ತಾಲೂಕು, ಜಿಲ್ಲೆ, ರಾಜ್ಯ ಹೀಗೆ ಒಂದಲ್ಲ ಒಟ್ಟು ಮೂರು ಹಂತದ ರಾಜ್ಯೋತ್ಸವ ಪ್ರಶಸ್ತಿಗೆ ಹತ್ತಾರು ಬಾರಿ ಅರ್ಜಿ ಹಾಕಿ ಹಾಕಿ ಹೈರಾಣಗೊಂಡ ನಡುವಯಸ್ಸಿನ ‘ಅಸಾಧಾರಣ ಸಾಧಕ’ರೊಬ್ಬರನ್ನು ಪ್ರಯಾಣದುದ್ದ ಪಕ್ಕದ ಸೀಟಲ್ಲಿ ಭೇಟಿಯಾಗುವ ಪ್ರಸಂಗವೊಂದು ಒದಗಿತು. ಯಾವುದೇ ಸಂಕೋಚ ನಾಚಿಕೆಯಿಲ್ಲದೆ, “ತಪ್ಪು ಸರ್ಕಾರದಲ್ಲ, ನನ್ನ ಅರ್ಜಿಯದ್ದೇ ಇರಬೇಕು” ಎಂದು ಅಳು ನುಂಗಿದ ಮುಖವಾಡದೊಂದಿಗೆ, “ಮುಂದಿನ ಸಲ ಅರ್ಜಿಗೊಮ್ಮೆ ನೀವು ಕಣ್ಣಾಡಿಸಬೇಕು” ಎಂದಾಗ ಸಹಜವಾಗಿಯೆ ನಾನು ಗಲಿಬಿಲಿಗೊಂಡೆ. ಸಮಾಜಕ್ಕೆ ಅವರು ಮಾಡಿದ ಸೇವೆಗಳೆಂದರೆ ಒಂದಷ್ಟು ಶಾಲಾ ಮಕ್ಕಳಿಗೆ ಫೀಸು ತುಂಬಿಸಿದದ್ದು, ಇವೆಲ್ಲವೂ ಸಂದೇಹವಿಲ್ಲದ ಸಹಕಾರವೇ. ಆದರೆ ಆ ಸತ್ಯದ ಮೇಲೆ ಒಣಮಳೆ ಸುರಿಸುತ್ತಿದ್ದ ಅವರ ಮತ್ತೊಂದು ನಿಜ ಈಗ ನನ್ನ ಕಿವಿಗೆ ಬಡಿದುಕೊಂಡಿತು. ಕಳೆದ ಆರೇಳು ವರ್ಷಗಳಿಂದ ಅವರ ಉದ್ಯಮ, ಗಳಿಕೆ, ಜನಪ್ರೀತಿ ಎಲ್ಲಕ್ಕಿಂತಲೂ ಹೆಚ್ಚಾಗಿ ಅವರೊಳಗಡೆ ಸಮಾನಾಂತರವಾಗಿ ಬೆಳೆಯುತ್ತಿದ್ದದ್ದು ‘ಪ್ರಶಸ್ತಿ ಭಾವನೆ’ ಎಂಬ ಒಂದು ಹೊಸಬೆಳೆ. ಸುಮಾರು ಮೂರು ದಶಕಗಳ ಹಿಂದಿನ ಒಂದು ಘಟನೆಯನ್ನು ನಾನು ಹೇಳಲೇಬೇಕು. ಕರಾವಳಿ ಕರ್ನಾಟಕದ ಪ್ರಸಿದ್ಧ ಶೈಕ್ಷಣಿಕ ಸಾಧಕರೊಬ್ಬರಿಗೆ ಇಂದಿರಾಗಾಂಧಿ ಹೆಸರಿನ ರಾಷ್ಟ್ರಮಟ್ಟದ ಪ್ರಶಸ್ತಿಯೊಂದು ಬಂತು. ನಿಜವಾಗಿಯೂ ಆ ಪ್ರಶಸ್ತಿಗೆ ಅವರು ಯೋಗ್ಯರೇ ಆಗಿದ್ದರು. ಅಕ್ಷರದಲ್ಲಿ ಅತ್ಯಂತ ಕಡಿಮೆ ಓದಿದ ಆ ವಿದ್ಯಾವಂತ ಸಾಧಕರು ಹಳ್ಳಿಗಾಡಲ್ಲಿ ಸಾಲು ಸಾಲು ಶಿಕ್ಷಣದ ತರಗತಿಗಳನ್ನು