ನಾನು ನನ್ನ ಈ ಮೊದಲಿನ ಲೇಖನಗಳ ಸಾಲುಗಳನ್ನೆ ಇಲ್ಲಿಯೂ ಪುನರುಚ್ಛರಿಸುವುದಾದರೆ ನಮ್ಮ ಬಂಟ ಸಮುದಾಯದ ವಿದ್ಯಾವಂತ ಯುವಕರು ಒಂದು ಕಾಲದಲ್ಲಿ ಯಾರೂ ಆಸಕ್ತಿ ತೋರದ ಆದರೆ ತಮ್ಮ ಇಚ್ಛಾಶಕ್ತಿ, ಸತತ ಪರಿಶ್ರಮ, ಸಾಧನೆ ಮೂಲಕ ಯಾವ ಹೊಸ ಉದ್ಯಮಗಳನ್ನೂ ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರು ಅಚ್ಚರಿ ಕಣ್ಣುಗಳಿಂದ ನೋಡುವಂತೆ ಮಾಡಬಲ್ಲರು ಎನ್ನುವುದಕ್ಕೆ ಮಣಿಪಾಲದಲ್ಲಿ ಬಿ.ಕಾಂ.ಶಿಕ್ಷಣ ಮುಗಿಸಿ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಕಾಲ ಕೆಲಸ ಮಾಡಿದರೂ ಉದ್ಯೋಗ ಸಂತೃಪ್ತಿ ಇಲ್ಲದೆ ಹುಟ್ಟೂರಿಗೆ ಆಗಮಿಸಿ ಯಾವುದೆ ರೀತಿಯ ಕಲಬೆರಕೆ ಮಸಾಲ ಮಿಕ್ಸ್ ಇಲ್ಲದ ಸಾದ ಚಹಾ ಪುಡಿಯ ಸ್ವಾದವನ್ನು, ಪರಿಮಳವನ್ನು ಉಡುಪಿ ಪರಿಸರದಲ್ಲಿ ಪಸರಿಸಿದ ರೋಚಕ ವೃತ್ತಾಂತ ಇಲ್ಲಿದೆ ಓದಿ. ಯುವಕನ ಅನ್ವರ್ಥ ನಾಮ ಪ್ರಶಾಂತ ಹೌದು ಪ್ರಶಾಂತ ಸ್ವಭಾವದ ಆದರೆ ಪರಿಶ್ರಮಕ್ಕೆ ಪರ್ಯಾಯ ಇಲ್ಲ ಎನ್ನುವ ಪ್ರಶಾಂತ್ ಕನಸು ಈಗ ನನಸಾಗಿ ಉಡುಪಿ ಟೀ ಲೇಬಲ್ ಮಾನ್ಯತೆ ಪಡೆದು ಜನಮಾನ್ಯತೆ ಬೇಡಿಕೆ ಪಡೆದ ಈ ಕತೆ ಒಂದೇ ದಿನದಲ್ಲಿ ಬರೆದುದಲ್ಲ. ಗ್ರಾಹಕರಲ್ಲಿ ತಮ್ಮ ಉತ್ಪಾದನೆ ಕುರಿತಂತೆ ವಿಶ್ವಾಸ ಮೂಡಿಸಿ ಮಾರುಕಟ್ಟೆ ಬೇಡಿಕೆ ಸ್ಥಿರ ಪಡಿಸಿಕೊಳ್ಳುವಳ್ಳಿ ಪ್ರಶಾಂತ್ ಶೆಟ್ಟಿ ಕುಟುಂಬವೇ ತಮ್ಮನ್ನು ತೊಡಗಿಸಿ ಕೊಂಡಿದ್ದು, ಇದೀಗ ಉಡುಪಿ ಟೀ ಉಡುಪಿ ಮಾತ್ರವಲ್ಲದೆ ಪರಿಸರದ ಜಿಲ್ಲೆಗಳಲ್ಲಿ ನಿರಂತರ ಬೇಡಿಕೆ ಪಡೆಯುತ್ತಿದೆ.

ಪೆರ್ಡೂರು ಅಜೆಕಾರು ಮುನಿಯಾಲು ಪೇತ್ರಿ ಬ್ರಹ್ಮಾವರ ಹೀಗೆ ಪರಿಸರದ ಹೊಟೇಲ್ ಗಳಿಗೆ ದೊಡ್ಡ ಪ್ಯಾಕಿಂಗ್ ಟೀ ಹುಡಿ ಅದೇ ರೀತಿ ಮನೆ ಉಪಯೋಗಕ್ಕೆ ಸಣ್ಣ ಪ್ಯಾಕೇಟ್ ಚಾ ಹುಡಿ ಕ್ಲಪ್ತ ಸಮಯಕ್ಕೆ ರವಾನಿಸಲ್ಪಡುತ್ತದೆ. ಯಾವುದೆ ಬಣ್ಣ, ರುಚಿ ಎಸೆನ್ಸ್ ಬೆರಕೆ ಮಾಡದೆ ಸಹಜ ರೀತಿಯ ಶುದ್ಧ ಚಹಾ ಪುಡಿಯನ್ನು ಒದಗಿಸುವ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದ್ದು, ಗ್ರಾಮಾಂತರ ಪ್ರದೇಶಗಳಿಂದ ಹೆಚ್ಚು ಬೇಡಿಕೆ ಇರುವ ನೈಜ ಸ್ವಾದವನ್ನು ಹೊಂದಿದ ಚಹಾ ಪುಡಿಯನ್ನು ಉಡುಪಿ ಟೀ ಕಂಪನಿ ಒದಗಿಸುತ್ತಾರೆ. ಗ್ರಾಹಕರಿಗೆ ಮೊದಲು ಸ್ಯಾಂಪಲ್ ನೀಡಲಾಗುತ್ತದೆ. ಮಾತ್ರವಲ್ಲದೆ ಅದರ ಶುದ್ಧತೆಯನ್ನು