
ಮುಂಬಯಿಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಗೋರೆಗಾಂವ್ ಕರ್ನಾಟಕ ಸಂಘ 1958 ಅಕ್ಟೋಬರ್ 22 ರಲ್ಲಿ ನಿಸ್ವಾರ್ಥ ಮನೋಭಾವನೆಯ, ಸಮಾನ ಮನಸ್ಕರ ಮತ್ತು ಕನ್ನಡ ಅಭಿಮಾನಿಗಳ ಪ್ರಯತ್ನದಿಂದ ಪ್ರಾರಂಭವಾಯಿತು. ಮೊತ್ತ ಮೊದಲ ಸ್ಥಾಪಕ ಅಧ್ಯಕ್ಷರಾಗಿ ದಿ. ಮೂರೂರು ಸಂಜೀವ ಶೆಟ್ಟಿಯವರು ನೇಮಕಗೊಂಡಿದ್ದರು. ಈಗ ಅದರ 67 ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿಯನ್ನು ಮಲಾಡ್ ಪಶ್ಚಿಮದ ಸುಂದರ ನಗರದ ಡಿ. ಕೇತನ್ ಅಂತರಾಷ್ಟ್ರೀಯ ಸಭಾಗೃಹದಲ್ಲಿ ಬೆಳಗ್ಗೆಯಿಂದ ಸಾಯಂಕಾಲದ ತನಕ ಮಾರ್ಚ್ 1 ರಂದು ಸಂಭ್ರಮದಿಂದ ನಡೆಯಿತು. ಸಂಘದ ಅಧ್ಯಕ್ಷರಾದ ವಿಶ್ವನಾಥ ಎನ್ ಶೆಟ್ಟಿ ಅವರ ಮಾರ್ಗದರ್ಶನ ಹಾಗೂ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಂಕರಿಸಿದ ಎಸ್ ನಿತ್ಯಾನಂದ ಹೆಗ್ಡೆ, ಮುಖ್ಯ ಅತಿಥಿಯಾಗಿ ನ್ಯಾಯವಾದಿ ಡಿ.ಕೆ ಶೆಟ್ಟಿ ಮತ್ತು ಇನ್ನಿತರ ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಿದರು.

ಆರಂಭಿಕವಾಗಿ ಸ್ವಾಗತ ಭಾಷಣದಿಂದ ಪ್ರಾರಂಭಗೊಂಡು, ಪ್ರಥಮವಾಗಿ ನ್ಯಾಯವಾದಿ ಡಿ.ಕೆ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ತನ್ನ ಭಾಷಣವನ್ನು ಕನ್ನಡದ ಕವಿ ಮಹಾಲಿಂಗರಂಗ ಈ ಭಟ್ಟರ ‘ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣವ ಹಾಲಿನಂದದಿ, ಸುಲಭವಾಗಿಹುದು ಕನ್ನಡದ ನುಡಿಯು’ ಮತ್ತು ಡಾ| ಕುವೆಂಪು ಅವರ ‘ಎಲ್ಲಾದರೂ ಇರು ಎಂತಾದರೂ ಇರು ನೀ ಎಂದೆದಿಗೂ ಕನ್ನಡ ವಾಗಿರು’ ಎಂಬ ಕವನದೊಂದಿಗೆ ಪ್ರಾರಂಭಿಸಿದಾಗ ವೇದಿಕೆಯಲ್ಲಿದ್ದ ಹಾಗೂ ಎಲ್ಲಾ ಪ್ರೇಕ್ಷಕರಿಂದ ಕರತಾಡನದ ಸುರಿಮಳೆ ಬಿದ್ದಂತಾಯಿತು. ಅಲ್ಲದೇ ಈಗಿನ ಅಧ್ಯಕ್ಷರು ನನಗೆ ಸಂಬಂದಧಿಕರಾಗಿದ್ದರಿಂದ ಮತ್ತು ಎಲ್ಲಾ ಸಭಿಕರು ಪರಿಚಯದವರಾಗಿದ್ದರಿಂದ ಅತಿಥಿ ಎಂಬ ಭಾವನೆ ಬಾರದೆ ನಾನು ಈ ಸಂಘದವನೇ ಅಥವಾ ಮನೆಯವನೇ ಎಂದೆನಿಸಿದ್ದೇನೆ ಎಂದರು. ಅಲ್ಲದೇ ಸಂಘದ ನಿಯಮ ಒಪ್ಪಿದಲ್ಲಿ ಸಂಘದ ಪೋಷಕ ಸದಸ್ಯನಾಗುತ್ತೇನೆ ಎಂಬ ಮಾತನ್ನಿತ್ತರು. ಅವರು ಎಲ್ಲರೂ ನಿಂತು ಅಗಲಿದ ದಿ. ಮೂರೂರು ಸಂಜೀವ ಶೆಟ್ಟಿ ಮತ್ತು ಆ ಕಾಲದಲ್ಲಿದ್ದ ಎಲ್ಲಾ ಸಮಿತಿ ಸದಸ್ಯರಿಗೆ ಗೌರವದ ಪ್ರತೀಕವಾಗಿ 10 ಸಕೆಂಡುಗಳ ಕಾಲ ನಿಂತು, ಕೈ ಚಪ್ಪಾಳೆಯನ್ನು ನೀಡಲು ಹೇಳಲು ಎಲ್ಲರೂ ಒಮ್ಮತದಿಂದ ಚಪ್ಪಾಳೆಯನ್ನಿತ್ತರು.
ಆನಂತರ, ವಿದ್ಯಾಕ್ಷೇತ್ರದಲ್ಲಿ ಗುರುತಿಸಿಕೊಂಡ ಮಕ್ಕಳನ್ನು ಸನ್ಮಾನಿಸುತ್ತಾ, ಸಾಂಸ್ಕೃತಿಕ ಕಾರ್ಯಕ್ರಮ, ಬೇರೆ ಬೇರೆ ಸಂಘ ಸಂಸ್ಥೆಗಳಿಂದ ವಿವಿಧ ಕಾರ್ಯಕ್ರಮ, ಹುಲಿ ನೃತ್ಯ, ದ್ರೌಪದಿ ವಸ್ತ್ರ ಅಪಹರಣ ಯಕ್ಷ ರೂಪಕವನ್ನು ಆಡಿ, ಹಿರಿಯ ನಾಗರೀಕರಿಂದ ವಯೋಮಿತಿ ಇಲ್ಲದೇ ಪಥಸಂಚಲನವನ್ನು ಮಾಡಿದರು. ಕೊನೆಯಲ್ಲಿ, ಕಾರ್ಯದರ್ಶಿಯವರ ಧನ್ಯವಾದ ಸಮರ್ಪಣೆಯಿಂದ ಸಮಾರಂಭ ಮುಕ್ತಾಯವಾಯಿತು.


























































































































