ಒಂದು ಸಂಘ ಬೆಳೆಯಬೇಕಾದರೆ ಅದರ ಆಡಳಿತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ದೂರದೃಷ್ಟಿ ಇರಬೇಕು. ಅದರಲ್ಲೂ ಖಜಾಂಜಿ ಎಂಬ ಜವಾಬ್ದಾರಿಯುತ ಸ್ಥಾನಕ್ಕೆ ಆಯ್ಕೆಯಾಗುವ ವ್ಯಕ್ತಿ ಹಣಕಾಸಿನ ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವುದರ ಜೊತೆಗೆ ಸಮಾಜದ ವಿಶ್ವಾಸವನ್ನು ಗಳಿಸಿದ ವ್ಯಕ್ತಿಯಾಗಿರಬೇಕು. ಈ ಎಲ್ಲಾ ಗುಣಗಳನ್ನು ಒಟ್ಟುಗೂಡಿಸಿಕೊಂಡಿರುವ ಹೆಸರೇ ರಮಿತ್ ಬಿ. ಶೆಟ್ಟಿ. ರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಓಟಗಾರರಾಗಿರುವ ರಮಿತ್ ಶೆಟ್ಟಿಯವರು ಕ್ರೀಡೆಯಲ್ಲಿ ಮಾತ್ರವಲ್ಲ, ಜೀವನದಲ್ಲೂ ಶಿಸ್ತು, ಪರಿಶ್ರಮ ಮತ್ತು ಸತ್ಯನಿಷ್ಠೆಯ ಪ್ರತಿರೂಪ. ಸರಳತೆ, ಸಚ್ಚಾರಿತ್ರ್ಯ, ಪ್ರಾಮಾಣಿಕತೆ ಮತ್ತು ವಿನಯಶೀಲತೆ ಅವರ ವ್ಯಕ್ತಿತ್ವದ ಗುರುತುಗಳಾಗಿವೆ. ಯಾವುದೇ ಹಮ್ಮು ಬಿಮ್ಮಿಲ್ಲದೆ ಎಲ್ಲರೊಂದಿಗೆ ಬೆರೆಯುವ ಅವರ ಗುಣವೇ ಅವರನ್ನು ಸಮಾಜದಲ್ಲಿ ವಿಶೇಷ ವ್ಯಕ್ತಿಯನ್ನಾಗಿ ಗುರುತಿಸಿದೆ.
ಸಿವಿಲ್ ಇಂಜಿನಿಯರಿಂಗ್ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಅವರು, ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (COO) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಣಕಾಸು, ಯೋಜನೆ, ಆಡಳಿತ ಮತ್ತು ಜವಾಬ್ದಾರಿಯುತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿ ಸಾಬೀತುಪಡಿಸಿದ್ದಾರೆ. ಸಮಾಜ ಸೇವೆಯಲ್ಲಿಯೂ ಅವರ ಪಯಣ ದೀರ್ಘವಾಗಿದೆ. 1998ರಿಂದ ಬಂಟರ ಸಂಘ ಬೆಂಗಳೂರು ಯುವ ವಿಭಾಗದ ಸಕ್ರಿಯ ಸದಸ್ಯರಾಗಿರುವ ಅವರು, ಯುವ ವಿಭಾಗದ ಉಪಾಧ್ಯಕ್ಷರಾಗಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ, ವಿದ್ಯಾರ್ಥಿವೇತನ ಮತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಅನೇಕ ಮಹತ್ವದ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.


ಸಂಘದ ಅಭಿವೃದ್ಧಿಗೆ ದಾನಿಗಳನ್ನು ಒಗ್ಗೂಡಿಸಿ ದತ್ತಿ ನಿಧಿ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು, RNS–2 ಕಟ್ಟಡ ನಿರ್ಮಾಣ ಯೋಜನೆಯ ಸಂಯೋಜಕರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವುದು ಮತ್ತು ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಅವರ ಬದ್ಧತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅಧಿಕಾರಿಗಳು, ದಾನಿಗಳು ಮತ್ತು ಸಮಾಜದ ವಿವಿಧ ವರ್ಗಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿರುವ ರಮಿತ್ ಶೆಟ್ಟಿಯವರು ಪಾರದರ್ಶಕ ಆಡಳಿತ, ಪ್ರಾಮಾಣಿಕತೆ ಮತ್ತು ಜನಸ್ನೇಹಿ ನಾಯಕತ್ವದ ಸಂಕೇತ ಎಂದು ಹೇಳಬಹುದು.

ಈ ಬಾರಿಯ ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಖಜಾಂಜಿ ಸ್ಥಾನಕ್ಕೆ ಡಾ| ದೀಪಕ್ ಶೆಟ್ಟರ ತಂಡದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಮಿತ್ ಶೆಟ್ಟಿಯವರು ನಿಜಕ್ಕೂ ಆ ಸ್ಥಾನಕ್ಕೆ ಅತ್ಯಂತ ಅರ್ಹರು. ಅವರ ಗೆಲುವು ಕೇವಲ ಒಬ್ಬ ಅಭ್ಯರ್ಥಿಯ ಗೆಲುವಲ್ಲ; ಅದು ಪ್ರಾಮಾಣಿಕತೆ, ಪಾರದರ್ಶಕತೆ, ಉತ್ತಮ ಆಡಳಿತ ಮತ್ತು ಸಮಾಜಮುಖಿ ಮೌಲ್ಯಗಳ ಗೆಲುವಾಗಲಿದೆ. ಅದೇ ರೀತಿ ಡಾ| ದೀಪಕ್ ಶೆಟ್ಟರ ತಂಡದಲ್ಲಿ ಸ್ಪರ್ಧಿಸುತ್ತಿರುವ ಹೆಗ್ಗುಂಜೆ ಅಮರನಾಥ್ ಶೆಟ್ಟಿ, ಮಧುಕರ್ ಶೆಟ್ಟಿ, ಸೌಮ್ಯಪ್ರಿಯಾ ಹೆಗ್ಡೆ ಹಾಗೂ ಸುರೇಖಾ ಶೆಟ್ಟಿ ಅವರಂತಹ ಸಮರ್ಥ, ಅನುಭವಿಗಳೂ ಸಮಾಜಮುಖಿ ಚಿಂತನೆ ಹೊಂದಿದ ಅಭ್ಯರ್ಥಿಗಳೂ ಆಯ್ಕೆಯಾಗುವುದು ಬೆಂಗಳೂರು ಬಂಟರ ಸಂಘದ ಭವಿಷ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆಯಾಗಲಿದೆ. ಒಳ್ಳೆಯತನ ಗೆಲ್ಲಬೇಕಾದರೆ ಒಳ್ಳೆಯ ವ್ಯಕ್ತಿತ್ವ ಗೆಲ್ಲಬೇಕು. ಪ್ರಾಮಾಣಿಕತೆ ಗೆಲ್ಲಬೇಕಾದರೆ ರಮಿತ್ ಬಿ. ಶೆಟ್ಟಿಯವರು ಗೆಲ್ಲಬೇಕು. ಸಮರ್ಥ ಆಡಳಿತ ಬೇಕಾದರೆ ಡಾ| ದೀಪಕ್ ಶೆಟ್ಟರ ತಂಡವೇ ಗೆಲ್ಲಬೇಕು.
ಬರಹ -ವಸಂತ್ ಗಿಳಿಯಾರ್




















































































































