



ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ 11 ನೇ ವರ್ಷದ ಪಟ್ಲ ಸಂಭ್ರಮ -2026 ಕಾರ್ಯಕ್ರಮ ಮೇ 30 ರಂದು ಅಡ್ಯಾರ್ ಬಳಿಯ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಿತು. ಬೆಳಿಗ್ಗೆ ಯಕ್ಷಧ್ರುವ ಪಟ್ಲ ಸಂಭ್ರಮ -2026 ಕಾರ್ಯಕ್ರಮವನ್ನು ಪಾವಂಜೆ ನಾಗವೃಜ ಕ್ಷೇತ್ರದ ಧರ್ಮದರ್ಶಿಗಳಾದ ಡಾ. ಯಾಜಿ ನಿರಂಜನ ಭಟ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಸಂಚಾಲಕರಾದ, ಉದ್ಯಮಿ ಶಶಿಧರ ಬಿ ಶೆಟ್ಟಿ ಉದ್ಘಾಟಿಸಿದರು. ಸಂಘ ಸಂಸ್ಥೆಗಳು ಬೆಳೆಯ ಬೇಕಾದರೆ ಎಲ್ಲರ ಸಹಕಾರ ಬೇಕು. ಯಕ್ಷಗಾನ ಕಲೆಯನ್ನು ಉಳಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಾಲಮಿತಿ ಯಕ್ಷಗಾನದಿಂದ ಇವತ್ತು ಕಲಾವಿದರು ಬೇರೆ ಉದ್ಯೋಗವನ್ನೂ ಮಾಡುತ್ತಿದ್ದಾರೆ. ಕಲಾವಿದರ ಬದುಕು ಕಟ್ಟಿ ಕೊಡುವ ಕೆಲಸ ಪಟ್ಲ ಫೌಂಡೇಶನ್ ಮಾಡುತ್ತಿದೆ. ಕಲಾವಿದರ ಶ್ರೇಯೋಭಿವೃದ್ದಿಯ ನಿಟ್ಟಿನಲ್ಲಿ ದಾನಿಗಳಿಗೆ ದಾನ ಮಾಡುವ ಶಕ್ತಿ ಕೊಡಲಿ ಎಂದರು.




11 ನೇ ವರ್ಷದ ಪಟ್ಲ ಸಂಭ್ರಮದಲ್ಲಿ ಡಾ. ಎಂ ಮೋಹನ ಆಳ್ವ ಅವರಿಗೆ 2026 ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2026 ರ ಸಾಲಿನ ಪಟ್ಲ ಪ್ರಶಸ್ತಿಯನ್ನು ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರಿಗೆ ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಡಾ. ಎಂ ಮೋಹನ ಆಳ್ವ ಮಾತನಾಡಿ, ಕಲೆ ಎಂಬುದು ನಮ್ಮ ಸಂಪತ್ತು. ಜಾನಪದ ಕಲೆಗಳಲ್ಲಿ ಯಕ್ಷಗಾನ ಕಲೆ ವಿಜೃಂಭಿಸಿದೆ. ಯಕ್ಷಗಾನ ಎಂದೂ ಸೊರಗದ ಕಲೆ. ಅದು ಶ್ರೀಮಂತಿಕೆಯಾಗಿ ಎತ್ತರಕ್ಕೆ ಬೆಳೆದಿದೆ. ಜಾನಪದ ಕಲೆಗಳಲ್ಲಿ ಯಕ್ಷಗಾನ ನಂಬರ್ ಒನ್ ಸ್ಥಾನದಲ್ಲಿದೆ. ಪಟ್ಲ ಫೌಂಡೇಶನ್ ಟ್ರಸ್ಟ್ ರಾಜ್ಯದಲ್ಲಿ ಸಾಂಸ್ಕೃತಿಕ ರಂಗದಲ್ಲಿ ಹೆಸರು ಮಾಡಿದ ಸಂಸ್ಥೆ. ಪಟ್ಲರು ಮದ್ದಲೆಗಾರರಾಗಿ, ಭಾಗವತರಾಗಿ ಯಜಮಾನರಾಗಿ ಯಕ್ಷಗಾನದ ಕಲೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದರು. ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಸನ್ಮಾನ ಸ್ವೀಕರಿಸಿ, ಕಲಾವೇವೆಯ ನಿವೃತ್ತಿಯ ಅಂಚಿನಲ್ಲಿದ್ದಾಗ ಪಟ್ಲ ಪ್ರಶಸ್ತಿಯ ಸನ್ಮಾನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದರು ಮಾತನಾಡಿ, ಪಟ್ಲ ಟ್ರಸ್ಟ್ ಕಲಾತ್ಮಕವಾಗಿ ಮತ್ತು ಸಂಘಟನಾತ್ಮಕವಾಗಿ ಬೆಳೆಯುತ್ತಿದೆ ಎಂದರು. ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಪಟ್ಲ ಹೆಸರಿನಲ್ಲಿ ದೊಡ್ಡ ಮರ ಬೆಳೆದಿದೆ. ಅದು ಎಲ್ಲರಿಗೂ ನೆರಳನ್ನು ಕೊಡುತ್ತದೆ. ಜನರ ಮನಸ್ಸಿನಲ್ಲಿ ಉಳಿಯುವ ಕೆಲಸವನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ಮಾಡುತ್ತಿದೆ ಎಂದು ಆಶೀರ್ವಚನ ನೀಡಿದರು. ಮುಂಬಯಿ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷರಾದ ಡಾ| ಸದಾಶಿವ ಶೆಟ್ಟಿ ಕನ್ಯಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಾಮಕಾವಸ್ಥೆಗೆ ಸಂಘಟನೆಗಳು ಇರಬಾರದು. ಸಂಸ್ಥೆಗಳು ಪಾರದರ್ಶಕವಾಗಿ ಕೆಲಸ ಮಾಡಬೇಕು. ದಾನಿಗಳನ್ನು ಗೌರವಯುತವಾಗಿ ನೋಡಿಕೊಳ್ಳಬೇಕು. ಪಟ್ಲ ಫೌಂಡೇಶನ್ ಟ್ರಸ್ಟ್ ಪಾರದರ್ಶಕವಾಗಿ ಕೆಲಸ ಮಾಡಿ ಕಲಾವಿದರ ಏಳಿಗೆಗಾಗಿ ಶ್ರಮಿಸುತ್ತಿದೆ. ಮುಂದೆಯೂ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಸಹಕಾರ ನೀಡುತ್ತೇನೆ ಎಂದರು. ಸಮಾರಂಭದಲ್ಲಿ ಚಂಡೀಗಢ ಕಾರ್ಯದರ್ಶಿ ರಾಜೇಶ್ ಪ್ರಸಾದ್ ಐಎಎಸ್, ಪ್ರೊ. ಎಂಎಲ್ ಸಾಮಗ, ಮುಂಬಯಿ ವಿ.ಕೆ ಗ್ರೂಪ್ಸ್ ನ ಅಧ್ಯಕ್ಷರಾದ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು, ಉದ್ಯಮಿ ವೇಣುಗೋಪಾಲ್ ಶೆಟ್ಟಿ ಮುಂಬಯಿ, ಅಜಿತ್ ಶೆಟ್ಟಿ ಅಂಕಲೇಶ್ವರ, ಸಂಸದ ಬ್ರಿಜೇಶ್ ಚೌಟ, ದಿವಾಕರ ರಾವ್ ಕಟೀಲು, ಯೋಗೀಂದ್ರ ಭಟ್ ಉಳಿ, ಉದ್ಯಮಿ ಜಿ ಶಂಕರ್ ಉಡುಪಿ, ಪಟ್ಲಗುತ್ತು ಮಹಾಬಲ ಶೆಟ್ಟಿ, ಸತೀಶ್ ಶೆಟ್ಟಿ ಪಟ್ಲ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಯೋಜನಾ ನಿರ್ದೇಶಕ ಡಾ. ಸತೀಶ್ ಭಂಡಾರಿ, ಉಪಾಧ್ಯಕ್ಷರಾದ ಅಶೋಕ್ ಆರ್ ಶೆಟ್ಟಿ ಪೆರ್ಮುದೆ, ದುರ್ಗಾಪ್ರಸಾದ್ ಪಿವಿ ಪಡುಬಿದ್ರೆ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಜತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ರವಿಚಂದ್ರ ಶೆಟ್ಟಿ ಅಶೋಕನಗರ, ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಸ್ವಾಗತಿಸಿದರು. ಪ್ರದೀಪ್ ಆಳ್ವ ಕದ್ರಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ 11 ವರ್ಷಗಳಲ್ಲಿ 16 ಕೋಟಿ ಮೌಲ್ಯದ ಸೇವಾ ಕಾರ್ಯಗಳನ್ನು ನೆರವೇರಿಸಿದೆ.





























































































































