ಪರಹಿತವ ನೆನೆಯದಿರೆ ತೊರೆ ಹರಿದು ಸಾಗುವುದೆ?
ಕಂಪ ಮರತರೆ ತಾನು ಗಂಧ ತೇಯುವುದೆ?
ಕನಲಿದರೆ ಮುನಿಸಿಂದ ಚೆಲುವೆಲ್ಲಿ ಹೂಗಿಡದಿ?
ಬಾಳ ಚಂದನ ತ್ಯಾಗ-ಮುದ್ದುರಾಮ
ಜೀವನ ಅಂದರೆ ಕೇವಲ ತನಗೆ ಹಾಗು ತನ್ನವರಿಗಾಗಿ ಅಂದುಕೊಂಡರೆ ಅದು ತಪ್ಪು. ದೇಹ ದೇವರಲ್ಲಿಗೆ ಹೋಗುವ ಮೊದಲು ದೇಶಕ್ಕಾಗಿ ಜೀವಿಸಿ, ಸಮಾಜಕ್ಕೆ ಗಂಧದ ಕೊರಡಾಗಿ ತೇದುತ್ತಾ, ಸಮಾಜಮುಖಿಯಾಗಿರುವವರ ಸಂಖ್ಯೆ ಬಹು ವಿರಳವಾಗಿರುವ ಪ್ರಸ್ತುತ ಸಮಯದಲ್ಲಿ ಸಮಾಜ ಸೇವೆ, ಶೈಕ್ಷಣಿಕ ಸೇವೆ, ಕಲಾಸೇವೆಯೊಂದಿಗೆ ಬದುಕುವ ಅಪರೂಪದಲ್ಲಿಯೇ ಅಪರೂಪದ ಸಾಮಾಜದ ಹಿತೈಷಿ, ಸಮಾಜ ಸೇವಕ ಹಾಗು ಅಪ್ಪಟ ದೇಶಾಭಿಮಾನಿ ಅಂದರೆ ಅದು ಪೊವಾಯಿ ಪರಿಸರದ ತುಳು-ಕನ್ನಡಿಗರ ಹಾಗು ಇತರ ಭಾಷಿಕರ ಮನದಲ್ಲಿ ಮನೆ ಮಾಡಿದವರು ದ್ಯಾವಪ್ಪ ಶೆಟ್ಟಿ ಯಾನೆ ಡಿ ಕೆ ಶೆಟ್ಟಿಯವರು.
ಹೌದು… ಅವರದ್ದು ಮಗುವಿನಂತ ಮನಸ್ಸು, ಸಂಸ್ಕ್ರತಿ-ಸಂಸ್ಕಾರದ ಖನಿಜ ಅವರಲ್ಲಿ ಧಾರಾಳ.
ಪರರ ನೋವಿಗೆ ಶೀಘ್ರವಾಗಿ ಸ್ಪಂಧಿಸುವ ಗುಣ ಅವರಿಗೆ ಪರಮಾತ್ಮನ ಕೊಡುಗೆ. ದುಡಿದು ಗಳಿಸುವುದು ತನ್ನ ಕಾಯಕವಾದರೆ, ದುಡಿದುದರಲ್ಲಿ ಒಂದಷ್ಟು ಪಾಲು ಸಮಾಜಕ್ಕೆ ಬಚ್ಚಿಡಬೇಕು ಎಂಬ ಪ್ರಜ್ಞೆ ಅವರಲ್ಲಿ ಬಹಳ. ಸುಮ್ಮನೆ ಅವಮಾನ, ಅಪಶಬ್ದ, ಅಪಸ್ವರಗಳಿಗೆ ಕಿವಿಯಾದವರಲ್ಲ ಎಂದಲ್ಲ. ಆದರೆ ನನ್ನ ಅಂತಿಮ ತೀರ್ಮಾನ ನಾನು ಮಾತ್ರ ಯಾರನ್ನೂ ಯಾವತ್ತಿಗೂ ನೋಯಿಸಲಾರೆ, ಯಾರೊಂದಿಗೂ ವೈರತ್ವ ಕಟ್ಟಿಕೊಳ್ಳಲಾರೆ ಎಂಬ ಮೃದು ವ್ಯಕ್ತಿತ್ವ ಅವರದ್ದು. ಸಂತನಿಗಿರುವ ಸಜ್ಜನಿಕೆ ಡಿ ಕೆ ಶೆಟ್ಟಿಯವರದ್ದು.
