ಗುರುಗಳು ಅಂದಾಗ ನಮಗೆ ನೆನಪಿಗೆ ಬರೋದು ಬರೀ ಪಾಠ ಮಾಡಿದ ಗುರುಗಳು. ನಿಜ, ಅದರಲ್ಲೇನು ತಪ್ಪಿಲ್ಲ. ಒಮ್ಮೆ ಬದುಕಿನ ಕಿರುದಾರಿಯಿಂದ ನಡೆದುಕೊಂಡು ಬಂದು ಹೆದ್ದಾರಿಯ ತನಕ ಕೈ ಹಿಡಿದವರು. ಕೈ ಕೊಟ್ಟವರು, ಬೆಳೆಸಿದವರು, ಬೆರೆಸಿದವರು ಬಳಸಿದವರು ಎಲ್ಲರೂ ಗುರುಗಳೇ ಅಲ್ವಾ? ನಮಗೆ ಯಾರು ಯಾವ ರೀತಿ ಗುರುಗಳು ಆದ್ರು ಅನ್ನೋದರ ಬಗ್ಗೆ ನಾವು ಮಾತಾಡೋಣ. ಗುರು ಪೂರ್ಣಿಮೆಯಂದು ಎಲ್ಲಾ ಗುರುಗಳನ್ನು ಅವರ ಉಪದೇಶ, ಉಪನಿಷತ್ತನ್ನು ಮನಸಾರೆ ಒಪ್ಪಿಕೊಳ್ಳೋಣ. ಅಪ್ಪಿಕೊಳ್ಳೋಣ. ಬಾಲ್ಯದಲ್ಲಿ ನಮ್ಮ ಯೋಚನಾ ಶಕ್ತಿಯೇ ನಮಗೆ ಗುರು ಮತ್ತೆ ಆಗುತ್ತೆ ಜೀವನ ಶುರು. ಕಲಿಯುವ, ಕಲಿಸುವ, ಮುನ್ನಡೆಯುವ, ಮುನ್ನಡೆಸುವ, ಮುಗ್ಗರಿಸುವ, ಮಗ್ಗುಲು ಬದಲಿಸುವ ಪಾಠ. ಒಂದು ಕಾಲದಲ್ಲಿ ಗುರುಕುಲವಿತ್ತು. ಶಿಷ್ಯರನ್ನು ಬಲಿಷ್ಠರನ್ನಾಗಿ ಮಾಡುವ ಸರಸ್ವತಿ ದೇಗುಲ ಈಗ ಅದುವೇ ವಿಶ್ವವಿದ್ಯಾಲಯವಾಗಿ ವಿಶ್ವರೂಪ ಪಡೆದಿದೆ. ನಮ್ಮಕಾಲದ ಗುರುಗಳ ಹಾಗೆ ಈಗಿನ ಕಾಲದಲ್ಲಿ ಅಂತಹ ಗುರುಗಳು ಇಲ್ಲ ಅನ್ನೋದು ವಾಡಿಕೆ. ಕೆಲವೊಮ್ಮೆ ಅದೂ ಸರಿ ಅಂತಾನೂ ಅನಿಸ್ತದೆ. ಆವಾಗ ಗುರುಗಳು ಹೆಚ್ಚಾಗಿ ಪರಿವಾರದ ಸದಸ್ಯರಂತೆ ಇದ್ದರು. ನನಗೊಬ್ಬನಿಗೇ ಅಲ್ಲ ನಮ್ಮ ಕ್ಲಾಸಿಗೆ ಅಷ್ಟೇ ಅಲ್ಲ ಎಲ್ಲಾ ಕ್ಲಾಸಿಗೂ ಕೂಡ. ಇಂತಹ ಮನಸ್ಸನ್ನು ಅವರಿಗೆ ದೇವರು ಹೇಗೆ ಕರುಣಿಸಿದರೋ ನಾ ಅರಿಯೇ. ಹಿರಿಯರು ಹೇಳಿದ ಹಾಗೆ ‘ಮುಂದಿನಿಂದ ಗುರಿ- ಹಿಂದಿನಿಂದ ಗುರು‘ ಇದ್ದರೆ ಬದುಕು ಸ್ಪಟಿಕದಂತೆ ಸ್ಪಷ್ಟ ಅನ್ನೋ ಹಾಗೇ. ನಮ್ಮ ಗುರುಗಳ ಕ್ಲಾಸ್ ಅಂದಾಕ್ಷಣ ಯಾಕೋ ಮನಸಲ್ಲಿ ಹುಮ್ಮಸ್ಸು ಖುಷಿ ಉತ್ಸಾಹ. ಅವರು ಪಾಠ ಮಾಡುವ ವಿಧಾನ ಅವರು ಮಾತಾಡುವ ರೀತಿ ಕೊಡುವ ಉಪಮೆ ಇವೆಲ್ಲವೂ ನಾನೆಲ್ಲೂ ಕಂಡೇ ಇಲ್ಲ. ಉಸಿರು ಇರೋ ತನಕ ಜೀವ ಇರುತ್ತೇವೆ ಅನ್ನೋ ಹಾಗೇ ಜೀವಂತ ಇರೋ ತನಕ ಅವರಿಗೆ ಋಣಿಯಾಗಿರಬೇಕು.
