ದೇಶದ ಅತಿದೊಡ್ಡ ಉದ್ಯೋಗ ಮೇಳವೆಂದು ಗುರುತಿಸಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಪ್ರಗತಿ -2026’ರ 16ನೇ ಆವೃತ್ತಿಗೆ ಶುಕ್ರವಾರ ವಿದ್ಯಾಗಿರಿಯ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಚಾಲನೆ ದೊರೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಯುವ ಉದ್ಯೋಗಾಕಾಂಕ್ಷಿಗಳು ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು, ವೃತ್ತಿಪರ ಸಂಪರ್ಕ ಜಾಲವನ್ನು ಬೆಳೆಸಿಕೊಳ್ಳಬೇಕು ಹಾಗೂ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಬೇಕು ಎಂದು ಕರೆ ನೀಡಿದರು. ಶಿಕ್ಷಣವೊಂದೇ ಇಂದಿನ ವೇಗವಾಗಿ ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಕಾಗುವುದಿಲ್ಲ. ಶಿಕ್ಷಣದ ಜೊತೆಗೆ ಕೌಶಲ್ಯವೂ ಅತ್ಯಗತ್ಯವಾಗಿದ್ದು, ಉದ್ಯೋಗ ಕ್ಷೇತ್ರದಲ್ಲಿ ಪ್ರಸ್ತುತವಾಗಿರಲು ಕೌಶಲ್ಯಗಳನ್ನು ನಿರಂತರವಾಗಿ ಉನ್ನತೀಕರಿಸಿಕೊಳ್ಳಬೇಕು. ‘ಶಿಕ್ಷಣ ಪಾಸ್ಪೋರ್ಟ್ ನಂತಿದ್ದರೆ ಕೌಶಲ್ಯ ವೀಸಾದಂತೆ’ ಎಂದು ರೂಪಕದ ಮೂಲಕ ವಿವರಿಸಿದ ಅವರು, ಯುವ ಜನರು ಪ್ರಾಯೋಗಿಕ ಹಾಗೂ ಉದ್ಯಮ ಕ್ಷೇತ್ರಕ್ಕೆ ಅಗತ್ಯವಾದ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳನ್ನು ಕೇವಲ ಮನರಂಜನೆಗಾಗಿ ಬಳಸದೆ, ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು, ಸಾಮರ್ಥ್ಯಗಳನ್ನು ಪರಿಚಯಿಸಿಕೊಳ್ಳಲು ಹಾಗೂ ವೃತ್ತಿಪರ ಸಂಪರ್ಕಗಳನ್ನು ಬೆಳೆಸಿಕೊಳ್ಳಲು ಪರಿಣಾಮಕಾರಿಯಾಗಿ ಬಳಸಬೇಕು ಎಂದರು. ‘ನೆಟ್ವರ್ಕ್ ಯಾವಾಗಲೂ ನೆಟ್ವರ್ತ್ ಆಗಿರುತ್ತದೆ’ ಎಂದು ಹೇಳಿದ ಅವರು, ವೃತ್ತಿಜೀವನದ ಬೆಳವಣಿಗೆಯಲ್ಲಿ ಅರ್ಥಪೂರ್ಣ ವೃತ್ತಿಪರ ಸಂಬಂಧಗಳ ಮಹತ್ವವನ್ನು ವಿವರಿಸಿದರು. ಯುವ ಜನರು ಉದ್ಯೋಗಕ್ಕೆ ಸೇರಿದ ಬಳಿಕ ಸಂಸ್ಥೆಯು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಸಂಸ್ಥೆಗೆ ಸೇರಿದ ನಂತರ ತಮ್ಮ ಕಾರ್ಯಕ್ಷಮತೆ, ನಡವಳಿಕೆ ಮತ್ತು ಬದ್ಧತೆಯ ಮೂಲಕ ಸಂಸ್ಥೆಯ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕೃತಕ ಬುದ್ಧಿಮತ್ತೆ ಉದ್ಯೋಗ ಕ್ಷೇತ್ರದ ಸ್ವರೂಪವನ್ನು ವೇಗವಾಗಿ ಬದಲಾಯಿಸುತ್ತಿದ್ದು, ಅದನ್ನು ಉದ್ಯೋಗ ಕಸಿದುಕೊಳ್ಳುವ ತಂತ್ರಜ್ಞಾನವೆಂದು ಪರಿಗಣಿಸುವ ಬದಲು, ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನೆರವಾಗುವ ಸಾಧನವಾಗಿ ನೋಡಬೇಕು ಎಂದರು.





ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಯುವ ಜನರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಯತ್ನವನ್ನು ಶ್ಲಾಘಿಸಿದರು. ಲೋಕಸಭೆಯ ಅಧಿವೇಶನ ನಡೆಯುತ್ತಿದ್ದರೂ, ತಮ್ಮ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಉದ್ಯೋಗ ಮೇಳ ಆಯೋಜಿಸಿರುವುದಕ್ಕೆ ಮಹತ್ವ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರೂಪಿಸಿರುವ ಈ ಮಾದರಿಯು ವಿಕಸಿತ ಭಾರತದ ನಿರ್ಮಾಣಕ್ಕೆ ಮಹತ್ವದ ಕೊಡುಗೆಯಾಗಿದೆ. ದೇಶವು ವಿಕಸಿತ ಭಾರತದ ಗುರಿಯನ್ನು ಸಾಧಿಸಬೇಕಾದರೆ, ಯುವ ಜನರಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಮತ್ತು ಅವಕಾಶಗಳನ್ನು ಸೃಷ್ಟಿಸುವ ಇಂತಹ ಸಂಸ್ಥೆಗಳು ಹಾಗೂ ಉಪಕ್ರಮಗಳು ಅಗತ್ಯ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂಆರ್ಜಿ ಗ್ರೂಪ್ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ| ಕೆ ಪ್ರಕಾಶ್ ಶೆಟ್ಟಿ, ಶಿಕ್ಷಣದೊಂದಿಗೆ ಪ್ರಾಯೋಗಿಕ ಜ್ಞಾನ ಮತ್ತು ಸಾಮಾನ್ಯ ಜ್ಞಾನವೂ ಅತ್ಯಂತ ಅಗತ್ಯ. ಶಿಕ್ಷಣಕ್ಕಿಂತಲೂ ಸಾಮಾನ್ಯ ಜ್ಞಾನ ಬಹಳ ಮುಖ್ಯ ಎಂದ ಅವರು, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ, ಸೂಕ್ತ ನಿರ್ಧಾರ ಕೈಗೊಳ್ಳುವ ಹಾಗೂ ಸವಾಲುಗಳಿಗೆ ಸಮರ್ಥವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಯುವಜನರು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್, ತಮ್ಮ ಕ್ಷೇತ್ರದಲ್ಲಿ ಇಷ್ಟೊಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಆಳ್ವಾಸ್ ಪ್ರಗತಿಯ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ, ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರಿಗೆ ಈ ವ್ಯವಸ್ಥೆಯು ನಿರಂತರ ಪ್ರಯೋಜನ ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಎಲ್ಲರ ಮೇಲಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಶಾಸಕ ಹರೀಶ್ ಪೂಂಜಾ, ಎಸ್ಡಿಎಮ್ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ ಹಾಗೂ ಐಟಿ ವಿಭಾಗದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪೂರಣ್ ವರ್ಮ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧಿಯಾ, ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಇದ್ದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪ್ರಾಧ್ಯಾಪಕಿ ಪ್ರಿಯಾ ಸಿಕ್ವೇರಾ ಅತಿಥಿಗಳನ್ನು ಪರಿಚಯಿಸಿದರು. ಆಳ್ವಾಸ್ ಪ್ರಗತಿಯ ಆರಂಭಿಕ ದಿನಗಳಲ್ಲಿ ಉದ್ಯೋಗ ಮೇಳಗಳ ಆಯೋಜನೆಗೆ ಅಮೂಲ್ಯ ಕೊಡುಗೆ ನೀಡಿದ ದಿವಂಗತ ಎ.