ತೆರೆದು ಮೆಡಿಕಲ್ ವರೆಗೂ ಅದನ್ನು ವಿಸ್ತರಿಸಿದ್ದರು. ಮೂಲತ: ಕೃಷಿಕರಾದ ಅವರ ಆ ಶೈಕ್ಷಣಿಕ ಚಿಂತನೆ ಒಂದು ಇಡೀ ದೇಶಕ್ಕೆ ಅದ್ಭುತ ಮಾದರಿಯೇ. ಅವರನ್ನು ಸಂದರ್ಶನ ಮಾಡುವ ಸದುದ್ದೇಶದಿಂದ ನಾನು ಮತ್ತು ನನ್ನ ಸಂಪಾದಕರು ಮನೆಯಲ್ಲೇ ಭೇಟಿಯಾಗಿ ವಿಸ್ತಾರವಾಗಿ ಅವರ ಯೋಚನೆ ಮತ್ತು ಯೋಜನೆಗಳನ್ನು ಬಗೆದಿದ್ದೆವು. ತಡರಾತ್ರಿ ಊಟ ಮುಗಿಸಿ ಹೊರಡುವ ಹೊತ್ತಿಗೆ ನಮ್ಮಿಬ್ಬರನ್ನು ತಮ್ಮ ಖಾಸಗಿ ಕೊಠಡಿಯೊಂದಕ್ಕೆ ಕರೆದು ಕಪಾಟಿನೊಳಗಡೆಯಿಂದ ಒಂದಷ್ಟು ಗರಿಗರಿ ನೋಟಿನ ಕಟ್ಟನ್ನು ತೆಗೆದು ನಮಗೆ ಕೊಡಲು ಮುಂದಾದರು. ತೀರಾ ಅನಿರೀಕ್ಷಿತವಾದ ಈ ಘಟನೆಯಿಂದ ವಿಚಲಿತರಾದ ನಮ್ಮನ್ನು ಅವರೂ ಗಲಿಬಿಲಿಯಿಂದಲೇ ನೋಡಿದರು. “ಬೇರೆನಿಲ್ಲ, ಇದು ನಿಮ್ಮ ಪೀಸು” ಎಂದರು. ನಿಮ್ಮ ಸಾಧನೆಯನ್ನು ನಮ್ಮ ಪತ್ರಿಕೆಯಲ್ಲಿ ಬರೆಯುವುದಕ್ಕೆ ನೀವು ಯಾವುದೇ ಸಂಭಾವನೆಯನ್ನು ಕೊಡುವ ಅಗತ್ಯ ಇಲ್ಲ, ಅದು ನಮ್ಮ ಕರ್ತವ್ಯ ಎಂದು ಉತ್ತರಿಸಿದರು ನನ್ನ ಸಂಪಾದಕರು. ಅದಕ್ಕೆ ಅವರು ಕೊಟ್ಟ ಪ್ರತ್ಯುತ್ತರ ತುಂಬಾ ಮಾರ್ಮಿಕವಾಗಿತ್ತು. ನನ್ನಿಂದ ಈವರೆಗೆ ದುಡ್ಡು ತಗೊಳ್ಳದೆ ಯಾವ ಪತ್ರಿಕೆಯವರೂ ಬರೆದೇ ಇಲ್ಲವಲ್ಲ, ಅದಕ್ಕಾಗಿ ನಾನು ಹೀಗೆ ಕೊಡುವ ದುಡ್ಡನ್ನು ಫೀಸು ಎಂದೆ. ಇತ್ತೀಚೆಗೆ ಪ್ರಶಸ್ತಿಗಳು ಕೂಡ… ಎಂದು ಅವರು ಮಾತನ್ನು ಅರ್ಧ ನುಂಗಿದರು. ಇದು ಆ ಕಾಲದ ಕಥೆಯಾದರೆ, ಇವತ್ತಿನ ಪರಿಸ್ಥಿತಿ ಹೇಗಿರಬಹುದೆಂದು ನೀವೇ ಯೋಚಿಸಿ. ಸಿಕ್ಕಿರುವ ಪ್ರಶಸ್ತಿಯ ಬಗ್ಗೆಯೂ ಅನುಮಾನ ಪಡುವ ಹಾಗೆ ಇತ್ತು ಅವರ ಆ ಮುಗ್ಧ ಉತ್ತರ.!