ಅವರು ಇನ್ನಷ್ಟು ಮನಸಿಗೆ ಹತ್ತಿರ ಆಗೋಕೆ ಕಾರಣ ಮಕ್ಕಳ ಮನಸ್ಸನ್ನು ಬಹಳವಾಗಿ ಅರ್ಥೈಸಿಕೊಳ್ಳುತ್ತಿದ್ದರು. ನಮಗೆಲ್ಲ ಗೌರವದ ಜೊತೆಗೆ ಭಯನೂ ಇತ್ತು. ನಮಗೆ ಬರೀ ಕಲಿಕೆ ಅಲ್ಲದೆ ದೇಶದ ಮೇಲಿನ ಅಭಿಮಾನ, ಪ್ರಕೃತಿ ಉಳಿಸುವ ಅಭಿಯಾನ, ನಾಟಕ ಯಕ್ಷಗಾನ, ಪದಬಂಧದ ಅನುಬಂಧ, ಪ್ರಬಂಧ, ಅಂದ- ಚಂದ ಒಳಿತು- ಕೆಡುಕನ್ನು ಎಲ್ಲವನ್ನು ತಿದ್ದೀ ತೀಡಿ ಹೇಳಿಕೊಡುವುದರ ಜೊತೆಗೆ ಹೊಟ್ಟೆ ತುಂಬಾ ತಿಂಡಿ ತಿನ್ನಿಸಿ ಕಳುಹಿಸುತ್ತಿದ್ದರು.

ನಾವು ಹೋಗ್ತಿದ್ದ ಶಾಲೆ ಮನೆಯಿಂದ 5 ಮೈಲೀ ದೂರ ಮಾರ್ನಾಡ್ ಅನ್ನೋ ಚಿಕ್ಕ ಕೊಂಪೆ ಅಲ್ಲ ಹರುಕು ಮುರುಕು ಹಳ್ಳಿ. ಬಸ್ಸು ಕಾಣದ, ಡಾಂಬಾರು ನೋಡದ ,ಕೆಂಪು ರೋಡಿನಿಂದ ಒಂದು ಇಪ್ಪತ್ತೈದು ಮಕ್ಕಳು ಹೊಲ, ಹೊಳೆ, ದಾಟಿ ಪೇಟೆಯ ರಾಜಮಾರ್ಗದ ಜೈನ ಪದವಿಪೂರ್ವ ಶಾಲೆ ಕಾಲೇಜಿಗೆ ನಡೆದುಕೊಂಡೇ ಹೋಗ್ತಾ ಇದ್ದ ಸಮಯ ಅದು. ಸಂಜೆ ಕ್ಲಾಸ್ ಮುಗಿದ ತಕ್ಷಣ ಆಗುವ ಯಕ್ಷಗಾನ, ನಾಟಕ ರಿಹರ್ಸಲ್ ಮುಗಿಸಿ ಮತ್ತೆ ನಡೆದುಕೊಂಡೆ ಮನೆಗೆ ಹೋಗಬೇಕು. ಈ ಮಧ್ಯೆ ಹೊಟ್ಟೆ ಚುರ್ ಅನ್ನಲು ಶುರು ಆಗುತ್ತೆ. ಮೇಸ್ಟ್ರು ಸ್ವತಃ ಹೋಗಿ ನವೀನರ ಮಸಲಾ ದೋಸೆಯೋ, ಇಲ್ಲಾ ವೈಶಾಲಿ ಹೋಟೆಲಿನ ಬನ್ಸೋ ಎಲ್ಲಾ ಮಕ್ಕಳಿಗೂ ತಂದು ಹಂಚುತ್ತಿದ್ದರು. ಅವರು ಕಲಿಸಿದ ನಾಟಕ ಯಕ್ಷಗಾನಗಳನ್ನು ಬರೀ ಶಾಲೆಗೆ ಅಷ್ಟೇ ಸೀಮಿತವಾಗಿರಿಸದೆ ಅಲ್ಲಲ್ಲಿ ಪ್ರದರ್ಶನ ಕೊಡಿಸುತ್ತಿದ್ದರು. ಮತ್ತೆ ಮನೆಗೆ ತಲುಪಿಸುತ್ತಿದ್ದರು. ನನ್ನನ್ನಷ್ಟೇ ಅಲ್ಲ ಇಡೀ ತಂಡದ ಜವಾಬ್ಧಾರಿ ತೆಗೆದುಕೊಳ್ಳುತ್ತಿದ್ದರು. ಬದುಕು ತುಂಬಾ ಕಲಿಸಿದೆ. ಒಮ್ಮೆ ತಿರುಗಿ ನೋಡಿದಾಗ ನಾವಾದರೂ ಇಷ್ಟು ಮಾಡಲು ಸಾಧ್ಯವೇ? ಈಗಿನ ಮೇಷ್ಟ್ರುಗಳು ಮಾಡುತ್ತಾರಾ? ಯಾರ ಮಕ್ಕಳಿಗಾಗಿ, ಯಾವ ಮನೆಗಾಗಿ? ಚಿಕ್ಕಾಸು ಲಾಭ ಇದೆಯಾ? ಬರೀ ನಿಸ್ವಾರ್ಥ ಸೇವೆ ಅಲ್ಲದೆ ಇನ್ನೇನು? ಆವಾಗಿನ ನಾವೇ ನಿಜವಾದ ಅದೃಷ್ಟಶಾಲಿ ಮಕ್ಕಳು. ನಮ್ಮ ಎಲ್ಲರ ಬದುಕು ಕಟ್ಟಲು ಕಟ್ಟಿಕೊಟ್ಟ ಆತ್ಮವಿಶ್ವಾಸದ ರೀತಿಯೇ ಬೇರೆ. ನಮ್ಮ ಮೇಸ್ಟ್ರು ಅನ್ನೋ ಅಭಿಮಾನ, ಹೆಮ್ಮೆ, ಗೌರವಕ್ಕೆ ಬೆಲೆಯೇ ಕಟ್ಟಲಾಗದು. ನಮ್ಮ ಬದುಕು ಕಟ್ಟಿಕೊಡಲು ನಮ್ಮ ಬೆನ್ನು ತಟ್ಟಿದ ಮನಸ್ಸು ಮುಟ್ಟಿದ ಹಲವು ಗುರುಗಳನ್ನು ನೆನಪಿಸಲೇಬೇಕು. ಪಾಠದ ಗುರುಗಳು ಅವರಾದರೆ ನಾಟಕದ ಗುರುಗಳೇ ಬೇರೆ, ಮನೆಯ ಗುರುಗಳೇ ಬೇರೆ.ನಾವು ಕೃಷಿಕರು, ಕೃಷಿಯ ಗುರುವೇ ಮನೆಯವರು. ಕೃಷಿಯ ಎಲ್ಲಾ ಕೆಲಸ ಕಾರ್ಯಗಳಿಗೆ ಕೈ ಜೋಡಿಸುತ್ತಿದ್ದ ನಮಗೆ ಯಾವ ಕೆಲಸವೂ ಗೊತ್ತಿಲ್ಲ ಅನ್ನೋ ಹಾಗಿಲ್ಲ. ಶಾಲೆಯ ಮನೆಯ ಪಾಠಗಳು ಜೀವನ ಪರ್ಯಂತ ಮರೆಯೋಕೆ ಸಾಧ್ಯನಾ? ಅದರಲ್ಲಿ ಒಂದು ಉದಾಹರಣೆ ನಮ್ಮ ಪ್ರಾದ್ಯಾಪಕರಾದ ಮುನಿರಾಜ ರೆಂಜಾಳರ ಮಾತು ನನ್ನ ಮನಸ್ಸಿಗೆ ಬಹಳ ಹತ್ತಿರವಾದ ಮಾತು. ನಿಮ್ಮ ಕಿವಿಗೂ ತಲುಪಿಸುವೆ ಸ್ವಲ್ಪ ಮನಸ್ಸಿಗೆ ಹಚ್ಚಿಕೊಳ್ಳಿ. ಮಕ್ಕಳೇ ನೀವು ಒಂದು ಕಾಫೀ ಲೋಟ ಹಿಡಿದುಕೊಂಡಿದ್ದೀರಿ. ಆವಾಗ ಎದುರಿನಿಂದ ಬಂದ ಯಾರೋ ಒಬ್ಬ ಹುಡುಗ ನಿಮಗೆ ಡಿಕ್ಕಿ ಹೊಡೆಯುತ್ತಾನೆ. ಆಗ ನಿಮ್ಮ ಕೈಯಲ್ಲಿದ್ದ ಕಾಫೀ ಕೆಳಗೆ ಚೆಲ್ಲುತ್ತದೆ. ಕಾಫೀ ಯಾಕೆ ಕೆಳಗೆ ಚೆಲ್ಲಿತು? ಯಾರೋ ಒಬ್ಬ ಹುಡುಗ ಬಂದು ನಿಮಗೆ ಡಿಕ್ಕಿ ಹೊಡೆದದ್ದರಿಂದ ಅಲ್ವಾ. ತಪ್ಪು ಉತ್ತರ. ಕಾಫೀ ಯಾಕೆ ಕೆಳಗೆ ಚೆಲ್ಲಿತು ಎಂದರೆ ಲೋಟದಲ್ಲಿ ಕಾಫೀ ಇದ್ದುದರಿಂದ. ಅಕಸ್ಮಾತ್ ಆ ಕಪ್ ನಲ್ಲಿ ಚಹಾ ಇದ್ದರೆ, ಚಹಾ ಕೆಳಗೆ ಚೆಲ್ಲುತ್ತಿತ್ತು. ಕಪ್ ನ ಒಳಗೆ ಏನಿದೆಯೋ ಅದೇ ಅಲ್ಲವೇ ಚೆಲ್ಲುವುದು? ಹಾಗಾಗಿ, ಮಕ್ಕಳೇ ಬದುಕಿನಲ್ಲಿ ಮುನ್ನಡೆಯುವಾಗ, ಬದುಕು ಕಟ್ಟುವಾಗ ಯಾವಾಗ ಬೇಕಾದರೂ ಬದುಕು ನಿಮ್ಮನ್ನು ಅಲ್ಲಾಡಿಸಬಹುದು. ಆಗ, ನಿಮ್ಮ ಒಳಗೆ ಏನು ಇದೆಯೋ ಅದು ಹೊರಗೆ ಬರುತ್ತದೆ. ಆದ್ದರಿಂದ ನಾವು ಈಗ ಕೇಳಿಕೊಳ್ಳಬಹುದಾದ ಪ್ರಶ್ನೆ ಏನೆಂದರೆ, “ನಮ್ಮ ಒಳಗೆ ಇರುವುದು ಏನು? ಬದುಕು ನಮ್ಮ ಜೊತೆ ಕಠಿಣವಾಗಿ ವರ್ತಿಸಲು ಶುರು ಮಾಡಿದಾಗ, ಯಾವುದು ನಮ್ಮ ಒಳಗಿಂದ ಹೊರಗೆ ಚೆಲ್ಲಲ್ಪಡುತ್ತದೆ? ಖುಶಿ, ಕೃತಜ್ಞತೆ, ವಿನಮ್ರತೆ? ಅಥವಾ ಕೋಪ, ಕಹಿ, ಕೆಟ್ಟ ಮಾತು, ಪ್ರತಿಕ್ರಿಯೆ? ಬದುಕು ನಮಗೆ ಲೋಟ ದಯಪಾಲಿಸಿದೆ. ಅದರೊಳಗೆ ಏನು ತುಂಬಿಟ್ಟುಕೊಳ್ಳಬೇಕು ಎನ್ನುವುದು ನಮಗೆ ಬಿಟ್ಟಿದ್ದು.
