ಆಳ್ವಾಸ್ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ವೇದಿಕೆ ‘ಅಭಿವ್ಯಕ್ತಿ’ಯ 2025ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಹಾಗೂ ಖ್ಯಾತ ನಿರೂಪಕ ರಾಜೇಶ್ ಡಿ’ಸೋಜಾ, ಯಶಸ್ಸಿನ ಮೂಲತತ್ತ್ವಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟುಗೊಳಿಸಿದರು. ಯಶಸ್ಸು ಕೇವಲ ಶ್ರಮದ ಪ್ರತಿಫಲವಲ್ಲ. ಅದು ನಾಲ್ಕು ‘ಪಿ’ಗಳಾದ ಪ್ಯಾಶನ್, ಪ್ರಿಪರೇಷನ್ ಪ್ರಸೆಂಟೇಶನ್ ಮತ್ತು ಪರ್ಪಸ್ನ ಸಮನ್ವಯದಿಂದ ಮೂಡಿಬರುವ ಸಮಗ್ರ ಸಫಲತೆ. ಪ್ರತಿಯೊಂದು ಕಾರ್ಯಕ್ಕೂ ಆಸಕ್ತಿ, ಸ್ಪಷ್ಟ ಗುರಿ, ಸಮಗ್ರ ತಯಾರಿ ಹಾಗೂ ಪರಿಣಾಮಕಾರಿ ಪ್ರಸ್ತುತಪಡಿಸುವಿಕೆಯ ಅಗತ್ಯವನ್ನು ಉದಾಹರಣೆಯೊಂದಿಗೆ ವಿವರಿಸಿದರು. ಜೊತೆಯಲ್ಲಿ ಸಮಯ ನಿರ್ವಹಣೆ, ಹಾಸ್ಯಪ್ರಜ್ಞೆ ಹಾಗೂ ಸಕಾಲದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ವ್ಯಕ್ತಿಯ ಬದುಕನ್ನು ಅಂದಗೊಳಿಸುವುದಲ್ಲದೆ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದರು.

ಈ ಸಂದರ್ಭದಲ್ಲಿ 2025–26ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿಗಳನ್ನು ನೀಡಲಾಯಿತು. ಮಂಜುಳಾ ಹಾಗೂ ವಿಧಿಶಾ ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಅಕ್ಷಯ್ ಕುಮಾರ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಕ್ಷಿತಾ ಚಪ್ಪರಿಕೆ ಹಾಗೂ ಮಿಯಾ ಕೆನಡಿ ಕಾರ್ಯಕ್ರಮ ನಿರ್ವಹಿಸಿದರು.









































































































