ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಉತ್ತಮ ಜೀವನ ನಿರ್ವಹಣೆ ಉದ್ದೇಶದಿಂದ ವಿದೇಶ ಸೇರಿಕೊಂಡು ಅಲ್ಲಿಯೆ ನೆಲೆಸಿಕೊಂಡು ತಮ್ಮ ಉದ್ಯೋಗ ವ್ಯಾಪಾರ ವಹಿವಾಟುಗಳು ಒಂದು ನಿರ್ಣಾಯಕ ಹಂತದಲ್ಲಿ ನೆಲೆ ಕಂಡಾದ ಮೇಲೆ ತಮ್ಮ ಸಂಸ್ಕೃತಿಯ ತಾಯಿ ಬೇರಿಗೆ ನೀರೆರೆದು ಪೋಷಿಸುತ್ತಾ, ಅದು ನಳ ನಳಿಸುವಂತೆ ಮಾಡುತ್ತಿರುವ ಕೆಲಸದಲ್ಲಿ ಸದಾ ತೊಡಗಿಸಿಕೊಂಡಿರುವುದನ್ನು ಕಂಡರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಮಂಗಳೂರು ಬಜಪೆ ವಿಮಾನ ನಿಲ್ದಾಣ ಸಮೀಪದ ಅದ್ಯಪಾಡಿ ಅನೇಕ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ನಾಯಕರಿಗೆ ಜನುಮ ನೀಡಿದ ರಮಣೀಯ ನೆಲ. ಇದು ಯದುನಾಥ ಆಳ್ವರ ಮೂಲನೆಲೆ ಮೂಲನೆಲ. ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಇವರ ಮಹತ್ವಾಕಾಂಕ್ಷೆ ಭವಿಷ್ಯ ಕುರಿತಂತೆ ಸ್ಪಷ್ಟ ಕಲ್ಪನೆ ತನ್ನ ಕನಸುಗಳಿಗೆ ಸಾಕಾರ ರೂಪ ನೀಡುವ ಛಲ ಅವರನ್ನು ಕೊಲ್ಲಿ ರಾಷ್ಟ್ರಗಳಲ್ಲಿ ಒಂದಾದ ಕುವೈಟ್ ಕಡೆ ಆಕರ್ಷಿಸಿತು. ತನ್ನ ವಿಚಕ್ಷಣ ಪ್ರತಿಭಾ ಸಾಮರ್ಥ್ಯದಿಂದ ಅನತಿ ಕಾಲದಲ್ಲಿಯೇ ತನ್ನ ಅದ್ಭುತ ಟೀಮ್ ವರ್ಕ್ ಮೂಲಕ ಲೋಜಿಸ್ಟಿಕ್ ಎಂಡ್ ಫೈನಾನ್ಸ್ ವ್ಯವಹಾರ ಕ್ಷಿಪ್ರ ಪ್ರಗತಿ ಕಂಡ ಪರಿಣಾಮ ಅವರೊಬ್ಬ ಕುವೈಟ್ ನ ಗಟ್ಟಿ ಕುಳವಾಗಿ ಗುರುತಿಸಿಕೊಂಡರು.

ಸರಿ ಸುಮಾರು ಮೂರು ದಶಕಗಳಿಂದ ಕುವೈಟ್ ವಾಸ್ತವ್ಯದಲ್ಲಿರುವ ಆಳ್ವರು ತನ್ನ ಉದ್ಯಮದ ಬೇರು ತುಂಬಾ ಆಳಕ್ಕಿಳಿದು ವ್ಯಾಪಾರ ವ್ಯವಹಾರ ಭದ್ರವಾಗಿ ಸ್ಥಾಪನೆ ಆಗುತ್ತಿರುವುದನ್ನು ಕಂಡು ಆತ್ಮ ತೃಪ್ತಿ ಹೊಂದಿದ್ದಾರೆ. ಒಂದು ಕಡೆ ತನ್ನ ವ್ಯಾಪಾರ ವ್ಯವಹಾರ ಸ್ಥಿರ ನೆಲೆ ಕಾಣುತ್ತಿರುವಂತೆಯೇ ಇನ್ನೊಂದು ಕಡೆಯಿಂದ ತನ್ನ ಅಪರಿಮಿತ ಅಪ್ರತಿಮ ಸಂಘಟನಾ ಶಕ್ತಿಯಿಂದ ಕುವೈಟ್ ತುಳು ಕನ್ನಡಿಗರನ್ನು ಒಂದೇ ವೇದಿಕೆಗೆ ತಂದು ನಮ್ಮ ನೆಲಜಲದ ಮೂಲ ಸಂಸ್ಕೃತಿಯ ಹಿರಿಯ ಗರಿಮೆ ಕುರಿತಂತೆ ಜನ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಕಟಿಬದ್ಧರಾಗಿ ಅನೇಕ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದರು. ವೃತ್ತಿ ಜೀವನದಲ್ಲಿ ಆಳ್ವರು ತುಂಬಾ ಚಾಣಾಕ್ಷರು.