ಈ ಕ್ಷಣದಿಂದ ಮಕ್ಕಳೇ ನಾವು ನೀವು ನಮ್ಮ ಜೀವನ ಲೋಟದ ಒಳಗೆ ಕೃತಜ್ಞತೆ, ಕ್ಷಮೆ, ಖುಶಿ, ಅಂತಃಕರಣ, ವಿನಯ, ಪ್ರೀತಿ ತುಂಬಿಕೊಳ್ಳಲು ಪ್ರಯತ್ನ ಶುರು ಮಾಡೋಣ. ಅಂದಾಗ ಶಾಲೆಯ ಲಾಂಗ್ ಬೆಲ್ ಸದ್ದು ಕೇಳಿತು. ಮಕ್ಕಳು ಯಾರು ಅಲುಗಾಡದೆ ನೀತಿ ಕಥೆ ಇನ್ನೂ ಇದೆ ಅಂತ ಮೌನದಲ್ಲೇ ಇಡೀ ಕ್ಲಾಸ್ ಕೂತಿದ್ದಾಗ ನಾವೆಲ್ಲಾ ಅವರ ಮಾತನ್ನು ಮನಸಾರೆ ಆಲಿಸಿದೆವು ಎನ್ನುವ ಖುಷಿಯ ಭಾವನೆ ಮೇಷ್ಟ್ರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಈಗಲು ಕಣ್ಣೆದುರಿಗೆ ಬರುತ್ತೆ. ಕಾಲಗಳು ಸರಿಯುತ್ತಾ ಹೋದವು. ನಾವೇ ಮದ್ಯಾಹ್ನದ ಹೊಸ್ತಿಲನ್ನು ದಾಟಿ ಮುಸ್ಸಂಜೆಯ ಬಾಗಿಲಿನಲ್ಲಿ ನಿಂತ ಕ್ಷಣ! ಈಗಲೂ ನಮ್ಮ ಗುರುಗಳ ನಂಟು ಹಾಗೇ ಇದೆ ಅನ್ನಲು ಖುಷಿ ಆಗ್ತಿದೆ. ಈಗಲೂ ಪರಿವಾರ ಸಮೇತ ಅವರ ಮನೆಗೆ ಹೋಗುವೆವು. ಬಾಯಿ ತುಂಬಾ ಮಾತಾಡಿ ಅವರ ಆಶಿರ್ವಾದದ ಜೊತೆ ಹೊಟ್ಟೆ ತುಂಬಾ ಉಣ ಬಡಿಸಿ ಜೊತೆಗೆ ತಿಂಡಿ ಕಟ್ಟಿಕೊಡುವ ಅವರ ಪ್ರೀತಿಯ ನಂಟಿಗೆ ಹೇಸರೇನಿಡಲಿ ?ಕೃಷಿ ಸಾಕು ಇನ್ನೇನಾದರೂ ಸಾಧಿಸು ಅಂತ ಪೇಟೆ ಕಡೇ ಮಾಡಿದ ಮುಖ ನಮ್ಮನ್ನು ಮುಂಬೈ ಮಹಾನಗರಿಗೆ ತಂದಿಳಿಸಿದ್ದು ನಿಜ. ಮಾರ್ನಾಡಿನ ಕಿರುದಾರಿ ಮುಂಬೈಯ ಹೆದ್ದಾರಿಗೆ ಜೋಡುತ್ತೆ ಅನ್ನೋದು ತಿಳಿದಾಗ ಅಲ್ಲಿಯೂ ಕೂತುಹಲ ಮೂಡಿದ್ದು ನಿಜ . ಕಲಿಯುವ ಹುಚ್ಚು, ಬದುಕುವ ಅನಿವಾರ್ಯತೆ, ಬದುಕು ಕಟ್ಟುವ ಹುಂಬು ಧೈರ್ಯ