ಸೂರಿಂಜೆಯ ಕಲಡಕ್ಕೋಳಿ ಶ್ರೀಮತಿ ನಾಗು ಶೆಟ್ಟಿ ಹಾಗು ಮೊಗಪಾಡಿ ಪಡ್ಡಲದ ಕಾಂತಣ್ಣ ಶೆಟ್ಟಿ ದಂಪತಿಗಳ ಎಂಟು ಜನ ಮಕ್ಕಳ ತುಂಬು ಸಂಸಾರದಲ್ಲಿ ಏಳನೆಯ ಪುತ್ರನಾಗಿ ದ್ಯಾವಪ್ಪ ಶೆಟ್ಟಿಯವರ ಜನನವಾಯಿತು. ಉಣ್ಣಲು, ಉಡಲು ಯಾವತ್ತೂ ಕಡಿಮೆ ಇಲ್ಲದ ಮನೆ ಅದಾಗಿತ್ತು. ಆಳು-ಕಾಳು ಮನೆಯಲ್ಲಿದ್ದರು. ಆ ಮನೆಯಲ್ಲಿ ಅಪಾರವಾದ ಶ್ರೀಮಂತಿಕೆ ಇರದಿದ್ದರೂ ಬಡತನಕ್ಕೆ ಅಲ್ಲಿ ಜಾಗವಿರಲಿಲ್ಲ. ಹುಡುಗ ದ್ಯಾವಪ್ಪ
ಸುರತ್ಕಲ್ ಮಧ್ಯದಲ್ಲಿರುವ ವಿದ್ಯಾಭೋದಿನಿ ಶಾಲೆಯಲ್ಲಿ ಐದನೇ ತರಗತಿಯ ತನಕ ಪ್ರಾಥಮಿಕ ಶಿಕ್ಷಣವನ್ನು ಮುಗಿಸುವಾಗಲೇ ಅಜ್ಜನವರ ಆಜ್ಞೆಯಾಯಿತು ಶಿಕ್ಷಣ ಸಾಕು, ಗದ್ದೆ ಕೆಲಸಕ್ಕೆ ತಯಾರಾಗು ಎಂದಾಗ ಹುಡುಗನಿಗೆ ಮೈನಡುಕ. ಸಾಧಿಸಲು ಶಿಖರದಷ್ಟಿರುವಾಗ ಓದು ನಿಲ್ಲಿಸುವುದು ನನ್ನಿಂದ ಅಸಾಧ್ಯ. ನಾನು ಓದಬೇಕು ಎಂಬ ಒಡಲಾಳದ ಆಸೆ ಅಲ್ಲಿಯೇ ಕಮರಿತು. ಐದನೇ ತರಗತಿ ಮುಗಿಸಿ ಏಳು ವರ್ಷಗಳ ತನಕ ಬೇಸಾಯಕ್ಕೆ ತನ್ನನ್ನು ಅರ್ಪಿಸಿಕೊಂಡರು. ಒಟ್ಟೊಟ್ಟಿಗೆ ಬೀಡಿ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡು ಅದರಲ್ಲೂ ಸಹಿ ಎನಿಸಿಕೊಂಡರು. ಅದೊಂದು ದಿನ ಅಕಸ್ಮಾತ್ ಕಾಲು ಜಾರಿ ಬಿದ್ದು ಕಾಲು ಊನ ಮಾಡಿಕೊಂಡರು. ಮುಂದಿನ ದಿನಗಳಲ್ಲಿ ಬೇಸಾಯದ ಕೆಲಸ ಇವನಿಂದ ಸಾಧ್ಯವಿಲ್ಲ ಎಂದರಿತ ಅಜ್ಜ ಈ ಹುಡುಗನನ್ನು ಮುಂಬಯಿಗೆ ಕಳಿಸಲು ನಿರ್ಧರಿಸಿದರು.
ಕರಾವಳಿಯ ಹೆಚ್ಚಿನ ಜನರು ತಮ್ಮ ಭವ್ಯ ಭವಿತವ್ಯಕ್ಕಾಗಿ ಮುಂಬಯಿ ಮಹಾನಗರವನ್ನು ಆಯ್ಕೆಯಾಗಿಸಿಕೊಂಡಂತೆ ತಾನೂ ಸಹ ಈ ನಗರದ ಸಖ್ಯ ಬೆಳೆಸಿಕೊಂಡರು. ಬೇಲಾಪುರದ ಭಾರತ ಬಿಜಲಿ ಕಂಪೆನಿಯ ತನ್ನ ಅಣ್ಣನ ಕ್ಯಾಂಟೀನಿನಲ್ಲಿ ದುಡಿಯಲು ಪ್ರಾರಂಬಿಸಿದರು. ಭವಿಷ್ಯದ ಹಲವಾರು ಕನಸುಗಳ ಬುತ್ತಿ ಕಟ್ಟಿಕೊಂಡ ಹುಡುಗನಿಗೆ
ಈ ದುಡಿಮೆಯಲ್ಲಿ ನಾನು ಎಲ್ಲೋ ನನ್ನನ್ನು ಕಳೆದುಕೊಳ್ಳುತ್ತೇನೆ ಎಂಬ ಭಯ ಕಾಡತೊಡಗಿತು. ಮನದೊಳಗಿನ ವೇದನೆಯನ್ನು ಹತ್ತಿಕ್ಕಿಕೊಳ್ಳಲಾಗದೆ ಅದೊಂದು ದಿನ ತನ್ನನ್ನು ಭೇಟಿಯಾಗಲು ಬಂದ ಗೆಳೆಯ ಐತಪ್ಪ ಶೆಟ್ಟಿ ಹಾಗು ವೆಂಕಟನವರಲ್ಲಿ ನಾನೂ ಶಾಲೆ ಕಲಿಯಬೇಕು ಎಂಬ ತನ್ನ ಮನದಾಳದ ಇಂಗಿತವನ್ನು ತೋಡಿ ಕೊಂಡರು. ಇವರ ಓದಿನ ಹಪಹಪಿಯನ್ನು ಮೊದಲಿನಿಂದಲೇ ಅರಿತಿದ್ದ ಗೆಳೆಯರಿಬ್ಬರೂ ಈ ದ್ಯಾವಪ್ಪನನ್ನು ಮುಂಬಯಿಯ ಮುಖ್ಯ ಭಾಗವಾದ ವಿಟಿಯ ಎಲ್ ಐ ಸಿ ಕ್ಯಾಂಟೀನಿನಲ್ಲಿ ಕೆಲಸಕ್ಕೆ ಸೇರಿಸಿ ರಾತ್ರಿ ಶಾಲೆಗೆ ಹೋಗುವಲ್ಲಿ ಸಹಕರಿಸಿದರು. ಏಳು ವರ್ಷಗಳ ಸುಧೀರ್ಘ ಅವದಿಯ ವಿರಾಮದ ನಂತರ ಮತ್ತೆ ಶಾಲೆಗೆ ಹೋಗುವ ಸಂತಸದಿಂದ ಹುಡುಗ ಕರ್ನಾಟಕ ಫ಼್ರೀ ನೈಟ್ ಹೈಸ್ಕೂಲಿಗೆ ಐದನೆ ತರಗತಿಗೆ ದಾಖಲಾತಿಯನ್ನು ಪಡೆದುಕೊಂಡರು.
