ತುಳು ರಂಗಭೂಮಿಯಲ್ಲೇ ಹೊಸ ದಾಖಲೆ ಬರೆದಿರುವ “ಶಿವದೂತೆ ಗುಳಿಗೆ”ಯ ರೂವಾರಿ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರು ಈಗ ಮತ್ತೊಂದು ಹೊಸ ಚಾರಿತ್ರಿಕ ನಾಟಕವನ್ನು ಪ್ರೇಕ್ಷಕರ ಮುಂದಿಡಲು ಮುಂದಾಗಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿರುವ ಈ ನಾಟಕವೇ “ಶಿವಾಜಿ”. ಈ ನಾಟಕವು ಮಾರ್ಚ್ 6ರಂದು ಕಟೀಲಿನಲ್ಲಿ ಮೊದಲ ಪ್ರದರ್ಶನ ಕಾಣಲಿದ್ದು, ಮಾರ್ಚ್ 13ರಂದು ಮಂಗಳೂರಿನ ಪುರಭವನದಲ್ಲಿ ಪ್ರದರ್ಶನ ನಡೆಯಲಿದೆ. ಆ ಮೂಲಕ ನಿರೀಕ್ಷೆ ಯಾವ ಮಟ್ಟಕ್ಕೆ ಇದೆ ಎಂಬುದು ಸ್ಪಷ್ಟವಾಗಲಿದೆ. ಮೊದಲ ಪ್ರದರ್ಶನ ಆಗುವ ಮೊದಲೇ ಈ ನಾಟಕದ 69 ಪ್ರದರ್ಶನಗಳು ಈಗಾಗಲೇ ಬುಕ್ಕಿಂಗ್ ಆಗಿದೆ. ಇದು ಆ ನಾಟಕ ಹಾಗೂ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರ ಮೇಲೆ ತುಳುನಾಡಿಗರು ಇರಿಸಿದ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.ಶಿವಾಜಿ ನಾಟಕಕ್ಕೆ ಮಹಾರಾಷ್ಟ್ರದಲ್ಲೇ ರಂಗವಿನ್ಯಾಸಕ್ಕೆ ಮುನ್ನುಡಿ ಬರೆಯಲಾಗಿದೆ. ಶಿವದೂತೆ ಗುಳಿಗನಿಕ್ಕಿಂತಲೂ ಅದ್ದೂರಿ ರಂಗವಿನ್ಯಾಸ ಈ ನಾಟಕದಲ್ಲಿ ಇರಲಿದ್ದು, ಇದಕ್ಕೆ ಸಾಕಷ್ಟು ಪೂರ್ವ ತಯಾರಿಯನ್ನೂ ಕೊಡಿಯಾಲ್ಬೈಲ್ ಅವರ ನೇತೃತ್ವದಲ್ಲಿ ಮಾಡಲಾಗಿದೆ. ಶಶಿರಾಜ್ ಕಾವೂರು ಅವರ ‘ಶಿವಾಜಿ’ ಕಥೆಯನ್ನು ಕೊಡಿಯಾಲ್ಬೈಲ್ ರಂಗಕ್ಕೆ ತರುತ್ತಿದ್ದು, ಎಷ್ಟು ಅದ್ದೂರಿತನ ಸಾಧ್ಯವೋ ಅಷ್ಟನ್ನು ಈ ನಾಟಕದಲ್ಲಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 2.15 ತಾಸಿನ ನಾಟಕ ಶಿವಾಜಿ ಪಾತ್ರದಲ್ಲಿ ಯುವ ಕಲಾವಿದ ಪ್ರೀತೇಶ್ ಕುಮಾರ್ ಬಲ್ಲಾಳ್ಬಾಗ್ ಕಾಣಿಸಲಿದ್ದಾರೆ. ಶಿವಾಜಿ, ತಾನಾಜಿ, ಬಾಳಾಜಿ, ಸೋನಾಜಿ, ಜೀಜಾಬಾಯಿ ಮುಂತಾದ ಪಾತ್ರಗಳಿದ್ದು, 2.15 ಗಂಟೆಯ ಈ ನಾಟಕದಲ್ಲಿ ಒಟ್ಟು 13 ದೃಶ್ಯಗಳಿರಲಿವೆ. ಸಂಭಾಷಣೆಯನ್ನು