ಕುವೈಟ್ ಕನ್ನಡ ಸಂಘದೊಂದಿಗೆ ಬೆಸೆದ ನಂಟು ಅದೆಷ್ಟು ಸುದೀರ್ಘ ಅವಧಿಯದ್ದು!! ಇವರ ಸಂಘಟನಾ ಚತುರತೆ, ಮಾತುಗಾರಿಕೆಯ ವೈಖರಿ, ಕಲೆ ಸಾಹಿತ್ಯ ಸಂಸ್ಕೃತಿ ಸಂಗೀತ ಪ್ರೇಮ ಅವರನ್ನು ಹೊರನಾಡಿನ ಸಾಂಸ್ಕೃತಿಕ ರಾಯಭಾರಿ ಎಂದೇ ಗುರುತಿಸಿದೆ. ಇತ್ತೀಚೆಗಷ್ಟೇ ಯಕ್ಷಧ್ರುವ ಪಟ್ಲ ಫೌಂಡೇಶನ್ ಕುವೈಟ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಇವರು ಸಂಘಟಿಸುವ ಯಕ್ಷಗಾನ ಕಾರ್ಯಕ್ರಮಗಳು ಕನ್ನಡಿಗ ಚಟುವಟಿಕೆಗಳ ದೃಶ್ಯಗಳನ್ನು ಕಾಪಿಡುವ ಸಂಘಟನೆಗಳು ದಾಖಲೆ ರೂಪದಲ್ಲಿ ಕಾಪಾಡುತ್ತಿವೆ. ಕುವೈಟ್ ತುಳು ಕೂಟದ ಮಾಜಿ ಖಜಾಂಚಿ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಸಲ್ಲಿಸಿದ ಅರ್ಥಪೂರ್ಣ ಸೇವೆಯೂ ಸಂಘದ ಇತಿಹಾಸದಲ್ಲಿ ದಾಖಲಾಗಿದೆ. 2017ರ ಲ್ಲಿ ಕುವೈಟ್ ಬಂಟರ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ಯದುನಾಥರು ಕುವೈಟ್ ಬಂಟರ ಸಂಘಟನೆ ಕಾರ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸಿ ಸ್ವಜನ ಬಾಂಧವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಧರ್ಮಪತ್ನಿ ಶಾಲಿನಿ ಆಳ್ವ, ಪುತ್ರರಾದ ಯಶ್ ಆಳ್ವ ಹಾಗೂ ನೈತಿಕ್ ಆಳ್ವರೊಂದಿಗೆ ಸುಖೀ ಸಂಸಾರವನ್ನು ಹೊಂದಿರುವ ಇವರು ಸಾಂಸ್ಕೃತಿಕ ಸಂಘಟಕರಷ್ಟೇ ಅಲ್ಲ ಓರ್ವ ಮನೋರಂಜಕ ನಟ, ಕಲಾವಿದ, ಅದ್ಭುತ ಉದ್ಘೋಷಕ ನಿರೂಪಕ. ಹೀಗೆ ಓರ್ವ ಯಶಸ್ವಿ ಸಮಾಜಸೇವಕರಾಗಿ ಇಂಥಹ ಸಾಂಸ್ಕೃತಿಕ ಪ್ರತಿಭೆಯೂ ಕೂಡಿಕೊಂಡು ಬಂಗಾರದ ಹೂವಿಗೆ ಪರಿಮಳ ಸೇರಿದಂತೆ ಇಂದು ಸಾಂಸ್ಕೃತಿಕ ವಲಯದಲ್ಲಿ ಅವರ ವ್ಯಕ್ತಿತ್ವ ಘಮ ಘಮಿಸುತ್ತಿದೆ ಎಂದರೆ ಅತಿಶಯೋಕ್ತಿ ಆಗದು.
ಪ್ರಿಯ ಓದುಗ ಬಂಧುಗಳೇ ಇಂಥಹ ಅಪರೂಪದ ಬಂಟ ಸಾಧಕರನ್ನು ಹುಡುಕಿ ಹುಡುಕಿ ತಮಗೆಲ್ಲಾ ಪರಿಚಯಿಸುವುದೆಂದರೆ ನಮಗೆ ಎಲ್ಲಿಲ್ಲದ ಹೆಮ್ಮೆ ಅಭಿಮಾನ. ಬಂಟ ಸಮುದಾಯಕ್ಕೆ ಜಯವಾಗಲಿ. ಬಂಟ್ಸ್ ನೌ ಮಾಧ್ಯಮ ಸಂಸ್ಥೆಗೆ ತಮ್ಮೆಲ್ಲರ ಶುಭಾಶೀರ್ವಾದಗಳಿರಲಿ.
ಲೇಖಕರು : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು









































































































