
ಬಹಳ ಹಿಂದಿನ ಕಾಲದಿಂದಲೂ ಕೇಳಿ ಬಂದ ಗಾದೆ ಮಾತು “ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ” ಎಂಬ ಮಾತೊಂದಿದೆ. ಇಂದಿನ ಜನಾಂಗಕ್ಕೆ ಅದು ಸರಿಯಾಗಿ ಒಪ್ಪುತ್ತದೆ. ‘ಹೆಣ್ಣು ಅಬಲೆಯಲ್ಲ ಸಬಲೆ’ ಎಂದು ಇಂದಿನ ನಾರಿ ಶಕ್ತಿ ಸಮಾಜಕ್ಕೆ ತೋರಿಸಿಕೊಟ್ಟಿದೆ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಿಯಾಳು ಎಂದು ಇತಿಹಾಸ ಹೇಳುತ್ತದೆ. ಕೇವಲ ಅಡುಗೆ ಮಾಡುತ್ತಾ ನಾಲ್ಕು ಗೋಡೆಗಳ ಮಧ್ಯೆ ಇದ್ದು ತನ್ನ ಜೀವನವೇ ಇಷ್ಟು ಎಂದು ಪರಿತಪಿಸುವ ಕಾಲ ಈಗ ಬದಲಾಗಿ ಹೆಣ್ಣು ಕೂಡಾ ಹೊರಗೆ ಹೋಗಿ ದುಡಿಯಬಲ್ಲಳು. ಏನು ಬೇಕಾದರೂ ಸಾಧಿಸಬಲ್ಲಳು ಎಂದು ಸಾಬೀತಾಗಿದೆ. ಒಂದು ಹೆಣ್ಣು, ತಂದೆ ತಾಯಿಯ ಮಮತೆಯ ಮಗುವಾಗಿ, ಗುರುವಿಗೆ ನೆಚ್ಚಿನ ವಿದ್ಯಾರ್ಥಿನಿಯಾಗಿ, ಗೆಳೆಯರಿಗೆ ಅತ್ಯುತ್ತಮ ಸಹಪಾಠಿಯಾಗಿ, ತನ್ನ ಕಾರ್ಯಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸಗಾರ್ತಿಯಾಗಿ, ಕೈ ಹಿಡಿದ ಗಂಡನ ಆದರ್ಶ ಮಡದಿಯಾಗಿ, ತನ್ನ ಮಕ್ಕಳ ಮುದ್ದಿನ ತಾಯಿಯಾಗಿ, ಅಳಿಯ ಸೊಸೆಯರ ಅಕ್ಕರೆಯ ಅತ್ತೆಯಾಗಿ, ಮೊಮ್ಮಕ್ಕಳ ಪ್ರೀತಿಯ ಅಜ್ಜಿಯಾಗಿ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಹೀಗೆ ಎಲ್ಲಾ ಕಾರ್ಯಕ್ಷೇತ್ರದಲ್ಲೂ ತನ್ನ ಅಸಾಧಾರಣ ಅಸ್ತಿತ್ವದ ಇರುವಿಕೆಯನ್ನು ಈ ಸಮಾಜಕ್ಕೆ ತೋರಿಸಿಕೊಟ್ಟ ಧೀ ಶಕ್ತಿ ಅದುವೇ ಸ್ತ್ರೀ ಶಕ್ತಿ. ಇಂತಹ ಅಸಾಮಾನ್ಯ, ಅಸಾಧಾರಣ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುವ ಮಹಿಳೆಯರನ್ನು ವಿಶೇಷವಾಗಿ ಗುರುತಿಸುವ, ಗೌರವಿಸುವ ದಿನವೇ ಮಾರ್ಚ್ ವಿಶ್ವ ಮಹಿಳಾ ದಿನಾಚರಣೆ.