ಡಬ್ಬಿಂಗ್ ಮಾಡಲಾದೆ. ಶಿವಾಜಿಯ ಪೂರ್ಣ ಕಥೆಯನ್ನು ಒಂದು ನಾಟಕದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಆದ್ದರಿಂದ ಔರಂಗಜೇಬ, ಅ್ಜಲ್ ಖಾನ್ ಬೆಳವಣಿಗೆಗಳಿರುವ ಶಿವಾಜಿಯ ಕಥೆಯನ್ನು ತೋರಿಸಲಾಗುವುದು. ಮರಾಠಿ ಶೈಲಿಯ ವಸ್ತ್ರಾಭರಣ ಈ ನಾಟಕದ ಒಂದು ವಿಶೇಷತೆ. ಶಿವಾಜಿಯ ವಸ-ದೇಖಿ, ತಾನಾಜಿಯ ಪೇಟ ಮುಂತಾದವುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾಟಕವು ಔರಂಗಜೇಬನ ಆಸ್ಥಾನದಿಂದ ಆರಂಭವಾಗಲಿದೆ. ಭಗವಾಧ್ವಜ ಅರಳುವಾಗ ಶಿವಾಜಿಯ ಪ್ರವೇಶ ಅತ್ಯಂತ ಅದ್ದೂರಿಯಾಗಿರಲಿದೆ. ಇದನ್ನು ಸಿನಿಮಾ ಶೈಲಿಯಲ್ಲೇ ಮಾಡಲಾಗುವುದು ಎಂದು ವಿಜಯಕುಮಾರ್ ಕೊಡಿಯಾಲ್ಬೈಲ್ ತಿಳಿಸಿದ್ದಾರೆ.
ನಾಟಕಕ್ಕೆ ಮಣಿಕಾಂತ್ ಕದ್ರಿ ಹಾಗೂ ಎ.ಕೆ ವಿಜಯ್ ಕೋಕಿಲ ಅವರ ಸಂಗೀತ ನಿರ್ದೇಶನವಿದೆ. ಕಾಂತಾರದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್ ಮರವಂತೆ ಅವರು ಶಿವಾಜಿಯ ಕನ್ನಡ ನಾಟಕಕ್ಕೆ ಹಾಡು ಬರೆದಿದ್ದಾರೆ. ಮಳೆಗಾಲದ ಬಳಿಕ ಕನ್ನಡದ ಡಬ್ಬಿಂಗ್ ನಡೆಯಲಿದೆ. ಖ್ಯಾತ ಗಾಯಕ ಕೈಲಾಶ್ ಖೇರ್ ಹಾಡುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಸ್ಥಳೀಯ ಗಾಯಕರಿಗೂ ಅವಕಾಶ ನೀಡಲಾಗಿದೆ ಎಂದು ಕೊಡಿಯಾಲ್ಬೈಲ್ ತಿಳಿಸಿದ್ದಾರೆ.ಗುಳಿಗನ ಬಳಿಕ ಶಿವಾಜಿ ಹವಾ :
ತುಳು ರಂಗಭೂಮಿಯಲ್ಲಿ ಶಿವದೂತೆ ಗುಳಿಗೆ ಹವಾ ಇನ್ನೂ ನಿಂತಿಲ್ಲ. ಅದರ ನಡುವೆಯೇ ಶಿವಾಜಿ ಪ್ರವೇಶಿಸಲಿದ್ದು, ಮುಂದೆ ಯಾರ ಹವಾ ಹೆಚ್ಚು ಗಟ್ಟಿಯಾಗಲಿದೆ ಎಂದು ನೋಡಬೇಕಷ್ಟೆ. ಅಂತೂ ಅದ್ದೂರಿತನ, ವೈಶಿಷ್ಟ್ಯಕ್ಕೆ ಮತ್ತೊಂದು ಹೆಸರಾಗಿರುವ ಕೊಡಿಯಾಲ್ಬೈಲ್ ಅವರ ಶಿವಾಜಿ ನಾಟಕದ ಬಗ್ಗೆ ಅಪಾರ ನಿರೀಕ್ಷೆ ಇದ್ದು, ಮೊದಲ ಪ್ರದರ್ಶನವಾದ ಬಳಿಕ ಈ ನಾಟಕದ ಬಗ್ಗೆ ಹೆಚ್ಚು ಚರ್ಚೆ ನಡೆಯಲಿದೆ ಹಾಗೂ ಬುಕ್ಕಿಂಗ್ ಕೂಡ ದಾಖಲೆ ಬರೆಯುವ ನಿರೀಕ್ಷೆ ಇದೆ.