
ಭ್ರಷ್ಟಾಚಾರ ಎನ್ನುವುದು ನೀಗದ ದಾಹವಿದ್ದಂತೆ. ಒಮ್ಮೆ ಭ್ರಷ್ಟಾಚಾರಕ್ಕೆ ಇಳಿದ ವ್ಯಕ್ತಿ ಎಷ್ಟೇ ಹಣ ಮಾಡಿದರೂ ಇನ್ನಷ್ಟು, ಮತ್ತಷ್ಟು ಹಣ ಮಾಡಬೇಕು ಎನ್ನುವ ದಾಹಕ್ಕಿಳಿಯುತ್ತಾನೆ. ನಮ್ಮ ಮಕ್ಕಳಿಗೆ ನೈತಿಕ ಪಾಠ ಕಲಿಸದಿದ್ದರೆ ಭ್ರಷ್ಟಾಚಾರವನ್ನು ನಿಯಂತ್ರಿಸಲು ಅಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆ ತಿಳಿಸಿದರು. ಅವರು ಬನ್ನಾಡಿಯಲ್ಲಿ ಜರಗಿದ ಬನ್ನಾಡಿ ದಿ. ಪದ್ದು ಆಚಾರ್ ಸಂಸ್ಕರಣೆ, ಸಹಾಯಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧಿಕಾರ ಇದ್ದಾಗ ಅದನ್ನು ಪ್ರಾಮಾಣಿಕವಾಗಿ ಉಪಯೋಗಿಸಬೇಕು. ಬಡವರಿಗೆ ದುರ್ಬಲರಿಗೆ ಜನರ ನಡವಳಿಕೆ ಬದಲಾಗದೆ ದೇಶದಲ್ಲಿ ಬದಲಾವಣೆ ಬಯಸಲು ಅಸಾಧ್ಯ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ಅಗತ್ಯ. ಅಸಮರ್ಥರನ್ನು ಆಯ್ಕೆ ಮಾಡಿ ದೇಶ ಬದಲಾಗಬೇಕೆಂದು ಕನಸು ಕಾಣುವುದು ಕೂಡಾ ದುರಂತ ಎಂದರು.

ಈ ಸಂದರ್ಭ ಉತ್ತಮ ಬಿ.ಎಲ್.ಒ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜಯಲಕ್ಷ್ಮೀ ಶೆಟ್ಟಿ ಅವರನ್ನು ಗೌರವಿಸಲಾಯಿತು. ಅಶಕ್ತರಿಗೆ ಸಹಾಯಧನ ವಿತರಣೆ, ಪ್ರತಿಭಾ ಪುರಸ್ಕಾರ ನಡೆಯಿತು. ರೋಟರಿ ಸಹಾಯಕ ಗವರ್ನರ್ ಶ್ಯಾಮ್ ಸುಂದರ್ ನಾಯರಿ, ರೋಟರಿ ಕೋಟ ಸಾಲಿಗ್ರಾಮ ಅಧ್ಯಕ್ಷ ಯೋಗೀಶ್ ಕುಮಾರ್, ವಕೀಲ ಬನ್ನಾಡಿ ಸೋಮನಾಥ ಹೆಗ್ಡೆ, ಬಿಇಒ ಉಮಾ ಬಿ, ಉದ್ಯಮಿ ಶಂಕರ್ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಘಟಕ ಸೀತಾರಾಮ ಆಚಾರ್ ಸ್ವಾಗತಿಸಿಸಿದರು. ಉಪನ್ಯಾಸಕ ಸಂಜೀವ ಗುಂಡ್ಮಿ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕ ಬನ್ನಾಡಿ ನಾರಾಯಣ ಆಚಾರ್ ವಂದಿಸಿದರು.


























































































































