ಭೂಮಿಯ ಮೇಲೆ ಸಾವಿಲ್ಲದ ಯಾವುದೇ ವ್ಯಕ್ತಿ ಇಲ್ಲ. ಹುಟ್ಟಿದ ವ್ಯಕ್ತಿ ಒಂದಲ್ಲ ಒಂದು ದಿನ ಸಾಯಲೇಬೇಕು. ಸತ್ತ ಮೇಲೆ ಪ್ರತಿಯೊಬ್ಬರಿಗೂ ಅವರ ಧರ್ಮದ ಪ್ರಕಾರ ಕೊನೆಯ ಕಾರ್ಯವನ್ನು ನಡೆಸಲಾಗುತ್ತದೆ. ಹಿಂದೂಗಳಲ್ಲಿ ಕೆಲವರಲ್ಲಿ ದೇಹವನ್ನು ಸುಡುವ ಪದ್ಧತಿ ಇದೆ. ಒಂದೊಂದು ಜಾತಿಯಲ್ಲಿ ಒಂದೊಂದು ವಿಧಾನದಲ್ಲಿ ಅಂತ್ಯಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಆದರೆ ನಮಗೆ ಇಷ್ಟ ಬಂದ ಹಾಗೇ ಯಾವಾಗೆಂದರೆ ಆವಾಗ ಸತ್ತ ಹೆಣವನ್ನು ಸುಡಬಾರದು ಹಾಗೂ ಆ ಸತ್ತ ಹೆಣವನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಲೂ ಬಾರದು. ಗರುಡ ಪುರಾಣದ ಪ್ರಕಾರ ಇಂತಹ ತಪ್ಪುಗಳನ್ನು ಮಾಡಲೇಬಾರದು ಎಂಬ ಉಲ್ಲೇಖವಿದೆ.

ಸಾವಿನ ನಂತರದ ಕಾರ್ಯದ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ. ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ಮಾಡಿದರೆ ಏನಾಗುತ್ತದೆ? ಯಾವುದಾದರೂ ವ್ಯಕ್ತಿ ಸೂರ್ಯಾಸ್ತದ ನಂತರ ಸತ್ತರೆ ಆತನ ಅಂತ್ಯಕ್ರಿಯೆಯನ್ನು ಮಾರನೇ ದಿನ ಬೆಳಗ್ಗೆ ನೆರವೇರಿಸಬೇಕು ಹಾಗೂ ಆ ಹೆಣವನ್ನು ರಾತ್ರಿಯಿಡೀ ಇಟ್ಟುಕೊಳ್ಳಬೇಕು. ಯಾರಾದರೂ ಒಬ್ಬರು ಆ ಹೆಣದ ಪಕ್ಕದಲ್ಲಿ ಕೂರಲೇಬೇಕು. ಹೆಣವನ್ನು ಬಿಟ್ಟು ಎಲ್ಲಿಯೂ ಹೋಗುವ ಹಾಗಿಲ್ಲ.
ಗರುಡ ಪುರಾಣದ ಪ್ರಕಾರ ಸೂರ್ಯಾಸ್ತದ ನಂತರ ವ್ಯಕ್ತಿಯ ಕಾರ್ಯಗಳನ್ನು ನಡೆಸಿದರೆ ಆತನಿಗೆ ಮೋಕ್ಷ ಸಿಗುವುದಿಲ್ಲವಂತೆ. ಹಾಗೆಯೇ ಆ ವ್ಯಕ್ತಿ ಆತ್ಮವು ಅಸುರನ ಯೋನಿಯಲ್ಲಿ ಪುನರ್ಜನ್ಮ ಪಡೆಯುತ್ತಂತೆ. ಹೊತ್ತಲ್ಲದ ಹೊತ್ತಿನಲ್ಲಿ ಅಂತ್ಯ ಕ್ರಿಯೆ ನಡೆದರೆ ಸರಣಿ ಸಾವು ಸಂಭವಿಸುತ್ತೆ. ಸತ್ತ ವ್ಯಕ್ತಿಯ ಅಂತ್ಯಕ್ರಿಯೆ ಸರಿಯಾದ ಸಮಯದಲ್ಲೇ ನಡೆಯಬೇಕು. ವ್ಯಕ್ತಿಯೊಬ್ಬ ಪಂಚಕದ (ಸೂರ್ಯಸ್ತರ ನಂತರ ಅಥವಾ ರಾತ್ರಿ) ಸಮಯದಲ್ಲಿ ಸತ್ತರೆ ರಾತ್ರಿಯಿಡೀ ಹೆಣವನ್ನು ಕಾಯಲು ಒಬ್ಬರು ಇರಲೇಬೇಕು ಹಾಗೂ ಮಾರನೇ ದಿನವೇ ಅಂತ್ಯಕ್ರಿಯೆ ನಡೆಯಬೇಕು. ಒಂದು ವೇಳೆ ಪಂಚಕದ ಮೊದಲು ಅಂತ್ಯ ಕ್ರಿಯೆ ನಡೆಸಿದ್ದೇ ಆದರೆ ಅದೇ ಕುಟುಂಬದ ಮತ್ತೆ ಐದು ಜನರ ಸಾವಾಗುತ್ತದೆ. ಇಲ್ಲವಾದರೆ ಇದಕ್ಕೆ ಒಂದು ಪರಿಹಾರವಿದೆ. ಸತ್ತ ಹೆಣದ ಜೊತೆಗೆ 5 ಧಾನ್ಯ ಅಥವಾ ಹುಲ್ಲನ್ನು ಹೆಣ ಸುಡುವಾಗ ಹಾಕಬೇಕು ಆಗ ಪದ್ಧತಿ ಸಂಪೂರ್ಣವಾಗುತ್ತದೆ.
ರಾತ್ರಿಯಿಡೀ ಶವವನ್ನು ಕಾಯದಿದ್ದರೆ ಏನಾಗುತ್ತದೆ? ಶವದ ಜೊತೆಗೆ ರಾತ್ರಿಯಿಡೀ ಯಾವ ಕಾರಣಕ್ಕೆ ಇರಬೇಕು ಎನ್ನವುದರ ಬಗ್ಗೆ ಕೂಡಾ ಗರುಡ ಪುರಾಣದಲ್ಲಿ ಉಲ್ಲೇಖವಿದೆ. ಒಂದು ವೇಳೆ ಹೆಣವನ್ನು ಬಿಟ್ಟು ಹೋದರೆ ಅದರ ಒಳಗೆ ದುಷ್ಟ ಶಕ್ತಿಗಳು ಬಂದು ಸೇರುವ ಸಾಧ್ಯತೆ ಹೆಚ್ಚಾಗಿದೆ ಅಥವಾ ಆ ಹೆಣದಿಂದ ನಮಗೆ ಕೆಟ್ಟದಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಹೆಣವನ್ನು ಬಿಟ್ಟು ಹೋಗಬಾರದು ಮತ್ತು ಆದಷ್ಟು ಹೆಣವನ್ನು ಸ್ವಚ್ಚವಾಗಿಯೇ ಇಡಬೇಕು. ಇಲ್ಲವಾದರೆ ಇತರ ಪ್ರಾಣಿಗಳು ಬಂದು ಹೆಣಕ್ಕೆ ಹಾನಿ ಕೂಡಾ ಮಾಡಬಹುದು.
ಮಕ್ಕಳೇ ಕೊನೆಯ ಕಾರ್ಯ ಪೂರೈಸಬೇಕು ಯಾಕೆ? ಹಿಂದೂ ಧರ್ಮದಲ್ಲಿ ಸತ್ತ ವ್ಯಕ್ತಿಯ ಮಗ ಅಥವಾ ಮಗಳು ಆತನ ಕೊನೆಯ ಕಾರ್ಯಗಳನ್ನು ಮಾಡಬೇಕು ಎಂಬ ಉಲ್ಲೇಖವಿದೆ. ಒಂದು ವೇಳೆ ಸತ್ತ ವ್ಯಕ್ತಿಯ ಸಂಬಂಧಿಕರು ದೂರದ ಊರಿನಲ್ಲಿ ನೆಲೆಸಿದ್ದರೆ ಅವರು ಬರುವವರೆಗೂ ಕಾಯುವುದು ಒಳ್ಳೆಯದು. ಈ ವೇಳೆ ರಾತ್ರಿಯಿಡೀ ಹೆಣವನ್ನು ಇಡಬಹುದು. ಸತ್ತ ವ್ಯಕ್ತಿಯ ಮಕ್ಕಳೇ ಕೊನೆಯ ಕಾರ್ಯ ಪೂರೈಸಿದರೆ ಒಳ್ಳೆಯದು. ಯಾಕೆಂದರೆ ಸತ್ತಿರೋ ಆತ್ಮಕ್ಕೆ ಶಾಂತಿ ಸಿಗುತ್ತಂತೆ. ಇಲ್ಲವಾದಲ್ಲಿ ಆ ಆತ್ಮವು ಮೋಕ್ಷ ಸಿಗದೇ ಭೂಮಿಯ ಮೇಲೆ ಅಲೆದಾಡುತ್ತಾ ಇರುತ್ತಂತೆ. ಹುಟ್ಟಿನಿಂದ ಸಾವಿನವರೆಗೂ ಪ್ರತಿಯೊಂದಕ್ಕೂ ಅದರದ್ದೇ ಆದ ಕಟ್ಟುಪಾಡುಗಳಿದೆ. ಈ ಕಟ್ಟುಪಾಡುಗಳನ್ನು ಸುಖಾಸುಮ್ಮನೇ ಮಾಡಿದಲ್ಲ. ಇದರ ಹಿಂದೆ ಕಾರಣ ಇದೆ. ಹೀಗಾಗಿ ಇದ್ಯಾವುದನ್ನು ಉಲ್ಲಂಘಿಸಿ ನಡೆಯದಿರುವುದು ಉತ್ತಮ.





































































