ಯಾರಾದರೂ ಮನುಷ್ಯ ಅರ್ಜಿ ಹಾಕಿ ಪ್ರಶಸ್ತಿಯನ್ನು ಕೇಳುವಾಗ, ಒಳಗೆ ಕೇಳಿಸಿಕೊಳ್ಳುವ ಗುಟ್ಟು ಧ್ವನಿ “ನನ್ನ ತಲೆ ಎಷ್ಟು ಬಾಗಬೇಕು?” ಅನ್ನೋದು. ಯಾವ ಪ್ರಶಸ್ತಿಗೆ ಯಾರ ಶಿಫಾರಸು ಬೇಕು? ಯಾವ ಹಾದಿ ಹಿಡಿದು ಹೋಗಬೇಕು? ಯಾವ ರಾಜಕೀಯ ಸಾಮಾಜಿಕ ಗುಂಪಿನ ಕಿವಿ ತಟ್ಟಬೇಕು? ಇದು ವ್ಯಕ್ತಿಗಿಂತ ವ್ಯವಸ್ಥೆಯ ನೈತಿಕತೆಯ ಪ್ರಶ್ನೆ. ಪ್ರಶಸ್ತಿಗಾಗಿ ಅರ್ಜಿಯನ್ನು ಬೇಡಿಕೊಂಡಾಗಲೇ ಆ ವ್ಯಕ್ತಿಯ ಗೌರವದ ಮೊದಲ ಹಂತ ತುಂಡಾಗುತ್ತದೆ. ಪಡೆಯುವವನ ನೈತಿಕತೆ ಪ್ರಶ್ನೆಗೆ ಬಂದುಗೊಳ್ಳುವಷ್ಟರಲ್ಲಿ, ಕೊಡುತ್ತಿರುವವರ ನೈತಿಕತೆ ಇನ್ನೊಂದು ದಿಕ್ಕಿನಲ್ಲಿ ಬಾಯಿ ಬಿಚ್ಚಿಕೊಂಡಿರುತ್ತದೆ. ಒಂದು ಕಾಲದಲ್ಲಿ ಸಾಹಿತ್ಯ, ಕಲೆ, ವಿಜ್ಞಾನ, ಸಮಾಜ ಸೇವೆ ಎಲ್ಲವೂ ನಿಷ್ಪಕ್ಷಪಾತದ ಕ್ಷೇತ್ರಗಳು. ಈಗ ಅಲ್ಲೂ ಆಯ್ಕೆ ಸಮಿತಿಯ ಮುಂದೆ ದಟ್ಟ ರಾಜಕೀಯದ ಬಿರುಕು, ವೈಯಕ್ತಿಕ ಒಲವುಗಳ ಬಣ್ಣ, ಗುಂಪುಗಾರಿಕೆಯ ಒಡನಾಟ ಪ್ರತಿಬಿಂಬಿಸುತ್ತಿವೆ. ಇಷ್ಟಾದರೂ ಆಗಾಗ ಇಂತಹ ಪ್ರಶಸ್ತಿಗಳು ನಿಜವಾದ ಅರ್ಹರಿಗೆ ಸಿಗುತ್ತವೆ ಅನ್ನುವುದು