
ಪ್ರಗತಿಪರ ಚಿಂತನೆಯೊಂದಿಗೆ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಸಂಸ್ಥೆಯನ್ನು ಸ್ಥಾಪಿಸಿ ಇಷ್ಟರವರೆಗೆ ನಡೆಸಿಕೊಂಡು ಬಂದವರೆಲ್ಲರೂ ಸದಾ ಪ್ರಾತಃ ಸ್ಮರಣೀಯರು. ಇತ್ತೀಚೆಗೆ ನಡೆದ ಸಂಸ್ಥೆಯ ಸಭೆಯಲ್ಲಿ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ ಎಲ್ಲರಿಗೂ ಕೃತಜ್ಞತೆಗಳು. ಈ ಜ್ಞಾನ ಶೃಂಗ ಸಮ್ಮೇಳನವು ಸಮುದಾಯದ ಪ್ರಗತಿಪರ ಚಿಂತನೆ, ಮೌಲ್ಯಾಧಾರಿತ ಕಾರ್ಯಗಳೊಂದಿಗೆ ಏಕತಾ ಮನೋಭಾವವನ್ನು ಪ್ರತಿಬಿಂಬಿಸುವ ಮಹತ್ವದ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸುವೆನು. ಇತ್ತೀಚಿನ ವರ್ಷಗಳಲ್ಲಿ ಐಬಿಸಿಸಿಐ ಅನೇಕ ಜ್ಞಾನ ಸಮ್ಮೇಳನಗಳನ್ನು ಆಯೋಜಿಸಿದ್ದರೂ, ಅವುಗಳ ಮೂಲ ವಿಷಯ ಉದ್ಯಮಶೀಲತೆ ಕುರಿತಾಗಿಯೇ ಇತ್ತು. ಆದರೆ ಈ ಬಾರಿ ಸಮ್ಮೇಳನವು ವಿಭಿನ್ನತೆಯನ್ನು ಹೊಂದಿದ್ದು, ಉದ್ಯಮ ನಿರ್ವಹಣೆಯಲ್ಲಿ ಆಧ್ಯಾತ್ಮದ ಸ್ಪರ್ಶ ಕೂಡ ಇದೆ. ಬಂಟ ಸಮುದಾಯವು ಹೆಮ್ಮೆಯ ಪರಂಪರೆ, ಉದ್ಯಮಶೀಲತೆ, ನಾಯಕತ್ವ ಮತ್ತು ಸಾಮಾಜಿಕ ಹೊಣೆಗಾರಿಕೆಯಲ್ಲಿ ಸಮೃದ್ಧ ಪರಂಪರೆಯನ್ನು ಹೊಂದಿದೆ. ಸಾಮಾನ್ಯ ಆರಂಭದಿಂದ ಹಿಡಿದು ವಿವಿಧ ಕೈಗಾರಿಕಾ ಕ್ಷೇತ್ರಗಳಲ್ಲಿ ಯಶಸ್ವಿ ಉದ್ಯಮಗಳನ್ನು ಸ್ಥಾಪಿಸುವ ತನಕದ ಅವರ ಪಯಣವು ಧೈರ್ಯ, ಪ್ರಾಮಾಣಿಕತೆ ಮತ್ತು ದೂರದೃಷ್ಟಿಯಿಂದ ಚಾಲಿತವಾಗಿದೆ. ಜ್ಞಾನ ಸಮ್ಮೇಳನವು ಅನುಭವ ಮತ್ತು ನವೀನತೆ, ಪರಂಪರೆ ಮತ್ತು ಪರಿವರ್ತನೆ ಒಂದಾಗುವ ವೇದಿಕೆಯಾಗಿದೆ. ಜ್ಞಾನವೇ ಬೆಳವಣಿಗೆಯ ಚಾಲಕ ಶಕ್ತಿ. ಜ್ಞಾನವೇ ನಿಜವಾದ ಬೆಳವಣಿಗೆಯ ಪ್ರೇರಕ ಶಕ್ತಿ ಎಂದು ಐಬಿಸಿಸಿಐ ಅಧ್ಯಕ್ಷ ಸುರೇಶ್ ಬಿ ಶೆಟ್ಟಿ (ಎಸ್ ಬಿ) ಯವರು ಅಭಿಪ್ರಾಯ ಪಟ್ಟರು. ಫೆಬ್ರವರಿ 28ರಂದು ಸಂಜೆ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಆಡಿಟೋರಿಯಂನಲ್ಲಿ ಜರಗಿದ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಸಂಸ್ಥೆಯ ಜ್ಞಾನ ಶೃಂಗ ಸಭೆಯಲ್ಲಿ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಸಮ್ಮೇಳನವನ್ನು ಅತ್ಯಂತ ಸಂವೇದನಾಶೀಲವಾಗಿ ರೂಪಿಸಿದ್ದು, ಆಲೋಚನೆಗಳ ವಿನಿಮಯ ಮತ್ತು ಆಲೋಚನೆಗಳನ್ನು ಕ್ರಿಯೆಯಾಗಿ ರೂಪಿಸುವುದನ್ನು ಉದ್ದೇಶಿಸಿದೆ. ಇದರಿಂದ ಉದ್ಯಮಿಗಳು, ವೃತ್ತಿಪರರು ಹಾಗೂ ಯುವ ನಾಯಕರು ಸಬಲೀಕರಿಸಲ್ಪಡಲಿದ್ದಾರೆ. ಸಮುದಾಯದೊಳಗೂ ಹೊರಗೂ ಸಹಕಾರವನ್ನು ವೃದ್ಧಿಸಿ, ಸ್ಥಿರವಾದ ವ್ಯಾಪಾರ ಬೆಳವಣಿಗೆಗೆ ಅವಕಾಶಗಳನ್ನು ಸೃಷ್ಟಿಸುವುದು ಈ ಸಮ್ಮೇಳನದ ಮುಖ್ಯ ಗುರಿಯಾಗಿದೆ. 1989ರಲ್ಲಿ ಐಬಿಸಿಸಿಐಯ ಸ್ಥಾಪನೆಗೆ ಬಂಟ ದಾರ್ಶನಿಕರಾದ ಎಸ್.ಎಂ ಶೆಟ್ಟಿ ಮತ್ತು ಬಿ.ಡಿ ಶೆಟ್ಟಿ ಅವರಂತಹ ಮುಂಚೂಣಿದಾರರು ಭದ್ರ ಅಡಿಪಾಯ ಹಾಕಿದರು. ಬಳಿಕ ದಿವಂಗತ ವಿ.ಕೆ ಶೆಟ್ಟಿ, ವಿವೇಕ್ ಶೆಟ್ಟಿ ಹಾಗೂ ಪೂರ್ವಾಧ್ಯಕ್ಷರಾದ ಕೆ.ಸಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಬೆಳೆದಿದೆ. ಪ್ರಸ್ತುತ ಐಬಿಸಿಸಿಐಯಲ್ಲಿ 500ಕ್ಕೂ ಅಧಿಕ ಉದ್ಯಮಿಗಳು ಸದಸ್ಯರಾಗಿದ್ದು, ತಯಾರಕರು, ವೃತ್ತಿಪರರು ಹಾಗೂ ಆತಿಥ್ಯ ಕ್ಷೇತ್ರದ ಪ್ರತಿನಿಧಿಗಳು ಇದರ ಭಾಗವಾಗಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಸದಸ್ಯತ್ವವನ್ನು 1000ಕ್ಕೆ ಏರಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ. ಮುಂಬಯಿ ನಗರದಲ್ಲೇ 5000ಕ್ಕೂ ಹೆಚ್ಚು ಬಂಟ ಉದ್ಯಮಿಗಳು ಮತ್ತು ವೃತ್ತಿಪರರು ಇರುವುದಾಗಿ ಅಂದಾಜಿಸಲಾಗಿದೆ. ಸದಸ್ಯರ ಮಾಹಿತಿ ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಹೊಸ ಮೊಬೈಲ್ ಆಪ್ ಬಿಡುಗಡೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ. ಇದು ಭವಿಷ್ಯದಲ್ಲಿ ಸಂಸ್ಥೆಗೆ ಮಹತ್ವದ ಬದಲಾವಣೆಯನ್ನು ತರಲಿದೆ ಎಂದು ಐಬಿಸಿಪಿಐ ಅಧ್ಯಕ್ಷ ಎಸ್ ಬಿ ಶೆಟ್ಟಿಯವರು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮೆಕಾಯ್ ಗ್ರೂಪ್ ಮತ್ತು ವಿ.