ಅಪ್ರತಿಮ ಪ್ರತಿಭೆಯನ್ನು ಮೈಗೂಡಿಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದ ಛಲಗಾರ, ಸರ್ವಧರ್ಮ ಕಲಾಭಿಮಾನಿಗಳ ಆಂತರ್ಯವನ್ನು ಮುಟ್ಟಿ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿ ಕೊಂಡು ಕಲಾಮಾತೆಯ ಸೇವೆಗೈಯುತ್ತಿರುವ ನಿಷ್ಠಾವಂತ ಕಲಾವಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ.
ತನ್ನ ತಂದೆಯಿಂದಲೇ ಬಳುವಳಿಯಾಗಿ ಬಂದ ಕಲೆಗೆ ನಿಷ್ಠಾವಂತನಾಗಿ ನಿಂತು ಸಾಧನೆಯ ಶಿಖರವೇರಿ ಸಾಧಕರಿಗೆ ಸ್ಪೂರ್ತಿ ನಮ್ಮ ಇವತ್ತಿನ ಸಾಧಕರ ಹಾದಿಯ ಅತಿಥಿ. ಇವರ ಜೀವನವು ಬಾಲ್ಯದಿಂದಲೇ ಸುಖೀ ಕುಟುಂಬವಾಗಿದೆ. ಯಾವುದೇ ಕಷ್ಟಗಳಿಂದ ಸೋತವರಲ್ಲ ಇನ್ನೊಬ್ಬರನ್ನು ಸೋಲೋಕು ಬಿಟ್ಟವರಲ್ಲ ಆತ್ಮೀಯ ಮನಸ್ಸಿನ ಅದ್ಭುತ ಸಾಧಕ.
ಯಕ್ಷಗಾನ,ಸಾಹಿತ್ಯ, ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಯವರು ವಿರಳ ಪಂಕ್ತಿಗೆ ಸೇರಿದ ಓರ್ವ ಬಹುಶ್ರುತ ವಿದ್ವಾಂಸರು. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಇರ್ದೆ ಬೆಟ್ಟಂಪಾಡಿಯಲ್ಲಿ ದಿ| ಕಲ್ಲಡ್ಕ ಕರಿಯಪ್ಪ ರೈ ಮತ್ತು ಗಿರಿಜಾ ರೈ ದಂಪತಿಯ ಎಂಟು ಮಂದಿ ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿದರು. ದರ್ಬೆತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ, ಪ್ರೌಢ ಶಿಕ್ಷಣವನ್ನು ಬೆಟ್ಟಂಪಾಡಿಯ ನವೋದಯ ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿ, ಮಂಗಳೂರಿನ ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಬಿ.