

ದೇಶದಾದ್ಯಂತ ಕೋಟ್ಯಾಂತರ ಯುವಕರ ಕನಸುಗಳನ್ನು ಹೊತ್ತು ಸಾಗುವ ಪರೀಕ್ಷೆಯೆಂದರೆ ಅದು ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್. ಬಡವನ ಮಗನಾಗಲಿ, ರೈತನ ಮಗಳಾಗಲಿ, ಮಧ್ಯಮ ವರ್ಗದ ವಿದ್ಯಾರ್ಥಿಯಾಗಲಿ ತಮ್ಮ ಬದುಕನ್ನು ಬದಲಾಯಿಸಿಕೊಳ್ಳಲು ವರ್ಷಗಳ ಕಾಲ ಹಗಲು-ರಾತ್ರಿ ದುಡಿದು ಈ ಪರೀಕ್ಷೆಗೆ ಸಿದ್ಧರಾಗುತ್ತಾರೆ. ಆದರೆ ಮೇ ಮೂರರಂದು ನಡೆದ ನೀಟ್ ಯುಜಿ 2026 ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯ ಕಾರಣಕ್ಕೆ ರದ್ದಾಗಿದೆ ಎನ್ನುವ ಸುದ್ದಿ ಕೇಳಿದಾಗ, ಕುಸಿದದ್ದು ಕೇವಲ ಪರೀಕ್ಷಾ ವ್ಯವಸ್ಥೆಯಲ್ಲ ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳು. ಸುಮಾರು ಇಪ್ಪತ್ತೆರಡು ಲಕ್ಷ ವಿದ್ಯಾರ್ಥಿಗಳು ಬರೆದ ಪರೀಕ್ಷೆಯನ್ನು ಮತ್ತೆ ಬರೆಯಬೇಕೆಂದರೆ ಅದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ; ಅದು ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯ, ಕುಟುಂಬಗಳ ಆರ್ಥಿಕ ಹೊರೆ ಮತ್ತು ಯುವಜನರ ಭವಿಷ್ಯದ ಮೇಲೆ ನಡೆಸುತ್ತಿರುವ ನಿರ್ದಯ ಪ್ರಯೋಗ. ಒಬ್ಬ ವಿದ್ಯಾರ್ಥಿ ನೀಟ್ಗೆ ಸಿದ್ಧವಾಗುವುದು ಎಂದರೆ ಕೇವಲ ಓದುವುದಲ್ಲ. ಅನೇಕರು ಮೊಬೈಲ್ ತ್ಯಜಿಸುತ್ತಾರೆ, ಹಬ್ಬ-ಹರಿದಿನ ಮರೆತು ಓದುತ್ತಾರೆ, ಸ್ನೇಹಿತರನ್ನು ದೂರವಿಡುತ್ತಾರೆ. ಕೆಲವರು ಕೋಚಿಂಗ್ಗಾಗಿ ಊರು ಬಿಟ್ಟು ನಗರಗಳಿಗೆ ಬರುತ್ತಾರೆ. ಕೆಲ ಪೋಷಕರು ಸಾಲ ಮಾಡುತ್ತಾರೆ. ಕೆಲ ತಾಯಂದಿರು ತಮ್ಮ ಚಿನ್ನವನ್ನು ಗಿರವಿ ಇಡುತ್ತಾರೆ. ಈ ಎಲ್ಲಾ ತ್ಯಾಗಗಳ ಅಂತ್ಯದಲ್ಲಿ ಸಿಗಬೇಕಾಗಿದ್ದದ್ದು ನ್ಯಾಯಯುತ ಪರೀಕ್ಷೆ. ಆದರೆ ದೊರಕಿದ್ದು ಏನು? ಪ್ರಶ್ನೆ ಪತ್ರಿಕೆ ಲೀಕ್, ಗೊಂದಲ, ರದ್ದು, ಮತ್ತೆ ಪರೀಕ್ಷೆ! ಇದು ವಿದ್ಯಾರ್ಥಿಗಳ ಜೊತೆಗಿನ ಆಟವಲ್ಲವೇ? ಇದು ಯುವಜನರ ಕನಸುಗಳ ಮೇಲೆ ನಡೆಸುತ್ತಿರುವ ಹಿಂಸೆಯಲ್ಲವೇ?