ಇವೆಲ್ಲವನ್ನು ಮುಂಬಾದೇವಿ ಸುಳ್ಳಾಗಿಸಿಲ್ಲ. ಇಲ್ಲಿಯ ಭಾಷೆ ಜೀವನ ಕ್ರಮ ಬದುಕು ಬವಣೆ ಇವೆಲ್ಲದಕ್ಕೂ ಹೊಂದಾಣಿಕೆ ಮಾಡ್ತಾ ಆಗ್ತಾ ಕಲಿತದ್ದು ಸ್ವಲ್ಪ, ಕಲಿಯೋಕಿರೋದು ಇನ್ನು ಬಹಳ ಇದೆ ಅನ್ನುವ ಹಾಗೆ ಭಾಸವಾಗುತ್ತೆ. ಆದರೂ ಮುಂಬೈಯಲ್ಲಿ ಸಿಕ್ಕ ಗುರುಗಳು ಕಮ್ಮಿ ಏನಲ್ಲ. ಮೊದಲೇ ಹೇಳಿದ ಹಾಗೆ ಇಲ್ಲಿ ವಸ್ತುವು ಗುರು, ಕಲಿಸಿದವರು ಗುರು, ದಾರಿ ತೋರಿದವರು ಗುರು, ಕೈ ಹಿಡಿದವರು ಕೈ ಕೊಟ್ಟವರು ಗುರುಗಳೇ! ಮುಂಬೈ ವಿಶ್ವವಿದ್ಯಾಲಯದ ಎದುರಿನ ಕಲ್ಲಬೆಂಚಿಗೂ ಋಣಿ. ಅದೇಷ್ಟೋ ದಿನ ಕೂರಲು, ಮಲಗಲು, ಓದಲು, ಕನಸು ಕಾಣಲು, ಕನಸು ಮಾರಲು ಜಾಗ ಕೊಟ್ಟಿತ್ತು. ಕೆಲಸ ಮುಗಿಸಿ ನೈಟ್ ಕಾಲೇಜು ಹೋಗಿ ಹಿಂತಿರುಗಿ ಬಂದು ಮತ್ತೆ ಕೆ.ಸಿ ಕಾಲೇಜಿನ ಮುಂಬಾಗ ವರಾಂಡದಲ್ಲಿ ಮಕ್ಕಳೆಲ್ಲಾ ಜೊತೆಯಾಗಿ ಮಲಗಿ ನಕ್ಷತ್ರಗಳನ್ನು ನೋಡಿ ಕನಸು ಮಾರುವ ಕನಸು ಕಾಣುತ್ತಾ ನಿದ್ದೆ ಹೋಗುವ ಖುಷಿಯೇ ಬೇರೆ! ಕೆ.ಸಿ ಕಾಲೇಜಿನ ವರಾಂಡವೂ ಗುರುವಿನ ಸ್ಥಾನವನ್ನು ತುಂಬುತ್ತೆ. ಬೆಳಗ್ಗಿನ ಮೂರರ ಅಸುಪಾಸು ಚುಮು ಚುಮು ಚಳಿಗೆ ಬದಿಯಲ್ಲಿರುವ ಬಾದಾಮಿನ ಮರದ ಎಲೆಗಳ ತುದಿಯಲ್ಲಿನ ಎಳಸು ಹನಿ ಮೈ ಮೇಲೆ ಬಿದ್ದು ತಟ್ಟನೆ ಎಚ್ಚರವಾದಾಗ ನಿದ್ದೆಯ ಮಂಪರಲ್ಲಿ ಅರೆಕಣ್ಣು ಮುಚ್ಚಿ ಬಾನನ್ನು ನೋಡಿದಾಗ, ಚಂದಿರ ಯಾಕೋ ಮೋಡಗಳ ನಡುವೆ ಮರೆಯಾಗಿ ಓಡುತ್ತಿದ್ದ. ಆದರೆ ಸುತ್ತೆಲ್ಲಾ ನಕ್ಷತ್ರ ಪುಂಜಗಳು ತಟಸ್ಥವಾಗಿದ್ದವು. ಈ ಸನ್ನಿವೇಶ ಯಾವ ಕೋಟಿ ಬಂಗಲೆಯಲ್ಲಿ ಸಿಗಲು ಸಾಧ್ಯ ನೋಡಿ. ಮನಸು ತುಂಬಿಸಿಕೊಂಡು ಖುಷಿಯಿಂದ ಮೈಮರೆತು ಅಹಾ ಬದುಕೇ ಎಷ್ಟು ಖುಷಿ ಉಣಬಡಿಸುವ ಸ್ವಚ್ಚಂದ ಆಕಾಶದಂತಿದೆ ಅಂತೆಲ್ಲಾ ತಲೆಗೆ ಬಂದಾಗ, ಅಮ್ಮ ಕೊಟ್ಟ ಹೊದಿಕೆ ಯಾರೋ ಎತ್ತಿಕೊಂಡು