ಕೆ ಗ್ರೂಪ್ ಆಫ್ ಕಂಪನೀಸ್ ನ ಸಿಎಂಡಿ ಕೆ.ಎಂ ಶೆಟ್ಟಿ ದಂಪತಿಯನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರವಾಗಿ ಕರುಣಾಕರ ಎಂ ಶೆಟ್ಟಿ ಅವರು ಮಾತನಾಡಿ, ಹಲವಾರು ವರ್ಷಗಳ ಹಿಂದೆ ಮುಂಬಯಿಗೆ ಆಗಮಿಸಿ ಸಣ್ಣ ರೂಮ್ ಒಂದರಲ್ಲಿ ಆರಂಭಿಸಿದ ಕೈಗಾರಿಕೋದ್ಯಮವನ್ನು ಸಾಕಿನಾಕ ಮುಂಬಯಿ, ಗುಜರಾತ್ ನ ಪಾಲ್ಗರ್, ಸಿಲ್ವಸ, ಹಿಮಾಚಲ್ ಪ್ರದೇಶ್, ಪಡುಬಿದ್ರಿ ಹತ್ತಿರದ ಎರ್ಮಾಳ್ ಮೊದಲಾದ ಕಡೆಗಳಲ್ಲಿ ಕೈಗಾರಿಕೋದ್ಯಮವನ್ನು ನಡೆಸುತ್ತಿರುವುದಲ್ಲದೇ ಉಡುಪಿಯಲ್ಲಿ ಬಿಲ್ಡರ್ ಆಗಿಯೂ ಹಲವಾರು ಕಟ್ಟಡ ನಿರ್ಮಾಣದಲ್ಲೂ ತೊಡಗಿ ನಾನು ಸಣ್ಣದರಲ್ಲಿ ಆರಂಭಿಸಿ ಇದೀಗ 20 ಲಕ್ಷ ಸಾವಿರ ಚದರ ಅಡಿ ಪ್ರದೇಶಗಳಲ್ಲಿ ತನ್ನ ಕಾರ್ಯಾಚರಣೆ ನಡೆಯುತ್ತಲಿದೆ ಎಂದು ತಿಳಿಸುತ್ತಾ, ಜೀವನದಲ್ಲಿ ಯಾವುದೂ ಅಸಾಧ್ಯ ಇಲ್ಲ ಎಂದು ತಿಳಿಸಿ ಸನ್ಮಾನಕ್ಕೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭ ನವಿ ಮುಂಬಯಿ ಕಾರ್ಗರ್ ಇಸ್ಕಾನ್ ಟೆಂಪಲ್ ನ ಅಧ್ಯಕ್ಷ ಡಾ. ಸೂರ್ ದಾಸ್ ಪ್ರಭು ಅವರು ಆಧ್ಯಾತ್ಮಿಕವಾಗಿ ಉಪನ್ಯಾಸ ನೀಡಿ ಮಾತನಾಡಿ, ಮಧ್ವಾಚಾರ್ಯರು ಜನಿಸಿದಂತಹ ಉಡುಪಿಯಲ್ಲಿ ಶ್ರೀ ಕೃಷ್ಣ ದೇವರು ವಿರಾಜಮಾನರಾಗಿದ್ದಾರೆ. ರಾಧಾ ಕೃಷ್ಣರ ಭಕ್ತಿಯ ಆರಾಧನೆ ಮತ್ತು ಭಗವದ್ಗೀತೆಯ ಬೋಧನೆಗೆ ಸಮರ್ಪಿತವಾಗಿರುವ ತತ್ವಗಳು ಆಧ್ಯಾತ್ಮ ಮತ್ತು ನಾಯಕತ್ವದ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸುತ್ತವೆ. ಆಧ್ಯಾತ್ಮ ಹಾಗೂ ವೈಯಕ್ತಿಕ ಶ್ರೇಷ್ಠತೆ ಕುರಿತಾದ ಆಳವಾದ ಒಳನೋಟಗಳು ಇಂದಿನ ಉದ್ಯಮಿಗಳು ಮತ್ತು ವೃತ್ತಿಪರರಿಗೆ ಪ್ರಸ್ತುತವಾಗಿವೆ ಎಂದರು.