ಪರೀಕ್ಷೆಗೊಳಪಡಿಸಿ ಗ್ರಾಹಕರಿಗೆ ಸಮಾಧಾನ ಆದ ಮೇಲೆಯೆ ಆರ್ಡರ್ ತೆಗೆದು ಕೊಳ್ಳಲಾಗುತ್ತದೆ. ಒಂದು ಗ್ಲಾಸ್ ತಣ್ಣಗಿನ ನೀರಿಗೆ ಒಂದೆರಡು ಚಮಚ ಚಾ ಹುಡಿ ಮಿಕ್ಸ್ ಮಾಡಿದಾಗ ಅದು ಬಣ್ಣ ಬಿಟ್ಟರೆ ಅದಕ್ಕೆ ಬಣ್ಣ ಸೇರಿಸಲಾಗಿದೆ ಎಂದು ಭಾವಿಸಬೇಕು ಎಂದು ಹೇಳುವ ಅವರ ಕುಟುಂಬದ ಸದಸ್ಯರು ಅದನ್ನು ಗ್ರಾಹಕರ ಎದುರಿಗೆ ಪರೀಕ್ಷಿಸಿ ವಿಶ್ವಾಸ ಮೂಡಿದ ಮೇಲೆ ನೀಡಲಾಗುತ್ತದೆ. ಶುದ್ಧ, ಕಲಬೆರಕೆ ಇಲ್ಲದ ಚಹಾ ಹುಡಿ ಬಣ್ಣ ಬಿಡಲಾರರು. ನೀರು ಯಾವುದೇ ಬೇರೆ ಬಣ್ಣಕ್ಕೆ ತಿರುಗಲಾರದು ಎನ್ನುತ್ತಾರೆ ಪ್ರಶಾಂತ್ ಕುಟುಬದ ಮಹಿಳಾ ಸದಸ್ಯೆಯರು. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸುವಲ್ಲಿ ಪ್ರಶಾಂತ್ ಅವರ ಅಣ್ಣ, ಅತ್ತಿಗೆ, ಸಹೋದರಿ, ಬಾವ ಮೊದಲಾದವರ ಪಾತ್ರ ಹಿರಿದು ಎಂದು ಸ್ವತಃ ಪ್ರಶಾಂತ್ ಶೆಟ್ಟಿ ಅವರು ಹೇಳುತ್ತಾರೆ.
ಈಗ ಉಡುಪಿ ಟೀ ಬೇಡಿಕೆ ಹೆಬ್ರಿ ಮುನಿಯಾಲ್ ಮುದ್ರಾಡಿ ಮೊದಲಾದ ಕಡೆಗಳಿಂದಲೂ ಬರುತ್ತಿದೆಯಲ್ಲದೆ ಟೀ ಎಸ್ಟೇಟ್ ನಿಂದ ಹೆಚ್ಚೆಚ್ಚು ಕಚ್ಚಾ ಚಹ ಎಲೆ ತರಿಸಿಕೊಂಡು ಪೌಡರ್ ತಯಾರಿಸಿ ಬಣ್ಣ ಬಣ್ಣದ ಪ್ಯಾಕಿಂಗ್ ಗಳಲ್ಲಿ ಅರ್ಧ ಕೆಜಿ, ಕಾಲು ಕೆಜಿ ಮತ್ತು ನೂರು ಗ್ರಾಂ ಪ್ಯಾಕ್ ಮಾಡಲಾಗುತ್ತದೆ. ಪ್ಯಾಕಿಂಗ್ ನಲ್ಲಿ ಪ್ರಶಾಂತ್ ಅತ್ತಿಗೆ ಸಹಕರಿಸುತ್ತಾರೆ. ಒಂದು ಸಣ್ಣ ಮಟ್ಟದ ಗೃಹೋದ್ಯಮ ಎಂಬಂತೆ ಆರಂಭಿಸಿದ ವ್ಯಾಪಾರ ಈಗ ಗಣನೀಯ ರೀತಿಯಲ್ಲಿ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಡೀಲರ್ ಗಳಿಗೂ ದೊಡ್ಡ ಪ್ರಮಾಣದಲ್ಲಿ ಟೀ ಪೌಡರ್ ಒದಗಿಸುವ ವ್ಯವಸ್ಥೆ ಮಾಡಿದ್ದು ಬೆಂಗಳೂರು ಗುಲ್ಬರ್ಗ ಧಾರವಾಡ ಹುಬ್ಬಳ್ಳಿ ಹೀಗೆ ಅನ್ಯ ಜಿಲ್ಲೆಗಳಿಗೂ ಉಡುಪಿ ಟೀ ರವಾನೆಯಾಗುತ್ತಿದ್ದು, ಹೊಟೇಲ್ ಗಳಿಂದ ಬೇಡಿಕೆ ಹೆಚ್ಚುತ್ತಿದೆ. ಒಬ್ಬ ಸರಳ ಶಾಂತ ಸ್ವಭಾವದ ವಿದ್ಯಾವಂತ ಯುವಕ ತನ್ನ ಕುಟುಂಬದ ಸದಸ್ಯರ ಜೊತೆಗೆ ನಡೆಸುತ್ತಿರುವ ಈ ಉದ್ಯಮ ಉತ್ತರೋತ್ತರ ಪ್ರಗತಿ ಕಾಣಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾರೈಸುತ್ತದೆ.
ಲೇಖನ : ಅರುಣ್ ಶೆಟ್ಟಿ ಎರ್ಮಾಳ್ ಗೌರವ ಸಂಪಾದಕರು





































































































