ಭಾರತ ಸಂಸ್ಕೃತಿಯನ್ನು ಉಳಿಸಿ ಸಾರ್ಥಕತೆಯ ಜೀವನವನ್ನು ನಡೆಸಲು ಕೋವಿಡ್ ಮಹಾ ಕಾಯಿಲೆ ನಮಗೆ ಕಳಿಸಿಕೊಟ್ಟಿದೆ. ಜೀವನ ಸಾರ್ಥಕವಾಗಬೇಕಾದರೆ ಇನ್ನೊಬ್ಬರಿಗೆ ಅನ್ಯಾಯವನ್ನು ಮಾಡದೆ ಸತ್ಕಾರ್ಯಗಳನ್ನು ಮಾಡುತ್ತಾ, ದಾನ ಧರ್ಮಗಳನ್ನು, ಪುಣ್ಯದ ಕಾರ್ಯಗಳನ್ನು ಮಾಡುತ್ತಾ ಬದುಕು ಕಟ್ಟಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು. ಸಯನ್ ಪೂರ್ವದ ನಿತ್ಯಾನಂದ ಸಭಾಗೃಹದಲ್ಲಿ ಜುಲೈ 20 ರಂದು ಜರಗಿದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚಿಸಿ, ಮುಂಬಯಿ ಮಹಾನಗರದಲ್ಲಿ ಅದೆಷ್ಟೋ ಜನರು ಸಂಪಾದನೆಯ ಬಹು ಪಾಲನ್ನು ಸಮಾಜ ಸೇವೆ, ದಾನ ಧರ್ಮಗಳ ಕಾರ್ಯಗಳಿಗಾಗಿ ವಿನಿಯೋಗಿಸುತ್ತಾರೆ. ಕಳೆದ ಹಲವಾರು ವರ್ಷಗಳಿಂದ ಗುರುದೇವ ಸೇವಾ ಬಳಗದ ಮೂಲಕವೂ ಸಮಾಜದ ಹಾಗೂ ಧರ್ಮದ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ. ಯಾವುದನ್ನೂ ಉಚಿತವಾಗಿ ಪಡೆದರೆ ಇದಕ್ಕೆ ಬೆಲೆ ಇರುವುದಿಲ್ಲ. ಶ್ರಮಪಟ್ಟು ಸಾಧನೆ ಮಾಡಿದಾಗ ಅದಕ್ಕೆ ಬೆಲೆ ಬರುತ್ತದೆ. ಆದ್ದರಿಂದ ಶ್ರಮಪಟ್ಟು ಸಾಧನೆಯಿಂದ ನಡೆಯಬೇಕು. ಅದರಿಂದ ಭಕ್ತಿ ಮಾರ್ಗವೂ ಕೂಡ ಸುಲಭವಾಗಿ ಲಭಿಸುತ್ತದೆ. ದಾನ ಧರ್ಮಗಳನ್ನು ಮಾಡುವಾಗ ಭಾವನೆಗಳು ಒಳ್ಳೆಯದಿರಲಿ. ಮುಂಬೈಯ ತುಳು ಕನ್ನಡಿಗರ ಮನೆಯನ್ನು ದೇವಸ್ಥಾನದಂತೆ ರೂಪಿಸಿಕೊಂಡಿದ್ದಾರೆ. ಇದರಿಂದ ನಮ್ಮವರ ಭಕ್ತಿ ಭಾವನೆಗಳು ಹೆಚ್ಚಾಗಿ ತೊಡಗಿದೆ ಎಂದು ಕಾಣುತ್ತದೆ. ಪ್ರಾರಂಭದ ದಿನಗಳಿಂದ ಈ ನಗರಕ್ಕೆ ನಾನು ಬರುತ್ತಿರುವಾಗ ಭಕ್ತರು ಬಹಳಷ್ಟು ಸಮಸ್ಯೆಗಳನ್ನು ನನ್ನ ಬಳಿ ತರುತ್ತಿದ್ದರು. ಆದರೆ ಇದೀಗ ಅವರೆಲ್ಲರ ಬದುಕು ಆನಂದಮಯವಾದ ಹಾಗೆ ಕಾಣುತ್ತದೆ. ಸಮಸ್ಯೆಗಳು ಅವರಿಂದ ದೂರವಾಗಿದೆ. ಅವರೆಲ್ಲರೂ ಸನ್ಮಾರ್ಗದಲ್ಲಿ ಭಕ್ತಿಯಿಂದ ನಡೆಯುತ್ತಿದ್ದಾರೆ. ಅದೇ ಅವರನ್ನು ಕಷ್ಟ ಮತ್ತು ದುಃಖದಿಂದ ದೂರವಾಗಿಸಿದೆ ಎಂದು ತಿಳಿಸಿದರು.

