ್ಲ. ಅವರು ನೇರವಾಗಿ ತಂದೆಯನ್ನೇ ಕೇಳುತ್ತಾರೆ ನಿನಗೆ ಬೇರೆ ವಹಿವಾಟು ಮಾಡಬಹುದಿತ್ತಲ್ವಾ? ನಿನ್ನಲ್ಲಿ ಯಾಕೆ ದುಡ್ಡಿಲ್ಲ? ಬಾಕಿಯವರನ್ನು ನೋಡುವಾಗ ನಮಗೆ ಮುಜುಗರ ಅನಿಸುತ್ತದೆ. ನಮ್ಮ ಮನೆಯೂ ಸುಂದರವಾಗಿಲ್ಲ, ನನ್ನ ಕಾಲೇಜ್ ಮೇಟ್ಗಳ ಮನೆಯಲ್ಲಿರುವ ಯಾವ ವ್ಯವಸ್ಥೆಯೂ ನಮ್ಮ ಮನೆಯಲ್ಲಿ ಇಲ್ಲ. ನೀನು ಈ ಬಗ್ಗೆ ಹೇಳಿದರೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ನಮ್ಮನ್ನು ಸಂತೋಷದಿಂದ ಇರಿಸುವುದು ನಿನ್ನ ಕರ್ತವ್ಯವಲ್ವೇ? ಹಾಗಾಗಿ ನಿನ್ನಲ್ಲಿ ಮಾತಾಡಲೂ ಮನಸ್ಸಿಲ್ಲ ಎಂದು ಹೇಳುವ ಮಕ್ಕಳು ಇದ್ದಾರೆ. ಏನೇನೋ ಕಷ್ಟಪಟ್ಟು ಶ್ರಮದಿಂದ ದುಡಿದು ಹೆಂಡತಿ ಮಕ್ಕಳನ್ನು ಸುಖದಿಂದ ಇರಿಸಬೇಕೆಂಬ ಹಂಬಲ ಇರಿಸಿದ ಬಡಪಾಯಿ ಮಧ್ಯಮ ವರ್ಗದಿಂದ ಬಂದ ತಂದೆ ಇದಕ್ಕೆ ಏನು ಉತ್ತರ ಕೊಡಲು ಸಾಧ್ಯ? ಆತನ ಪ್ರಯತ್ನ ಮುಂದುವರಿಯುತ್ತಾ ಇರುತ್ತದೆ ಅಷ್ಟೇ. ಆದರೆ ನಮ್ಮ ಭಾಗ್ಯದಲ್ಲಿ ಬರೆದಿರುವುದು ಮಾತ್ರ ನಮಗೆ ಸಿಗಲು ಸಾಧ್ಯ. ಆದರೆ ಭಾಗ್ಯದಲ್ಲಿ ಬರೆಯದೆ ಇದ್ದದ್ದು ಬಳಿಗೆ ಬಂದರೂ ಹಿಂದೆ ಓಡಿ ಹೋಗುತ್ತದೆಯಂತೆ. ನಮ್ಮ ಅದೃಷ್ಟವೇ ಹೀಗೇ ಅಂದ ಮೇಲೆ ಮಕ್ಕಳ ಹೀಯಾಳಿಕೆಯನ್ನು ಕೇಳಬೇಕಾದ ಅನಿವಾರ್ಯತೆ ಈಗ ಒದಗಿದೆ. ಇದು ಯಾಕೆ ಹೀಗೇ ಎಂದು ಅವಲೋಕಿಸಿದರೆ ನಾವು ಎಳೆವೆಯಲ್ಲಿ ನಮ್ಮ ಮಕ್ಕಳಿಗೆ ನಮ್ಮಲ್ಲಿ ಇಲ್ಲದ ಸಿರಿವಂತಿಕೆಯ ರೀಲ್ ತೋರಿಸಿದೆವು. ಆನೆ ಸಹಜವಾಗಿ ದೊಡ್ಡ ಗಾತ್ರದ ಲದ್ದಿ ಹಾಕಿದ್ದನ್ನು ನೋಡಿ ಮೊಲವೂ ಜೋರಾಗಿ ಬಿಕ್ಕಿ ಬಿಕ್ಕಿ ಪ್ರಯತ್ನಿಸಿ ನೋಡಿತ್ತಂತೆ. ಆದರೆ ಅದು ವಿಪರೀತವಾಗಿ ಮುಖದಿಂದ ಕಣ್ಣು ಜಾರಿ ಕಿತ್ತು ಕೆಳಗೆ ಬಿತ್ತಂತೆ. ಈ ಪರಿಸ್ಥಿತಿ ಅದೆಷ್ಟೋ ತಂದೆ ತಾಯಿಯರದ್ದು. ಕಷ್ಟವೇ ಕೊಡದೆ ಅನುಪಾನ ಮಾಡಿ ಜೋಪಾನ ಮಾಡಿ ಬೆಳೆಸಿದ ಮಕ್ಕಳು ತಂದೆ ತಾಯಿಯ ತ್ಯಾಗ, ಪ್ರೀತಿ, ಕಾಳಜಿಯನ್ನು ಗಮನಿಸದೆ, ಅರ್ಥಮಾಡಿಕೊಳ್ಳದೆ ಅದು ನೀನು ಹುಟ್ಟಿಸಿದ್ದಕ್ಕೆ ನೀನು ಮಾಡಲೇಬೇಕಾದ ಕರ್ತವ್ಯ ಎಂದು ಹೇಳಿ ಅದನ್ನು ಮಾಡಲು ಆಗದ ತಂದೆಯನ್ನು ಕೊಲ್ಲುವ ಭಯಾನಕ ಕಾಲದಲ್ಲಿ ನಾವು ಇದ್ದೇವೆ ಎಂದರೆ, ನಿಜಕ್ಕೂ ತಂದೆಯಾದವ ಇನ್ನಾದರೂ ಆಲೋಚಿಸಬೇಕಾಗಿದೆ. ಹೆಂಡತಿಯ, ಸಮಾಜದ, ಸಂಬಂಧಿಕರ ಎದುರು ಪ್ರದರ್ಶನಕ್ಕಾಗಿ ಮಕ್ಕಳನ್ನು ಬೆಳೆಸುವಾಗ ಇಲ್ಲದ ಸುಖಲೋಲುಪತೆ ತೋರಿಸಿದರೆ ಮತ್ತೆ ಮಕ್ಕಳು ದೊಡ್ಡದಾದ ಮೇಲೆ ಅನುಭವಿಸಬೇಕಾದ ಹೀಯಾಳಿಕೆ ತಾಪತ್ರಯ ಮತ್ತು ಆತಂಕ ಜೀವಭಯದ ಒಂದು ಸ್ಯಾಂಪಲ್ ಇದು ಅಷ್ಟೇ.
