ಕಳೆದ ವಾರ ನನ್ನ ಜೀವನದಲ್ಲೊಂದು ಘಟನೆ ನಡೆಯಿತು. ಬೈಕಿನಲ್ಲಿ ಶಾಲೆಗೆ ಹೋದವ ನನ್ನ ದ್ವಿಚಕ್ರ ವಾಹನವನ್ನು ಶಾಲೆಯ ಮೂಲೆಯ ಕಾರಿಡಾರಿನಲ್ಲಿ ನಿಲ್ಲಿಸುವುದು ನನ್ನ ಅಭ್ಯಾಸ. ಆವತ್ತು ನಿಲ್ಲಿಸಲು ತೆಗೆದುಕೊಂಡು ಹೋದಾಗ ಗ್ರಾನೈಟ್ ಮತ್ತು ಟೈಲ್ಸ್ ಹಾಕಿದ ನೆಲದ ಮೇಲೆ ನೀರು ನಿಂತಿದ್ದರಿಂದ ನನ್ನ ಬೈಕ್ ಕೇರೆ ಹಾವಿನಂತೆ ಅತ್ತಿತ್ತ ಉರುಳಾಡಿ ಕ್ಷಣ ಮಾತ್ರದಲ್ಲಿ ಏನು ಮಾಡಬೇಕೆಂದು ಅರಿವಾಗದೆ ನನ್ನನ್ನು ಸೇರಿ ದೊಪ್ಪನೆ ಕೆಳಗೆ ಬಿತ್ತು. ಬಿದ್ದದ್ದು ನಾನು ಕರ್ತವ್ಯ ನಿರ್ವಹಿಸುವ ಶಾಲೆಯಲ್ಲೇ. ಒಳಗಿನ ಹಾಲಿನಲ್ಲಿ ಮುಂಜಾನೆಯ ಅಸೆಂಬ್ಲಿ ನಡೆಯುತ್ತಿತ್ತು. ಶಿಕ್ಷಕರೆಲ್ಲರೂ ಓಡಿ ಬಂದ್ರು. ಮಕ್ಕಳು ಕೂಡಾ ಏನಾಯಿತೆಂದು ಕುತೂಹಲದಿಂದ ಕಿಟಕಿ ಎಡೆಗಳಿಂದ ಇಣುಕಿದರು. ಬಿದ್ದವ ಕೀ ಆಫ್ ಮಾಡಿ ಬೈಕನ್ನು ಎತ್ತಿ ನಿಲ್ಲಿಸಿದೆ. (ದೇವರ ಆಶೀರ್ವಾದ ಮತ್ತು ನಿಮ್ಮಂತ ಒಂದಿಷ್ಟು ಜನರ ಸದಾಕಾಲದ ಹೃದಯಾಂತರಾಳದ ಹಾರೈಕೆ ನನಗೂ ಬೈಕಿಗೂ ಏನು ಆಗ್ಲಿಲ್ಲ)

ಇದೇ ಘಟನೆ ನನ್ನ ಜೀವನದಲ್ಲಿ ಮುಂಚೆ ಎಲ್ಲಾದರೂ ನಡೆದಿದ್ರೆ ನಾನು ಪಾಠ ಮಾಡುವ ಶಾಲೆಯಲ್ಲಿ ಮಕ್ಕಳೆದುರು ಬಿದ್ದೆ ಎಂದು ಅವಮಾನದಿಂದ ನಲುಗಿ ಹೋಗುತ್ತಿದ್ದೆ. ಒಂದಿಷ್ಟು ದಿನ ಶಾಲೆಗೂ ಹೋಗ್ತಾ ಇರ್ಲಿಲ್ಲ. ಈ ವಿಚಾರ ನನ್ನನ್ನು ಬಹಳ ದಿನಗಳ ಕಾಲ ಕಾಡುತ್ತಿತ್ತು. ಆದರೆ ನನಗೆ ಆವತ್ತಿನಿಂದ ಇವತ್ತಿನವರೆಗೆ ಏನೂ ಅನಿಸಲಿಲ್ಲ. ಈ ವಿಚಾರ ನನ್ನ ತಲೆಯಲ್ಲಿಯೂ ಇಲ್ಲ. ಎಲ್ಲೋ ಕ್ರಿಕೆಟ್ ಆಡುವಾಗ ಪ್ರಾಮುಖ್ಯವಾದ ಸಂದರ್ಭದಲ್ಲಿ ಎಡವಿ ಚೆಂಡನ್ನ ಕೈ ಚೆಲ್ಲಿದಾಗ ನೂರಾರು ಬಾರಿ ಅದರ ಬಗ್ಗೆ ಚಿಂತಿಸುತ್ತಾ ನನ್ನನ್ನು ಹಳಿದುಕೊಳ್ಳುತ್ತಿದ್ದೆ. ನನ್ನಿಂದಾಗಿಯೇ ಈ ಪಂದ್ಯಾಟ ಸೋತಿತೆಂದು ನೋವು ಪಟ್ಟುಕೊಳ್ಳುತ್ತಿದ್ದೆ. ನಾನು ಆತ್ಮೀಯರೆಂದು ಗೌರವಿಸುವ ಪರಿಚಿತರೊಬ್ಬರು ನನ್ನ ಬಗ್ಗೆ ಹಿಂದಿನಿಂದ ಕೆಟ್ಟದಾಗಿ ಮಾತನಾಡುತ್ತಿದ್ದಾರೆಂದು ಇನ್ಯಾರೋ ಬಂದು ಹೇಳಿದಾಗ ಮನಸ್ಸಿಗೆ ಬಾರಿ ನೋವು ತಂದುಕೊಳ್ಳುತ್ತಿದ್ದೆ. ಅದರ ಬಗ್ಗೆ ಚಿಂತಿಸಿ ಕಣ್ಣೀರನ್ನು ಹಾಕಿದ್ದೆ. ಆದರೆ ಈವಾಗ ಯಾರು ಏನೇ ಹೇಳಿದರೂ ಅದು ಅವರವರ ಯೋಗ್ಯತೆ ಅಂತ ಮುಗುಳ್ನಕ್ಕು ಸುಮ್ಮನಾಗುತ್ತೇನೆ. ಆಲೋಚಿಸಲು ಹೋಗುವುದಿಲ್ಲ.
ಎಲ್ಲೋ ಅನಿರೀಕ್ಷಿತವಾಗಿ ಅವಮಾನವಾದದ್ದು. ಯಾರೋ ನಮ್ಮನ್ನು ವ್ಯಂಗ್ಯವಾಡಿದ್ದು. ನಮ್ಮನ್ನು ಬೇಕಂತಲೇ ಕಡೆಗಣಿಸಿದ್ದು. ಇದನ್ನೆಲ್ಲಾ ನೋಡುವಾಗ ತುಂಬಾ ಬೇಸರವಾಗುತ್ತಿತ್ತು. ಆದರೆ ಈವಾಗ ಯಾವುದಕ್ಕೂ ಏನೂ ಅನಿಸುವುದಿಲ್ಲ. ಇವನು ಪ್ರಯೋಜನಕ್ಕೆ ಇಲ್ಲ ಅಂತ ಹೇಳಿದಾಗಲೂ ಹೌದೇನೋ ಅಂತ ಸುಮ್ಮನಾಗುತ್ತೇನೆ. ಯಾಕಂದ್ರೆ ನಮ್ಮ ಬದುಕಿನ ನೆಮ್ಮದಿಯ ಸೂತ್ರದಾರರು ನಾವೇ. ಉಳಿದವರೆಲ್ಲರೂ ಅವರವರ ಲಾಭ ಮತ್ತು ಅಗತ್ಯಕ್ಕಾಗಿ ಮಾತ್ರ. ಯಾರೋ ಏನೋ ಹೇಳಿದರೆಂದು ಮನೆ ಬಿಟ್ಟು ಓಡಿ ಹೋಗುವ, ಆತ್ಮಹತ್ಯೆ ಮಾಡಿಕೊಳ್ಳುವ, ಜೀವಮಾನವಿಡಿ ಕೊರಗುವ ಅಗತ್ಯವೇ ಇಲ್ಲ. ನಮ್ಮ ಬದುಕು ನಮ್ಮದು. ನಮ್ಮ ಸಂತೋಷ ನಮ್ಮ ಸಾಧನೆ ನಮ್ಮನ್ನು ಆಡಿಕೊಳ್ಳುವವರ ನೆಮ್ಮದಿ ಕೆಡಿಸಬೇಕು ಅಷ್ಟೇ.
ಲೇಖನ : ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