
ಮುಂಬಯಿ ಮಹಾನಗರದ ತುಳು ಕನ್ನಡಿಗರ ಮುಂದಾಳತ್ವದ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್ ವತಿಯಿಂದ ಸಮಾಜದ ಪ್ರೇರಕ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಕೊಡ ಮಾಡುವ 2026 ರ ಸಾಲಿನ ಪ್ರೇರಣಾ ಪ್ರಶಸ್ತಿಗೆ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ಸನಾತನ ಧರ್ಮವನ್ನು ಉಳಿಸಿ ಬೆಳೆಸುವಲ್ಲಿ ಅಣ್ಣಿ ಶೆಟ್ಟಿಯವರು ನೀಡುತ್ತಿರುವ ನಿರಂತರ ಸೇವೆಗಾಗಿ ಶಿವಾಯ ಸಂಸ್ಥೆಯು ಮಾರ್ಚ್ 15 ರಂದು ನಡೆಯಲಿರುವ ಶಿವಾಯ ಫೌಂಡೇಶನ್ ನ ಎಂಟನೇ ವಾರ್ಷಿಕೋತ್ಸವದ ಶಾರದಾ ಶ್ಯಾಮ್ ಶೆಟ್ಟಿ ದಂಪತಿಯ ಘನ ಸಿರಿ ವೇದಿಕೆಯಲ್ಲಿ ಅತಿಥಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

ಮಧ್ಯಾಹ್ನ 1:30 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕುಣಿತ ಭಜನಾ ಸ್ಪರ್ಧೆ, ಸಮೂಹ ಗಾಯನ ಸ್ಪರ್ಧೆ ಮತ್ತು ಟೀಮ್ ಐಲೇಸಾ ಸದಸ್ಯರಿಂದ ಊರಿನ ನುರಿತ ಹಾಡುಗಾರರಿಂದ ತುಳು ಕನ್ನಡ ರಸಮಂಜರಿ, ನೃತ್ಯ ಪ್ರದರ್ಶನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜರಗಲಿದೆ. ಮುಂಬಯಿ ನಗರ ಮತ್ತು ಉಪನಗರಗಳ ಕಲಾ ಪ್ರೇಮಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶಿವಾಯ ಫೌಂಡೇಶನ್ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.


























































































