ಹೋಗಿದ್ದರು. ಹಾಗಾಗಿ ಮೋಡ ಬಾನು ನಕ್ಷತ್ರ ಕಾಣುತ್ತಿತ್ತು ಅನ್ನೋದು ಆಮೇಲೆ ಅರಿವಾಯ್ತು. ಮುಂಬಾ ನಗರಿಯಲ್ಲಿ ಕೆಲಸ ಕಲಿಸಿದವರು, ಕೆಲಸ ಕಿತ್ತವರು, ಕೊಟ್ಟವರು, ಅವಕಾಶ ಕಲ್ಪಿಸಿದವರು, ಕೈ ನೀಡಿದವರು, ಕಾಲೆಳೆದವರು, ಮುಖವಾಡ ಹಾಕಿ ನಂಬಿಗಸ್ತರ ಕೋಟು ಹಾಕಿ ನೋಟು ಮಾಡುವವರು ಗುರುಗಳೇ, ಹಾಂ ನನ್ನ ಪ್ರೀತಿಯ ಮರೀನ್ ಡ್ರೈವ್ ಆತ್ಮೀಯ ಗುರು, ನನ್ನ ಖುಷಿ , ದುಖಃ ಪ್ರೀತಿ ವಾತ್ಸಲ್ಯ ಎಲ್ಲವನ್ನೂ ಈ ಉಪ್ಪು ನೀರಿನ ಸಮುದ್ರದ ಜೊತೆ ಹಂಚಿಕೊಳ್ಳುತ್ತಿದ್ದೆ. ಮೌನವಾಗಿ ತಂಗಾಳಿ ಬೀಸುತ್ತಾ ನನ್ನ ಮಾತನ್ನು ಚಾಚೂ ತಪ್ಪದೆ ಆಲಿಸುತಿತ್ತು. ದೂರದಲ್ಲಿ ದೊಡ್ಡ ದೊಡ್ಡ ಹಡಗಿನಲ್ಲಿ ಚಿಮಿಣಿ ದೀಪದಂತೆ ಉರಿಯುವ ದೀಪಗಳು ಸಾಂತ್ವನ ಹೇಳುವಂತೆ ಮಿನುಗುತ್ತಿದ್ದವು. ಕೊಲಾಬಾದ ಗಗನ ಚುಂಬಿ ಕಟ್ಟಡಕ್ಕೆ ಅಂಟಿದ ನಿಯಾನ್ ಬೋರ್ಡುಗಳು ನೋಡಿ ನಕ್ಕಂತೆ ಕಂಡು ಬರುತ್ತಿತ್ತು. ಆವಾಗ ಗಸ್ತು ತಿರುಗುವ ಪೋಲಿಸರು ಬಂದು ಎಚ್ಚರಿಸುವ ತನಕವೂ ಯೋಚನೆ ಯೋಜನೆಯ ಕಾರುಬಾರು ಮನಸ್ಸೊಳಗೆ ನಡೆಯುತ್ತಲೇ ಇತ್ತು. ಇವೆಲ್ಲವೂ ಗುರುಗಳೇ ಅಲ್ವೇ. ಮುಂಬೈನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಸಂಘ ಸಂಸ್ಥೆಗಳಿಗೆ, ವಿಶ್ವವಿದ್ಯಾಲಯಕ್ಕೆ ವಂದನೆಗಳು. ನನಗೆ ಬದುಕಲು ಪಾಠ ಕಲಿಸಿದ ಬದುಕಿನ ಪಾಠ ಕಲಿಸಿದ ಎಲ್ಲಾ ಗುರುಗಳಿಗೂ ಗುರು ಪೂರ್ಣಿಮೆಯಂದು ಮಂಡಿಯೂರಿ ವಂದನೆಗಳನ್ನು ಸಲ್ಲಿಸುವೆ. ನಿಮ್ಮೆಲ್ಲರ ಆಶೀರ್ವಾದ ಬೆಂಗಾವಲಾಗಲಿ . ನಂಟು ಬೆಚ್ಚಗಿರಲಿ.
ಲೇಖನ : ಸೂರಿ ಶೆಟ್ಟಿ ಮಾರ್ನಾಡ್