ಕಲಿಕೆಯಲ್ಲಿ ಬಹಳಷ್ಟು ರುಚಿ ಇದ್ದ ಕಾರಣ ಪ್ರಾಥಮಿಕ ಹಾಗು ಮಾಧ್ಯಮಿಕ ತರಗತಿಗಳ ಓದಿನಲ್ಲಿ ಮುಂಚೂಣಿಯಲ್ಲಿದ್ದರು. ಅಂದಿನ ಮೆಟ್ರಿಕ್ ಪರೀಕ್ಷೆಯಲ್ಲಿ ಮುಂಬಯಿ ಮಹಾನಗರದ ರಾತ್ರಿ ಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಎಂಬ ಗೌರವಕ್ಕೆ ಪಾತ್ರರಾದರು. ದುಡಿಯುತ್ತಾ ಓದು ಮುಂದುವರಿಸುವುದು ಕಠಿಣವಾದರೂ ತನ್ನಲ್ಲಿರುವ
ಓದಿನ ಹಸಿವು ತಣಿಯದಂತೆ ಮುಂಜಾಗ್ರತೆ ವಹಿಸಿದರು. ತನ್ನ ಶಿಕ್ಷಣ ಸುಸಾಂಗವಾಗಿ ಸಾಗಲು ಅಂದಿನ ರಾತ್ರಿ ಶಾಲೆಯ ಮಕ್ಕಳಿಗೆ ದೈವ ಸಂಭೂತರಾಗಿದ್ದ, ಮುಂಬಯಿ ತುಳು ಕನ್ನಡಿಗರ ಗೌರವಾನ್ವಿತ ಉದ್ಯಮಿ ಪದ್ಮನಾಭ ಗಾಂಭೀರರ ಕ್ಯಾಂಟೀನಿನಲ್ಲಿ ಕೆಲಸ ಗಿಟ್ಟಿಸಿಕೊಂಡರು. ಸರಳತೆ ಹಾಗು ನಿಯತ್ತಿನ ದುಡಿತದೊಂದಿಗೆ ಬಹು ಬೇಗನೆ ಪದ್ಮನಾಭ ಗಾಂಭೀರರ ಪ್ರೀತಿಗೆ ಪಾತ್ರರದಾರು. ದಿನಪೂರ್ತಿ ಕ್ಯಾಂಟೀನಿನಲ್ಲಿ ದುಡಿದು ರಾತ್ರಿ ಹೆಚ್ ಅರ್ ಕಾಲೇಜಿಗೆ ಸೇರಿ ಶಿಕ್ಷಣವನ್ನು ಮುಂದುವರಿಸಿದರು. ಇವರ ಸಾಧಿಸಬೇಕು ಎಂಬ ಛಲವನ್ನು ಸೋಫ಼ಾನವಾಗಿಸಲು ಗಾಂಭೀರರು ಪ್ರತಿಯೊಂದು ಸವಲತ್ತನ್ನೂ ದ್ಯಾವಪ್ಪನವರಿಗೆ ಒದಗಿಸಿದರು. ಸಾಲದೆಂಬಂತೆ ಇವರ ಪುಟ್ಬಾಲ್ ಆಟದ ಹುಚ್ಚಿಗೂ ಸಮಯ ಹೊಂದಿಸಿ ಆಪದ್ಬಾಂದವನಾದರು. ಬಿ ಕಾಂ ಪದವಿ ಮುಗಿಸುವ ಒಂದು ವರ್ಷ ಮೊದಲೇ ವಿದ್ಯಾಭ್ಯಾಸಕ್ಕೆ ಕಾರಣಾಂತರದಿಂದ ತಿಲಾಂಜಲಿ ನೀಡಬೇಕಾದ ಅನಿವಾರ್ಯತೆಯ ಪ್ರಸಂಗ ಬಂದೊದಗಿತು. ಇಲ್ಲಿಯ ತನಕದ ತನ್ನ ಶಿಕ್ಷಣ ಮಾರ್ಗ ಸುಗಮವಾಗಿ ಸಾಗಲು ಗಾಂಭೀರರ ಪಾತ್ರ ಮಹತ್ತರವಾದುದು ಎಂಬ ದ್ಯಾವಪ್ಪನವರು ಗಾಂಭೀರರು ಕಾಲವಶವಾಗಿ ಹತ್ತಿರಹತ್ತಿರ ಇಪ್ಪತೈದು ವರ್ಷ ಗತಿಸಿದರೂ ಇಂದಿಗೂ ನನಗೆ ಅವರು ಪ್ರಾಥ:ಸ್ಮರಣೀಯರು ಎನ್ನುತ್ತಾರೆ ಶೆಟ್ಟಿಯವರು.
ಕಾಲೇಜು ಶಿಕ್ಷಣ ಮುಗಿಸಿ ಮುಂದೆ ಏನು ಅನ್ನುವಷ್ಟರಲ್ಲಿ ಔದ್ಯೋಗಿಕ ಸಂಸ್ಥೆಯೊಂದು ಕರೆದು ಉದ್ಯೋಗ ಕಲ್ಪಿಸಿತು. ಹೊಟ್ಟೆಗೆ ಬಟ್ಟೆಗೆ ಮಾತ್ರ ಸಾಕಾಗುವಷ್ಟು ಸಂಬಳದ ಕೆಲಸ ಶೆಟ್ಟಿಯವರಿಗೆ ಒಗ್ಗಿ ಬರಲಿಲ್ಲ. ಈ ಸಣ್ಣ ನೌಕರಿಯಿಂದ ನಾನು ಏನು ಸಾಧಿಸಬಹುದು? ಸಾಧನೆಯ ಶಿಖರ ಏರಬೇಕಾದರೆ ಉದ್ಯಮಿಯಾಗಬೇಕು, ಉದ್ಯಮದಿಂದ ಒಂದಷ್ಟು ಸಂಸಾರಗಳಿಗೆ ನಾನು ಆಸರೆಯಾಗಬೇಕು ಎಂಬ ಮಹತ್ತರವಾದ ಅಭಿಲಾಷೆ ಅವರದ್ದಾಗಿತ್ತು. ಅವರದ್ದು ಯಾವತ್ತೂ ಬತ್ತದ ಜೀವನೋತ್ಸಾಹ. ಆದದ್ದಾಗಲಿ ಎಂಬ ಹಿಡಿ ಮುಷ್ಟಿ ಧೈರ್ಯದೊಂದಿಗೆ ಇದ್ದ ನೌಕರಿಯನ್ನು ಬಿಟ್ಟು ವ್ಯಾಪಾರದತ್ತ ಕತ್ತು ಸರಿಸಿದರು. ಕರಾವಳಿ ಕನ್ನಡಿಗರಿಗೆ ರಕ್ತಗತವಾಗಿ ಬಂದಿದ್ದ ಕ್ಯಾಂಟೀನ್ ಹೋಟೆಲು ಉದ್ಯಮದತ್ತ ಮನ ಮಾಡಿದರು. ಸಹೋದರ ಸಂಭಂದಿ ಮುಖೇನ
ಚರ್ಚ್ ಗೇಟಿನಲ್ಲಿರುವ ಮುಂಬಯಿ ವಿಶ್ವವಿದ್ಯಾಲಯದ ಕ್ಯಾಂಟೀನ್ ನಡೆಸುವ ಮೂಲಕ ಯಶಸ್ಸಿನ ಏಣಿಯ ಮೊದಲ ಮೆಟ್ಟಿಲು ಹತ್ತಿದರು. ವ್ಯಾಪಾರ ಅಷ್ಟಕ್ಕಷ್ಟೇಯಾದರೂ, ಒಂದಲ್ಲಾ ಒಂದು ದಿನ ಸಾಧನೆಯ ಬೆಟ್ಟ ಹತ್ತಿಯೇ ಹತ್ತುವೆ ಎಂಬ ಅಚಲವಾದ ಆತ್ಮವಿಶ್ವಾಸ ಅವರಲ್ಲಿತ್ತು. ಧೈರ್ಯ-ಸ್ತೈರ್ಯ ಛಲ ಅವರ ಆಸ್ತಿಗಳಾಗಿದ್ದವು.
