ಬೆಳ್ಳೂರಿನ ಮಣ್ಣಿನ ಗುಣವೋ ಅಥವಾ ಇಲ್ಲಿನ ಸಂಸ್ಕಾರದ ಫಲವೋ ಈ ಪುಟ್ಟ ಹಳ್ಳಿಯಿಂದ ಹೊರಹೊಮ್ಮಿದ ವ್ಯಕ್ತಿತ್ವಗಳು ಇಂದು ರಾಜ್ಯಮಟ್ಟದಲ್ಲಿ ಗುರುತಿಸಿ ಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಅಂತಹ ಅಪರೂಪದ ಸಾಧಕಿಯರಲ್ಲಿ ಒಬ್ಬರು ಶ್ರೀಮತಿ ಮಲ್ಲಿಕಾ ಪ್ರಶಾಂತ್ ಪಕ್ಕಳ. ಬೆಳ್ಳೂರಿನಲ್ಲಿ ಹುಟ್ಟಿ ಬೆಳೆದು ಇಂದು ರಾಜ್ಯದಲ್ಲಿ ಹೆಸರು ಮಾಡಿರುವ ಇವರ ಬದುಕಿನ ಹಾದಿಯನ್ನು ಮೆಲುಕು ಹಾಕುವುದು ಔಚಿತ್ಯಪೂರ್ಣವಾಗಿದೆ. ಪೆರ್ವತ್ತೋಡಿಗುತ್ತು ಮನೆತನದ ರಾಮಣ್ಣ ರೈ ಮತ್ತು ಕೋಡಿಬೈಲು ರತ್ನಾವತಿ ಆರ್ ರೈ ದಂಪತಿಗಳ ಪುತ್ರಿಯಾಗಿ 1976ರಲ್ಲಿ ಜನಿಸಿದ ಮಲ್ಲಿಕಾ ಅವರು ಬಾಲ್ಯದಿಂದಲೇ ಶಿಸ್ತು ಮತ್ತು ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡವರು. 1996 ರಲ್ಲಿ ಸಾಯರ್ಬೀಡು ಸುಂದರಿ ಆರ್ ಪಕ್ಕಳ ಮತ್ತು ಮಲಾರುಬೀಡು ಯಜಮಾನ ರಾಮಣ್ಣ ಪಕ್ಕಳ ಅವರ ಪುತ್ರರಾದ ಪ್ರಶಾಂತ್ ಪಕ್ಕಳ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಂದು ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸುಖಿ ಸಂಸಾರ ನಡೆಸುತ್ತಲೇ, ಸಮಾಜವೆಂಬ ದೊಡ್ಡ ಕುಟುಂಬದ ಜವಾಬ್ದಾರಿಯನ್ನೂ ಅಷ್ಟೇ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.




ಮಲ್ಲಿಕಾ ಅವರ ಸಾರ್ವಜನಿಕ ಜೀವನ ಆರಂಭವಾದದ್ದು 1998ರಲ್ಲಿ. ಬಂಟ್ವಾಳ ತಾಲೂಕಿನ ಕೊಳ್ನಾಡ್ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಸತತ ಮೂರು ಬಾರಿ (2014ರ ವರೆಗೆ) ಆಯ್ಕೆಯಾಗುವ ಮೂಲಕ ತಳಮಟ್ಟದ ಆಡಳಿತದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇವರ ದಕ್ಷತೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರವು ಇವರನ್ನು ಮೆಸ್ಕಾಂ ನಿರ್ದೇಶಕಿಯನ್ನಾಗಿ ನೇಮಿಸಿತು. ವಿದ್ಯುತ್ ಇಲಾಖೆಯಂತಹ ಮಹತ್ವದ ಕ್ಷೇತ್ರದಲ್ಲಿ ಮಹಿಳೆಯರೊಬ್ಬರು ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದು ಇವರ ಆಡಳಿತಾತ್ಮಕ ಚತುರತೆಗೆ ಸಾಕ್ಷಿ. ಪ್ರಸ್ತುತ ಮಲ್ಲಿಕಾ ಪ್ರಶಾಂತ್ ಪಕ್ಕಳ ಅವರು ಕರ್ನಾಟಕ ರಾಜ್ಯ ಸರ್ಕಾರದ ಧಾರ್ಮಿಕ ಪರಿಷತ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಪರಿಷತ್ತಿಗೆ ರಾಜ್ಯದ ಏಕೈಕ ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ಇಡೀ ಜಿಲ್ಲೆಗೆ ಮತ್ತು ಬಂಟ ಸಮುದಾಯಕ್ಕೆ ಸಂದ ಗೌರವ. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಮತ್ತು ಸಂಪ್ರದಾಯಗಳ ಸಂರಕ್ಷಣೆಯಲ್ಲಿ ಇವರು ತೋರುತ್ತಿರುವ ಆಸಕ್ತಿ ಶ್ಲಾಘನೀಯ.
ಹೆಸರಿಗೆ ತಕ್ಕಂತೆ ಮಲ್ಲಿಕಾ ಅವರ ನಡವಳಿಕೆ ಮೃದುವಾಗಿದ್ದರೂ. ಸಮಾಜದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಅಷ್ಟೇ ದೃಢವಾಗಿರುತ್ತವೆ. ಬೆಳ್ಳೂರಿನಂತಹ ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದು ಇಂದು ರಾಜ್ಯ ಮಟ್ಟದ ಉನ್ನತ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ತಮ್ಮ ಹಳೆಯ ಸಂಬಂಧಗಳನ್ನು ಮತ್ತು ಹುಟ್ಟೂರಿನ ಒಡನಾಟವನ್ನು ಅವರು ಮರೆತಿಲ್ಲ. ಮಲ್ಲಿಕಾ ಪ್ರಶಾಂತ್ ಪಕ್ಕಳ ಅವರ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ. ಇವರ ಸೇವೆಯ ಹಾದಿ ಹೀಗೆಯೇ ಮುಂದುವರಿಯಲಿ. ತುಳುನಾಡಿನ ದೈವ ದೇವರುಗಳ ಆಶೀರ್ವಾದ ಇವರ ಮೇಲೆ ಇರಲಿ ಎಂದು ಹಾರೈಸೋಣ.


















































































