ಸಮಾಧಾನದ ಸಂಗತಿ. ನಮ್ಮ ಜನರೂ ಹಾಗೆಯೇ. ಯಾವುದೇ ಪ್ರಶಸ್ತಿ ಬಂದಿರಲಿ ವ್ಯಕ್ತಿಗತ ನೆಲೆಯಲ್ಲಿ ಮೌಲ್ಯಮಾಪನಕ್ಕೆ ಇಳಿಯುವುದೇ ಇಲ್ಲ. ಆತ ಯಾವ ದಾರಿಯಲ್ಲಿ ಅದನ್ನು ದಕ್ಕಿಸಿಕೊಂಡಿದ್ದಾನೆ ಎಂಬ ನೈತಿಕ ಪ್ರಶ್ನೆಯನ್ನು ಯಾರೂ ಕೇಳುವುದೇ ಇಲ್ಲ. ರಾಜ್ಯೋತ್ಸವ ಪ್ರಶಸ್ತಿ ಪಡೆದವನನೂ ಅವನ ಅಭಿಮಾನಿಗಳೂ ಸೇರಿ ಮರುದಿವ್ಸ ಸಿಕ್ಕಸಿಕ್ಕಲ್ಲಿ ರಾಜರಸ್ತೆಯುದ್ಧಕ್ಕೂ ಭಯಂಕರ ಫ್ಲೇಕ್ಸ್ ಗಳನ್ನು ಏರಿಸುತ್ತಾರೆ. ಅಭಿನಂದನೆಯ ಆ ಫ್ಲೆಕ್ಸಿನ ಒಂದು ಗಟ್ಟಿದಾರವನ್ನು ಅಲ್ಲೇ ಇರುವ ಮಹಾತ್ಮ ಗಾಂಧಿ ಮೂರ್ತಿಯ ತಲೆಗೆ ಕಟ್ಟಿದ್ದನ್ನು, ಸಾಹಿತ್ಯದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಫ್ಲೆಕ್ಸಿನ ಇನ್ನೊಂದು ಹಗ್ಗವನ್ನು ಬಸವಣ್ಣ ಕುವೆಂಪು ಮೂರ್ತಿಗೆ ಅಡ್ಡವಾಗಿ ಬಿಗಿದದ್ದನ್ನು ನಾನು ಕಂಡಿದ್ದೇನೆ. ಸಮಾಜ ಸೇವೆ, ಸಾಹಿತ್ಯಕ್ಕಾಗಿ ಪ್ರಶಸ್ತಿ ಗಿಟ್ಟಿಸಿದ ಇವರೆಲ್ಲ ಅದೇ ಗಾಂಧಿಯನಾಗಲೀ ಬಸವ ಕುವೆಂಪು ಅವರನ್ನಾಗಲೀ ಒಂದು ಅಕ್ಷರ ಓದಿಕೊಂಡಿದ್ದಾರೆ ಅನ್ನುವ ನಂಬಿಕೆ ನನಗಿಲ್ಲ.