ಅಂತೆಯೇ ಅದೊಂದು ದಿನ ಇವರ ಹಿತಚಿಂತಕರೊಬ್ಬರಾದ ಜಯ ಶೆಟ್ಟಿಯವರಿಂದ ಕರೆ ಬಂತು. ಪಟ್ನಿ ಕಂಪ್ಯೂಟರ್ಸ್ ಸಂಸ್ಥೆಗೆ ಬನ್ನಿ ಎಂದರು. ನೇರವಾಗಿ ಅಲ್ಲಿಗೆ ಬಂದಾಗ ಪಟ್ನಿ ಕಂಪೆನಿಯ ಮಾಲಕರು ದ್ಯಾವಪ್ಪನವರನ್ನು ಕಂಡು ಅವರಲ್ಲಿ ಅದ್ಯಾವ ಆಕರ್ಷಣೆಯಾಯಿತೋ? ಮಿಸ್ಟರ್ ಡಿ ಕೆ ಎಂದು ಸಂಭೋದಿಸುತ್ತಾ ತಮ್ಮ ಔದ್ಯೋಗಿಕ ಸಂಸ್ಥೆಯ ಕ್ಯಾಂಟೀನು, ಹೌಸ್ ಕೀಪಿಂಗ್ ಎರಡೂ ವಿಭಾಗವನ್ನು ಇಂದಿನಿಂದ ನಿಮ್ಮ ಸುಪರ್ದಿಗೆ ಅಂದಾಗ ಶೆಟ್ಟರ ಬದುಕಿಗೆ ಮತ್ತೊಂದು ತಿರುವು ಬಂದಿತ್ತು. ಯಶಸ್ಸಿನ ಏಣಿಗೆ ಮೆಟ್ಟಿಲಿವೆಯೇ ಹೊರತು ಅಂತ್ಯವಿಲ್ಲ ಎಂಬ ಅಮೃತ ನುಡಿಯೊಂದಿಗೆ ನಡುಗೆ ಪ್ರಾರಂಬಿಸಿದರು.
ಬದುಕು ಬದಲಾವಣೆಯತ್ತಾ ಸಾಗಿತ್ತು .ಗುರಿ ನೆಟ್ಟಗಿದ್ದಲ್ಲಿ ಗೋಲು ಹೊಡೆಯುವುದು ಅಸಾಧ್ಯದ ಮಾತಲ್ಲ ಎಂಬಂತೆ ಶೆಟ್ಟರು
ಒಂದಷ್ಟು ಸಮಯದಲ್ಲಿಯೇ ಮುಂಬಯಿಯ ಪ್ರತಿಷ್ಠಿತ ಕಂಪನಿಗಳ ಕ್ಯಾಂಟೀನು ಡಿ ಕೆಯವರ ಪಾಲಾಯಿತು. ಕ್ಯಾಂಟೀನ್ ಉದ್ಯಮವನ್ನು ಬೃಹತ್ ಮಟ್ಟದಲ್ಲಿ ಬೆಳೆಸಿದರು. ನೂರಾರು ಜನರ ಕುಟುಂಬಕ್ಕೆ ಆಶಾ ದೀಪವಾದರು.
ಸಮಾಜ ಮುಖಿ: ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ದಾಸರ ನುಡಿಯಂತೆ ಸಮಾಜದಿಂದ ಪಡೆದ ಸಂಪತ್ತನ್ನು ಸಮಾಜಕ್ಕೆ ಹಿಂತಿರುಗಿಸುವ ನಿಟ್ಟಿನಲ್ಲಿ ಶೆಟ್ಟಿಯವರು ಒಂದು ಹೆಜ್ಜೆ ಮುಂದೆ ಎಂದು ಹೇಳಿದರೆ ಅದು ಕೇವಲ ಹೊಗಳಿಕೆಯ ಮಾತಲ್ಲ. ತನ್ನೊಂದಿಗೆ ದುಡಿಯುವ ಮಂದಿಗೆ ಮನೆಯ ಮಕ್ಕಳಿಗೆ ಕೊಡುವ ಪ್ರೀತಿ ಬಸಿದವರು. ತನ್ನ ಕಾರ್ಮಿಕರ ಕಷ್ಟಗಳಿಗೆ ಹೆಗಲು ಕೊಟ್ಟು ಅವರೊಂದಿಗೆ ಮನೆಯ ಸದಸ್ಯನಂತೆ ವರ್ತಿಸಿ ಹಿರಿಯವನಾಗಿ ಸಲಹೆ ಸಹಕಾರವನ್ನು ನೀಡುತ್ತಾ ಅವರುಗಳ ಮನದಲ್ಲಿ ನೆಲೆಯಾದರು. ತನ್ನವರ ನೋವು ನೀಗಿಸುತ್ತಾ ಅವರ ಬದುಕು ಹಸನು ಮಾಡುವುದಕ್ಕೆ ಮೊದಲ ಪ್ರಾಧಾನ್ಯತೆಯನ್ನು ಕೊಟ್ಟರು. ಅಪ್ಪಿ -ತಪ್ಪಿ ತನ್ನ ಕಾರ್ಮಿಕ ವರ್ಗದವರನ್ನು ಗದರಿಸಿದವರಲ್ಲ ಬೆದರಿಸಿದವರಲ್ಲ. ಹಿತ-ಮಿತದ ಮಾತಿನೊಂದಿಗೆ ಅವರನ್ನು ಆಪ್ತ ಗೆಳೆಯರಂತೆ ಬಂದುತ್ವದ ಪ್ರೀತಿಯೆಂಬಂತೆ ನೋಡಿಕೊಂಡರು.