ಒಂದಂತೂ ಸತ್ಯ, ಈಗಿನ ಆಕರ್ಷಕ ಕಾಲೇಜು, ವಿಧವಿಧದ ಕೋರ್ಸ್ ಗಳು ಬುದ್ಧಿ, ಸಂಸ್ಕಾರ, ಸಾಮಾನ್ಯ ಜ್ಞಾನ, ಸಂಬಂಧದ ಬೆಲೆ, ತಿಳುವಳಿಕೆ, ಕರುಣೆ, ದಯೆ ಕಲಿಸಿ ಕೊಡುತ್ತಿಲ್ಲ. ಸುಲಭದಲ್ಲಿ ದುಡ್ಡು ಗಳಿಸುವ ತಂತ್ರಜ್ಞಾನ ಮಾತ್ರ ಹೇಳಿಕೊಡುತ್ತಿದೆ. ಇದು ಅಪವಾದವಲ್ಲ. ಇದು ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವ ಅಪರಾಧ. ಈಗಿನ “ಕೃತಕ ಬುದ್ದಿಮತ್ತತೆ” (AI)ಯ ಮತ್ತು ನಿಜಕ್ಕೂ ಎಲ್ಲವೂ ಇದ್ದು ಭಾವನೆಗಳೇ ಇಲ್ಲದ “ರೋಬೋಟ್” ನಂತಹ ವಿದ್ಯಾವಂತರನ್ನು ಮಾತ್ರ ತಯಾರಿಸುತ್ತಿದೆಯೇ ಹೊರತು, ಕಷ್ಟಪಟ್ಟು ದುಡಿದು ಅಥವಾ ಕಲಿತು ಬದುಕು ಕಲಿತು ಜೀವನ ಕಟ್ಟಿಕೊಂಡರೆ ಮಾತ್ರ ಮುಂದಿನ ಸುಖವನ್ನು ಅನುಭವಿಸಬಹುದು ಎಂಬ ಜ್ಞಾನದ ತಿಳುವಳಿಕೆಯ ಪ್ರತಿಭಾವಂತರನ್ನು ಹಾಗೂ ಸಾಕಿ ಸಲಹಿದ ತಂದೆ ತಾಯಿ ಅವರ ಯೋಗ್ಯತಾನುಸಾರ ನಮಗೆ ಕೊಟ್ಟಿದ್ದಾರೆ. ಹಾಗಾಗಿ ನಾವು ಇರುವುದನ್ನು ಅನುಭವಿಸಿ ಇರದುದಕ್ಕೆ ಚಿಂತಿಸದೆ ಮುಂದೆ ನಮ್ಮ ಹೆತ್ತವರಿಗೆ ಸಂತೋಷ ಸಮಾಧಾನ ಕೊಡುವಂತಾಗಲಿ ಎಂಬ ಸುಂದರ ಮಹತ್ವಾಕಾಂಕ್ಷೆಯ ಯೋಜನೆ ಯೋಚನೆಯ ಯೋಗ್ಯತಾವಂತ ಸಂಸ್ಕಾರಿಗಳನ್ನು ಕೊಡುತ್ತಿಲ್ಲ. ಇದು ಪ್ರಸ್ತುತ ಪ್ರಾಪಂಚಿಕ ಸತ್ಯ. ಇದು 75 ಶೇಕಡಾದಷ್ಟು ಹೆತ್ತವರ ಹೇಳಲಾಗದ ಮನದ ತುಮುಲ. ಕೊನೆಗೊಂದು ಜಾಗ್ರತೆಯ ಕಿವಿಮಾತು, ಅಪ್ಪ ಅಮ್ಮಂದಿರೇ ನಿಮ್ಮ ಮಕ್ಕಳ ಬಗ್ಗೆ ಜಾಗ್ರತರಾಗಿರಿ ಎಚ್ಚರಿಕೆ ನಿಮ್ಮನ್ನೂ ಕೊಂದಾರು ನಿಮ್ಮ ಮಕ್ಕಳು….!!!
ಬರಹ : ಶರತ್ ಶೆಟ್ಟಿ ಪಡುಪಳ್ಳಿ


























































































