ಇತ್ತೀಚಿಗೆ ತಾಲೂಕು ಮತ್ತು ಜಿಲ್ಲಾಡಳಿತಗಳು ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಮೂಲ ಉದ್ದೇಶ ಸ್ಥಳೀಯವಾಗಿ ಸದ್ದಿಲ್ಲದೆ ದುಡಿದಿರುವವರಿಗೆ ಮಾನ್ಯತೆ ನೀಡುವುದು. ಆದರೆ ಇಂದು ಅಲ್ಲಿ ಯಾರೂ ಬೇಕಾದರೂ ಗಿಟ್ಟಿಸಿಕೊಳ್ಳಬಹುದಾದ, ಖರೀದಿಸಿಕೊಳ್ಳಬಹುದಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿ ರಾಜ್ಯಮಟ್ಟದ ಗೌರವವಾಗಿತ್ತು. ಈಗ ಅದು ಜಿಲ್ಲೆ, ತಾಲೂಕು ಮಟ್ಟಗಳವರೆಗೂ ಇಳಿದು ಬಂದಿದೆ. ಮುಂದಿನ ಕೆಲವು ವರ್ಷಗಳಲ್ಲಿ ಗ್ರಾಮ ಮಟ್ಟಕ್ಕೂ ಬಂದು ಸೇರುವ ಸಾಧ್ಯತೆಗಳಿವೆ. ಪ್ರಶಸ್ತಿ ವಿಸ್ತರಣೆ ಕೆಟ್ಟದ್ದೇನಲ್ಲ, ಆದರೆ ಪ್ರಶಸ್ತಿಯನ್ನು ನೀಡುವ ಪ್ರಕ್ರಿಯೆ ಮಾತ್ರ ಗಂಭೀರತೆಯನ್ನು ಕಳೆದುಕೊಳ್ಳುತ್ತಿದೆ. ಪ್ರಶಸ್ತಿ ಈಗ ಸೇವೆಯ ಗುರುತಿಸುವಿಕೆಗಿಂತ ಪ್ರಭುತ್ವ ನೀಡುವ ‘ಗುರುತು’ ಆಗಿದೆ. ಆಡಳಿತಾಂಗವೇ ಪ್ರಶಸ್ತಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವುದರಿಂದ, ಪ್ರಶಸ್ತಿ ಒಂದು ಕಚೇರಿಯಿಂದ ಹೊರಡುವ ಕಾಗದಕ್ಕಿಂತ ಕಡೆಯಾಗಿದೆ. ಇದರ ಪರಿಣಾಮ ಪ್ರಶಸ್ತಿ ಪಡೆಯುವವರ ಮನಸ್ಸಿನಲ್ಲಿ ‘ಅರ್ಜಿಯ ಮೂಲಕ ಪಡೆಯಬಹುದಾದ ಅವಕಾಶ’ ಎಂಬ ಭಾವನೆ ಗಟ್ಟಿಯಾಗುತ್ತಿದೆ. ಯಾವ ನಾಚಿಕೆಯೂ ಇಲ್ಲದೆ ಪ್ರಶಸ್ತಿ ವಿಜೇತರು ತಮ್ಮ ಸನ್ಮಾನ ಸಭೆಯಲ್ಲಿ ನಾನು ಇಂಥ ಎಂಎಲ್ಎ ಮೂಲಕ ಅರ್ಜಿ ಹಾಕಿದೆ, ಇಂಥವರಿಂದಾಗಿ ಪ್ರಶಸ್ತಿ ಪಡೆದೆ ಎಂದು ಸಾರ್ವಜನಿಕವಾಗಿ ಕೃತಜ್ಞತೆಯನ್ನು ಸಲ್ಲಿಸುವ ಸನ್ಮಾನಿತರನ್ನು ನಾವು ಕಂಡಿದ್ದೇವೆ. ಈ ಹಿನ್ನೆಲೆಯಲ್ಲಿ, ಪ್ರಶಸ್ತಿಗಾಗಿ ಓಡಾಟ, ವರ್ಷಪೂರ್ತಿ ಶಿಪಾರಸು ಪತ್ರಗಳನ್ನು ಹುಡುಕುವ ಕೆಲಸ, ಯಾರಿಂದ ಯಾರಿಗೆ ಶಿಪಾರಸು ಬರೆಯಿಸಬಹುದು, ಯಾರನ್ನು ಭೇಟಿಯಾಗಬೇಕು, ಯಾವ ಅಧಿಕಾರಿಗೆ ಕರೆ ಮಾಡಿದರೆ ಫೈಲ್ ಮುಂದೆ ಸರಿಯುತ್ತದೆ ಇವುಗಳೇ ಪ್ರಶಸ್ತಿ ಪಡೆಯುವ ತಂತ್ರ ಶಾಸ್ತ್ರವಾಗುತ್ತಿದೆ. ಅರ್ಜಿ ಬರೆಯಿಸಿ, ತಿಳಿದವರನ್ನು ಭೇಟಿಯಾಗಿ, ಪಕ್ಷ ಪರಿವಾರಗಳ ಮೂಲಕ ಶಿಪಾರಸು ಪತ್ರಗಳನ್ನು ಅಟ್ಟಿ ಕಟ್ಟಿಕೊಂಡು, ಜಿಲ್ಲಾಡಳಿತದ ಕಚೇರಿಗೆ ಅಲೆದಾಡುವುದು ಎಲ್ಲವೂ ಪ್ರಶಸ್ತಿಯನ್ನು ‘ಪಡೆಯುವ ಭಾಗ’ ಆಗಿಬಿಟ್ಟಿದೆ. ತಾಲೂಕು ಮುಗಿದ ಮೇಲೆ ಜಿಲ್ಲೆ, ಜಿಲ್ಲೆ ಮುಗಿದ ಮೇಲೆ ರಾಜ್ಯ ಹೀಗೆ ಈ ಅಲೆದಾಟ ನಿರಂತರವಾಗಿರುತ್ತದೆ. ಇಂತಹವರಲ್ಲಿ ನೀವು ‘ನಾಚಿಕೆ’ ಎಂಬ ಅವಮಾನ ಅನುಮಾನವನ್ನೂ ಕಾಣುವುದು ಕಷ್ಟ. ಪ್ರಶಸ್ತಿ ಪಡೆದ ಸಾಧನೆಗಿಂತ, ಪ್ರಶಸ್ತಿ ಪಡೆಯಲು ಮಾಡಿದ ಶ್ರಮವೇ ಹೆಚ್ಚಿನದಾಗಿ ತೋರುತ್ತದೆ.! ಈ ಪ್ರಕ್ರಿಯೆಯ ಇನ್ನೊಂದು ಮುಖ ನಿಜವಾಗಿ ಸೇವೆ ಮಾಡಿದವರು, ಸಮಾಜದ ತಳದಲ್ಲಿ ನಿಂತು ಕೆಲಸ ಮಾಡಿದವರು ಇವರಲ್ಲಿ ಬಹಳಷ್ಟು ಜನ ಪ್ರಶಸ್ತಿಯ ದಾರಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವರು ಶಿಪಾರಸು ಪತ್ರಗಳನ್ನು ಹುಡುಕುವುದಿಲ್ಲ. ಅವರು ಪ್ರಭುತ್ವದ ಬಾಗಿಲಿಗೆ ಹೋಗುವುದಿಲ್ಲ. ಅವರಿಗೆ ಪರಿಚಯದ ರಾಜಕೀಯವೂ ಇಲ್ಲ. ಹೀಗಾಗಿ ಪ್ರಶಸ್ತಿಯ ವ್ಯವಸ್ಥೆಯಿಂದ ಅವರು ಹೊರಗುಳಿಯುತ್ತಾರೆ. ಒಂದೇ ಒಂದು ಉದಾಹರಣೆಗೆ ಕನ್ನಡ ಲೋಕದಲ್ಲಿ ಮನೆ ಮಾತಾಗಿರುವ ನಮ್ಮ ಸುಬ್ರಾಯ ಚೊಕ್ಕಾಡಿಯವರು. ಈವರೆಗೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಲಿಲ್ಲವೆಂದಾದರೆ ನೀವೇ ಯೋಚಿಸಿ, ಈ ಲಾಭಿ ಯಾವ ಮಟ್ಟಕ್ಕೆ ಬೆಳೆದಿದೆ ಎಂದು. ಇದರಿಂದ ಇಂದು ಪ್ರಶಸ್ತಿ ಎಂಬುವುದು ಕೇವಲ ‘ಅರ್ಹತೆ ಆಧಾರಿತ’ ವ್ಯವಸ್ಥೆಯಲ್ಲಿ ಪ್ರವೇಶ ಹೊಂದಿದವರಿಗೆ ಮಾತ್ರ ಲಭ್ಯವಾಗುವ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿದೆ.