ಶಿಕ್ಷಣ ಪ್ರೇಮಿ : ಹರ ಕೊಟ್ಟ ಕಾಲಕ್ಕೆ ಹರನ ರೂಪಿಗೆ ನೀಡು. ಹರದೆಯರು ಸುತರು ನೆರೆಸವಿದು, ಸುಖಿಸುತಲಿ
ಹರವಹರಸುವರು ಸರ್ವಜ್ಞ!!
ದೇವರು ನೀನಗೆ ಧನ ಕೊಟ್ಟಾಗ ದೇವರಂತಿರುವ ಬಡವನಿಗೆ ನೀನು ಕೊಡು ಎಂಬ ಸರ್ವಜ್ಞನ ವಚನವನ್ನು ಕಾರ್ಯರೂಪಕ್ಕೆ ತಂದವರು ಡಿ ಕೆಯವರು.
ಒಂದು ಸಮಯದಲ್ಲಿ ಮಹಾರಾಷ್ಟ್ರ ಸರಕಾರ ಕನ್ನಡ ಹಾಗು ಇತರ ಪ್ರಾದೇಶಿಕ ಭಾಷೆಯ ಶಾಲೆಗಳಿಗೆ ಅಧ್ಯಾಪಕರನ್ನು ಹಾಗು ಶಿಕ್ಷಣಕ್ಕೆ ಬೇಕಾದ ಪರಿಕರಗಳನ್ನು ಕೊಡಮಾಡುವಲ್ಲಿ ತಾರತಮ್ಯ ಮಾಡಿದಾಗ ಪೊವಾಯಿಯ ಕನ್ನಡ ಶಾಲೆಯ ಶಿಕ್ಷಕಿಯರಿಗೆ ತನ್ನ ಕೈಯಿಂದಲೇ ವೇತನವನ್ನು ನೀಡಿದರು. ಪರಿಸರದ
ಕಲಿಯುವ ಮಕ್ಕಳು ಶಿಕ್ಷಣದಿಂದ ವಂಚಿತರಾಗದ ಹಾಗೆ ಅವರಿಗೆ ಕಲಿಯಲು ಬೇಕಾದ ಪುಸ್ತಕ ಇನ್ನಿತರ ವಸ್ತುಗಳನ್ನು ಕೊಟ್ಟು ಬಡವರ ಮಕ್ಕಳ ಬದುಕಿಗೆ ದಾರಿ ದೀಪವಾದರು. ಅವರುಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡ ಪುಣ್ಯಾತ್ಮ ಎಂದರೆ ದೊಡ್ಡ ಮಾತಲ್ಲ. ಯಾವುದೇ ಶಿಕ್ಷಣ ಸಂಸ್ಥೆಗಳು ಇನ್ನಿತರ ಸಂಘಟನೆಗಳು ತಮ್ಮ ಸಂಸ್ಥೆಗಳಿಗೆ ಸಹಾಯ ಯಾಚಿಸಿದಲ್ಲಿ ಉದಾರ ಮನಸ್ಸಿನಿಂದ ಸಹಾಯ ಮಾಡಿದರು. ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೆ ಗೊತ್ತಾಗಬಾರದು ಎನ್ನುವಂತೆ ಯಾವುದೇ ಪ್ರಚಾರದಿಂದ ಮೈಲಂತರ ಕಾಯ್ದುಕೊಂಡರು. ಹಾರ-ತುರಾಯಿಗಳಿಗೆ ಕೊರಳೊಡ್ಡದೆ ಸನ್ಮಾನ ಗೌರವಗಳನ್ನು ವಿನಯತೆಯಿಂದ ಒಲ್ಲೆಯೆಂದರು. ಕಲೆಯ ಮೇಲೆ ಅಪಾರ ಪ್ರೀತಿ ಅವರಿಗೆ. ನಗರದಲ್ಲಿ ಎಲ್ಲೇ ಯಕ್ಷಗಾನ, ತಾಳ ಮದ್ದಳೆಗಳಾದರೂ ಅಲ್ಲಿಗೆ ತನ್ನ ಧರ್ಮಪತ್ನಿಯೊಂದಿಗೆ ತೆರಳಿ ಯೋಗ್ಯ ಕಲಾವಿದರಿಗೆ ಸಿಕ್ಕಿ ಅವರಿಗೆ ಅಗತ್ಯ ಅಂತ ಕಂಡು ಬಂದರೆ ಒಂದಷ್ಟು ಮುಷ್ಟಿ ಸಹಾಯವನ್ನು ಅವರಿಗಿತ್ತು ಅವರಲ್ಲಿನ ಕಲೆಯನ್ನು ಪೋಷಿಸುವ ಅಪ್ಪಟ ಕಲಾ ಪ್ರೇಮಿ.