ಗುರುಭಕ್ತರಿಂದ ಭಜನಾ ಕಾರ್ಯಕ್ರಮ ಜರಗಿ, ಬಳಿಕ ಸಾದ್ವಿ ಮಾತಾನಂದಮಯಿಯವರ ಪ್ರಾರ್ಥನೆಯೊಂದಿಗೆ ಶ್ರೀಗಳು ಜ್ಯೋತಿ ಬೆಳಗಿಸಿ ಧಾರ್ಮಿಕ ಸಭೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗುರುದೇವ ಸೇವಾ ಬಳಗ ಮಹಾರಾಷ್ಟ್ರದ ಅಧ್ಯಕ್ಷ ದಾಮೋದರ್ ಶೆಟ್ಟಿ, ಮಾಜಿ ಅಧ್ಯಕ್ಷ ಹಿರಿಯರಾದ ವಾಮಯ್ಯ ಶೆಟ್ಟಿ, ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ ಕಡಂದಲೆ ಪರಾರಿ, ಗುರುದೇವ ಸೇವಾ ಬಳಗ ಮುಂಬಯಿ ಮಹಾರಾಷ್ಟ್ರ ಘಟಕದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ರವಿ ಶೆಟ್ಟಿ, ಗುರುದೇವ ಸೇವಾ ಬಳಗದ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಘಟಕದ ಕಾರ್ಯಾಧ್ಯಕ್ಷೆ ಶ್ವೇತಾ ಚಂದ್ರಹಾಸ ರೈ, ರೇವತಿ ವಾಮಯ್ಯ ಶೆಟ್ಟಿ, ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಬೊಳ್ನಾಡು ಗುತ್ತು ಚಂದ್ರಹಾಸ ರೈ, ಮೋಹನ್ ಹೆಗ್ಡೆ ಥಾಣೆ, ಸಚಿನ್ ಶೆಟ್ಟಿ, ಯುವ ವಿಭಾಗದ ಡಾ. ಅದೀಪ್ ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷ ಶ್ಯಾಮ ಎನ್ ಶೆಟ್ಟಿ, ರಮೇಶ್ ಶೆಟ್ಟಿ ಸಿಬಿಡಿ, ಐಕಳ ವಿಶ್ವನಾಥ್ ಶೆಟ್ಟಿ, ಲಕ್ಷ್ಮಿ ಕ್ವಾಟರಿಂಗ್ ಮಾಲಕರಾದ ಸತೀಶ್ ಶೆಟ್ಟಿ, ಪಿ ಡಿ ಶೆಟ್ಟಿ, ಜಯಂತ್ ಪಕ್ಕಳ ಮೊದಲಾದವರು ಉಪಸ್ಥಿತರಿದ್ದರು.
ಗುರುದೇವ ಸೇವಾ ಬಳಗದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶ್ರೀಗಳನ್ನು ಸ್ವಾಗತಿಸಿದರು. ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ವತಿಯಿಂದ ಕ್ಷೇತ್ರದಲ್ಲಿ ಜರಗುವ ಸಮಾಜಪರ ಕಾರ್ಯಗಳಿಗಾಗಿ ಗುರುವಂದನೆ ಮೂಲಕ ದೇಣಿಗೆ ನೀಡಲಾಯಿತು. ಸ್ವಾಮೀಜಿಯವರು ವಾಮಯ್ಯ ಶೆಟ್ಟಿ ದಂಪತಿ, ಲಕ್ಷ್ಮಿ ಕ್ಯಾಟರಿಂಗ್ ನ ಮಾಲಕರಾದ ಸತೀಶ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಐಕಳ, ಜಯಂತ ಪಕ್ಕಳ ಅವರನ್ನು ವಿಶೇಷವಾಗಿ ಗೌರವಿಸಿದರು. ದಿನೇಶ್ ಶೆಟ್ಟಿ ಡೊಂಬಿವಲಿ ಮತ್ತು ವೀಣಾ ಡಿ. ಶೆಟ್ಟಿ ದಂಪತಿ ಪಾದುಕ ಪೂಜಾ ನೆರವೇರಿಸಿದರು. ಪೇಟೆಮನೆ ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಗುರುಭಕ್ತರು ಭಾಗವಹಿಸಿದ್ದರು.
ಚಿತ್ರ, ವರದಿ : ದಿನೇಶ್ ಕುಲಾಲ್