ರಾಜ್ಯೋತ್ಸವ ನೆಪದಲ್ಲಿ ಕನ್ನಡದ ಆಚರಣೆಯೂ ಹಾಗೆಯೇ.”ಕನ್ನಡ ಡಿಂಡಿಮ” ಎಂದು ಹೆಸರಿಟ್ಟು ಎದೆ ಹೊಡೆದು ಹೋಗುವಷ್ಟು ಡಿಜೆ ಹಾಕಿ ಕನ್ನಡವನ್ನು ಢo ಢo ಮಾಡುವ ಕಾರ್ಯಕ್ರಮಗಳೇ ಇತ್ತೀಚಿಗೆ ಹೆಚ್ಚಾಗುತ್ತಿದೆ. ಈ ಬಾರಿ ಹುಬ್ಬಳ್ಳಿ- ಧಾರವಾಡದ ಕನ್ನಡ ಸಂಘಟಕರೊಬ್ಬರು ಇಂಥ ಪ್ರಶಸ್ತಿಗಳಿಂದ ದೂರವಿದ್ದ ಸಜ್ಜನ ಸಾಹಿತಿ, ಹಿರಿಯ ಸರಸ್ವತಿ ಸೇವಕರೊಬ್ಬರನ್ನು ಒತ್ತಾಯದಿಂದ ಕಾಡಿ ವೇದಿಕೆಗೆ ಏರಿಸಿದ್ದರು. ಅವರ ವಯಸ್ಸು 80ಕ್ಕೆ ಹತ್ತಿರವಿತ್ತು. ಅದೇ ವೇದಿಕೆಯಲ್ಲಿ ಅವರ ಪಕ್ಕದಲ್ಲಿ ಸನ್ಮಾನಕ್ಕೆ ಕೂತ ಹಿರಿಯ ವೈದ್ಯರನ್ನು ಇವರು ಕೇಳಿದರಂತೆ. ‘ಸ್ವಾಮಿ ಇಲ್ಲಿ ಕನ್ನಡದ ಡಿಜೆ ಎದೆ ಗುದ್ದುತಿದೆ, ಒಮ್ಮೆ ನನ್ನ ಎದೆ ಬಡಿತ ಅಳತೆ ಮಾಡುವಿರಾ, ಭಯವಾಗುತ್ತಿದೆ ಎಂದು ಎದೆಯ ಮೇಲೆ ಕೈ ಇಟ್ಟುಕೊಂಡೇ ವಿನಂತಿಸಿದರಂತೆ!. ಬಹುತೇಕ ಆ ವೇದಿಕೆಯಲ್ಲಿದ್ದವರು ಅವರಷ್ಟೇ ವಯಸ್ಸಿನವರು. ಇಂಥವರಿಗೆ ಕನ್ನಡದ ಮೃದು ಮಧುರ ನುಡಿ ಸಾಹಿತ್ಯ ಬೇಕೆ ಹೊರತು ಅಬ್ಬರ ತಾಳದ ಅಗತ್ಯವೇ ಇಲ್ಲ. ಮೊದಲೆಲ್ಲಾ ರಾಜ್ಯೋತ್ಸವ ಸರಳವಾಗಿರುತ್ತಿತ್ತು. ಹಳ್ಳಿ ಶಾಲೆಗಳ ಆಂಗಣದಲ್ಲಾಗಲೀ, ತಾಲೂಕು ಕಚೇರಿಗಳ ಮುಂಭಾಗವಾಗಲೀ ಕನ್ನಡ ಧ್ವಜ ಏರಿಸುವುದು, ಕೆಲ ಕಲಾ ಕಾರ್ಯಕ್ರಮಗಳು, ಹಿರಿಯರಿಗೆ ಗೌರವ ಇಷ್ಟೇ. ಆದರೆ ಕಳೆದ ಕೆಲವು ವರ್ಷಗಳಲ್ಲಿ ರಾಜ್ಯೋತ್ಸವದ ಆಚರಣೆ ಸಂಪೂರ್ಣವಾಗಿ ರೂಪ ಬದಲಿಸಿಕೊಂಡಿದೆ. ಆಚರಣೆಯಲ್ಲಿ ಕನ್ನಡಕ್ಕಿಂತ ಕೊಲಾಹಲ ಹೆಚ್ಚು, ಸಂಸ್ಕೃತಿಗಿಂತ ಸಮಾರಂಭದ ಗಲಾಟೆ ಹೆಚ್ಚು ಗೋಚರಿಸುತ್ತಿದೆ. ರಾಜ್ಯೋತ್ಸವ ಕನ್ನಡದ ಆತ್ಮದ ಹಬ್ಬ. ಆದರೆ ಈಗ ಆ ಹಬ್ಬದ ರೂಪ ಬದಲಾಗಿದೆ. ಫ್ಲೆಕ್ಸ್ ಸಂಸ್ಕೃತಿ, ಶಬ್ದ ಸಂಸ್ಕೃತಿ, ಪ್ರದರ್ಶನ ಸಂಸ್ಕೃತಿ ನಿಜವಾದ ಕನ್ನಡದ ಮೌಲ್ಯಗಳನ್ನು ಮರೆಮಾಡಿವೆ. ಪ್ರಶಸ್ತಿ ನೀಡುವುದು ರಾಜಕೀಯ ಸಾಮಾಜಿಕ ದೃಷ್ಟಿಯಿಂದ ‘ಕಾರ್ಯಕ್ರಮ’ ಆಗಿದೆ, ನಿಜದ ‘ಗೌರವ’ ಮರೆಯಾಗಿದೆ . ಕಾರ್ಯಕ್ರಮದ ಮೆರಗು, ಡಿಜೆ, ಫೋಟೊ ಸೆಷನ್, ಫ್ಲೆಕ್ಸ್ ಇವೆಲ್ಲ ಮುಖ್ಯ, ಕನ್ನಡದ ಆತ್ಮದ ಬಗ್ಗೆ ಯೋಚಿಸುವವರ ಸಂಖ್ಯೆ ಮಾತ್ರ ಕಡಿಮೆ. ಸಂಸ್ಕೃತಿಯ ಮೌಲ್ಯಗಳಲ್ಲಿ ತೂಕ ಕಡಿಮೆಯಾಗಿದ್ದು, ಕಾರ್ಯಾಚರಣೆಗಳಲ್ಲಿ ಹೊಳಪು ಹೆಚ್ಚಾಗಿದೆ. ಕನ್ನಡಕ್ಕೆ ಸೇವೆ ಮಾಡಿದವರಿಗಿಂತ ಕಾರ್ಯಕ್ರಮಕ್ಕೆ ಸೇವೆ ಮಾಡಿದವರಿಗೆ ಪ್ರಶಸ್ತಿ ಸಿಗುವ ಪ್ರವೃತ್ತಿ ಬೆಳೆದಿದೆ. ಈ ಕನ್ನಡದ ಆತ್ಮ ಉಳಿಯಬೇಕಾದರೆ, ಹಬ್ಬದ ಹೃದಯವನ್ನು ಮರುಚಿಂತನೆ ಮಾಡಬೇಕಿದೆ. ಕಾರ್ಯಕ್ರಮದ ಕಿರಿಕ್ಕಿರಿಕ್ಗಿಂತ ಭಾಷೆಯ ಮೌಲ್ಯ, ಸಾಹಿತ್ಯದ ಗೌರವ, ಸೇವೆಯ ನಿಸ್ವಾರ್ಥತೆ ಇವು ರಾಜ್ಯೋತ್ಸವದ ಕೇಂದ್ರವಾಗಬೇಕು.
ಲೇಖನ : ನರೇಂದ್ರ ನರೇಂದ್ರ ರೈ ದೇರ್ಲ









































































































