ಜಗತ್ತಿನ ಯಾವ ವೃತ್ತಿಯಲ್ಲೂ ‘ಕಡಿಮೆ ಶ್ರಮ ದೀರ್ಘ ಫಲ’ ಎಂಬ ಸಮೀಕರಣವಿಲ್ಲ. ಆದರೆ ಕೃಷಿಯಲ್ಲಿ ಮಾತ್ರ ಎರಡು ಮೂರು ತಿಂಗಳ ಶ್ರಮವೇ ಹನ್ನೆರಡು ತಿಂಗಳ ಜೀವನಕ್ಕೆ ಸಾಕಾಗುತ್ತದೆ ಎಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ನುಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೂತನವಾಗಿ ಪ್ರಾರಂಭಿಸಲಾದ ಆಳ್ವಾಸ್ ಇನ್ಸ್ಟಿಟ್ಯೂಟ್ ಅಗ್ರಿಕಲ್ಚರಲ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕಾಲೇಜನ್ನು ಉದ್ಘಾಟಿಸಿ ಮಾತನಾಡಿದರು. ಬೇರೆ ವೃತ್ತಿಗಳಲ್ಲಿ ಹೂಡಿಕೆಯಷ್ಟೇ ಅಪಾಯವೂ ಇರುತ್ತದೆ. ಆದರೆ ಕೃಷಿಯಲ್ಲಿ ಪ್ರಕೃತಿಯೊಡನೆ ತಕ್ಕಮಟ್ಟಿನ ಜಾಗರೂಕತೆ ಮತ್ತು ಸುಧಾರಿತ ವಿಧಾನಗಳು ಇದ್ದರೆ ನಷ್ಟಕ್ಕಿಂತ ಲಾಭವೇ ಹೆಚ್ಚು. ಇಂದು ಭಾರತ ಕೃಷಿಯ ಮೂಲಕ ದೇಶದ ಜಿಡಿಪಿಗೆ ಸುಮಾರು 18% ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆ 25–30%ಕ್ಕೆ ಏರಿದರೆ, ಭಾರತ ಕೇವಲ ಅಭಿವೃದ್ಧಿಶೀಲ ರಾಷ್ಟ್ರವಲ್ಲ, ವಿಶ್ವದ ನಂ.1 ಆರ್ಥಿಕ ಶಕ್ತಿಯಾಗುವ ಸಾಮರ್ಥ್ಯವನ್ನು ಸಾಧಿಸುತ್ತದೆ. ಕೃಷಿಯ ಬಲವರ್ಧನೆಯೇ ಭಾರತದ ಭವಿಷ್ಯ ಬಲಿಷ್ಠವಾಗುವ ಮೂಲ. ಮೋದಿಯವರ ಆಡಳಿತದಲ್ಲಿ ಕೃಷಿ ವಲಯವನ್ನು ಆಧುನಿಕ, ಲಾಭದಾಯಕ ಮತ್ತು ಸ್ಪರ್ಧಾತ್ಮಕಗೊಳಿಸುವ ಹಲವು ಮಹತ್ತರ ಕ್ರಮಗಳು ಜಾರಿಗೊಳಿಸಲಾಗಿದೆ. ರೈತನ ಆದಾಯ ದ್ವಿಗುಣಗೊಳಿಸುವ ಗುರಿ, ಮಾರುಕಟ್ಟೆ ಸುಧಾರಣೆ, ನೀರಾವರಿ ಬಲವರ್ಧನೆ, ಬೆಳೆ ವಿಮೆಯ ಮೂಲಕ ರೈತನ ಕಲ್ಯಾಣವೇ ದೇಶದ ಕಲ್ಯಾಣ ಎನ್ನುವುದನ್ನು ಮೋದಿಯವರ ನೀತಿಗಳು ಸ್ಪಷ್ಟಪಡಿಸುತ್ತವೆ ಎಂದರು. ಆದ್ದರಿಂದ ಕೃಷಿಯ ಮಹತ್ವವನ್ನು ಅರಿತು, ರೈತನ ಗೌರವವನ್ನು ಹೆಚ್ಚಿಸಿ, ಯುವ ಪೀಳಿಗೆಯೂ ಕೃಷಿಯಲ್ಲಿ ನವೀನತೆ ತಂದರೆ ಸಮಾಜ ಇನ್ನಷ್ಟು ಸಮೃದ್ಧವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಪ್ರಸ್ತುತ ಆಳ್ವಾಸ್ ರಾಜ್ಯದ ಐದು ವಿವಿಗಳ ಪದವಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಹಿಂದಿನ ಕಾಲದಲ್ಲಿ ಕೃಷಿ ಶಿಕ್ಷಣವನ್ನು ನೀಡುತ್ತಿದ್ದವರು ಮುಖ್ಯವಾಗಿ ಸರ್ಕಾರಿ ಕಾಲೇಜುಗಳಷ್ಟೇ. ಆದರೆ ಈಗ ಖಾಸಗಿ ಶಿಕ್ಷಣ ಸಂಸ್ಥೆಗಳೂ ಕೃಷಿ ಕ್ಷೇತ್ರಕ್ಕೆ ಬಂದು ದೊಡ್ಡ ಬದಲಾವಣೆ ತರುತ್ತಿವೆ. ಹಿಂದಿನ ಕಾಲದಲ್ಲಿ ನೂರಾರು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ರೈತರು ಇಂದು ಮಾರುಕಟ್ಟೆಗೆ ಹೋಗಿ ಅಂಗಡಿಯಲ್ಲಿ ಅಕ್ಕಿ ಕೊಂಡು ತಿನ್ನುವ ಸ್ಥಿತಿಗೆ ತಲುಪಿದ್ದಾರೆ. ಇದು ಸಮಾಜದ ಕೃಷಿ ಕ್ಷೇತ್ರದಲ್ಲಿ ಆದಂತಹ ಸ್ಥಿತ್ಯಂತರ. ಇದು ಸಲ್ಲದು. ಕೃಷಿ ವಿದ್ಯಾಭ್ಯಾಸಕ್ಕೆ ಫ್ಯಾಷನ್ ಅಲ್ಲ, ಪ್ಯಾಷನ್ ಮತ್ತು ಪರಿಶ್ರಮ ಬೇಕು. ಇಂದಿನ ಕಾಲದಲ್ಲಿ ಹಲವು ವೃತ್ತಿಗಳನ್ನು ವಿದ್ಯಾರ್ಥಿಗಳು ಫ್ಯಾಷನ್, ಟ್ರೆಂಡ್ ಅಥವಾ ಸಮಾಜದ ಒತ್ತಡದಿಂದ ಆಯ್ಕೆ ಮಾಡುತ್ತಿದ್ದಾರೆ. ಆದರೆ ಬಿಎಸ್ಸಿ ಕೃಷಿ ಕೋರ್ಸ್ ಇವುಗಳಿಂದ ಭಿನ್ನ. ಈ ಪದವಿಯಲ್ಲಿ ಯಶಸ್ವಿಯಾಗಲು ಬಯಸುವ ವಿದ್ಯಾರ್ಥಿಗೆ ಫ್ಯಾಷನ್ ಅಗತ್ಯವಿಲ್ಲ. ಆದರೆ ಪ್ಯಾಷನ್, ಆಸಕ್ತಿ ಮತ್ತು ಶ್ರಮಕ್ಕಾಗಿ ಬೆವರೂರಿಸುವ ಮನೋಭಾವ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡೀಸ್, ಕೃಷಿ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಹಲ್ ಪಾಠಕ್ ಇದ್ದರು. ಸಹಾಯಕ ಪ್ರಾಧ್ಯಾಪಕಿ ಡಾ. ಶ್ರೇಯಸ್ಸು ಕಾರ್ಯಕ್ರಮ ನಿರೂಪಿಸಿ, ಪ್ರೊ. ಗಣೇಶ್ ವಂದಿಸಿದರು.









































































































