


ವಿಶಿಷ್ಟಚೇತನರು ಯಾರನ್ನೂ ಅವಲಂಬಿಸದೆ ಸ್ವಾವಲಂಬಿ ಬದುಕು ನಡೆಸಲು ಸಾಧ್ಯವಿದೆ ಎನ್ನುವುದನ್ನು ಹಲವಾರು ಮಂದಿ ಸಾಧಿಸಿ ತೋರಿಸಿದ್ದಾರೆ. ಅಂತಹ ಸಾಧಕರು ವಿಶಿಷ್ಟಚೇತನರಿಗೆ ಮಾತ್ರವಲ್ಲದೇ ಸಮಾಜಕ್ಕೂ ಕೂಡಾ ಪ್ರೇರಣೆಯಾಗಿದ್ದಾರೆ. ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ. ಎಂ. ಶಾಂತರಾಮ ಶೆಟ್ಟಿ ಹೇಳಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಶಿಷ್ಟಚೇತನರ ಸಂಘದ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಹಾಗೂ ಯುವ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಮಂಗಳೂರಿನ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ವಿಶಿಷ್ಟ ಚೇತನರ ಸಂಘದ 34ನೇ ವಾರ್ಷಿಕ ಸಮಾವೇಶ, ದಿವ್ಯಾಂಗರಿಗೆ ವೈದ್ಯಕೀಯ ನೆರವು, ವೈದ್ಯಕೀಯ ತಪಾಸಣೆ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಕಾರ್ಯಕ್ರಮ ಉದ್ಘಾಟಿಸಿದ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಛೇರ್ಮನ್ ಸಿಎ ಶಾಂತರಾಮ ಶೆಟ್ಟಿ ಮಾತನಾಡಿ, ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ವಿಶಿಷ್ಟ ಚೇತನರಿಗೆ ಸವಲತ್ತು ವಿತರಣೆ ಜತೆಗೆ ಅವಶ್ಯ ಇರುವ ಸೇವೆಗಳನ್ನು ನೀಡಲು ಸದಾ ಬದ್ಧವಾಗಿದೆ ಎಂದರು. ಕೆಎಂಸಿಯ ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ. ಕೆ.ಆರ್ ಕಾಮತ್, ಚೇತನಾ ವಿಶಿಷ್ಟ ಮಕ್ಕಳ ಶಾಲೆಯ ಸಂಚಾಲಕ ವಿನೋದ್ ಶೆಣೈ, ವಿ.ವಿ ಕಾಲೇಜಿನ ಯುವ ರೆಡ್ ಕ್ರಾಸ್ ಸಂಯೋಜನಾಧಿಕಾರಿ ಡಾ. ಭಾರತಿ ಪಿಲಾರ್, ರೆಡ್ ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ರೆಡ್ ಕ್ರಾಸ್ ನ ಉಪಾಧ್ಯಕ್ಷ ಡಾ. ಸಚ್ಚಿದಾನಂದ ರೈ, ಖಜಾಂಚಿ ಗುರುದತ್ ನಾಯಕ್, ಆಡಳಿತ ಮಂಡಳಿ ಸದಸ್ಯರಾದ ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ಪಿ.ಬಿ ಹರೀಶ್ ರೈ, ಡಾ. ಸುಮನಾ ಬಿ ಉಪಸ್ಥಿತರಿದ್ದರು. ಸಂಘದ ಕೋಶಾಧಿಕಾರಿ ಸದಾಶಿವ ಲೆಕ್ಕ ಪತ್ರ ಮಂಡಿಸಿದರು. ಶಾಲೆಟ್ ಮತ್ತು ಜಯಕಲಾ ಫಲಾನುಭವಿಗಳ ವಿವರ ನೀಡಿದರು. ವಿಶಿಷ್ಟಚೇತನರ ಸಂಘದ ಅಧ್ಯಕ್ಷ ಡಾ. ವಿ. ಮುರಳೀಧರ ನಾಯಕ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ವಂದಿಸಿದರು. ದಿನಮಣಿ ರಾವ್ ಕಾರ್ಯಕ್ರಮ ನಿರೂಪಿಸಿದರು.

























































































