ಮಹಿಳೆಯರಿಗೆ, ತಾಯಂದಿರಿಗೆ ಈ ದಿನದಂದು ವಿಶೇಷ ಗೌರವ. ಈ ದಿನ ಕೇವಲ ಶುಭಾಶಯ ಕೋರುವ ದಿನವಾಗಿರದೇ ಮಹಿಳಾ ಸಮಾನತೆಗಾಗಿ ನಡೆಯುವ ಹೋರಾಟದ ನೆನಪನ್ನು ಮರುಕಳಿಸುತ್ತದೆ. ಉದ್ದೇಶ ಇಷ್ಟೇ; ಲಿಂಗ ಸಮಾನತೆ, ಮಹಿಳಾ ಹಕ್ಕುಗಳ ರಕ್ಷಣೆ, ಸಾಧಕರ ಪುರಸ್ಕಾರ. 20ನೇ ಶತಮಾನದಲ್ಲಿ ಮಹಿಳಾ ಕಾರ್ಮಿಕರ ಚಳುವಳಿಯ ಮುಖಾಂತರ ಆರಂಭವಾಗಿ, 1917ರ ರಷ್ಯಾದ ಮಹಿಳೆಯರ ಮುಷ್ಕರದ ನಂತರ ಮಾರ್ಚ್ 8 ನ್ನು ವಿಶ್ವ ಮಹಿಳಾ ದಿನಾಚರಣೆ ಎಂದು ಅಧಿಕೃತಗೊಳಿಸಲಾಯಿತು. ಹಾಗಾಗಿ ಆ ದಿನವನ್ನು ವಿಶ್ವದೆಲ್ಲೆಡೆ ಸಂಭ್ರಮ, ಸಡಗರ ಗೌರವದಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ‘ಮಹಿಳಾ ದಿನಾಚರಣೆ- 2026’ ಮಾರ್ಚ್ 7ರ ಶನಿವಾರ ಮಧ್ಯಾಹ್ನ ಗಂಟೆ 2 ರಿಂದ ಬಂಟರ ಸಂಘ ಸಾಂಸ್ಕೃತಿಕ ಚಟುವಟಿಕೆಗಳ ನೆಲೆಯಾಗಿರುವ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಆಡಿಟೋರಿಯಂನಲ್ಲಿ ಅದ್ದೂರಿಯಾಗಿ ನಡೆಯಲಿರುವುದು.
ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರು ವಹಿಸಲಿರುವರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್ ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಪ್ರೋ. ಶುಭಲಕ್ಷ್ಮಿ ಸುದರ್ಶನ್ ಹೆಗ್ಡೆ (ಫೌಂಡರ್ ಟ್ರಸ್ಟಿ , ಭಾರತ್ ಕಾಲೇಜ್ ಆಫ್ ಇಂಜಿನಿಯರಿಂಗ್ ಬದ್ಲಾಪುರ್) ಇವರು ಆಗಮಿಸಲಿರುವರು. ಗೌರವಾನ್ವಿತ ಅತಿಥಿಗಳಾಗಿ ಮೋಹಿನಿ ಪಿ ಶೆಟ್ಟಿ (ಪಾನ್ ಬಾಯ್ ಇಂಟರ್ನ್ಯಾಷನಲ್ ಸ್ಕೂಲ್, ಸಾಂತಾಕ್ರೂಸ್ ಪೂರ್ವ) ಇವರು ಕೂಡ ಆಗಮಿಸಲಿದ್ದಾರೆ. ಇದಲ್ಲದೇ ಪ್ರತಿ ವರ್ಷ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಯಾದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಮೆಮೋರಿಯಲ್ ಅವಾರ್ಡ್ – 2026 ನ್ನು ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ (ಮುಂಬಯಿಯ ಖ್ಯಾತ ನಿರೂಪಕಿ, ಸಹ ಪ್ರಾಧ್ಯಾಪಕಿ ಕನ್ನಡ ವಿಭಾಗ ಮುಂಬಯಿ ಯುನಿವರ್ಸಿಟಿ ಕಲಿನಾ) ಇವರಿಗೆ ಗಣ್ಯರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ 2 ಗಂಟೆಯಿಂದ 2.30 ತನಕ ಲಕ್ಕೀಡಿಪ್ ಕೂಪನ್ ಕೌಂಟರ್ ನಲ್ಲಿ ದೊರೆಯುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ 9 ಪ್ರಾದೇಶಿಕ ಸಮಿತಿಯವರ ವಿವಿಧ ರೂಪದ ಸಾಂಸ್ಕೃತಿಕ ಚಟುವಟಿಕೆಯನ್ನು ಹಾಗೂ ವಿಶೇಷ ಆಕರ್ಷಣೆಯಾಗಿ ಮಹಿಳಾ ವಿಭಾಗದ ವತಿಯಿಂದ ‘ಭವ್ಯ ಸ್ವರೂಪಿಣಿ ನಾರೀ ಶಕ್ತಿ ಪರಾಂಪರ’ವೆಂಬ ನಾಟ್ಯ ವೈಭವ ನಡೆಯಲಿರುವುದು. ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯಿದೆ.
