ಅಮರಣ್ಣ ಬಂಟರ ಸಂಘದ ಚುನಾವಣೆಯ ಸ್ಪರ್ಧೆಯಲ್ಲಿದ್ದಾರೆ. ಮೃದು ಮಾತು ಮತ್ತು ಮಿತ ಭಾಷಿ. ಎಲ್ಲಿಯೂ ಒಳ ರಾಜಕೀಯಕ್ಕೆ ಸಿಲುಕದೆ, ವಿವಾದಗಳಿಂದ ದೂರವೇ ಇರುವ ಯಾರೊಂದಿಗೂ ವಿವಾದವಿಲ್ಲದ ಸಾದಾ ಸೀದ ವ್ಯಕ್ತಿತ್ವದ ಮಂದಾರ್ತಿ ಅಮರಣ್ಣ ಮತ್ತು ನನ್ನದು ಅಂದಾಜು ಒಂದೂವರೆ ದಶಕದ ಸ್ನೇಹ. ಅವರಿಂದ ಯಾವ ಯಾವುದೋ ನೊಂದವರಿಗೆ, ಆಶಕ್ತರಿಗೆ ನೆರವು ಕೊಡಿಸಿದ್ದೇನೆ. ನಮ್ಮ ಜನಸೇವ ಟ್ರಸ್ಟ್ ಮಾಡುವ ಜನಪರ ಕಾರ್ಯದ ಹಿಂದೆ ಅವರ ನೆರವಿನ ಪೋಷಕ ದ್ರವ್ಯ ಕೆಲಸ ಮಾಡಿದೆ. ಅವರ ಸಾಮಾಜಿಕ ಸತ್ಕಾರ್ಯದ ಕುರಿತು ಹೇಳುವ ಅವಕಾಶ ನನಗೂ ಬರಲಿಲ್ಲ, ಅಮರಣ್ಣನೂ ಅದನ್ನ ಎಲ್ಲಿಯೂ ಹೇಳಿಕೊಂಡವರಲ್ಲ. ಚುನಾವಣೆಯ ಹೊಸ್ತಿಲಲ್ಲಿ ಅಮರಣ್ಣ ನಿಂತಿರುವ ಈ ಹೊತ್ತಿನಲ್ಲೇ ಅವರ ಕುರಿತು ನಾಲ್ಕು ಸಾಲು ಬರೆಯಲು ಇದೇ ಸಕಾಲ ಎಂದು ಭಾವಿಸುತ್ತೇನೆ. ಅಮರಣ್ಣನಂತಹ ವ್ಯಕ್ತಿತ್ವ ಬಂಟರ ಸಂಘದ ಕಟ್ಟೋಣಕ್ಕೆ ಅತ್ಯಂತ ಅವಶ್ಯ. ಒಂದು ಸಮುದಾಯಕ್ಕೆ ದೊಡ್ಡ ಕಟ್ಟಡಗಳಿದ್ದರೆ ಸಾಕಾಗುವುದಿಲ್ಲ. ದೊಡ್ಡ ಹುದ್ದೆಗಳಿದ್ದರೆ ಸಾಕಾಗುವುದಿಲ್ಲ. ದೊಡ್ಡ ದೊಡ್ಡ ಭಾಷಣಗಳೂ ಸಾಕಾಗುವುದಿಲ್ಲ. ಆ ಸಮಾಜವನ್ನು ನಿಲ್ಲಿಸುವುದು ಕೆಲವು ವ್ಯಕ್ತಿತ್ವಗಳು. ಅವರ ಹೆಸರು ಕೇಳಿದಾಗ ಮನಸ್ಸಿನಲ್ಲಿ ವಿಶ್ವಾಸ ಮೂಡಬೇಕು. ಅವರ ಮುಖ ಕಂಡಾಗ ಆತ್ಮೀಯತೆ ಕಾಣಬೇಕು. ಅವರು ಮಾತಾಡಿದರೆ ಅದು ಅಧಿಕಾರದ ಧ್ವನಿಯಾಗಿರಬಾರದು, ಅಕ್ಕರೆಯ ಧ್ವನಿಯಾಗಿರಬೇಕು. ಅಮರನಾಥ ಶೆಟ್ಟಿ ಹೆಗ್ಗುಂಜೆಯವರದ್ದು ಅಂತಹ ವ್ಯಕ್ತಿತ್ವ. ಕೆಲವರನ್ನು ಅವರ ಸಂಪತ್ತಿನಿಂದ ಗುರುತಿಸುತ್ತಾರೆ. ಕೆಲವರನ್ನು ಅವರ ಹುದ್ದೆಯಿಂದ ಗುರುತಿಸುತ್ತಾರೆ. ಆದರೆ ಕೆಲವರನ್ನು ಅವರ ಹೃದಯದಿಂದ ಗುರುತಿಸುತ್ತಾರೆ. ಅಮರಣ್ಣ ಆ ಮೂರನೇ ಸಾಲಿನಲ್ಲಿ ನಿಲ್ಲುವ ವ್ಯಕ್ತಿ.

ಅಮರಣ್ಣನ ಕುಟುಂಬ ಮತ್ತು ಮನೆತನದ ಇತಿಹಾಸ ದೊಡ್ಡದು. ಹೆಗ್ಗುಂಜೆ ಚಾವಡಿ ಮನೆ ಎಂದರೆ ಬಂಟ ಸಮುದಾಯದ ಕರಾವಳಿ ಸೀಮೆಯ ಗುತ್ತಿನ ಮನೆ. ಅದು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯವನ್ನು ಕಟ್ಟಿಸಿದ, ಊರ್ಜಿತಗೊಳಿಸಿದ ಧರ್ಮದರ್ಶಿ ಕುಟುಂಬ. ಒಂದು ಕಾಲದಲ್ಲಿ ಸಾವಿರಾರು ಮುಡಿ ಹುಟ್ಟುವಳಿ ಆಸ್ತಿಯ ವೈಭವ ಕಂಡ ಮನೆ. ಆದರೆ ನಿಜವಾದ ಶ್ರೀಮಂತಿಕೆ ಆಸ್ತಿಯಲ್ಲಿ ಇರಲಿಲ್ಲ; ಮನುಷ್ಯರನ್ನು ಮನುಷ್ಯರಂತೆ ಕಾಣುವ ಸಂಸ್ಕಾರದಲ್ಲಿತ್ತು.ಅದೇ ಸಂಸ್ಕಾರ ಅಮರಣ್ಣನ ಬದುಕಿನಲ್ಲೂ ಕಾಣುತ್ತೇವೆ. ಅದಕ್ಕೇ ಅವರನ್ನು ಭೇಟಿಯಾದವರು ‘ಅಮರನಾಥ ಶೆಟ್ಟಿ’ ಎಂದಲ್ಲ ‘ಅಮರಣ್ಣ’ ಎಂದೇ ಆಪ್ತವಾಗಿ ಕರೆಯುತ್ತಾರೆ. ಮನುಷ್ಯ ದೊಡ್ಡವನಾಗುವುದು ತನ್ನ ಧನ ಸಂಪತ್ತಿನಿಂದ ಮಾತ್ರವಲ್ಲ ಗುಣ ಸಂಪತ್ತಿನ ಮೂಲಕ ಎನ್ನುವುದಕ್ಕೆ ಅಮರಣ್ಣ ಒಂದು ಉದಾಹರಣೆ. ಈ ಕಾಲದಲ್ಲಿ ಸಮಾಜ ಸೇವೆಯೂ ಕೆಲವೊಮ್ಮೆ ಪ್ರಚಾರದ ವೇದಿಕೆಯಾಗಿಬಿಟ್ಟಿದೆ. ಒಂದು ನೆರವು ನೀಡಿದರೆ ಹತ್ತು ಫೋಟೋಗಳು, ಒಂದು ದಾನ ಮಾಡಿದರೆ ನೂರು ಪೋಸ್ಟ್ಗಳು. ಆದರೆ ಅಮರಣ್ಣರ ನಡೆ ಬೇರೆ. ಅವರು ಮಾಡಿದ ಸಹಾಯದ ಲೆಕ್ಕವನ್ನು ಅವರ ಬಳಿ ಕೇಳಿದರೂ ಸಿಗುವುದಿಲ್ಲ. ಏಕೆಂದರೆ ಅದನ್ನು ಅವರು ಬರೆದಿಟ್ಟಿಲ್ಲ. ಆದರೆ ಆ ನೆರವಿನಿಂದ ಬದುಕು ಕಂಡವರು ನೂರಾರು ಜನ.


ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತೊಯ್ಯುವ ರಜತ ರಥದ ಮೂವರು ದಾನಿಗಳಲ್ಲಿ ಒಬ್ಬರಾಗಿರುವುದು ಕೇವಲ ದಾನದ ವಿಷಯವಲ್ಲ; ಅದು ಭಕ್ತಿ ಮತ್ತು ಜವಾಬ್ದಾರಿಯ ಸಂಕೇತ. ಅಮರಣ್ಣನದ್ದು ಬಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದ ನಿರ್ಮಾಣದ ಹಿಂದೆ ನಿಂತ ಕುಟುಂಬ ಪರಂಪರೆ. ಉದ್ಯಮ ಕ್ಷೇತ್ರದಲ್ಲೂ ಅವರು ಯಶಸ್ವಿ. ಆದರೆ ಆ ಯಶಸ್ಸು ಅವರನ್ನು ಅಹಂಕಾರಿಯನ್ನಾಗಿಸಲಿಲ್ಲ. ಬದಲಿಗೆ ಹೆಚ್ಚು ವಿನಯಶೀಲರನ್ನಾಗಿಸಿತು. ಒಳ್ಳೆಯ ಉದ್ಯಮಿ ಎಂದರೆ ಕೇವಲ ಲಾಭ ಗಳಿಸುವವನು ಅಲ್ಲ; ವ್ಯವಸ್ಥೆ ಕಟ್ಟುವವನು. ಅಮರಣ್ಣರ ಬದುಕು ಅದಕ್ಕೆ ಸಾಕ್ಷಿ. ಬಂಟರ ಸಂಘದ ಖಜಾಂಚಿಯಾಗಿ ಅವರು ಮಾಡಿದ ಕೆಲಸ ಅದರ ಅತ್ಯುತ್ತಮ ಉದಾಹರಣೆ.

ಸಂಸ್ಥೆಯನ್ನು ಪ್ರೀತಿಸುವವರು ಅದರ ಗೋಡೆಗಳನ್ನು ಮಾತ್ರ ನೋಡಲ್ಲ; ಅದರ ವ್ಯವಸ್ಥೆಯನ್ನು ನೋಡುತ್ತಾರೆ. ಭವಿಷ್ಯವನ್ನು ಯೋಚಿಸುತ್ತಾರೆ. ಅದಕ್ಕಾಗಿಯೇ ಅವರು ಬಂಟರ ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ನಗದುರಹಿತ (Cashless) ಹಣಕಾಸು ವ್ಯವಸ್ಥೆಯನ್ನು ಜಾರಿಗೆ ತಂದರು. ಇದು ಕೇವಲ ತಂತ್ರಜ್ಞಾನದ ಬದಲಾವಣೆ ಅಲ್ಲ. ಇದು ವಿಶ್ವಾಸದ ಹೊಸ ಭಾಷೆ. ಪ್ರತಿ ರೂಪಾಯಿಗೂ ಲೆಕ್ಕ ಇರಬೇಕು, ಪ್ರತಿ ವ್ಯವಹಾರಕ್ಕೂ ಪಾರದರ್ಶಕತೆ ಇರಬೇಕು, ಸಂಸ್ಥೆಯ ಹಣ ಸಂಸ್ಥೆಯ ಅಭಿವೃದ್ಧಿಗೇ ಬಳಸಬೇಕು ಎಂಬ ಆಡಳಿತದ ಮನೋಭಾವ ಅದರ ಹಿಂದೆ ಕೆಲಸ ಮಾಡಿತು. ಸಂಘ ಮತ್ತು ಶಾಲೆಯ ಲೆಕ್ಕಪತ್ರ ವಿಭಾಗದಲ್ಲಿ ತಂದ ಬದಲಾವಣೆಗಳು ಇಂದಿಗೂ ಉತ್ತಮ ಆಡಳಿತದ ಮಾದರಿಯಾಗಿ ನೆನಪಾಗುತ್ತವೆ.
