ಈ ವಿಷಯ ಎಲ್ಲರಿಗೂ ತಿಳಿದಿರುವ ಸತ್ಯ. ಪೊಲೀಸರಿಂದ ಹಿಡಿದು ಜಿಲ್ಲಾಡಳಿತದವರೆಗೆ, ಜನಪ್ರತಿನಿಧಿಗಳಿಂದ ಆರಂಭವಾಗಿ ಜನ ಸಾಮಾನ್ಯರವರೆಗೆ ಎಲ್ಲರಿಗೂ ಈ ಸಮಸ್ಯೆಯ ಆಳದ ಅರಿವೂ ಇದೆ, ಅಪಾಯದ ಸಾಧ್ಯತೆಯ ಭಯವೂ ಇದೆ. ಎಲ್ಲರೂ ಒಟ್ಟಾಗಿ ಪರಿಹಾರಕ್ಕೆ ಪ್ರಯತ್ನಿಸಿದರೆ ಕತ್ತಲು ದಾರಿಯಲ್ಲಿ ಸಾಗುವುದು ಕಷ್ಟವೇನಲ್ಲ. ಅದಕ್ಕೆ ಎಲ್ಲರೂ ತಮ್ಮ ತಮ್ಮ ಪಾತ್ರ ನಿರ್ವಹಿಸಬೇಕಾದ ಕಾಲ ಈಗ ಬಂದಿದೆ.
ಪಬ್ಗಳು, ಬಾರ್ಗಳು ತಡರಾತ್ರಿವರೆಗೆ ನಡೆಯುವ ಪಾರ್ಟಿಗಳು ಹೆಚ್ಚಾಗಿ ಡ್ರಗ್ಸ್ ಪೆಡ್ಲರ್ಗಳು ಹಾಗೂ ಗ್ರಾಹಕರು ಸಂಧಿಸುವ ತಾಣಗಳು. ಇತ್ತೀಚೆಗೆ ಇದರ ಸಾಲಿಗೆ ಕೆಲವು ಪ್ರತಿಷ್ಠಿತ ಹೊಟೇಲ್ಗಳೂ ಸೇರುತ್ತಿವೆ ಎಂಬ ಅಭಿಪ್ರಾಯವಿದೆ. ಮಂಗಳೂರಿನಿಂದ ಹಿಡಿದು ಮಣಿಪಾಲ ದವರೆಗೂ ಹೆಚ್ಚಾಗಿ ವಸತಿ ಸಹಿತ ಶಿಕ್ಷಣ ಸಂಸ್ಥೆಗಳೇ ಅಧಿಕ. ಈ ಕಾರಣದಿಂದ ಮಧ್ಯರಾತ್ರಿವರೆಗೂ, ತಡರಾತ್ರಿವರೆಗೂ ಇಬ್ಬಿಬ್ಬರೇ ಅಥವಾ ಗುಂಪು ಗುಂಪಾಗಿ ಸಂಚರಿಸಿದರೂ ಪೊಲೀಸರು ಸ್ಥಳೀಯ ವಿದ್ಯಾರ್ಥಿಗಳೆಂದು ಪ್ರಶ್ನಿಸುವುದು ಕಡಿಮೆ. ಇದನ್ನು ಡ್ರಗ್ಸ್ ಪೆಡ್ಲರ್ಗಳು ತಮ್ಮ ಅನುಕೂಲಕ್ಕೆ ಬಳಸುತ್ತಿದ್ದಾ ರೆ ಎಂಬುದೂ ಸುಳ್ಳಲ್ಲ.
ಹೆಚ್ಚುತ್ತಿರುವ ಪಾರ್ಟಿಗಳು
ಕೋವಿಡ್ ಬಳಿಕ ತಡರಾತ್ರಿವರೆಗಿನ ಪಾರ್ಟಿ ಗಳ ಸಂಖ್ಯೆ ಹೆಚ್ಚತೊಡಗಿವೆ. ಸರಕಾರಿ ರಜೆಗಳು, ವಿಶೇಷ ಹಬ್ಬಗಳ ದಿನಗಳು ಹಾಗೂ ವಾರಾಂತ್ಯ ದಿನಗಳಲ್ಲಿ ಕಾಲೇಜುಗಳಿಗೆ ರಜೆ ಇರುವ ಕಾರಣ ಪಾರ್ಟಿಗಳಿಗೆ ಬರವೇ ಇಲ್ಲ. ಜತೆಗೆ ಕಾಸರ ಗೋಡು ಸೇರಿದಂತೆ ಕೇರಳದ ವಿವಿಧೆಡೆಯಿಂದ, ರಾಜ್ಯದ ಮೈಸೂರು, ಕೊಡಗು, ಬೆಂಗಳೂರು ಹಾಗೂ ಮತ್ತಿತರ ಜಿಲ್ಲೆಗಳ ಕಾರುಗಳಲ್ಲಿ ಉಡುಪಿ ಮತ್ತು ಮಣಿಪಾಲ ಸುತ್ತಮುತ್ತಲ ಪಾರ್ಟಿಗೆಂದು ಬರುವವರ ಸಂಖ್ಯೆ ಹೆಚ್ಚಾಗಿದೆ.
