
ಪ್ರೀತಿಯ ಸಮಾಜ ಬಾಂಧವರೆ, ನಮ್ಮ ಸಮಾಜದ ಬಗ್ಗೆ ನಮಗೆಲ್ಲರಿಗೂ ಅಭಿಮಾನ ಹೆಮ್ಮೆ ಇದೆ. ಇದು ನಿಜವಾಗಲೂ ಇರಬೇಕು. ಯಾಕೆಂದರೆ ನಮ್ಮ ಸಮಾಜದಲ್ಲಿ ಹುಟ್ಟಿ ಬೆಳೆದವರು ನಾವು ದುಡಿದು ತಿನ್ನಬೇಕು. ಬೇರೆಯವರಿಗೂ ನೀಡಬೇಕು ಅನ್ನುವ ಮನೋಭಾವನೆ ಇರಬೇಕು ಮತ್ತು ಯಾರಿಗೂ ಕಡಿಮೆ ಇಲ್ಲದಂತೆ ಬದುಕಬೇಕು. ಯಾರೊಂದಿಗೂ ಬೇಡಬಾರದು. ಎಲ್ಲರಿಗೂ ತನ್ನಿಂದಾದ ಸಹಾಯ ಮಾಡಬೇಕು. ಇದು ನಮ್ಮ ಬಂಟ ಸಮಾಜದ ಹೆಗ್ಗುರುತು. ಇಂದು ಜಗತ್ತಿನಾದ್ಯಂತ ನಮ್ಮ ಸಮಾಜಕ್ಕೆ ಕೊಡುವ ಗೌರವ, ಪ್ರತಿಷ್ಠೆ, ಮುಂದಾಳತ್ವ ನೋಡಿದರೆ ತುಂಬಾ ಹೆಮ್ಮೆ ಅನಿಸುತ್ತದೆ. ಒಂದು ಸಮಾಜ ಕಟ್ಟುವುದು, ಬೆಳೆಸುವುದು ಆ ಸಮಾಜದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ನಮ್ಮನ್ನು ಈ ಮಟ್ಟಕ್ಕೆ ಏರಿಸಿದೆ ಅಂದರೆ ಖಂಡಿತಾ ತಪ್ಪಾಗಲಾರದು. ಹಿಂದೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವು ಕಡಿಮೆ ಸಂಖ್ಯೆಯಲ್ಲಿ ಇದ್ದೆವು. ಹೆಚ್ಚಿನ ಬಂಟರು ಜಮೀನ್ದಾರರಾಗಿದ್ದರು. ಆದರೆ ಭೂ ಮಸೂದೆ ಕಾನೂನಿನಲ್ಲಿ ಉಳುವವನೆ ಹೊಲದೊಡೆಯ ಅನ್ನುವ ಕಾನೂನು ನಮ್ಮಲ್ಲಿ ಕೆಲವರನ್ನು ನಿರ್ಗತಿಕರನ್ನಾಗಿ ಮಾಡಿತು. ಆದರೆ ನಮ್ಮ ಬಂಟ ಸಮುದಾಯ ಇದನ್ನು ಸವಾಲಾಗಿ ಸ್ವೀಕರಿಸಿ ಊರು ಬಿಟ್ಟು ಎಲ್ಲಾ ತರಹದ ದುಡಿಮೆ ಮಾಡಿ ನಾವು ಹೋದ ಕಡೆ ನಾವು ಬಂಟರು ಅಂತಾ ತೋರಿಸಿಕೊಟ್ಟೆವು. ನಾವು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಊರಿನಲ್ಲಿ ಮುಂದಾಳತ್ವದಲ್ಲಿ ಮುಂದೆ ಇದ್ದೆವು. ಯಾಕೆಂದರೆ ನಾವು ಬಂಟರು ಯಾವುದಕ್ಕೂ ಹೆದರುವವರಲ್ಲ ಮತ್ತು ನ್ಯಾಯ, ನೀತಿ, ಧರ್ಮ ಬಿಟ್ಟು ಕೊಟ್ಟವರಲ್ಲ. ಇಂದಿಗೂ ಈ ನೀತಿ ನಮ್ಮನ್ನು ಕಾಯುತ್ತಿದೆ.


