
ತಾನೋರ್ವ ಉದ್ಯಮಿಯಾಗಬೇಕು, ತನ್ನ ಬಾಳಿಗೊಂದು ಭದ್ರ ತಳಪಾಯ ನಿರ್ಮಾಣ ಮಾಡಿಕೊಳ್ಳುವ ಮೂಲಕ ಬಡತನದಿಂದ ಮೇಲೆದ್ದು ತನ್ನ ಆದಾಯವನ್ನು ತಾನೇ ಸೃಷ್ಟಿಸಿಕೊಂಡು ಸಮಾಜದಲ್ಲಿ ಸಾಧಕರ ಸಾಲಿನಲ್ಲಿ ಗುರುತಿಸಿಕೊಳ್ಳಬೇಕೆಂಬ ಕನಸು ಕಂಡು ಕುಂದಾಪುದಿಂದ ಬೆಂಗಳೂರಿಗೆ ಬಂದು ಹಗಲು ರಾತ್ರಿ ಸಂಘರ್ಷದಿಂದ ಕೈಗಾರಿಕೋದ್ಯಮದಲ್ಲಿ ಯಶಸ್ಸು ಕಂಡ ಯುವಕನ ಜೀವನ ಗಾಥೆ ಇದು. ಮಂದಾರ್ತಿ ಶೀರೂರು ಶೇಖರ್ ಶೆಟ್ಟಿ ಹಾಗೂ ಹಳ್ನಾಡು ನಯನಾ ಶೆಟ್ಟಿ ದಂಪತಿಯ ಪುತ್ರ ಸಂಪತ್ ಶೆಟ್ಟಿಯವರು ಆರಂಭದಲ್ಲಿ ಉದ್ಯೋಗವನ್ನರಸಿಕೊಂಡು ಬೆಂಗಳೂರಿಗೆ ಬಂದಿದ್ದರೂ ತನಗೆ ಸೂಕ್ತ ಎನಿಸುವ, ತೃಪ್ತಿ ನೀಡುವ ಉದ್ಯೋಗ ಲಭಿಸದ ಕಾರಣ ಏನಾದರೂ ಸಣ್ಣ ಬಂಡವಾಳದಿಂದ ವ್ಯಾಪಾರ ಅಥವಾ ಉದ್ದಿಮೆ ಆರಂಭಿಸಬೇಕೆಂದು ಯೋಚಿಸಿದ ಸಂಪತ್ ತನಗೆ ಅನುಭವ ಇದ್ದ ಗೇರು ಬೀಜ ಸಂಸ್ಕರಣ ಉದ್ಯಮ ಆರಂಭಿಸಬೇಕೆನ್ನುವ ಮನೋ ಇಂಗಿತದೊಂದಿಗೆ ಜನಪ್ರಿಯ ಸಮಾಜ ಸೇವಕ, ಜನಪ್ರತಿನಿಧಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಂದ ಆರಂಭಿಕ ಸಹಕಾರ ಕೋರಿದಾಗ ಹಾಲಾಡಿ ಶೆಟ್ಟರು ಸಂಪತ್ ಅವರಿಗೆ ಸಹಾಯ ಹಸ್ತ ನೀಡಿದರು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ವೈಯಕ್ತಿಕ ನೆಲೆಯಲ್ಲಿ ಎರಡು ಲಕ್ಷ ರೂಪಾಯಿ ನೀಡಿ ಭವಿಷ್ಯದಲ್ಲಿ ಯಶಸ್ಸಾಗಲೆಂದು ಶುಭ ಹಾರೈಸಿದರು. ಆ ಮೊತ್ತದಲ್ಲಿ ತನ್ನ ಇಷ್ಟ ದೇವರನ್ನು ನೆನೆದು ಉದ್ಯಮ ಆರಂಭಿಸಿದರು.


