ಉಳ್ಳಾಲದ ಯುವಕನೋರ್ವ ಕ್ರೀಡಾ ಜಗತ್ತಿನಲ್ಲಿ ಸಾಧಿಸಿದ ಸಾಧನೆ ಅದ್ಭುತವಾದುದು. ಅದರಲ್ಲೂ ಕಬಡ್ಡಿ ಆಟದಲ್ಲಿ ವಿಶೇಷ ಆಸಕ್ತಿ ವಹಿಸಿ ಸತತ ಅಭ್ಯಾಸದಿಂದ ಓರ್ವ ಅಪ್ರತಿಮ ಕಬಡ್ಡಿ ಕ್ರೀಡಾ ಪಟು ಎಂದು ಗುರುತಿಸಿಕೊಳ್ಳುವುದರ ಜೊತೆಗೆ ಅದೆಷ್ಟೋ ಯುವ ಕ್ರೀಡಾಪಟುಗಳಿಗೆ ತರಬೇತುದಾರನಾಗಿ ಅವರನ್ನು ಶ್ರೇಷ್ಠ ಆಟಗಾರರನ್ನಾಗಿ ಸಿದ್ಧಗೊಳಿಸಿದ ಹೆಗ್ಗಳಿಕೆ ಇವರಿಗಿದೆ. 1992ರಲ್ಲಿ ಉಳ್ಳಾಲದಲ್ಲಿ ಜನಿಸಿದ ಆಕಾಶ್ ಬೆಳಗಾವಿಯ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ದೈಹಿಕ ಶಿಕ್ಷಣ ತರಬೇತಿ ಪಡೆದರು. ಮುಂದೆ 2015 ರಿಂದ 2020 ರವರೆಗೆ ವಿಕಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಕಬಡ್ಡಿ ಕೋಚ್ ಆಗಿ ವೃತ್ತಿ ಜೀವನ ಆರಂಭಿಸಿದ ಆಕಾಶ್ ಅಲ್ಲಿಯೇ ಮುಂಬಡ್ತಿ ಹೊಂದಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕಬಡ್ಡಿ ಕೋಚ್ ಆಗಿ 2019 ರಿಂದ 2021ರ ವರೆಗೆ ಸೇವೆ ಸಲ್ಲಿಸಿದರು. ಬಳಿಕ ಪ್ರೇರಣಾ ಕಾಲೇಜು ಮಂಗಳೂರು ಅಲ್ಲಿ ತಾತ್ಕಾಲಿಕ ನಿಯಮದಡಿ ಕೆಲಸ ಮಾಡಿ 2021 ರಿಂದ 2023 ರವರೆಗೆ ಶಕ್ತಿ ರೆಸಿಡೆನ್ಸಿ ಶಿಕ್ಷಣ ಸಂಸ್ಥೆ ಹಾಗೂ ಕಾಲೇಜು ವಿಭಾಗದಲ್ಲಿ ತರಬೇತುದಾರರಾಗಿ ಸೇರಿಕೊಂಡರು. 2020 ರಿಂದ ಉಳ್ಳಾಲದ ಫ್ರೆಂಡ್ಸ್ ಕಬಡ್ಡಿ ಅಕಾಡೆಮಿಯಲ್ಲಿ ಉಚಿತ ತರಬೇತಿ ನೀಡುತ್ತಿದ್ದಾರೆ.ಶ್ರೀಯುತರ ವಿಶೇಷ ತರಬೇತಿಯ ಫಲಶ್ರುತಿ ಎಂಬಂತೆ 2022 -23 ರಲ್ಲಿ ಅಖಿಲ ಭಾರತ ವಿದ್ಯಾಭಾರತಿ ಕಬಡ್ಡಿ ಬಾಯ್ಸ್ ಅಂಡರ್ 19 ತಂಡದ ಕೋಚ್ ಆಗಿ ಕಂಚಿನ ಪದಕ, 2021 -22 ಹಾಗೂ 2022- 23 ರ ಸಾಲಿನಲ್ಲಿ ಮಂಗಳೂರು ಅಂತರ್ ವಿಶ್ವವಿದ್ಯಾಲಯಗಳ ಪಂದ್ಯಾವಳಿಯಲ್ಲಿ ಕಂಚಿನ ಪದಕ, ಅದೇ ರೀತಿ 65 ನೇ ರಾಷ್ಟ್ರ ಮಟ್ಟದ ಅಂಡರ್ 19 ವಿಭಾಗದಲ್ಲಿ ವಿಕಾಸ್ ಪಿಯು ಕಾಲೇಜು ತಂಡ ದೆಹಲಿಯಲ್ಲಿ ಆಡಿದ ಪಂದ್ಯದಲ್ಲಿ ಸ್ಫರ್ಧೆ ನೀಡಿದ್ದು, 64 ನೇ ದೆಹಲಿ ಪಂದ್ಯದಲ್ಲಿ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ್ದು, 