ಕೆ ಮಹೇಶ್ ಶೇಖರವರ ಸ್ಮರಣಾರ್ಥ ಉದ್ಘಾಟನಾ ವೇದಿಕೆಯನ್ನು ಸಮರ್ಪಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಕರಾವಳಿಯ ಉದ್ಯಮ ಹಾಗೂ ಉದ್ಯೋಗ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ ಪ್ರಮುಖರನ್ನು ಸನ್ಮಾನಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಪರವಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ದನ, ಎಂಆರ್ಜಿ ಗ್ರೂಪ್ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ, ಭವಾನಿ ಶಿಪ್ಪಿಂಗ್ ಗ್ರೂಪ್ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಕುಸುಮೋದರ ಡಿ ಶೆಟ್ಟಿ, ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಹಾಗೂ ಎಕ್ಸ್ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪನಿಯ ಸಹ ಸಂಸ್ಥಾಪಕ ಮೊಹಮ್ಮದ್ ಅಶ್ಫಾಕ್ ಅವರನ್ನು ಸನ್ಮಾನಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಳೆದ ಒಂದು ವರ್ಷದಿಂದ ಉದ್ಯೋಗಕ್ಕಾಗಿ ಕಾಯುತ್ತಿದ್ದ ಭವ್ಯಶ್ರೀ ಅವರ ನಿರೀಕ್ಷೆಗೆ ಆಳ್ವಾಸ್ ಪ್ರಗತಿ -2026 ಹೊಸ ತಿರುವು ನೀಡಿದೆ. ದೈಹಿಕ ವಿಶೇಷಚೇತನರಾಗಿರುವ ಅವರು, ತಮ್ಮ ಸಹೋದರನ ನೆರವಿನಿಂದ ಗಾಲಿಕುರ್ಚಿಯಲ್ಲಿ ಆಗಮಿಸಿ, ಉದ್ಯೋಗ ಮೇಳದಲ್ಲಿ ಭಾಗವಹಿಸಿ ಮೈಸೂರಿನ ರೆಡ್ಡೀಸ್ ಫೌಂಡೇಷನ್ನಲ್ಲಿ ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಭವ್ಯಶ್ರೀ, ಒಂದು ವರ್ಷದ ಹಿಂದೆ ಎಂ.ಕಾಂ ಪದವಿ ಪಡೆದಿದ್ದರು. ಪದವಿ ಪಡೆದ ಬಳಿಕ ಉದ್ಯೋಗಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ, ಕಳೆದ ಒಂದು ವರ್ಷದಿಂದ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದರು. ಉದ್ಯೋಗದ ನಿರೀಕ್ಷೆಯೊಂದಿಗೆ ಆಳ್ವಾಸ್ ಪ್ರಗತಿಗೆ ಆಗಮಿಸಿದ ಭವ್ಯಶ್ರೀ ಅವರಿಗೆ, ದೈಹಿಕ ಸವಾಲು ಯಾವುದೂ ತಮ್ಮ ಕನಸಿಗೆ ಅಡ್ಡಿಯಾಗಲಿಲ್ಲ. ತಮ್ಮ ಸಹೋದರನ ನೆರವಿನಿಂದ ಗಾಲಿಕುರ್ಚಿಯಲ್ಲಿ ಮೇಳಕ್ಕೆ ಆಗಮಿಸಿ, ಸಂದರ್ಶನ ಎದುರಿಸಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅಂತಿಮವಾಗಿ ಮೈಸೂರಿನ ರೆಡ್ಡೀಸ್ ಫೌಂಡೇಷನ್ನಲ್ಲಿ ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾಗುವ ಮೂಲಕ ತಮ್ಮ ಬಹುದಿನಗಳ ಉದ್ಯೋಗದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಉದ್ಯೋಗ ಸಿಕ್ಕಿರುವುದು ತುಂಬಾ ಸಂತೋಷ ತಂದಿದೆ. ಕಳೆದ ಒಂದು ವರ್ಷದಿಂದ ಉದ್ಯೋಗಕ್ಕಾಗಿ ಕಾಯುತ್ತಿದ್ದೆ. ಆಳ್ವಾಸ್ ಪ್ರಗತಿಗೆ ಬಂದು ಸಂದರ್ಶನ ಎದುರಿಸಿದ ಬಳಿಕ ನನಗೆ ಈ ಅವಕಾಶ ದೊರೆತಿದೆ. ಮೈಸೂರಿಗೆ ತೆರಳಿ ಕೆಲಸ ಮಾಡಲು ಸಿದ್ಧಳಾಗಿದ್ದೇನೆ ಎಂದು ಭವ್ಯಶ್ರೀ ಸಂತಸ ವ್ಯಕ್ತಪಡಿಸಿದರು.






















































































































