ಕಲ್ಲರಳಿ ಹೂವಾಗಿ! ಎಲ್ಲರಿಗೂ ಬೇಕಾಗಿ |
ಮಲ್ಲಿಕಾರ್ಜುನನ ಶಿಖರಕ್ಕೆ, ಬೆಳಕಾಗಿ |
ಬಲ್ಲವರು ಹೇಳಿ ಸರ್ವಜ್ಞ ||
ಕೆಲವರು ಬದುಕುತ್ತಾರೆ ಬದುಕಲೇ ಬೇಕು ಎಂಬ ಹಂಬಲದಿಂದ. ಇನ್ನು ಕೆಲವರು ಬದುಕಿದಷ್ಟು ದಿನ ನಮ್ಮವರು ಹಾಗೂ ಅಲ್ಪ ಸ್ವಲ್ಪ ಸಮಾಜ ಸೇವೆಗಾಗಿ. ಮತ್ತಷ್ಟು ಜನರ ಬದುಕು ತನಗಾಗಿಯಲ್ಲ, ತಮ್ಮವರಿಗಾಗಿಯೂ ಅಲ್ಲ, ಬದುಕಿದಷ್ಟು ಕಾಲ ಸಮಾಜಕ್ಕಾಗಿ, ಸಮಾಜ ಸೇವೆಗಾಗಿ ಅರ್ಪಿಸಿಕೊಂಡಿರಬೇಕು. ಮತ್ತೆ ಕಾಲನು ಕರೆದಾಗ ನಿಶ್ಚಿಂತೆಯಿಂದ ಎದ್ದು ಹೊರಟು ಬಿಡಬೇಕು ಎಂಬ ದೃಡ ನಿರ್ಧಾರ ಮಾಡಿಕೊಂಡಿರುತ್ತಾರೆ. ಕೊನೆಯ ಸಾಲಿಗೆ ಸೇರುವವರು ನಮ್ಮ ಶ್ಯಾಮಣ್ಣ. ಮುಂಬೈಯ ಉಪನಗರದಲ್ಲಿ ಹುಟ್ಟಿ ಬದುಕು ಇಲ್ಲಿ ಕಷ್ಟ ಅಂತಾದಾಗ, ಊರು ಸೇರಿ ಅಲ್ಲೂ ಕಡು ಕಷ್ಟದ ಬದುಕನ್ನು ಕಂಡು ಮತ್ತೆ ಮಹಾ ನಗರ ಸೇರಿ ಹಠದಿಂದ ಸಾಧನೆಯ ಶಿಖರವೇರಿದ ಶ್ಯಾಮಣ್ಣನ ಸಾಹಸಗಾಥೆಗೆ ಅಕ್ಷರ ಕಾಣಿಕೆಯ ಗೌರವ. ನಗು ಮುಖದ ದೊರೆ ಶಾಮಣ್ಣ ಎಂಬ ಹೆಸರನ್ನು ಮುಂಬಾ ನಗರಿಯ ತುಳು ಕನ್ನಡಿಗರು ಬಹಳ ಗೌರವಾದರಗಳಿಂದ ಕಾಣುತ್ತಾರೆ. ಕಲಾ ಸಂಘಟಕುರುಗಳಿಗೆ ಅವರು ಕಾಮಧೇನು. ಸಾಹಿತ್ಯ, ಸಂಗೀತ, ಸಂಘಟನೆಯ ಕಾರ್ಯಕ್ರಮಗಳಿಗೆ ಅವರು ಕಲ್ಪವೃಕ್ಷ. ಧಾರ್ಮಿಕ ಕಾರ್ಯಗಳಿಗೆ ಅವರ ಕೊಡುಗೆ ಇಲ್ಲದಿದ್ದರೆ ಅದು ಅಪೂರ್ಣ ಅಂದರೂ ಅನ್ನಬಹುದು. ನೊಂದವರ ಬದುಕಿಗೆ ಆಧಾರ ಸ್ತಂಭ ಅವರು. ಬಡವ ಬಲ್ಲಿದ ಎನ್ನದೇ ಎಲ್ಲರಲ್ಲಿಯೂ ಒಂದಾಗುವ ವಿಷೇಶ ಗುಣ ಉಳ್ಳ ಮುಂಬಯಿಯ ನಮ್ಮೂರಿನ ಹೆಮ್ಮೆಯ ಸಾಧಕ, ಸಮಾಜ ಸೇವಕ. ಬದುಕಿನುದ್ದಕ್ಕೂ ಅವರು ಸಮಾಜಮುಖಿಯಾಗಿ ಬೆಳೆದು ಬಂದವರು. ಇನ್ನೊಬ್ಬರ ಕಷ್ಟಕ್ಕೆ ಹಲುಬುವ ಅವರದು ಕೋಮಲ ಮನಸ್ಸು. ಬದುಕಿನ ಬಂಡಿ ಓಡಿಸುವ ಕಾಯಕದಲ್ಲಿ ಮಗ್ನರಾಗಿದ್ದ ಇವರು ತನ್ನ ಉದ್ಯಮದಲ್ಲಿ ನಾನು ಹೇಗೆ ಸಫಲತೆಯನ್ನು ಕಾಣಬಹುದು ಎಂಬ ಕಾಗುಣಿತ ಲೆಕ್ಕಾಚಾರ ಹಾಕಿಕೊಂಡು ಕ್ಯಾಂಟೀನ್ ಉದ್ಯಮದೊಂದಿಗೆ ಕ್ಯಾಟರಿಂಗ್ ಉದ್ಯಮಕ್ಕೆ ಧುಮುಕಿ, ಹಂತ ಹಂತವಾಗಿ ಯಶಸ್ಸಿನ ಬೆಟ್ಟ ಹತ್ತಿದವರು.




ಶಾಮಣ್ಣನಿಂದಾಗಿ ಕ್ಯಾಟರಿಂಗ್ ಉದ್ಯಮ ನಗರದಲ್ಲಿ ವಿಷೇಶ ಮನ್ನಣೆ ಪಡೆದಿದೆ ಅಂದರೆ ಅದು ಅತಿಶಯೋಕ್ತಿಯ ಮಾತಲ್ಲ. ಉದ್ಯಮದ ಯಶಸ್ಸಿಗಾಗಿ ಅವರು ರಕ್ತ ಬೆವರಾಗಿಸಿದವರು. ಕ್ಷಣ ಕ್ಷಣದ ಸಮಯವನ್ನೂ ಉದ್ಯಮಕ್ಕೆ ಮೀಸಲಿಟ್ಟರು. ಪಟ್ಟು ಬಿಡದೆ ಯಶಸ್ಸಿನ ಪಟ್ಟ ಗಿಟ್ಟಿಸಿಕೊಂಡರು. ಒಂದು ಕಾಲದಲ್ಲಿ ಮದುವೆ ಮುಂಜಿ ಎಂದರೆ ಒಂದು ಗೋಲ್ಡ್ ಸ್ಪಾಟ್, ಎರಡು ಲಾಡು, ಒಂದಷ್ಟು ಚಿಪ್ಸ್ ಅಂತಿದ್ದ ಕಾಲಕ್ಕೆ ಮದುವೆ ಅಂದರೆ ಹಾಗಲ್ಲ, ಅಲ್ಲಿ ವಿಷೇಶವಾದ ಪಾಕಗಳ ಪರಿಮಳ ಇರಬೇಕು. ಊಟ ಉಪಚಾರಗಳಲ್ಲಿ ವಿವಿಧತೆ ಇರಬೇಕು ಎಂಬ ಕನಸಿನೊಂದಿಗೆ ಸಾಧಿಸಿದರೆ ಇಲ್ಲಿಯೇ ಸಾಧಿಸುತ್ತೇನೆ ಎಂದುಕೊಂಡು ಹೊಸತನದ ಹುಡುಕಾಟದ ಗುಂಗಿನಲ್ಲಿ ಶೆಟ್ಟಿ ಕ್ಯಾಟರರ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ನಿಧಾನವಾಗಿ ಈ ಸಂಸ್ಥೆಯನ್ನು ಬೆಳೆಸುತ್ತಾ ಬಂದರು. ನೂರಾರು ಜನರಿಗೆ ಉದ್ಯೋಗದಾತರಾದರು. ಶೆಟ್ಟಿ ಕ್ಯಾಟರರ್ಸ್ ಉಟೋಪಚಾರಕ್ಕೆ ನಗರಕ್ಕೆ ನಗರವೇ ಬೆರಗಾಗುವಷ್ಟರ ಮಟ್ಟಿಗೆ ಅಲ್ಲಿ ಹೊಸತನ ತಂದರು. ನಿಶ್ಚಯ, ಮದುವೆ, ಬಯಕೆ ಎಲ್ಲಾ ಸಮಾರಂಭಗಳಿಗೆ ಶಾಮಣ್ಣನ ಕ್ಯಾಟರಿಂಗ್ ಊಟ ಪ್ರಸಿದ್ದಿಯಾಯಿತು. ಇಂದಿನಂತಲ್ಲ ಅಂದು, ಕಡು ಬಡವರು ಅವರಲ್ಲಿಗೆ ಬಂದು “ಶ್ಯಾಮಣ್ಣ ನಮ್ಮಲ್ಲಿರುವ ಹಣ ಇಷ್ಟೇ ಇಷ್ಟರಲ್ಲಿ ಮದುವೆಯ ಊಟ ಆಗಬೇಕು” ‘ನೀವು ಭಯ ಪಡಬೇಡಿ ನಾನು ಎಲ್ಲವನ್ನೂ ಸರಿದೂಗಿಸುವೆ’ ಎಂದು ಅವರಿಗೆ ಅಭಯ ನೀಡಿ ಕಳಿಸಿ ಅವರುಗಳ ಸಮಾರಂಭವನ್ನು ಅವರ ಅಪೇಕ್ಷೆಯಾಚೆಗೂ ಮಾಡಿ ಮುಗಿಸಿ ಬಡಬಗ್ಗರ ಆಶೀರ್ವಾದ ಪಡೆದ ಮಹಾನುಭಾವ. ಶ್ರಮ ಪರಿಶ್ರಮ, ಬಡ ಜನರ ಆಶೀರ್ವಾದ ಶ್ಯಾಮಣ್ಣನನ್ನು ಬಹಳಷ್ಟು ಬೆಳೆಸಿತು.
ಕ್ಯಾಟರಿಂಗ್ ಉದ್ಯಮದಲ್ಲಿ ಅವರ ಹೆಸರು ರಾರಾಜಿಸಲು ಪ್ರಾರಂಭಿಸಿತು. ಓರ್ವ ಸಫಲ ಉದ್ಯಮಿಯಾಗಿ ಬೆಳೆದರು. ನಗರದ ಸಂಘಟನೆಗಳಲ್ಲಿ ಅವರು ಚಿರಪರಿಚಿತರಾದರು. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂದಂತೆ ಸಮಾಜದಿಂದ ಪಡೆದುದನ್ನು ಸಮಾಜಕ್ಕಾಗಿ ಅರ್ಪಿಸುವ ವಿಶಾಲತೆಯನ್ನು ಅವರು ತನ್ನಷ್ಟಕ್ಕೆ ಬೆಳೆಸಿಕೊಂಡರು. ತಾನು ಬದುಕಬೇಕು ಮಾತ್ರವಲ್ಲ ಸಮಾಜದ ಸೇವೆಯೊಂದಿಗೆ ಬದುಕಿನ ಗುರಿ ಮುಟ್ಟಬೇಕು ಎಂದುಕೊಂಡರು. ಬಾಲ್ಯದಿಂದಲೂ ಕಲಾವಿದನಾಗಿ ಕಲೆಯನ್ನು ಆರಾಧಿಸುತ್ತಿದ್ದು ಕಲೆಯನ್ನು ಜೀವಾಳವಾಗಿಸಿಕೊಂಡ ಇನ್ನೊಂದು ಜೀವ ಮುಂಬಾ ನಗರಿಯಲ್ಲಿ ಇರುವುದು ಅಪರೂಪ ಅನ್ನಬಹುದು. ಮರಾಠಿ ಮಣ್ಣಿನಲ್ಲಿ ಕೇವಲ ತುಳು ಕನ್ನಡಿಗರಿಗೆ ಮಾತ್ರವಲ್ಲದೆ ಹಲವಾರು ಮರಾಠಿ ಭಾಷಿಕರ ಸಂಘಟನೆಗಳಿಗೂ ಸಹಾಯ ಮಾಡಿ ಈ ಮಣ್ಣಿನ ಋಣ ತೀರಿಸಲು ಸರ್ವ ಪ್ರಯತ್ನ ಮಾಡಿದ ಶ್ರೇಷ್ಠ ವ್ಯಕ್ತಿತ್ವ ಶಾಮಣ್ಣನದ್ದು. ತುಳುನಾಡಿನ ಹಲವಾರು ಸಂಘಟನೆಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಮಟ್ಟದಲ್ಲಿ ಕಾಣಿಕೆ ಸಲ್ಲಿಸಿದ ಮಹಾನುಭಾವ, ಎಡಕೈಯ ದಾನ ಬಲಕೈಗೆ ಗೊತ್ತಾಗಬಾರದು ಎಂಬ ಶ್ರೀಮಂತ ಮನಸ್ಸು ಅವರದ್ದು. ಶಾಮಣ್ಣ ಕೇವಲ ದಾನಿಯಾಗಿಯಲ್ಲ, ಸಂಘಟಕನಾಗಿ ಪ್ರಸಿದ್ದಿ ಪಡೆದರು. ಬೊಂಬೆ ಬಂಟ್ಸ್ ನ ಸ್ಥಾಪನೆಯ ಸಮಯದಲ್ಲಿ ಹಗಲಿರುಳು ಸಂಸ್ಥೆಯ ಒಳಿತಿಗಾಗಿ ದುಡಿದರು. ಆ ಸಂಸ್ಥೆಯನ್ನು ಮಗುವಿನಂತೆ ಆರೈಕೆ ಪೂರೈಕೆ ಮಾಡಿ ಅಲ್ಲಿನ ಸಾಮಾನ್ಯ ಸದಸ್ಯನಾಗಿ ಮಾತ್ರವಲ್ಲ, ಕ್ರೀಡಾ ಸಮಿತಿಯ ಅಧ್ಯಕ್ಷರಾಗಿ ತದ ನಂತರ ಬೊಂಬೆ ಬಂಟ್ಸ್ ನ ಅಧ್ಯಕ್ಷರಾಗಿ ಸಂಸ್ಥೆಯನ್ನು ಅದ್ಬುತ ರೀತಿಯಲ್ಲಿ ಬೆಳೆಸಿದ ಪುಣ್ಯಾತ್ಮ. ಹಗಲಿರುಳು ಸಂಘಟನೆಯ ಮುಖಾಂತರ ಸಮಾಜಕ್ಕಾಗಿ ದುಡಿದವರು. ಕಲೆಯ ಉಳಿವಿಗಾಗಿ ಕಲಾವಿದರುಗಳ ಪಾಲಿಗೆ ದೇವರಾದವರು. ಅದಷ್ಟೋ ಬಡ ಹೆಣ್ಣು ಮಕ್ಕಳ ಮದುವೆಗೆ ಧನಸಹಾಯ ಮಾಡಿ ಸುಮ್ಮನಿದ್ದವರು. ರೋಗ ರುಜಿನ ಅಂತ ಬಂದವರಿಗೆ ಸಹಾಯ ಹಸ್ತ ಚಾಚಿ ಉದಾರತೆ ಮೆರೆದವರು. ಎಲ್ಲಾದರೂ ಯಾರಾದರೂ ನನ್ನನ್ನು ಹೋಗಳಲಿ ಎಂದು ಕಾದು ಕುಳಿತವರಲ್ಲ. ಹೌದು ಶಾಮಣ್ಣ ಶ್ರೀಮಂತ ಮನುಷ್ಯ ಆದರೆ ಅವರು ಯಾವತ್ತಿಗೂ ನಾನು ಶ್ರೀಮಂತ, ನಾನೊಬ್ಬ ದೊಡ್ಡ ಉದ್ಯಮಿ ಅಂತ ತೋರಿಸಿಕೊಂಡವರಲ್ಲ. ಈ ಸಜ್ಜನಿಕೆಯ ಸರದಾರ ಯಾವತ್ತಿಗೂ ಒಂದು ಪೈಸೆಯ ಪ್ರಚಾರವನ್ನು ಬಯಸಿ ಸಮಾಜ ಸೇವೆಯನ್ನು ಮಾಡಿದವರಲ್ಲ. ಸಾಮಾನ್ಯರಿಂದ ಸಾಮಾನ್ಯ ಮನುಷ್ಯನೂ ಸಹ ಇವರ ಮನೆಬಾಗಿಲ ಬಳಿ ಹೋದಾಗ ಅಕ್ಕರೆಯಿಂದ ಕರೆದು ಕುಳ್ಳಿರಿಸಿ, ಸಕ್ಕರೆಯ ಸವಿನುಡಿಯೊಂದಿಗೆ, ಕೈಗೆ ಸಿಕ್ಕಷ್ಟು ಕೊಟ್ಟು ಕಳಿಸುವ ದಯಾಮಯಿ.
ಒಬ್ಬ ಯಶಸ್ವಿ ಗಂಡಿನ ಹಿಂದೆ ಒಬ್ಬ ಮಹಿಳೆ ಪಾತ್ರ ದೊಡ್ಡದಾಗಿರುತ್ತೆ ಅನ್ನುವುದಕ್ಕೆ ನಕ್ರೆಯ ಶಾಮಣ್ಣನ ಬಾಳಸಂಗಾತಿ ನಂದಳಿಕೆಯ ಶಾರದಕ್ಕರ ಪಾತ್ರ ಬಹಳ ಶ್ರೇಷ್ಠವಾದುದು. ಪತಿಯ ಎಲ್ಲಾ ಸಮಾಜ ಸೇವೆಗೂ ಶಾರದಕ್ಕ ಅಪ್ಪಿ ತಪ್ಪಿಯೂ ಆಡಿದವರಲ್ಲ. ಅವರ ಸಮಾಜ ಸೇವೆಗೆ ತಾನೂ ಕೈಜೋಡಿಸಿದರು. ಧರ್ಮಪತ್ನಿಯ ಸಹೃದಯತೆ ಒಂದಲ್ಲದಿದ್ದರೆ ಇಂದು ಶಾಮಣ್ಣ ಈ ಮಟ್ಟಕ್ಕೆ ಸಮಾಜ ಸೇವಕನಾಗಿ ಬೆಳೆಯುತ್ತಿದ್ದರೋ ಇಲ್ಲವೋ ಅದು ನನ್ನ ಅರಿವಿನಾಚೆಗಿನ ಮಾತು. ಸತ್ಯದ ಮಾತಿಗೆ ಕನ್ನಡಿ ತೋರಿಸುವ ಅಗತ್ಯ ಇಲ್ಲ ಅಂತಾದರೆ ಶಾಮಣ್ಣ ಹಾಗೂ ಶಾರದಕ್ಕ ದಂಪತಿಗಳ ಪಟ್ಟಿ ಸಾವಿರ ಆದರೆ ಮಾತ್ರ ನಮ್ಮ ಸಮಾಜ ಅಭಿವೃದ್ಧಿಯ ಪಥದತ್ತಾ ಸಾಗುತ್ತೆ. ನನಗಾಗಿ ನನ್ನವರಿಗಾಗಿ ಬದುಕುವುದು ಬದುಕಲ್ಲ, ನಾವು ಸಮಾಜಕ್ಕಾಗಿ ಬದುಕಿದರೆ ಮಾತ್ರ ಸಮೃದ್ಧ ಸಮಾಜದ ಚಿತ್ರ ಕಾಣಲು ಸಾಧ್ಯ ಎನ್ನುವುದು ಶಾಮಣ್ಣನ ಬದುಕಿನ ತಾತ್ಪರ್ಯ ಆದರೂ ಆಗಿರಬಹುದು. ಬರೆದ ನಾಲ್ಕು ಅಕ್ಷರದ ಸಾಲುಗಳಿಗೆ ಚುಕ್ಕೆ ಇಡುವ ಮೊದಲು, ಶಾಮಣ್ಣ ನಿರಂತರವಾಗಿ ಸಮಾಜಕ್ಕಾಗಿ,ಸಂಘಟನೆಗಾಗಿ, ಬದುಕನ್ನು ಅರ್ಪಿಸಿಕೊಂಡ ನಿಮಗೆ ನೀವು ನಂಬಿಕೊಂಡು ಬಂದಂತಹ ತಾಯಿ ಮಹಾಕಾಳಿ ಶತಮಾನದ ಆಚೆಗಿನ ಆಯುಷ್ಯವನ್ನು, ಚೆಂದದ ಆರೋಗ್ಯವನ್ನು, ನೆಮ್ಮದಿಯನ್ನು ಕರುಣಿಸಲಿ. ಒಟ್ಟಾರೆ ಮುಂದಿನ ಜೀವನ ಹೂವು ಹಾಸಿನ ಜೀವನವಾಗಲಿ ಎಂದು ಹಾರೈಸುವ ಹೂ ಮನಸ್ಸು ನನ್ನದು.
ಬರಹ : ಪೇತ್ರಿ ವಿಶ್ವನಾಥ ಶೆಟ್ಟಿ


















































































