ಸಂಘಟಕನಾಗಿ ಡಿ ಕೆಯವರು : ಸಮಾಜದಲ್ಲಿ ಸಂಘಟಿತನಾಗಿದ್ದಲ್ಲಿ ಮಾತ್ರ ತನ್ನ ಬದುಕಿಗೊಂದು ಅರ್ಥ ಎಂದರಿತವರು ಶೆಟ್ಟರು. ಪೊವಾಯಿ ಪರಿಸರದಲ್ಲಿ ಉದ್ಯಮ ಬೆಳೆಸಿಕೊಂಡಿದ್ದರಿಂದಾಗಿ ಅವರು ಪೊವಾಯಿ ಕನ್ನಡ ಸೇವಾ ಸಂಘದಲ್ಲಿ ಸಕ್ರಿಯರಾಗಿ ದುಡಿದರು. ಅವರ ನಿಸ್ವಾರ್ಥ ದುಡಿಮೆಯನ್ನು ಕಂಡ ಸದಸ್ಯರು ಈ ಸಂಘದ ಅಧ್ಯಕ್ಷ ನೀವಾಗಬೇಕು ನಿಮ್ಮ ಮುಖೇನ ಸಂಘಕ್ಕೆ ಸೂರಾಗಬೇಕು ಎಂದಾಗ ಸರ್ವ ಸದಸ್ಯರನ್ನು ಅಲ್ಲಿನ ಆಡಳಿತ ಮಂಡಳಿಯನ್ನು ಭರವಸೆಗೆ ತೆಗೆದುಕೊಂಡು ಅವರೊಂದಿಗೆ ಹೆಜ್ಜೆಗೆ ಹೆಜ್ಜೆ ಹಾಕುತ್ತಾ ತನ್ನ ಮುಂದಾಳತ್ವದಲ್ಲಿ ನಗರದ ದಾನಿಗಳಿಂದ ಹನಿ ಹನಿ ಹಣವನ್ನು ಒಟ್ಟು ಹಾಕಿದರು. ಸಾಲದೆಂಬಂತೆ ತಾನೂ ದೊಡ್ಡ ಮಟ್ಟದಲ್ಲಿ ಧನ ಸಹಾಯ ನೀಡಿ ಸಂಘಕ್ಕೆ ತನ್ನದೇ ಸ್ವಂತ ಜಾಗ ಆಗುವಲ್ಲಿ ಹಗಲಿರುಳು ಶ್ರಮಿಸಿದರು. ಅವರ ಸಂಘಟನಾ ಚತುರತೆಯ ಪ್ರತೀಕವಾಗಿ ಇಂದು ಪೊವಾಯಿ ಕನ್ನಡ ಸೇವಾ ಸಂಘ ಈ ಮಹಾನಗರದಲ್ಲಿ ಒಂದು ಪ್ರತಿಷ್ಟಿತ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಒಳನಾಡಿನಲ್ಲೂ ಸಂಘದ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಚಟುವಟಿಕೆಗಳು ಇವತ್ತು ಹೊಗಳಿಕೆಗೆ ಪಾತ್ರವಾಗಿದೆ ಎನ್ನುವಲ್ಲಿ ಶೆಟ್ಟಿಯವರ ಪಾತ್ರ ಮಹತ್ತರವಾದದ್ದು. ಮುಂಬಯಿಯ ಪ್ರತಿಷ್ಠಿತ ಬಂಟರ ಸಂಘದ ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮತಿಯಲ್ಲಿ ಯಾವುದೇ ಪದವಿ-ಪಟ್ಟದ ಸ್ವಾರ್ಥ ಇಲ್ಲದೆ ನಿಸ್ವಾರ್ಥದಿಂದ ದುಡಿಯುತ್ತಿದ್ದಾರೆ.
ಅಪ್ಪಟ ಕ್ರೀಡಾಪ್ರೇಮಿಯಾದ ಶೆಟ್ಟಿಯವರು ೧೯೭೧ ರಲ್ಲಿ ತಾನು ಸಂಘಟಿಸಿದ ಶ್ರೀ ಸರಸ್ವತಿ ಪುಟ್ಬಾಲ್ ತಂಡ ಅಂದಿನಿಂದ ಇಂದಿನವರೆಗೂ ಒಂದಷ್ಟು ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಅದಕ್ಕೆ ತಗಲುವ ಖರ್ಚು ವೆಚ್ಚಗಳನ್ನೂ ಸಹ ಡಿಕೆಯವರು ಬರಿಸುತ್ತಾ ತನ್ನ ಕ್ರೀಡಾ ಪ್ರೇಮವನ್ನು ಮೆರೆದಿದ್ದಾರೆ. ಫ಼ೋರ್ಟ್ ನಲ್ಲಿರುವ ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಷನ್ ನಡೆಸುತ್ತಿರುವ ಪ್ರತಿಯೊಂದು ಕ್ರೀಡಾ ಕೂಟದಲ್ಲಿ ಶ್ರೀ ಸರಸ್ವತಿ ಪುಟ್ಬಾಲ್ ತಂಡ ತನ್ನ ಸಹಭಾಗಿತ್ವವನ್ನು ನೀಡುತ್ತಾ ಬಂದಿದೆ. ಹಾಗೇಯೇ ತನ್ನ ಮಗ ರೋಹಿತ್ ನನ್ನು ದೇಹದಾರ್ಡ್ಯ ಪಟುವಾಗಿ ಬೆಳೆಸಿದರು. ಹಲವಾರು ಪ್ರಶಸ್ತಿ ಸಮ್ಮಾನಗಳು ಇವರನ್ನು ಅರಸಿ ಬಂದಿವೆ. ರೋಹಿತ್ ರಾಷ್ಟ್ರೀಯ ಪ್ರಶಸ್ತಿ ಮಾತ್ರವಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಷ್ಟರ್ ಏಷ್ಯಾ ಪ್ರಶಸ್ತಿ ಪಡೆದು ಭಾರತದ ಕೀರ್ತಿ ಪತಾಕೆಯನ್ನು ಭಾನೆತ್ತರ ಹಾರಿಸಿದವರಲ್ಲಿ ಒಬ್ಬರು.