ಪ್ರತಿ ವರ್ಷವೂ ದೇಶದಲ್ಲಿ ಯಾವುದಾದರೂ ಒಂದು ದೊಡ್ಡ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತದೆ. ಕೆಲವೊಮ್ಮೆ ಶಿಕ್ಷಕರ ನೇಮಕಾತಿ, ಕೆಲವೊಮ್ಮೆ ಬ್ಯಾಂಕಿಂಗ್, ಕೆಲವೊಮ್ಮೆ ಪಿಎಸ್ಐ, ಈಗ ನೀಟ್. ಪ್ರಶ್ನೆ ಸರಳವಾಗಿದೆ. ಪರೀಕ್ಷಾ ವ್ಯವಸ್ಥೆ ನಿಜವಾಗಿಯೂ ಇಷ್ಟು ದುರ್ಬಲವೇ? ಅಥವಾ ಇದರೊಳಗೆ ದೊಡ್ಡ ಮಟ್ಟದ ಭ್ರಷ್ಟ ಜಾಲವೇ ಬೇರುಬಿಟ್ಟಿದೆಯೇ? ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದು ಯಾದೃಚ್ಛಿಕ ಘಟನೆ ಅಲ್ಲ. ಅದರ ಹಿಂದೆ ಅಧಿಕಾರಿಗಳು, ಮುದ್ರಣ ಕೇಂದ್ರಗಳು, ತಂತ್ರಜ್ಞಾನ ವ್ಯವಸ್ಥೆಗಳು, ಹಣದ ಜಾಲ ಮತ್ತು ರಾಜಕೀಯ ರಕ್ಷಣೆಗಳೂ ಇರಬಹುದು. ಸಾಮಾನ್ಯ ವಿದ್ಯಾರ್ಥಿ ಮಾಡಿದ ಚಿಕ್ಕ ತಪ್ಪಿಗೂ ಭವಿಷ್ಯ ಹಾಳಾಗುವ ಈ ದೇಶದಲ್ಲಿ, ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನೊಂದಿಗೆ ಆಟವಾಡುವ ದೊಡ್ಡ ಅಪರಾಧಿಗಳು ಮಾತ್ರ ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಇದೇ ಜನರ ಕೋಪಕ್ಕೆ ಕಾರಣ. ಈ ಘಟನೆ ಕೇವಲ ಪರೀಕ್ಷಾ ದುರಂತವಲ್ಲ; ಇದು ದೇಶದ ಯುವಜನತೆ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಗೆ ಬಿದ್ದ ಬಿರುಕು. ಒಮ್ಮೆ ಪರೀಕ್ಷೆ ಮುಂದೂಡಿಕೆ, ಮತ್ತೊಮ್ಮೆ ಪ್ರಶ್ನೆ ಪತ್ರಿಕೆ ಸೋರಿಕೆ, ಇನ್ನೊಮ್ಮೆ ಫಲಿತಾಂಶ ಗೊಂದಲ. ಈ ಅಸ್ಥಿರತೆಯ ನಡುವೆ ವಿದ್ಯಾರ್ಥಿಗಳು ಆತಂಕ, ನಿರಾಸೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕೆಲವು ಮಕ್ಕಳು ಆತ್ಮಹತ್ಯೆ ಯೋಚನೆಗೂ ತಲುಪುತ್ತಿರುವುದು ಅತ್ಯಂತ ಭಯಾನಕ. ವಿದ್ಯಾರ್ಥಿಯೊಬ್ಬನ ಒಂದು ವರ್ಷ ಅಂದರೆ ಕ್ಯಾಲೆಂಡರಿನ ಹನ್ನೆರಡು ತಿಂಗಳು ಮಾತ್ರವಲ್ಲ; ಅದು ಅವನ ಯೌವನದ ಅತ್ಯಂತ ಅಮೂಲ್ಯ ಕಾಲ. ಅದನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದ ವ್ಯರ್ಥ ಮಾಡುವ ಹಕ್ಕು ಯಾರಿಗೂ ಇಲ್ಲ.
ಇನ್ನು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಪ್ರತಿ ಪರೀಕ್ಷೆಗೆ ಪಾರದರ್ಶಕ ಮತ್ತು ತಂತ್ರಜ್ಞಾನ ಆಧಾರಿತ ಭದ್ರತಾ ವ್ಯವಸ್ಥೆ ಇರಬೇಕು. ಪ್ರಶ್ನೆ ಪತ್ರಿಕೆ ಮುದ್ರಣದಿಂದ ಪರೀಕ್ಷಾ ಕೇಂದ್ರದವರೆಗೆ ಸಂಪೂರ್ಣ ಡಿಜಿಟಲ್ ಟ್ರ್ಯಾಕಿಂಗ್ ಇರಬೇಕು. ಸೋರಿಕೆ ಪ್ರಕರಣಗಳನ್ನು ಸಾಮಾನ್ಯ ಅಪರಾಧದಂತೆ ನೋಡದೇ ದೇಶದ ಭವಿಷ್ಯದ ವಿರುದ್ಧದ ದ್ರೋಹವೆಂದು ಪರಿಗಣಿಸಬೇಕು. ಮಕ್ಕಳ ಕನಸುಗಳನ್ನು ಮಾರಾಟ ಮಾಡುವ ಶಿಕ್ಷಣ ಮಾಫಿಯಾಗಳಿಗೆ ಕಠಿಣ ಶಿಕ್ಷೆ ಆಗಬೇಕು. ತಪ್ಪಿತಸ್ಥರು ಯಾರೇ ಆಗಿರಲಿ ಅಧಿಕಾರಿಗಳಾಗಲಿ, ಮಧ್ಯವರ್ತಿಗಳಾಗಲಿ, ರಾಜಕೀಯ ಪ್ರಭಾವಿಗಳಾಗಲಿ ಜನರ ಮುಂದೆ ನಿಲ್ಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಶಿಕ್ಷೆ ಭಯ ಹುಟ್ಟಿಸುವಂತಿರಬೇಕು. ಆಗ ಮಾತ್ರ ಮುಂದಿನ ಬಾರಿ ಯಾರಾದರೂ ಪ್ರಶ್ನೆ ಪತ್ರಿಕೆ ಮುಟ್ಟುವ ಮೊದಲು ಕೈ ನಡುಗುತ್ತದೆ. ದೇಶದ ಯುವಜನತೆ ಸರ್ಕಾರದಿಂದ ಒಂದು ಮಾತು ಮಾತ್ರ ಕೇಳುತ್ತಿದೆ, ‘ನಮ್ಮ ಕನಸುಗಳ ಜೊತೆ ಆಟವಾಡಬೇಡಿ’. ಕುರುಡು ವ್ಯವಸ್ಥೆಯ ಕಣ್ಣು ತೆರೆಯಲಿ. ವಿದ್ಯಾರ್ಥಿಗಳ ಕಣ್ಣೀರಿನ ಬೆಲೆ ಅರಿಯಲಿ. ಭವಿಷ್ಯ ಕಳ್ಳತನ ಮಾಡುವ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲಿ.
ಲೇಖನ : ಡಾ| ಲಕ್ಷ್ಮಣ ವಿ ಎ

























































































