2017 ಮತ್ತು 2018 ರಲ್ಲಿ ವಿಕಾಸ್ ಪಿಯು ಕಾಲೇಜು ತಂಡ ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದು ಆಕಾಶ್ ಅವರ ಕ್ರೀಡಾ ಸಾಧನೆಯ ಕಿರೀಟಕ್ಕೆ ಚಿನ್ನದ ಗರಿ ಮೂಡಿದಂತಾಗಿದೆ. ಹಲವಾರು ಸಂಘ ಸಂಸ್ಥೆಗಳು ಆಕಾಶ್ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿವೆ. 2019 ರಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರರಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 63 ನೇ ಕೇರಳ ಕಬಡ್ಡಿ ಫೆಡರೇಶನ್ ಸಂಯೊಜನೆಯ ರಾಷ್ಟ್ರ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ಪರವಾಗಿ ಆಡಿದ ಆಟಗಳಲ್ಲಿ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ಇಂಥಹ ಓರ್ವ ಅಪ್ರತಿಮ ಸಾಧಕನನ್ನು ನಮ್ಮ ಸಮಾಜ ಸಮುದಾಯ ಗುರುತಿಸಿ ಪ್ರೋತ್ಸಾಹಿಸುವುದಿಲ್ಲ. ಈ ವಿಷಯ ಅವರಲ್ಲಿ ಪ್ರಸ್ತಾವಿಸಿದರೆ ತುಂಬಾ ಭಾವುಕರಾಗಿ ನೊಂದುಕೊಳ್ಳುತ್ತಾರೆ. ತಾನು ವಾಸ್ತವ್ಯ ಇರುವ ತನ್ನದೇ ಆದ ನಿವೇಶನದ ಮೇಲಂತಸ್ತಿನ ವಿಶಾಲ ಟೆರೇಸ್ ನಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಅತ್ಯುತ್ತಮ ಕಬಡ್ಡಿ ಆಟಗಾರರನ್ನು ಆಯ್ದು ವಿವಿಧ ಹಂತಗಳಲ್ಲಿ ಅವರಿಗೆ ಅತೀ ವಿಶೇಷ ರೀತಿಯ ತರಬೇತು ನೀಡಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ. ಸದ್ದುಗದ್ದಲವಿಲ್ಲದೆ ಹಂತ ಹಂತವಾಗಿ ಯಶಸ್ಸಿನ ಅಗ್ರ ಹಂತ ತಲುಪುವ ತರಾತುರಿಯಲ್ಲಿ ಇರುವ ಈ ಯುವಕನ ಆತ್ಮ ವಿಶ್ವಾಸ, ಸಮಾಜ ಪರ ಚಿಂತನೆ, ಸಾಧನೆ ಶ್ರಮಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದುದು ನಮ್ಮ ಸಮುದಾಯದ ತುರ್ತು ಕರ್ತವ್ಯ ಎಂದು ಈ ಲೇಖನದ ಮೂಲಕ ನಮ್ಮ ಸಮಾಜ ಬಾಂಧವರ ಗಮನ ಸೆಳೆಯುವ ಪ್ರಾಮಾಣಿಕ ಪ್ರಯತ್ನ ನಮ್ಮದು.
ಶುಭವಾಗಲಿ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು