ರಾಜ್ಯದ ರಾಜಧಾನಿಯಾದ ಬೆಂಗಳೂರು, ವಿಶ್ವದ ವಿವಿಧ ಜಾತಿ, ಧರ್ಮ ಮತ್ತು ಸಂಸ್ಕೃತಿಯ ಜನರಿಗೆ ಆಸರೆ ಹಾಗೂ ಆತಿಥ್ಯದ ತವರೂರಾಗಿದೆ. ವಿಶೇಷವಾಗಿ ಕರಾವಳಿ ಶೈಲಿಯ ಊಟ ಉಪಹಾರಗಳು ಬೆಂಗಳೂರಿನ ಎಲ್ಲಾ ವರ್ಗದ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ‘ಉಳುವವನೇ ಹೊಲದೊಡೆಯ’ ಎಂಬ ಕಾನೂನಿನ ಪರಿಣಾಮವಾಗಿ ಭೂಮಿ ಕಳೆದುಕೊಂಡ ಕರಾವಳಿ ಭಾಗದ ಅನೇಕ ಜನರು ತಮ್ಮ ಬದುಕಿಗೆ ಹೊಸ ದಾರಿ ಹುಡುಕುತ್ತಾ ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ದೂರದ ಮುಂಬಯಿಯಲ್ಲಿ ನೆಲೆ ಕಂಡುಕೊಂಡರು. ಅವರಲ್ಲಿ ಬಹುತೇಕರು ಹೋಟೆಲ್ ಉದ್ಯಮದ ಮೂಲಕ ತಮ್ಮ ಶ್ರಮ, ನಿಷ್ಠೆ ಮತ್ತು ಗುಣಮಟ್ಟದ ಸೇವೆಯಿಂದ ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದರು. ಅಂತಹ ಪ್ರತಿಷ್ಠಿತ ಹೋಟೆಲ್ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಜನತೆಗೆ ನೀಡುವುದರ ಜೊತೆಗೆ, ಹಲವಾರು ದುಡಿಯುವ ಕೈಗಳಿಗೆ ಉದ್ಯೋಗಾವಕಾಶ ಕಲ್ಪಿಸಿದವರು ಬ್ರಹ್ಮಾವರ ಅಧಿಕಾರಿಮನೆ ಮಧುಕರ ಎಂ ಶೆಟ್ಟಿಯವರು.




ಉದ್ಯಮದ ಜೊತೆಗೆ ಸಮಾಜಸೇವೆಯನ್ನೂ ಜೀವನದ ಧ್ಯೇಯವನ್ನಾಗಿಸಿಕೊಂಡಿರುವ ಅವರು ನೆಲ, ಜಲ, ನಾಡು ನುಡಿಗಾಗಿ ವಿವಿಧ ಸಂಘ ಸಂಸ್ಥೆಗಳ ಮೂಲಕ ಹೋರಾಟದ ಹಾದಿಯಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಬಂಟರ ಸಂಘದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಜೊತೆ ಕಾರ್ಯದರ್ಶಿಯಾಗಿ ಹಾಗೂ ಗೌರವ ಕಾರ್ಯದರ್ಶಿಯಾಗಿ ಮೂರು ದಶಕಗಳಿಗಿಂತ ಹೆಚ್ಚು ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿರುವ ಅವರು ಅಜಾತಶತ್ರು, ಸ್ನೇಹಮಯಿ ಹಾಗೂ ಎಲ್ಲರೊಂದಿಗೂ ಪ್ರೀತಿಯಿಂದ ಬೆರೆಯುವ ಸರಳ ವ್ಯಕ್ತಿತ್ವದ ನಾಯಕರು. ಯಶಸ್ವಿ ಉದ್ಯಮಿಯಾಗಿರುವ ಮಧುಕರ ಎಂ ಶೆಟ್ಟಿಯವರು ಸಂತೃಪ್ತ ಸಂಸಾರಿಕ ಜೀವನದ ಜೊತೆಗೆ ಸಮಾಜಸೇವೆಯ ತುಡಿತವನ್ನು ಹೊಂದಿದ್ದಾರೆ. ಮುಂಬರುವ ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದು ಅವರ ಸಮಾಜಸೇವೆಗೆ ಇನ್ನಷ್ಟು ಬಲ ನೀಡಲಿದೆ.
ಇವರ ಆಯ್ಕೆ ಬೆಂಗಳೂರು ಬಂಟರ ಸಂಘಕ್ಕೂ, ಸಮಾಜಕ್ಕೂ ಗೌರವ ಹಾಗೂ ಹಿರಿಮೆಯನ್ನು ತಂದುಕೊಡಲಿದೆ. ಆದ್ದರಿಂದ ಮಧುಕರ ಎಂ ಶೆಟ್ಟಿಯವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸೋಣ. ಜೊತೆಗೆ ಸಂಘವನ್ನು ಮಹತ್ತರ ದಿಕ್ಕಿನಲ್ಲಿ ಮುನ್ನಡೆಸಲು ಮತ್ತು ಬಲಿಷ್ಠ ಸಮಾಜ ನಿರ್ಮಿಸಲು ಡಾ| ದೀಪಕ್ ಶೆಟ್ಟಿಯವರ ಸಂಪೂರ್ಣ ತಂಡವನ್ನು ಬೆಂಬಲಿಸೋಣ.
ಬರಹ : ವಸಂತ ಗಿಳಿಯಾರ್




















































































































