ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ 2026- 27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಜುಲೈ 8ರಂದು ಸಂಘದ ಕಚೇರಿಯಲ್ಲಿ ನಡೆಯಿತು. ಚುನಾವಣೆಯಲ್ಲಿ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಸದಸ್ಯರು ನೂತನ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಸಂಘದ ಗೌರವ ಮಾರ್ಗದರ್ಶಕರಾಗಿ ಶಶಿಧರ ಶೆಟ್ಟಿ ನವಶಕ್ತಿ ಆಯ್ಕೆಯಾದರೆ, ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ನೊಚ್ಚ, ಉಪಾಧ್ಯಕ್ಷರಾಗಿ ರಾಜು ಶೆಟ್ಟಿ ಹಾಗೂ ಉಮೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ, ಕೋಶಾಧಿಕಾರಿಯಾಗಿ ವಸಂತ್ ಶೆಟ್ಟಿ ಶ್ರದ್ಧಾ ಹಾಗೂ ಜೊತೆ ಕಾರ್ಯದರ್ಶಿಯಾಗಿ ರವಿ ಶೆಟ್ಟಿ ಸುಕ್ಕೇರಿ ಅವಿರೋಧವಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಅವರು ಸತತ ಎರಡನೇ ಬಾರಿಗೆ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ತಮ್ಮ ಹಿಂದಿನ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾದ ಹಲವಾರು ಸಂಘಟನಾ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವ ಮೂಲಕ ಸದಸ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.




ಅದೇ ರೀತಿ ವಸಂತ್ ಶೆಟ್ಟಿ ಶ್ರದ್ಧಾ ಅವರು ಕೂಡ ಸತತ ಎರಡನೇ ಬಾರಿಗೆ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದು, ಸಂಘದ ಹಣಕಾಸು ನಿರ್ವಹಣೆಯನ್ನು ಪಾರದರ್ಶಕ ಹಾಗೂ ಶಿಸ್ತುಬದ್ಧವಾಗಿ ನಿರ್ವಹಿಸಿದ ಅನುಭವದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸದಸ್ಯರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಉಪಾಧ್ಯಕ್ಷರಾಗಿ ಉಮೇಶ್ ಶೆಟ್ಟಿಯೂ ಎರಡನೇ ಬಾರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಸಂಘವು ಇನ್ನಷ್ಟು ಸಮಾಜಮುಖಿ ಹಾಗೂ ಸಂಘಟನಾ ಚಟುವಟಿಕೆಗಳನ್ನು ಕೈಗೊಂಡು ಬಂಟ ಸಮಾಜದ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಲಿದೆ ಎಂಬ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದರು.




















































































