ಇನ್ನೋರ್ವ ಗಣ್ಯ ಅತಿಥಿ ಹಾಗೂ ಉಪನ್ಯಾಸಕ ಇಕ್ರಾ ಲಿಮಿಟೆಡ್ ಸಂಸ್ಥೆಯ ಕಾರ್ಯನಿರ್ವಹಣಾ ಉಪಾಧ್ಯಕ್ಷ ಹಾಗೂ ಮುಖ್ಯ ರೇಟಿಂಗ್ ಅಧಿಕಾರಿ ಕೆ. ರವಿಚಂದ್ರನ್ ಅವರು ಉದ್ಯಮದ ಏರಿಳಿಕೆಗಳ ಬಗ್ಗೆ ಪ್ರಸ್ತಾಪಿಸಿ ಸಭಿಕರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಇಕ್ರಾ ಲಿಮಿಟೆಡ್ ಸಂಸ್ಥೆಯ ಅರ್ಥಶಾಸ್ತ್ರಜ್ಞ ರಾಹುಲ್ ಅಗರವಾಲ್ ಅವರು ತನ್ನ ಉಪನ್ಯಾಸದಲ್ಲಿ ಪ್ರಸ್ತುತ ಭಾರತೀಯ ಆರ್ಥಿಕತೆಯ ಭವಿಷ್ಯದ ಅವಲೋಕನವನ್ನು ಮಂಡಿಸಿ ಸೂಕ್ತ ಸಲಹೆಗಳನ್ನು ನೀಡಿದರು. ನೆಕ್ಸ್ಟ್ ಜೆನ್ ವಿಶನರಿ ವಿಭಾಗದ ಅಧ್ಯಕ್ಷೆ ತ್ರಿಶಿಕಾ ಶೆಟ್ಟಿ ಐಬಿಸಿಸಿಐ ಮುಂದಿನ ಪೀಳಿಗೆಯ ಯುವ ಉದ್ಯಮಿಗಳ ಮಾಹಿತಿ ಹಾಗೂ ವಿಸ್ಕೃತ ಬೆಳವಣಿಗೆಗಳ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಐಬಿಸಿಸಿಐ ಅಧ್ಯಕ್ಷ ಎಸ್ ಬಿ ಶೆಟ್ಟಿ, ಉಪಾಧ್ಯಕ್ಷ ಶ್ರೀನಾಥ್ ಶೆಟ್ಟಿ, ಗೌ.ಪ್ರ ಕಾರ್ಯದರ್ಶಿ ಸಿಎ ಸದಾಶಿವ ಎಸ್ ಶೆಟ್ಟಿ, ಗೌ ಕೋಶಾಧಿಕಾರಿ ಸಿಎ ಶ್ರೀನಿವಾಸ್ ವಿ ಶೆಟ್ಟಿ, ಜೊತೆ ಕಾರ್ಯದರ್ಶಿ ನಿಶಿತ್ ಶೆಟ್ಟಿ, ಜೊತೆ ಕೋಶಾಧಿಕಾರಿ ಅನಿಲ್ ಶೆಟ್ಟಿ ಏಳಿoಜೆ, ಬೋರ್ಡ್ ಆಫ್ ಡೈರೆಕ್ಟರ್ಸ್, ಅಡ್ವೈಸರಿ ಬೋರ್ಡ್ ಮತ್ತು ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಹಕರಿಸಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಐ.ಬಿ.ಸಿ.ಸಿ.ಐ ವತಿಯಿಂದ ಗೌರವಿಸಲಾಯಿತು. ಜೀನತ್ ಕಪಾಡಿಯ ಕಾರ್ಯಕ್ರಮವನ್ನು ನಿರೂಪಿಸಿದರು. ಬಿ ಶ್ರೀನಿವಾಸ್ ಶೆಟ್ಟಿ ಧನ್ಯವಾದಗೈದರು. ಕೊನೆಯಲ್ಲಿ ಪ್ರೀತಿ ಭೋಜನ ನಡೆಯಿತು.
ಚಿತ್ರ, ವರದಿ : ಗುರುದತ್ ಪೂಂಜ ಮುಂಡ್ಕೂರು


























































































