ಶ್ರೀಕೃಷ್ಣನ ಉಪದೇಶದಂತೆ ಧರ್ಮವನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ನಮ್ಮ ಹಿರಿಯರು ನಮಗೆ ಬೋಧಿಸಿದರು. ನಾವು ಬಂಟರು, ಶೆಟ್ಟರು, ನಾಡವರು ಊರಿನಲ್ಲಿ ಇರುವ ನೂರಕ್ಕೆ ತೊಂಬತ್ತರಷ್ಟು ದೇವಸ್ಥಾನ, ದೈವಸ್ಥಾನ, ಗರಡಿ, ಪಂಜುರ್ಲಿ, ಚಿಕ್ಕಮ್ಮ, ದೇವಸ್ಥಾನಕ್ಕೆ ನಮ್ಮ ಸಮಾಜದವರರೇ ಮುಖ್ಯಸ್ಥರಾಗಿರುತ್ತೇವೆ. ದೊಡ್ಡಮನೆ, ಗುತ್ತಿಗೆಮನೆ, ಕಂಬಳಗದ್ದೆಮನೆ ಹೀಗೆ ಹಲವು ತರದ ಹೆಸರಿನಿಂದ ನಮ್ಮವರು ಗುರುತಿಸಿಕೊಂಡಿದ್ದಾರೆ. ಹೀಗೆ ಸಮಾಜದಲ್ಲಿ ಮುಂದಾಳತ್ವ ವಹಿಸಿ ಆ ದಿನ ಗುಣ ನಡತೆಯನ್ನು ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ನೀಡಿದರು. ನಾವು ಅದನ್ನು ಮೈಗೂಡಿಸಿಕೊಂಡವರು. ಎಲ್ಲಿ ಹೋದರೂ ಹೋದ ಕಡೆ ಯಶಸ್ವಿಯಾಗಿ ದುಡಿದು ಮುಂದೆ ನಿಂತು ನಮ್ಮ ಜೊತೆಗಿದ್ದು, ಇತರ ಸಮಾಜಕ್ಕೂ ಮಾರ್ಗದರ್ಶನ ಮಾಡುವ ಒಳ್ಳೆಯ ಗುಣ ನಡತೆಯನ್ನು ಬೆಳೆಸಿಕೊಂಡು ಬಂದಿದ್ದೇವೆ. ಇನ್ನು ನಮ್ಮಲ್ಲಿ ಕೆಲವರಿಗೆ ತುಂಬಾ ಮಾತನಾಡುವ ಚಪಲ. ನಾನು ಏನು ಮಾತನಾಡುತ್ತಿದ್ದೇನೆ. ಆ ಮಾತಿನಂತೆ ನಾನು ಜೀವನದಲ್ಲಿ ನಡೆದುಕೊಂಡು ಬಂದಿದ್ದೇನೆಯೇ, ನಾನೇ ಅದನ್ನು ಪಾಲಿಸಿಕೊಂಡು ಬಂದಿಲ್ಲವಾದರೆ ಬೇರೆಯವರಿಗೆ ಹೇಳಿ ಭಾಷಣ ಮಾಡುವ ಹಕ್ಕು ನನಗಿಲ್ಲ ಅಂತಾ ತಿಳಿದಿರಬೇಕು. ಆಡುವುದೊಂದು, ಮಾಡುವುದೊಂದು, ಇದು ನೀತಿ ನಿಯಮವಲ್ಲ. ನುಡಿದಂತೆ ನಡೆ, ನಡೆದಂತೆ ನುಡಿ, ಕಾಯಕವೇ ಕೈಲಾಸ ಅಂತ ಬಸವಣ್ಣ ಹೇಳಿದರು. ಇನ್ನು ದಾನ, ಧರ್ಮ ಮಾಡುವಾಗ ದಾನ ತೆಗೆದುಕೊಳ್ಳುವ ಅರ್ಹತೆ ಇದ್ದವರಿಗೆ ದಾನ ಮಾಡಿ. ನಾವು ಕಷ್ಟ ಪಟ್ಟು ದುಡಿದ ಹಣ ವ್ಯರ್ಥವಾಗಿ ಹೋಗಬಾರದು. ಕೊಟ್ಟ ಹಣ ಕಷ್ಟದಲ್ಲಿ ಇರುವವರಿಗೆ, ಅನಾಥರಿಗೆ, ಅಂಗವಿಕಲರಿಗೆ, ಬಡ ವಿದ್ಯಾರ್ಥಿಗಳಿಗೆ, ಇನ್ನು ಅನಾರೋಗ್ಯ ಪೀಡಿತರಿಗೆ, ಮನೆ ಇಲ್ಲದವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ದಾನ, ಧರ್ಮ ಮಾಡಿ. ಮಾಡಿದ ದಾನ ತೋರಿಸಿಕೊಳ್ಳಬೇಡಿ. ಮಾಡಿದ ದಾನ ಧರ್ಮ ಮನಸ್ಸಿಗೆ ಸಂತೋಷ ಕೊಟ್ಟರೆ ಅದೇ ದೊಡ್ಡ ಪುಣ್ಯ.
