ಬಂಟ ಸಮುದಾಯದ ಅಪ್ರತಿಮ ಸಾಧನೆಗಳು ಇಂದು ಜಗಜ್ಜಾಹೀರು. ‘ಆಡು ಮುಟ್ಟದ ಸೊಪ್ಪಿಲ್ಲ ಬಂಟರು ಕೈ ಆಡಿಸದ ಕ್ಷೇತ್ರಗಳಿಲ್ಲ’ ಎಂದರೆ ಅತಿಶಯದ ಮಾತಾಗದು. ಇದೀಗ ಮಹಾದೇವ ಕುಂದೇಶ್ವರ ವಿರಾಜಿತ ಪ್ರಕೃತಿ ರಮ್ಯತೆ ವಿಶೇಷಗಳಿಂದ ಗುರುತಿಸಿಕೊಂಡಿರುವ ಕುಂದ ಕನ್ನಡ ಚೆಲುನುಡಿಯ ಆಡುವ ಕರ್ನಾಟಕ ಕರಾವಳಿಯ ಸೊಬಗಿನ ನಗರ ಕುಂದಾಪುರ ಇಲ್ಲಿನ ಬಂಟರ ಸಂಘಟನೆಯ ಕುಂದಾಪುರ ತಾಲೂಕು ಯುವ ಬಂಟರ ಸಂಘದ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಶೆಟ್ಟಿ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ. ಕುಂದಾಪುರ ಮೂಲದ ಇವರು ವಿದ್ಯಾರ್ಥಿ ಜೀವನದಿಂದಲೇ ಓರ್ವ ಪ್ರತಿಭಾವಂತ ಹಾಗೂ ಉತ್ತಮ ಸಂಘಟಕರಾಗಿ ಗುರುತಿಸಿಕೊಂಡ ಇವರು ವಾಣಿಜ್ಯ ಪದವಿಧರರು. ತನ್ನ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಕ್ರೀಡಾ ಚಟುವಟಿಕೆಗಳ ಮೂಲಕ ಜಪ್ರಿಯರಾಗಿದ್ದ ಪ್ರಕಾಶ್ ಶೆಟ್ಟಿ ಅವರು ಇದೀಗ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗೌರವಾಧ್ಯಕ್ಷರಾಗಿ ನಿಯುಕ್ತರಾಗಿರುವುದು ಅವರ ಅರ್ಹತೆಗೆ ಸಂದ ಗೌರವ. ಅದನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಸಾಮರ್ಥ್ಯ ಪ್ರಕಾಶ್ ಶೆಟ್ಟಿ ಅವರಲ್ಲಿದೆ. ಕಳೆದ ಹಲವಾರು ವರ್ಷಗಳಿಂದ ದಾಂಡೇಲಿಯಲ್ಲಿ ತನ್ನದೇ ಆದ ಶ್ರೀ ದುರ್ಗಾ ಕನ್ಸ್ಟ್ರಕ್ಷನ್ ಇದರ ಆಡಳಿತ ನಿರ್ದೇಶಕರಾಗಿ ಉದ್ಯಮ ಕ್ಷೇತ್ರದಲ್ಲಿ ಮಿಂಚುತ್ತಿರುವ ಹೆಸರು ಪ್ರಕಾಶ್ ಶೆಟ್ಟಿ ಅವರದ್ದು. ಅದೆ ರೀತಿ ಶ್ರೀ ದುರ್ಗಾ ಹಾರ್ಡ್ ವೇರ್ಸ್ ಎಂಡ್ ಪೇಯಿಂಟ್ಸ್ ಇದರ ಆಡಳಿತ ಪಾಲುದಾರರಾಗಿಯೂ ತನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ತನ್ನ ಬಹುಮುಖಿ ವ್ಯಕ್ತಿತ್ವ, ಸಾಮಾಜಿಕ ಕಾಳಜಿ, ಸಮರ್ಥ ಸಂಘಟನೆಗಳ ಮೂಲಕ ದಾಂಡೇಲಿ ಹಾಗೂ ಕುಂದಾಪುರ ಪರಿಸರದಲ್ಲಿ ಬಹುಶ್ರುತರು ಚಿರಪರಿಚಿತರು.
ದಾಂಡೇಲಿಯ ಕಲಾಶ್ರೀ ಸಂಸ್ಥೆ ಹಾಗೂ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾಗಿ, ದಾಂಡೇಲಿಯ ಪ್ರಥಮ ದರ್ಜೆ ಸರಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ, ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾಗಿ, ಮಂಗಳೂರಿನ ಪಟ್ಲ ಫೌಂಡೇಶನ್ ಟ್ರಸ್ಟಿಯಾಗಿ, ದಾಂಡೇಲಿಯ ರೋಟರಿ ಎಜುಕೇಷನ್ ಸೊಸೈಟಿ ಇದರ ಉಪಾಧ್ಯಕ್ಷರಾಗಿ ಸಲ್ಲಿಸಿದ ಅಪೂರ್ವ ಸೇವೆ ಗಣನೀಯ ಗಮನೀಯ. ಅಷ್ಟೇ ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಾಂಡೇಲಿ ಕರ್ನಾಟಕ ಸಂಘದ ಅಜೀವ ಸದಸ್ಯತ್ವ ಹೊಂದಿದ್ದು, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಶೇರ್ಡಿ ಕಕ್ಕುಂಜೆ ಇದರ ಅಧ್ಯಕ್ಷರಾಗಿ, ಶ್ರೀ ಮಹಾಗಣಪತಿ ದೇವಸ್ಥಾನ ಕಕ್ಕುಂಜೆ ಕಂಬಿಕಾಲು ಇದರ ಉಪಾಧ್ಯಕ್ಷರಾಗಿ, ದಾಂಡೇಲಿಯ ಸೈಂಟ್ ಮೈಕಲ್ ಕಾನ್ವೆಂಟ್ ಶಾಲೆಯ ಪಾಲಕ ಶಿಕ್ಷಕ ಸಂಘದ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ಯಕ್ಷಗಾನ ನಾಟಕ ರಂಗದ ಹವ್ಯಾಸಿ ಕಲಾವಿದರಾಗಿಯೂ ಜನಪ್ರಿಯರಾಗಿದ್ದಾರೆ.








ಶೇಖರ್ ಶೆಟ್ಟಿ ಹಾಗೂ ಜಲಜಮ್ಮ ಶೆಟ್ಟಿ ದಂಪತಿಗಳ ಸುಪುತ್ರರಾಗಿರುವ ಪ್ರಕಾಶ್ ಶೆಟ್ಟಿಯವರು ಸಮಾಜಮುಖಿ ಕಾರ್ಯಗಳಿಗೆ ಹಾಗೂ ಯಕ್ಷಗಾನ ಕಲಾವಿದರಿಗೆ ಸದಾ ನೆರವಾಗುತ್ತಿದ್ದಾರೆ. ಇನ್ನು ರೋಟರಿ ಕ್ಲಬ್ ಮೂಲಕ ಪ್ರಕಾಶ್ ಶೆಟ್ಟಿ ಅವರ ಸೇವಾ ವೈಖರಿ ಅವರ್ಣನೀಯ. 2018 -19 ರ ಸಾಲಿನ ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್ ಸಿಕ್ಕಿದ್ದು, 2022 -23 ರ ಸಾಲಿನಲ್ಲಿ 3170 ಅಸಿಸ್ಟೆಂಟ್ ಗವರ್ನರ್ ಆಗಿ ಬೆಸ್ಟ್ ಅಸಿಸ್ಟೆಂಟ್ ಗವರ್ನರ್ ಅವಾರ್ಡ್ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಓರ್ವ ಜನಪರ ಕಾಳಜಿಯ ನಿಷ್ಕಾಮ ಕರ್ಮಯೋಗಿ, ಬಂಟ ಸಮಾಜದ ಹೆಮ್ಮೆಯ ನಾಯಕ, ಅತ್ಯಂತ ಜನಾನುರಾಗಿ ಸಂಘಟಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಪ್ರಕಾಶ್ ಶೆಟ್ಟಿ ಅವರು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಸರ್ವಾಂಗೀಣ ಅಭಿವೃದ್ಧಿಕರ್ತರಾಗಿ ಸಮುದಾಯದ ಸಮಾಜದ ಪ್ರೀತಿ ಅಭಿಮಾನಕ್ಕೆ ಪಾತ್ರರಾಗಲಿ, ಕುಂದೇಶ್ವರ, ಬ್ರಹ್ಮಲಿಂಗೇಶ್ವರ, ಮಾತೆ ಭ್ರಾಮರಿ ಅನುಗ್ರಹಿಸಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಲೇಖಕರು : ಅರುಣ್ ಶೆಟ್ಟಿ ಎರ್ಮಾಳ್














































































