ಆರಂಭದ ದಿನಗಳಲ್ಲಿ ಕೆಲವು ತೊಡಕುಗಳು ಕಂಡು ಬಂದರೂ ತನ್ನ ಛಲ ಮತ್ತು ಪರಿಶ್ರಮದಿಂದ ಹಂತ ಹಂತವಾಗಿ ಉದ್ದಿಮೆಯಲ್ಲಿ ಯಶಸ್ಸು ಸಂಪಾದಿಸಿದರು. ನಂತರ ಅವರು ಸಾಧನೆಯ ಪಥದಲ್ಲಿ ಮುಂದುವರಿಯುತ್ತಾ ಅನ್ಯ ಕೈಗಾರಿಕೆಗಳಲ್ಲಿ ಬಂಡವಾಳ ತೊಡಗಿಸಿದರು. ಅವರ ಪರಿಶ್ರಮಕ್ಕೆ ಅದೃಷ್ಟವೂ ಸೇರಿಕೊಂಡು ಬಳಿಕ ಸರಣಿ ಕೈಗಾರಿಕಾ ಉದ್ಯಮ ಕ್ಷೇತ್ರದಲ್ಲಿ ಅಪೂರ್ವ ಯಶಸ್ಸನ್ನು ಸಂಪಾದಿಸಿಕೊಂಡರು. ಸಣ್ಣ ಬಂಡವಾಳದಿಂದ ಆರಂಭಗೊಂಡ ಕ್ಯಾಶೂ ಇಂಡಸ್ಟ್ರೀಸ್ ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡ ಬಳಿಕ ಅವರು ಟ್ರೇಡಿಂಗ್ ವ್ಯವಹಾರಕ್ಕೆ ಪ್ರವೇಶಿಸಿ ಉದ್ಯಮವನ್ನು ವಿಸ್ತಾರಗೊಳಿಸುವುದರ ಜೊತೆಗೆ ಮೂಲ ಬಂಡವಾಳಕ್ಕೆ ಹೊಸ ಬಂಡವಾಳ ಸೇರಿಸಿ ಅನ್ಯ ಕೈಗಾರಿಕೆಗಳಲ್ಲಿ ಬಂಡವಾಳ ತೊಡಗಿಸಿದರು. ಬಳಿಕ ಶ್ರೀ ಕೃಷ್ಣಾನುಗ್ರಹ ಆಗ್ರೋ ಕೆಮಿಕಲ್ಸ್ ಇಂಡಸ್ಟ್ರೀಸ್, ಶ್ರೀ ಕೃಷ್ಣಪ್ರಸಾದ್ ಆಗ್ರೋ ಇಂಡಸ್ಟ್ರೀಸ್ ಗಳ ಸ್ಥಾಪನೆ ಜೊತೆ ಜೊತೆಗೆ ಶ್ರೀ ಕೃಷ್ಣಪ್ರಸಾದ್ ಸ್ಟೀಲ್ ಇಂಡಸ್ಟ್ರೀಸ್ ನ್ನೂ ಆರಂಭಿಸಿದರು.


ಇವರ ಉತ್ಪನ್ನ ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಾಗಿ ಆದಾಯವೂ ವೃದ್ಧಿಯಾಗತೊಡಗಿದ ಬಳಿಕ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟರು. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತನ್ನ ಅದೃಷ್ಟ ಪರೀಕ್ಷಿಸುತ್ತಲೇ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಸ್ಥಾಪಿಸಿ ಸಾರ್ವಜನಿಕ ಕ್ಷೇತ್ರದಲ್ಲಿ ಮೌಲಿಕ ಅನುದಾನ ನೀಡ ತೊಡಗಿದರು. ಶ್ರೀ ಕೃಷ್ಣ ಫೌಂಡೇಶನ್ ನಿಂದ 2023 ರಿಂದ ತಂದೆಯಿಲ್ಲದ ಪಿ.ಯು.ಸಿ ನಂತರದ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ದತ್ತು ತೆಗೆದುಕೊಂಡು ಓದಿಸುತ್ತಿದ್ದಾರೆ. ಮುಂದೆ ಪ್ರತಿ ವರ್ಷ 10 ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ದತ್ತು ತೆಗೆದುಕೊಳ್ಳುವ ಕಾರ್ಯಯೋಜನೆ ಇದೆ. ಹಳ್ಳಿ ಪ್ರದೇಶದಿಂದ ಬಂದವರಿಗೆ ಮೊದಲ ಆದ್ಯತೆ ನೀಡುತ್ತಾರೆ. ಮುಂದಿನ ವರ್ಷಗಳಲ್ಲಿ ತನ್ನ ಕೈಗಾರಿಕೆ ಮತ್ತು ಅನ್ಯ ಉದ್ಯಮದ ಆದಾಯದ ಕೆಲವಂಶವನ್ನು ವಿದ್ಯಾವಂತ ಯುವಕರಿಗೆ ಉದ್ಯೋಗವಕಾಶ ನೀಡುವುದರ ಜೊತೆಗೆ ವರ್ಕಿಂಗ್ ಕ್ಯಾಪಿಟಲನ್ನು ಬಹುಕೋಟಿಗಳಿಗೆ ತಲುಪಿಸುತ್ತಾ ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ತನ್ನ ಸಾಧನೆಯನ್ನು ದಾಖಲಿಸಿ, ತನ್ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ.