ಇಂದು ಅವರು ಗೌರವ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ. ಇದು ಕೇವಲ ಒಂದು ಚುನಾವಣೆ ಅಲ್ಲ. ಸದಸ್ಯರ ಮುಂದೆ ಇರುವ ಒಂದು ಆಯ್ಕೆ. ನಾವು ವ್ಯಕ್ತಿಯನ್ನು ಆರಿಸಬೇಕೇ, ಅಥವಾ ವ್ಯಕ್ತಿತ್ವವನ್ನೇ? ನಾವು ಮಾತುಗಳನ್ನು ನಂಬಬೇಕೇ, ಅಥವಾ ಕೆಲಸವನ್ನೇ ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ ಅಮರಣ್ಣರ ಹೆಸರು ಸಹಜವಾಗಿಯೇ ಮುಂದೆ ಬರುತ್ತದೆ. ಡಾ| ದೀಪಕ್ ಶೆಟ್ಟರ ನಾಯಕತ್ವಕ್ಕೆ ಅನುಭವ, ಪಾರದರ್ಶಕತೆ ಮತ್ತು ಸಂಘಟನಾ ಸಾಮರ್ಥ್ಯದ ಬಲ ಸೇರುವುದಾದರೆ ಅದು ಅಮರನಾಥ ಶೆಟ್ಟರಂತಹ ಕಾರ್ಯದರ್ಶಿಯಿಂದಲೇ ಸಾಧ್ಯ. ಕೆಲವರು ಗೆಲ್ಲುತ್ತಾರೆ. ಕೆಲವರು ಗೆದ್ದು ಇತಿಹಾಸ ಬರೆಯುತ್ತಾರೆ. ಅಮರಣ್ಣನ ಗೆಲುವು ಕೇವಲ ಒಬ್ಬ ಅಭ್ಯರ್ಥಿಯ ವಿಜಯವಾಗಬಾರದು; ಪ್ರಾಮಾಣಿಕತೆ, ಸೇವೆ, ಸರಳತೆ ಮತ್ತು ಉತ್ತಮ ಆಡಳಿತದ ಮೇಲೆ ಸದಸ್ಯರು ಇಟ್ಟಿರುವ ನಂಬಿಕೆಯ ವಿಜಯವಾಗಬೇಕು. ಅಂತಹ ವ್ಯಕ್ತಿತ್ವಗಳಿಗೆ ಮತ ಕೊಡುವುದು ರಾಜಕೀಯವಲ್ಲ. ಅದು ಸಮಾಜದ ಭವಿಷ್ಯಕ್ಕೆ ಸಮುದಾಯ ಹಾಕುವ ಸಹಿ. ಹಾಗಾಗಿ ಬಂಟ ಸಮಾಜ ಬಾಂಧವರು ಸರ್ವ ರೀತಿಯಲ್ಲಿಯೂ ಸಂಪನ್ನರೂ ಸಮರ್ಥರೂ ಆಗಿರುವ ಡಾ| ದೀಪಕ್ ಶೆಟ್ಟರ ಸಮಸ್ತ ತಂಡವನ್ನೇ ಐತಿಹಾಸಿಕ ಮತಗಳ ಅಂತರಲ್ಲಿ ಗೆಲ್ಲಿಸಲಿ ಎನ್ನುವುದು ನನ್ನ ಹಾರೈಕೆ.
ಬರಹ : ವಸಂತ ಗಿಳಿಯಾರ್




















































































