ಈ ಹಿಂದೆ ಅಪರೂಪಕ್ಕೆ ಎನ್ನುವಂತೆ ಹೊರಗಿನ ಜಿಲ್ಲೆಯ ಮತ್ತು ರಾಜ್ಯದ ಕಾರುಗಳು ಕಾಣುತ್ತಿದ್ದವು. ಇವರೆ ಲ್ಲರನ್ನೂ ತಣಿಸುತ್ತಿರುವುದು ಕೆಲವು ಪಬ್ಗಳು ಮತ್ತು ಅಲ್ಲಿನ ತಡರಾತ್ರಿವರೆಗಿನ ಪಾರ್ಟಿಗಳು.ಅಲ್ಲಿ ಕುಡಿತ, ಕುಣಿತದೊಂದಿಗೆ ಮಾದಕ ವಸ್ತುಗಳ ವ್ಯಾಪಾರಕ್ಕೂ ವೇದಿಕೆಯಾಗುತ್ತಿದೆ ಎಂಬ ಅಭಿಪ್ರಾಯವಿದೆ. ಈ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಮಣಿಪಾಲದಿಂದ ಪೆರಂಪಳ್ಳಿಗೆ ಹೋಗುವ ರಸ್ತೆಯ ಆರಂಭದಲ್ಲೇ ಕೆಲವೆಡೆ ದಾರಿ ದೀಪಗಳೂ ಇಲ್ಲ. ಕತ್ತಲೆ. ಮಾದಕ ವ್ಯಸನಿಗಳು ಹಾಗೂ ಮಾದಕ ವಸ್ತುಗಳ ಮಾರಾಟಗಾರರು ಇಂಥ ಜಾಗವನ್ನೇ ಆಯ್ದುಕೊಳ್ಳುತ್ತಾರೆ. ಜತೆಗೆ ಹಳೆಯ ಪಾಳು ಕಟ್ಟಡಗಳು ಸಿಕ್ಕರೆ ಇನ್ನೂ ಒಳ್ಳೆಯದು. ಇದಕ್ಕೆ ಪೂರಕವೆನಿಸುವ ಪರಿಸರ ಇಲ್ಲಿದೆ. ಹಾಗಾಗಿ ಅಂಥ ಸ್ಥಳಗಳಲ್ಲಿ ಯಾರು ಏನೇ ಮಾಡಿದರೂ ಜಗತ್ತಿಗೆ ತಿಳಿಯದು. ಪ್ರತಿ ದಿನ ರಾತ್ರಿ ವೇಳೆ ಇಲ್ಲಿ ಹಲವು ಬಾರಿ ಡೆಲಿವರಿ ಬಾಯ್ಗಳ ಬೈಕ್ಗಳಿರುತ್ತವೆ. ಕೆಲವೊಮ್ಮೆ ಕಾರುಗಳು ಬೆಳಕು ಆರಿಸಿಕೊಂಡು ನಿಂತಿರುತ್ತವೆ, ಇನ್ನೂ ಕೆಲವು ಬಾರಿ ಎರಡು ಮೂರು ಕಾರುಗಳಲ್ಲಿ ಹುಡುಗರು, ಹುಡುಗಿಯರು ಇರುತ್ತಾರೆ. ಇಂಥ ದೃಶ್ಯಗಳು ವಾರಾಂತ್ಯದಲ್ಲಂತೂ ಸಾಮಾನ್ಯ. ಇವುಗಳ ಮೇಲೆ ಪೊಲೀಸರ ನಿಗಾ ತೀರಾ ಅವಶ್ಯ.