ಭಾಷಾ ಪ್ರೇಮಿ : ಡಿ ಕೆಯವರು ಭಾಷಾ ಪ್ರೇಮಿ. ತುಳು, ಕನ್ನಡ, ಹಿಂದಿ, ಇಂಗ್ಲೀಷ್, ಮರಾಠಿ ಭಾಷೆಯನ್ನು ಮಾತನಾಡಬಲ್ಲರು ಮಾತ್ರವಲ್ಲ ಆ ಐದೂ ಭಾಷೆಗಳಲ್ಲಿ ಚೆನ್ನಾಗಿ ಬರೆಯಬಲ್ಲರು. ಇದೀಗ ಎಪ್ಪತ್ತರಾಚೆಯ ಪ್ರಾಯದಲ್ಲಿರುವ ಡಿ ಕೆ ಶೆಟ್ಟಿಯವರು ತುಳು ಲಿಪಿಯನ್ನು ಕಲಿತು ಪರೀಕ್ಷೆಗೆ ಕುಳಿತು ಉತ್ತೀರ್ಣರಾಗಿ ಕಲಿಕೆಗೆ ಪ್ರಾಯದ ಹಂಗಿಲ್ಲ ಎಂದು ತೋರಿಸಿಕೊಟ್ಟರು. ತುಳು ಭಾಷೆ ಸಂಸ್ಕ್ರತಿಯ ಬಗ್ಗೆ ಅಪಾರ ಜ್ಞಾನ ಭಂಡಾರವನ್ನೇ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರು ಮಾಡಿದ ಎರಡು ತುಳು ಭಾಷಣಗಳಿಂದ ತುಳು ನಾಡಿನ ಜನರು ಬಹುವಾಗಿ ಆಕರ್ಷಿತರಾಗಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಅದೆಷ್ಟೋ ಸಾವಿರ ಜನರು ವೀಕ್ಷಿಸಿದ್ದಾರೆ. ತುಳುನಾಡಿನ ಎಲ್ಲಾ ಕಡೆಗಳಿಂದಲೂ ಪ್ರಶಂಸೆಯ ಸುರಿಮಳೆಯಾಗಿದೆ. ಡಿ ಕೆಯವರು
ಒಬ್ಬ ಅಪ್ಪಟ ಓದುಗ. ಯಾವುದೇ ಪತ್ರಿಕೆ ಕೃತಿ ಹಾಗು ಸಾಮಾಜಿಕ ಜಾಲ ತಾಣದಲ್ಲಿ ತನಗಿಷ್ಟವಾದ ಬರಹವನ್ನು ಓದಿದ ತಕ್ಷಣ ಆ ಲೇಖಕರಿಗೆ ಕರೆ ಮಾಡಿ ಅವರನ್ನು ಅಭಿನಂದಿಸುವುದು ಇವರ ದೊಡ್ಡ ಗುಣ. ತನಗೆ ಇಷ್ಟವಾದ ಶಬ್ದಗಳ ಬಗ್ಗೆ ಲೇಖಕರೊಂದಿಗೆ ಚರ್ಚಿಸುವರು. ಒಬ್ಬ ಬರಹಗಾರನಾಗಿ ಅಪರೂಪಕ್ಕೊಮ್ಮೆ ಸಾಮಾಜಿಕ ಜಾಲತಾಣ ಹಾಗು ಪತ್ರಿಕೆಗಳಲ್ಲಿ ಇವರ ಬರಹ ಪ್ರಕಟಗೊಳ್ಳುತ್ತಿವೆ.
ತುಳುನಾಡು ಮತ್ತು ಅಲ್ಲಿನ ಸಂಸ್ಕ್ರತಿಯನ್ನು ಅಪಾರವಾಗಿ ಪ್ರೀತಿಸುವ ಡಿ ಕೆ ಯವರು ತನ್ನೂರಿನ ದೈವ ದೇವರ ಕೆಲಸಗಳನ್ನು ಯಾವತ್ತೂ ತಪ್ಪಿಸಿಕೊಂಡವರಲ್ಲ. ಮುಂಬಯಿಯಲ್ಲಿ ಉದ್ಯಮಿಯಾಗಿ ಗೆದ್ದು ಬಂದ ಶೆಟ್ಟಿಯವರು ತುಳುನಾಡಿನಲ್ಲಿಯೂ ಉದ್ಯಮಿಯಾಗಿಯೂ ಹೆಜ್ಜೆಯೂರಿದ್ದಾರೆ ಅವರ ಹೆಜ್ಜೆಗೆ ಗೆಜ್ಜೆಯ ನಿನಾದ ಎಂಬಂತೆ ಅಲ್ಲೂ ಜಯಶೀಲರಾಗಿದ್ದಾರೆ. ತನ್ನೂರಿಗಾಗಿ ಏನಾದರೂ ಸೇವೆ ಸಲ್ಲಿಸಬೇಕು, ಅಲ್ಲಿನ ಸಾಮಾನ್ಯರು ಹಾಗು ಬಡವರಿಗೆ ತನ್ನಿಂದ ಅಲ್ಪ ಮಟ್ಟದ ಸಹಾಯ ಆಗಬೇಕು ಎಂಬ ಮಹದಾಸೆಯಿಂದ ಸುರತ್ಕಲ್ ನಲ್ಲಿ ಚಾವಡಿ ಎಂಬ ಸುಂದರ ಸುಶೋಬಿತ ಸಭಾಗೃಹವೊಂದನ್ನು ಪ್ರಾರಂಬಿಸಿದ್ದಾರೆ. ತನ್ನಿಂದಾಗಿ ತನ್ನೂರಿನ ಬಡ ಜನತೆಗೆ ಕಿಂಚಿತ್ತಾದರೂ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಅವರು ಶ್ರಮಿಸುತ್ತಿದ್ದಾರೆ.
