ಬಂಟರ ಸಂಘ ಅಳಿಕೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಅಷ್ಟಾವದಾನ ದುರ್ಗಾ ಪೂಜೆಯು ಎರುಂಬು ವಿಷ್ಣುಮಂಗಲ ದೇವಸ್ಥಾನದ ಸಭಾ ಭವನದಲ್ಲಿ ಬಹಳ ಅಚ್ಚುಕಟ್ಟಾಗಿ ವಿಜೃಂಭಣೆಯಿಂದ ನಡೆಯಿತು. ಪ್ರಾರಂಭದಲ್ಲಿ ವಿಷ್ಣುಮಂಗಲ ದೇವಸ್ಥಾನದಲ್ಲಿ ಸಂಕಲ್ಪ ಮಾಡಿ, ಸಭಾಭವನದಲ್ಲಿ ದೀಪ ಬೆಳಗಿಸುವ ಮೂಲಕ ಬಾಲಕೃಷ್ಣ ಕಾರಂತರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಂಟ ಬಾಂಧವರಿಂದ ಭಜನೆ, ನಂತರ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ರೈ ಪಡಿಬಾಗಿಲು ಇವರು ನೂತನ ಕಮಿಟಿಗೆ ಅಧಿಕಾರ ಹಸ್ತಾಂತರಿಸಿದರು. ಬಂಟರ ಮಹಿಳಾ ವಿಭಾಗ, ಯುವ ಬಂಟರ ವಿಭಾಗ ಅಳಿಕೆ ಮತ್ತು ಬಂಟರ ಸಂಘ ಅಳಿಕೆಯ ಪದಗ್ರಹಣ ಸಮಾರಂಭ ಹಿರಿಯರ ಸಮ್ಮುಖದಲ್ಲಿ ನಡೆಯಿತು. ಬಂಟರ ಸಂಘ ಅಳಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನದಾಸ್ ರೈಯವರು ಮುಂದಿನ ಮೂರು ವರ್ಷದ ಕಾಲಾವಧಿಯಲ್ಲಿ ಎಲ್ಲರ ಸಂಪೂರ್ಣ ಸಹಕಾರವಿರಲೆಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ 90% ಕ್ಕಿಂತ ಅಧಿಕ ಅಂಕ ಪಡೆದ ಇಬ್ಬರು ಮಕ್ಕಳನ್ನು ಸನ್ಮಾನಿಸಲಾಯಿತು. ಬಳಿಕ ಅಷ್ಟಾವದಾನ ಸೇವೆ ಪ್ರಾರಂಭವಾಯಿತು. ಮೂರು ಬಗೆಯ ವೇಧ ಪಠಣ, ಶಂಖನಾದ, ಸ್ಯಾಕ್ಸೋಫೋನ್ ವಾದನ, ಕುಣಿತ ಭಜನೆ, ಭರತನಾಟ್ಯ ಮತ್ತು ಯಕ್ಷಗಾನ ಸೇವೆ ಬಹಳ ಸೊಗಸಾಗಿ ಶ್ರೀ ದೇವಿಗೆ ಸಮರ್ಪಣಾ ಭಾವದಿಂದ ಅರ್ಪಿಸಿದರು. ಮಹಾ ಪೂಜೆಯ ಬಳಿಕ ಅನ್ನಧಾನ ಸೇವೆ ನಡೆಯಿತು.