ಖ್ಯಾತ ಹೋಟೆಲ್ ಉದ್ಯಮಿ, ಕಲ್ಯಾಣ್ ಪಶ್ಚಿಮದ ಹೋಟೆಲ್ ವಿಶ್ವ ಪ್ಯಾಲೇಸ್ ಮತ್ತು ಅಮೃತ್ ಪಂಜಾಬ್ ಹೋಟೆಲ್ ನ ಮಾಲಕ ದೈವಭಕ್ತ, ಎಕ್ಕಾರು ನಡ್ಯೋಡಿ ಗುತ್ತು ಶ್ರೀನಿವಾಸ ಮುದ್ಯ (79 ವರ್ಷ) ದೀರ್ಘಕಾಲದ ಅಸೌಖ್ಯದಿಂದ ನವೆಂಬರ್ 13 ಶುಕ್ರವಾರದಂದು ನಿಧನರಾಗಿದ್ದಾರೆ. ಅಪಾರ ದೈವ ದೇವರ ಭಕ್ತರಾಗಿದ್ದ ಅವರು ದೈವಸ್ಥಾನ ದೇವಸ್ಥಾನಗಳ ಜೀರ್ಣೋದ್ಧಾರ, ಅಭಿವೃದ್ಧಿಯಲ್ಲಿ ಅಪಾರ ಕೊಡುಗೆಯನ್ನು ನೀಡಿ ಕಿರಿಯರಿಗೆ ಮಾರ್ಗದರ್ಶಕರಾಗಿದ್ದು, ಸಂಘ ಸಂಸ್ಥೆಯ ಪ್ರೋತ್ಸಾಹಕರಾಗಿದ್ದರು. ಮೃತರು, ಪತ್ನಿ ಗೋದಾವರಿ ಮುದ್ಯ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಹಿರಿಯ ಹೋಟೆಲ್ ಉದ್ಯಮಿ ಗುರುದೇವ್ ಭಾಸ್ಕರ್ ಶೆಟ್ಟಿ, ಮಾಜಿ ನಗರ ಸೇವಕ ದಯಾಶಂಕರ್ ಶೆಟ್ಟಿ, ಬಂಟರ ಸಂಘ ಮುಂಬಯಿ ಭಿವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಬೋಧ್ ಭಂಡಾರಿ, ಹೋಟೆಲ್ ಅಸೋಸಿಯೇಷನ್ ಕಲ್ಯಾಣ್ ನ ಅಧ್ಯಕ್ಷ ಸುಂದರ್ ಶೆಟ್ಟಿ ಮತ್ತಿತರರು ಶೋಕ ವ್ಯಕ್ತಪಡಿಸಿದ್ದಾರೆ.





















































































