ಸತ್ಯ ಸನ್ನಡತೆಯ ಬದುಕು : ಡಿ ಕೆಯವರು ಅನ್ಯರನ್ನು ಯಾವುದೇ ರೀತಿಯಿಂದ ನೋಯಿಸಿದವರಲ್ಲ. ಸುಳ್ಳು ಕಪಟವೆಂದರೆ ಇವರಿಗಾಗದು. ಅಪಾರ ಜ್ಞಾನ ಭಂಡಾರವಿರುವ ಶೆಟ್ಟಿಯವರಿಗೆ ಸ್ವಾತಂತ್ರ್ಯ ಹೋರಾಟಗಾರರು, ತಪಸ್ವಿ, ಋಷಿ ಮುನಿಗಳು ಇವರಿಗೆ ಆದರ್ಶ. ಬದುಕಿರುವಷ್ಟು ಕಾಲ ಸತ್ಯ ನಿಷ್ಠೆ ಯೊಂದಿಗೆ ಬದುಕುವೆ ಎಂಬ ದಟ್ಟ ಪ್ರತಿಜ್ಞೆ ಇವರದ್ದು.
ಕುಟುಂಬ ಪ್ರೇಮಿ ಡಿಕೆ : ಡಿ ಕೆಯವರ ಹೃದಯ ಸಮಾಜಕ್ಕಾಗಿ ಮಿಡಿಯುವಂತಹುದು. ತನ್ನ ಸಮಾಜ ಸೇವೆ ತನ್ನಷ್ಟಕ್ಕೆ ತನ್ನಿಷ್ಟಕ್ಕೆ ಅನ್ನುವವರು. ಅವರ ಎಲ್ಲಾ ಸತ್ಕಾರ್ಯಗಳಿಗೂ ಹೆಗಲಾದವರು ಧರ್ಮ ಪತ್ನಿ ಜಯಂತಿ. ನನ್ನ ಎಲ್ಲಾ ಸಮಾಜ ಮುಖಿ ಕೆಲಸಗಳಿಗೆ ಆಕೆ ಮುಂದೆ ನಿಂತು ಸಹಕರಿಸುವವಳು. ನನ್ನ ಬದುಕಿನ ಎಲ್ಲಾ ಏರುಪೇರುಗಳಲ್ಲಿ ಅವಳಷ್ಟು ಧೈರ್ಯ ತುಂಬಿದವರು ಮತ್ಯಾರಿಲ್ಲ. ಮಡದಿಯಾಗಿ, ಮಾರ್ಗದರ್ಶಕಿಯಾಗಿ, ಗೆಳತಿಯಾಗಿ ನನ್ನ ಬದುಕಲ್ಲಿ ಬಂದವಳು ಆಕೆ. ಜಯಂತಿ ತನ್ನ ಹೆಸರಿಂತೆಯೇ ನನ್ನ ಬದುಕಿಗೆ ಆಗಮಿಸಿದ ಮೇಲೆ ಎಲ್ಲಾ ಕಡೆಗಳಲ್ಲೂ ಜಯ ಅನ್ನುವುದು ನನ್ನನ್ನು ಹಿಂಬಾಲಿಸಿ ಬಂದವು. ಆಕೆ ಪರಮ ದೈವ ಭಕ್ತೆ. ಎಲ್ಲಕ್ಕಿಂತ ಹೆಚ್ಚು ಅಂದರೆ ನನ್ನ ಕೆಲವೊಂದು ನೋವುಗಳನ್ನು ಅವಳಲ್ಲಿ ಹೇಳಿಕೊಂಡಾಗ ತನಗರಿವಿಲ್ಲದೆ ಆ ನೋವು ಮಾಯವಾಗುತ್ತೆ ಅನ್ನುವುದು ನಾನು ನಂಬಿಕೊಂಡು ಬಂದ ಸತ್ಯ. ನನ್ನ ಬದುಕಿನ ಯಶಸ್ಸಿಗೆ ಆಕೆಯನ್ನು ಪರಮಾತ್ಮ ಪ್ರಸಾದವಾಗಿ ಕರುಣಿಸಿದ್ದಾನೆ ಎನ್ನುತ್ತಾರೆ ಶೆಟ್ಟಿಯವರು. ಆರತಿಗೊಬ್ಬ ಮಗಳು ಪ್ರಸಿದ್ದ ವೈದ್ಯೆಯಾಗಿ ತನ್ನ ಕುಟುಂಬದೊಂದಿಗೆ ಇದೀಗ ಇಂಗ್ಲೆಂಡ್ ವಾಸಿಯಾಗಿದ್ದಾಳೆ. ಕ್ರೀಡಾ ಪಟುವಾಗಿ ನೂರಾರು ಪ್ರಶಸ್ತಿ ಬಹುಮಾನಗಳನ್ನು ಪಡೆದಿರುವ ಮಗ ರೋಹಿತ್ ಇವರ ಮುಂಬಯಿಯ ಉದ್ಯಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಹೌದು ವರ್ತಮಾನದ ಸಮಾಜದಲ್ಲಿ ಸ್ವಾರ್ಥ ಸಾಧನೆಗಾಗಿ ಬದುಕುವ ಒಂದಷ್ಟು ಜನರ ನಡುವೆ ಡಿ ಕೆ ಶೆಟ್ಟಿಯವರಂತಹ ಸರಳ-ಸಜ್ಜನರು ವಿರಳ ಅಂದರೆ ಕೇವಲ ಹೊಗಳಿಕೆಯ ಮಾತಾಗಲಾರದು.
ಡಿ ಕೆ ಶೆಟ್ಟಿಯವರಂತಹ ಸರಳ-ಸಜ್ಜನಿಕೆಯ ಸಮಾಜ ಸೇವಕರ ಪಟ್ಟಿ ಈ ಸಮಾಜದಲ್ಲಿ ಲಕ್ಷ-ಲಕ್ಷ ಆಗಬೇಕು. ಡಿಕೆಯವರ ರಾಷ್ಟ್ರ ಪ್ರೇಮ,ಸಮಾಜ ಮುಖಿ ಸೇವೆಯ ಉತ್ಸಾಹ ಯಾವತ್ತೂ ಕುಂದಬಾರದು-ನಂದಬಾರದು.
ಭಗವಂತ ಡಿಕೆಯವರಿಗೆ ಶತಮಾನ ತುಂಬಿದ ಆರೋಗ್ಯದ ಬದುಕನ್ನು ಕರುಣಿಸಬೇಕು.
ಪೇತ್ರಿ ವಿಶ್ವನಾಥ ಶೆಟ್ಟಿ