ನಾನು ಇಷ್ಟೆಲ್ಲಾ ಪೀಠಿಕೆ ಕೊಟ್ಟದ್ದು ನಿಮಗೆಲ್ಲರಿಗೆ ಅರ್ಥವಾಗಿರಬಹುದು. ‘ಕನ್ಯಾನ ಐಕಳ’ ಈಗ ಎಲ್ಲೆಲ್ಲೂ ಬಹುಚರ್ಚಿತ ವಿಷಯ. ಮೊದಲು ಐಕಳ ಹರೀಶ್ ಶೆಟ್ಟಿಯವರ ಬಗ್ಗೆ ಮಾತಾಡೋಣ. ಐಕಳ ಹರೀಶ್ ಶೆಟ್ಟಿಯವರು ಕಾಲೇಜು ದಿನಗಳಿಂದಲೇ ಡೇರಿಂಗ್ ಆಂಡ್ ಡ್ಯಾಷಿಂಗ್ ಲೀಡರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಕ್ರೀಡೆಯಲ್ಲಿ ಅಂದೇ ಹೆಸರುವಾಸಿಯಾಗಿದ್ದರು. ಹರೀಶಣ್ಣ 2 ದಶಕಗಳ ಹಿಂದೆ ಪ್ರಾರಂಭ ಮಾಡಿದ್ದ ಉದ್ಯಮ ‘ಕಟೀಲೇಶ್ವರಿ ಫೈನಾನ್ಸ್’ ಅವರಿಗೆ ಕೈ ಹಿಡಿದಿಲ್ಲ. ಲಾಭ ನಷ್ಟ ಎಲ್ಲಾ ವ್ಯವಹಾರದಲ್ಲಿ ಇದ್ದದ್ದೆ. ಆದರೆ ವ್ಯವಹಾರದಲ್ಲಿ ಸೋತೆ ಎಂದು ಕೈಕಟ್ಟಿ ಕೂರಲಿಲ್ಲ. ಹೋಟೆಲು ಉದ್ಯಮಕ್ಕೆ ಧುಮಿಕಿದರು. ಮುಂಬಯಿಯಲ್ಲಿ ಹೋಟೆಲು ಉದ್ಯಮದಲ್ಲಿ ಯಶಸ್ವಿಯಾದರು. ಮುಂಬಯಿ ಬಂಟರ ಸಂಘದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡರು. ಅರ್ಹವಾಗಿ ಬಂಟರ ಸಂಘ ಮುಂಬಯಿಯ ಅಧ್ಯಕ್ಷಗಿರಿ ಒಲಿದು ಬಂತು. ನಂತರ ಬಂಟರ ಸಂಘದಲ್ಲಿ ಆದ ಬದಲಾವಣೆ ಎಲ್ಲರಿಗೂ ಗೊತ್ತೇ ಇದೆ. ನಂತರ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು. ಆಮೇಲೆ ನಡೆದದ್ದೇ ಇತಿಹಾಸ. ಯಾರೂ ಊಹಿಸದ ರೀತಿಯಲ್ಲಿ ಒಕ್ಕೂಟವನ್ನು ಮುನ್ನಡೆಸಿಕೊಂಡು ಹೋದರು. ಸಮಾಜಕ್ಕೆ ಹಲವಾರು ದಾನಿಗಳ ಪರಿಚಯ ಮಾಡಿದರು. ದಾನಿಗಳಿಂದ ಪಡೆದು ನಿರ್ಗತಿಕರಿಗೆ ಕೋಟಿಗಟ್ಟಲೆ ಹಣವನ್ನು ಹಂಚಿದರು. ಮನೆ ಇಲ್ಲದವರಿಗೆ ಮನೆ, ವೈದ್ಯಕೀಯ ನೆರವು, ವಿದ್ಯಾರ್ಥಿವೇತನ ವಿತರಣೆ ಪ್ರತೀ ತಿಂಗಳು ಹಂಚುತ್ತಾ ಹೋದರು. ಈಗ ಕನ್ಯಾನ ವಿಷಯಕ್ಕೆ ಬರೋಣ. ಕನ್ಯಾನ ಸದಾಶಿವ ಶೆಟ್ಟರು ಯಶಸ್ವೀ ಉದ್ಯಮಿ, ಸಮಾಜಸೇವಕ ಅನ್ನೋದರಲ್ಲಿ ಸಂಶಯವೇ ಇಲ್ಲ. ಮಕ್ಕಳ ಮನಸ್ಸು ಮುಗ್ಧ ಜೀವಿ. ದಾನ ಧರ್ಮದಲ್ಲಿ ಎತ್ತಿದ ಕೈ. ಕಲಿಯುಗದ ಕರ್ಣ ಎಂದರೂ ತಪ್ಪಾಗದು. 2025 ರವರೆಗೆ ಎಲ್ಲವೂ ಸರಿಯಾಗಿತ್ತು. ಐಕಳ ಹರೀಶ್ ಶೆಟ್ಟಿಯವರ ಸಮಾಜಸೇವೆಗೆ ಕನ್ಯಾನ ಬೆನ್ನೆಲುಬು ಆಗಿದ್ದರು. ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಆದ ಮನಸ್ತಾಪ ಈಗ ಹಾವು ಮುಂಗುಸಿ ತರ ಆಗಿಬಿಟ್ಟಿದೆ. ಸಮಾಜ ಎಲ್ಲವನ್ನೂ ಗಮನಿಸುತ್ತಲೇ ಇದೆ. ದೊಡ್ಡವರ ವಿಷಯ ನಮಗ್ಯಾಕೆ ಎಂದು ಸುಮ್ಮನೆ ಕೂತಿದೆ ಅಷ್ಟೇ. ಹಲವಾರು ಸಂಘ ಸಂಸ್ಥೆಗಳು ಕನ್ಯಾನ ಅವರಿಗೆ ಬೆಂಬಲ ನೀಡುತ್ತಿದೆ. ಯಾಕೆಂದರೆ ಕನ್ಯಾನ ಅವರು ದೊಡ್ಡ ದಾನಿ ದೊಡ್ಡ ಉದ್ಯಮಿ. ಸಂಘ ಸಂಸ್ಥೆಗಳು ಕನ್ಯಾನ ಮಾಡುವ ದಾನ ಧರ್ಮಕ್ಕೋಸ್ಕರ ಪ್ರೋತ್ಸಾಹ ಮಾಡುತ್ತಾ ಇದ್ದಾರೆ!!!. ಜನರ ಒಳಮನಸ್ಸು ಶಿವನೇ ಬಲ್ಲ.
ಹರೀಶಣ್ಣ ಹೋರಾಟ ಮಾಡಿದ್ದು ಸಮಾಜಕ್ಕೋಸ್ಕರ ಸದಾಶಿವಣ್ಣ ದಾನ ಧರ್ಮ ಮಾಡಿದ್ದು ಸಮಾಜಕ್ಕೋಸ್ಕರ. ಅವರವರ ವೈಯುಕ್ತಿಕ ಬದುಕು, ವೈಯುಕ್ತಿಕ ವಿಷಯ ಏನೇ ಇರಲಿ ಸಮಾಜದ ವಿಷಯ ಬಂದಾಗ ಇಬ್ಬರನ್ನೂ ಇಬ್ಬರ ವೈಮನಸ್ಸನ್ನು ಸರಿ ಮಾಡಲು ಪ್ರಯತ್ನಿಸಬೇಕು. ಹಣಕಾಸಿನ ವಿಷಯದಲ್ಲಿ ಬದಲಾವಣೆ ಆಗಿದ್ದರೆ ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕು. ಮುಂಬಯಿಯಲ್ಲಿ ಬಂಟ್ಸ್ ನ್ಯಾಯ ಮಂಡಳಿ ಇದೆ. ಅಲ್ಲೂ ಕೂಡಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಅದು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ, ಪತ್ರಿಕಾ ಪ್ರಕಟನೆಗಳಲ್ಲಿ ನಮ್ಮ ಸಮಾಜದ ಕುಂದು ಕೊರತೆಗಳು ಜಾಹಿರಾತು ರೂಪದಲ್ಲಿ ಬರಬಾರದು. ಎಲ್ಲವೂ ಸರಿಯಾಗಬೇಕು. ಕನ್ಯಾನ ಐಕಳ ಮೊದಲಿನಂತಾಗಬೇಕು. ಒಂದೇ ವೇದಿಕೆಯನ್ನು ಹಂಚಿಕೊಳ್ಳಬೇಕು. ಹೌದು ಇಬ್ಬರೂ ನಮ್ಮ ಬಂಟ ಸಮಾಜದ ಒಂದೇ ನಾಣ್ಯದ ಎರಡು ಮುಖಗಳು. ಕನ್ಯಾನ ‘ಕಿಂಗ್’ ಆದರೆ ಹರೀಶಣ್ಣ ಆಲ್ವೇಸ್ ‘ಕಿಂಗ್ ಮೇಕರ್’ ಎಂದಷ್ಟೇ ಹೇಳಬಲ್ಲೆ. ಅಚ್ಛೇ ದಿನ್ ಆದಷ್ಟು ಬೇಗ ಬರಲಿ. ಜೈ ಬಂಟ ಸಮಾಜ.

























































































