ಭಾರತ ಕಂಡ ಯಶಸ್ವೀ ಉದ್ಯಮಿಗಳಾದ ರತನ್ ಟಾಟಾ ಹಾಗೂ ವಿಜಯ ಸಂಕೇಶ್ವರ್ ಅವರ ಸಾಧನೆಯನ್ನು ತನ್ನ ಜೀವನದಲ್ಲಿ ಸ್ಫೂರ್ತಿಯಾಗಿರಿಸಿರುವ ಸಾಧನಾಶೂರ ಶ್ರೀಕೃಷ್ಣ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ಸಂಪತ್ ಶೆಟ್ಟಿಯವರು ವಿಜಯವಾಣಿ ಮಾಧ್ಯಮ ಸಂಸ್ಥೆಯಿಂದ 2026 ರ ಸಾಲಿನ ‘ವಿಜಯರತ್ನ ಇಂಟರ್ನ್ಯಾಷನಲ್ ಪ್ರಶಸ್ತಿ’ಯನ್ನು 28 ಫೆಬ್ರವರಿ 2026 ರಂದು ದುಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದ್ದಾರೆ. ಧರ್ಮಪತ್ನಿ ಸೋನಾಲಿ ಶೆಟ್ಟಿ ಅವರು ಸಂಪತ್ ಶೆಟ್ಟಿ ಅವರ ಯಶಸ್ಸಿನ ಹಿಂದಿರುವ ವಿದ್ಯಾವಂತೆ ವರ್ಚಸ್ವಿ ಮಹಿಳೆ. ಇಂಟೀರಿಯರ್ ಡೆಕೋರೇಶನ್ ಕುರಿತ ಅಪಾರ ಜ್ಞಾನ ಇರುವ ಇವರು ಪತಿಯ ಉದ್ಯಮದಲ್ಲಿ ಸಹವರ್ತಿ. ಈ ದಂಪತಿಯ ಮುದ್ದಿನ ಮಗಳು ಆದ್ಯಾ ಶೆಟ್ಟಿ ಅವರು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಸಂಪತ್ ಶೆಟ್ಟಿಯವರು ಮುಂದಿನ ವರ್ಷಗಳಲ್ಲಿ ತನ್ನ ಆದಾಯದ ಕೆಲವಂಶವನ್ನು ಸಮಾಜ ಸೇವಾಕಾರ್ಯಗಳಿಗೆ ಮೀಸಲಿಡುವ ಸಂಕಲ್ಪ ಹೊಂದಿದ್ದಾರೆ. ಅವರ ಭವಿಷ್ಯದ ಯೋಜನೆಗಳು ಕ್ಷಿಪ್ರಗತಿಯಲ್ಲಿ ಸಾಕಾರಗೊಳ್ಳುವ ಮೂಲಕ ಅವರ ಆಶ್ರಯದಲ್ಲಿ ನಮ್ಮ ಸಮಾಜದ ವಿದ್ಯಾವಂತರಿಗೆ ಉತ್ತಮ ಪ್ರೇರಣೆ ಜೊತೆಗೆ ಉದ್ಯೋಗಾವಕಾಶಗಳು ಲಭ್ಯವಾಗಲಿ, ಮಾತೆ ಮಂದಾರ್ತಿ ದುರ್ಗಾಪರಮೇಶ್ವರಿ ಅನುಗ್ರಹಿಸಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಬರಹ : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು


























































































































