ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಒಗ್ಗೂಡಿಸಿ, ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಸಂಸ್ಥೆಯ ನೈಜೀರಿಯಾ ಘಟಕದ ಅಧ್ಯಕ್ಷರಾಗಿ ಮಂಗಳೂರು ಸಮೀಪದ ಪಡು ನೀರುಮಾರ್ಗದ ಪಡುಪಳ್ಳಿ ಶರತ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್ನಲ್ಲಿ ಡಿಪ್ಲೊಮಾ ಪದವೀಧರರಾಗಿರುವ ಅವರು ಪ್ರಸ್ತುತ ನೈಜೀರಿಯಾದ ಎವರೆಸ್ಟ್ ಮೆಟಲ್ಸ್ ನೈಜೀರಿಯ ಲಿಮಿಟೆಡ್ ಸಂಸ್ಥೆಯಲ್ಲಿ ಖರೀದಿ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೇ ಯಕ್ಷಗಾನ, ಹರಿಕಥೆ, ಸಾಹಿತ್ಯ ಹಾಗೂ ಭಜನಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಅವರು ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಂದ ಯಕ್ಷಗಾನ ಭಾಗವತಿಕೆಯ ತರಬೇತಿ ಹಾಗೂ ಪಿ.ವಿ. ಪರಮೇಶ್ ಅವರಿಂದ ಯಕ್ಷಗಾನ ನಾಟ್ಯಾಭ್ಯಾಸ ಪಡೆದಿದ್ದಾರೆ. ಕೀರ್ತನಾಕೇಸರಿ ಭದ್ರಗಿರಿ ಅಚ್ಚುತದಾಸ ಅವರಿಂದ ಪ್ರೇರಣೆ ಪಡೆದು ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಮುಂಬಯಿ ಸೇರಿದಂತೆ ವಿವಿಧೆಡೆ ಹರಿಕಥಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಜನಮನ್ನಣೆ ಗಳಿಸಿದ್ದಾರೆ. ಯಕ್ಷಗಾನ ಭಾಗವತ, ಹರಿಕಥಾ ಪ್ರವಚನಕಾರ, ನಿರೂಪಕ, ಕವಿ, ಲೇಖಕ, ಪತ್ರಿಕಾ ಅಂಕಣಕಾರ, ಭಜನಾ ಸಂಕೀರ್ತನಕಾರ, ಸಂಪನ್ಮೂಲ ವ್ಯಕ್ತಿ, ತೀರ್ಪುಗಾರ ಹಾಗೂ ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಅವರು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಲೇಖನ ಹಾಗೂ ಕವನಗಳನ್ನು ಪ್ರಕಟಿಸಿದ್ದು, ಕಳೆದ ಐದು ವರ್ಷಗಳಿಂದ ‘ಜಯ ಕಿರಣ’ ಸಂಜೆ ದಿನಪತ್ರಿಕೆಯಲ್ಲಿ ಸಮಕಾಲೀನ ಜನಜಾಗೃತಿ ಲೇಖನಗಳನ್ನು ಬರೆಯುತ್ತಿದ್ದಾರೆ.
ಪ್ರಸ್ತುತ ನೈಜೀರಿಯಾದಲ್ಲಿ ನೆಲೆಸಿರುವ ಕನ್ನಡಿಗರು ಹಾಗೂ ತುಳುವರನ್ನು ಒಗ್ಗೂಡಿಸಿ ‘ಕರ್ನಾಟಕ ಸಂಘ ಕಾನೋ’ ಸಂಸ್ಥೆಯನ್ನು ಸ್ಥಾಪಿಸಿ ಕಳೆದ ನಾಲ್ಕು ವರ್ಷಗಳಿಂದ ಬಿಸು, ದೀಪಾವಳಿ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ತುಳಸಿ ಪೂಜೆ ಹಾಗೂ ಕನ್ನಡ ರಾಜ್ಯೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದಾರೆ. ಅಲ್ಲದೇ ಇಂಡಿಯನ್ ಕಲ್ಚರಲ್ ಅಸೋಸಿಯೇಷನ್ , ಕಾನೋ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಹಿಂದೂ ಸ್ವಯಂ ಸೇವಾಕ ಸಂಘ ಹಾಗೂ ಸೇವಾ ಇಂಟರ್ನ್ಯಾಷನಲ್ ಸಂಸ್ಥೆಗಳ ಸಕ್ರಿಯ ಸದಸ್ಯರಾಗಿಯೂ ಸಮಾಜಸೇವೆ ಸಲ್ಲಿಸುತ್ತಿದ್ದಾರೆ. ಅವರ ಸಂಘಟನಾ ಸಾಮರ್ಥ್ಯ, ಸಮಾಜಸೇವೆ ಹಾಗೂ ತುಳು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಉಳಿವು ಬೆಳವಣಿಗೆಗೆ ಸಲ್ಲಿಸಿರುವ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರು ಶರತ್ ಶೆಟ್ಟಿಯವರನ್ನು ನೈಜೀರಿಯಾ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ. ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್ನ ಗೌರವಾಧ್ಯಕ್ಷರಾದ ಹರಿನಾರಾಯಣದಾಸ ಅಸ್ರಣ್ಣ, ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ಅರವಿಂದ ಬೆಳ್ಚಡ, ನಿರ್ದೇಶಕ ಡಾ| ರಾಜೇಶ್ ಕೃಷ್ಣ ಆಳ್ವ ಹಾಗೂ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ.ಆರ್ ಆಳ್ವ ಮತ್ತು ಕೇಂದ್ರ ಸಮಿತಿ ಸಂಚಾಲಕ ವಿಶ್ವನಾಥ ಆಚಾರ್ಯ ಅವರು ಹರ್ಷದಿಂದ ಸ್ವಾಗತಿಸಿ, ನೂತನ ನೈಜೀರಿಯಾ ಘಟಕದ ಅಧ್ಯಕ್ಷರಾದ ಶರತ್ ಶೆಟ್ಟಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.






















































































































