ಬಂಟ ಸಮುದಾಯದ ಪ್ರತಿಷ್ಠಿತ ಗುತ್ತಿನ ಮನೆತನ ಇರುವೈಲು ದೊಡ್ಡಗುತ್ತು. ಇದು ತುಳುನಾಡಿನಾದ್ಯಂತ ಹೆಸರುವಾಸಿ. ಇಲ್ಲಿನ ಪ್ರಸ್ತುತದ ಗಡಿಹಿಡಿದ ಗುತ್ತಿನಾರ್ ಶ್ರೀ ಜಗದೀಶ ಎಂ ಶೆಟ್ಟಿಯವರ ಜನಪ್ರಿಯತೆ ಹಲವಾರು ಕ್ಷೇತ್ರಗಳಲ್ಲಿ ವ್ಯಾಪಿಸಿದ್ದು, ಕಂಬಳದಂತಹ ತುಳುನಾಡಿನ ಜಾನಪದ ಕ್ರೀಡಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಕಳೆದ ಸಾಲಿನ ಕಂಬಳ ಕೋಣಗಳ ಓಟ ಸ್ಪರ್ಧೆಯಲ್ಲಿ ಚಾಂಪಿಯನ್ ಶಿಪ್ ಪಡೆದಿರುವ ಕೋಣಗಳ ಯಜಮಾನರಾಗಿರುವುದರ ಜೊತೆಗೆ ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನದಲ್ಲೂ ಕೈಯಾಡಿಸಿದ್ದಾರೆ. ಗುತ್ತು ಮನೆತನದಲ್ಲಿ ಜನಿಸಿದ ಕಾರಣ ಸಹಜವಾಗಿಯೆ ಬಾಲ್ಯದ ದಿಗಳಿಂದಲೇ ನಾಯಕತ್ವದ ಗುಣ ವಿಶೇಷಗಳನ್ನು ಮೈಗೂಡಿಸಿಕೊಂಡು ಬಂದ ಜಗದೀಶ್ ಶೆಟ್ಟಿಯವರು ಇರುವೈಲು ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದು ನಂತರ ಮುಂಬಯಿಗೆ ಹೋಗಿ ಶಿಕ್ಷಣ ಮುಂದುವರಿಸಿ, ಹೆಚ್ಚು ಸಮಯ ಮುಂಬಯಿಯಲ್ಲಿ ಉಳಿಯದೆ ತನ್ನ ಹುಟ್ಟೂರಿಗೆ ಮರಳಿ ವ್ಯವಸಾಯದಲ್ಲಿ ತೊಡಗಿಸಿಕೊಂಡು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡರು.




ಇನೋಳಿ ಬೀಡಿನ ಯಜಮಾನರಾಗಿದ್ದ ದಿವಂಗತ ಮಾರಪ್ಪ ಶೆಟ್ಟಿ ಹಾಗೂ ಇರುವೈಲು ದೊಡ್ಡಗುತ್ತು ನಾಗಮ್ಮ ಶೆಡ್ತಿ ದಂಪತಿಯವರಿಗೆ ಪುತ್ರನಾಗಿ ಜನಿಸಿದ ಜಗದೀಶ ಶೆಟ್ಟರ ಮಾತಾಪಿತರು ಬಲು ಪ್ರತಿಷ್ಠಿತ ಮನೆತನದವರು. ಜೊತೆಗೆ ತುಳುನಾಡಿನ ಸಮೃದ್ಧ ಜಾನಪದ ಪರಂಪರೆ ಹೊಂದಿದ ಕೂಡು ಕುಟುಂಬದ ಹಿನ್ನೆಲೆ ಜಗದೀಶ್ ಶೆಟ್ಟರ ಮೇಲೆ ಗಾಢ ಪರಿಣಾಮ ಬೀರಿದೆ. ಇವರಲ್ಲಿನ ದಾನಗುಣ, ಸಂಸ್ಕೃತಿ ಪೋಷಣೆ, ಸಮಾಜ ಸೇವೆ, ದೈವ ಭಕ್ತಿ, ಸಹೋದರ ಭಾವ ಇವರ ವ್ಯಕ್ತಿತ್ವಕ್ಕೆ ವಿಶೇಷ ಮೆರುಗು ನೀಡಿದೆ. ಉತ್ತಮ ಭಜನೆ ಗಾಯಕರು, ಯಕ್ಷಗಾನ ಅರ್ಥಧಾರಿ, ಸಮಾಜ ಸೇವಕರು, ಧಾರ್ಮಿಕ ಮುಖಂಡರೂ ಆಗಿರುವ ಶೆಟ್ಟರ ಕುಟುಂಬದ ಪ್ರತೀ ಸದಸ್ಯರು ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಹೆಸರು ಸಂಪಾದಿಸಿದ್ದಾರೆ.
ಸತ್ಯವತಿ ಶೆಟ್ಟಿ ಎಂಬ ಸುಗುಣೆಯ ಕೈಹಿಡಿದ ಜಗದೀಶ ಶೆಟ್ಟಿಯವರಿಗೆ ಒಂದು ಗಂಡು ಒಂದು ಹೆಣ್ಣು ಹೀಗೆ ಎರಡು ಮಕ್ಕಳು. ಶ್ರೀಯುತರ ಪುತ್ರ ಧನಂಜಯ ಕುಮಾರ್ ಶೆಟ್ಟಿ ಬೆಂಗಳೂರು ಹೈಕೋರ್ಟ್ ನ್ಯಾಯವಾದಿಯಾಗಿದ್ದರೆ, ಅವರ ಶ್ರೀಮತಿ ಚಂದನ ಶೆಟ್ಟಿ ಅವರು ಇಂಜಿನಿಯರ್ ಆಗಿದ್ದು ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆ ಯಲ್ಲಿದ್ದಾರೆ. ಜಗದೀಶ್ ಶೆಟ್ಟಿ ಅವರ ಪುತ್ರಿ ಶ್ರಿಲತಾ ಶೆಟ್ಟಿ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಪ್ರತಿಷ್ಠಿತ ಡೆಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಪುತ್ರಿ ಶ್ರೀಲತಾ ಪತಿ ಶಶಾಂಕ್ ಶೆಟ್ಟಿ ಅವರು ಇಂಜಿನಿಯರ್ ಆಗಿದ್ದು, ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಸಮೃದ್ಧ ಪರಂಪರೆ, ಪ್ರಸಿದ್ಧಿ ಪ್ರತಿಷ್ಠೆಗಳ ಧನಿ ಜಗದೀಶ್ ಶೆಟ್ಟಿ ಅವರ ಭವಿಷ್ಯ ಇನ್ನಷ್ಟು ಪ್ರಜ್ವಲಮಾನವಾಗಲಿ. ಅವರ ಅಮೂಲ್ಯ ಸೇವೆ ಸಮಾಜಕ್ಕೆ ನಿರಂತರವಾಗಿ ದೊರೆಯಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಲೇಖಕರು : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು


















































































