ಸಮಾಜ ಬಾಂಧವರೆಲ್ಲರೂ ಕ್ಲಪ್ತ ಸಮಯಕ್ಕೆ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಪ್ರವೀಣ್ ಭೋಜ ಶೆಟ್ಟಿ (ಅಧ್ಯಕ್ಷರು, ಬಂಟರ ಸಂಘ ಮುಂಬಯಿ) ಮಹೇಶ್ ಎಸ್. ಶೆಟ್ಟಿ (ಉಪಾಧ್ಯಕ್ಷರು, ಬಂಟರ ಸಂಘ ಮುಂಬಯಿ), ಡಾ| ಆರ್.ಕೆ. ಶೆಟ್ಟಿ (ಗೌರವಾನ್ವಿತ ಕಾರ್ಯದರ್ಶಿಗಳು, ಬಂಟರ ಸಂಘ ಮುಂಬಯಿ), ಸಿ.ಎ ರಮೇಶ್ ಬಿ ಶೆಟ್ಟಿ (ಕೋಶಾಧಿಕಾರಿಗಳು, ಬಂಟರ ಸಂಘ ಮುಂಬಯಿ), ಗಿರೀಶ್ ಶೆಟ್ಟಿ ತೆಳ್ಳಾರು (ಉಪ ಕಾರ್ಯದರ್ಶಿಗಳು, ಬಂಟರ ಸಂಘ ಮುಂಬಯಿ), ಶಶಿಧರ್ ಕೆ ಶೆಟ್ಟಿ ಇನ್ನಂಜೆ (ಜೊತೆ ಕೋಶಾಧಿಕಾರಿ, ಬಂಟರ ಸಂಘ ಮುಂಬಯಿ), ಸವೀನ್ ಜೆ ಶೆಟ್ಟಿ (ಕಾರ್ಯಾಧ್ಯಕ್ಷರು, ಯುವ ವಿಭಾಗ), ಹಾಗೂ ಚಿತ್ರಾ ಆರ್. ಶೆಟ್ಟಿ (ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ), ಕವಿತಾ ಐ.ಆರ್ ಶೆಟ್ಟಿ (ಉಪ ಕಾರ್ಯಾಧ್ಯಕ್ಷೆ), ಆಶಾ ಎಸ್. ಶೆಟ್ಟಿ (ಕಾರ್ಯದರ್ಶಿ), ಸುಚಿತಾ ಕೆ ಶೆಟ್ಟಿ (ಕೋಶಾಧಿಕಾರಿ), ವನಿತಾ ವೈ ನೊಂಡಾ (ಜೊತೆ ಕಾರ್ಯದರ್ಶಿ), ಸರೋಜಾ ಬಿ. ಶೆಟ್ಟಿ (ಜೊತೆ ಕೋಶಾಧಿಕಾರಿ) ಹಾಗೂ ಮಹಿಳಾ ವಿಭಾಗದ ಎಲ್ಲಾ ಸದಸ್ಯರು, ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿಯರು, ಬಂಟರ ಸಂಘ ಮುಂಬಯಿ ಇದರ ವಿಶ್ವಸ್ಥರು, ಮಾಜಿ ಅಧ್ಯಕ್ಷರುಗಳು, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಮತ್ತು 9 ಉಪಸಮಿತಿ ಹಾಗೂ ಯುವ ವಿಭಾಗ ಮೊದಲಾದವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


























































































































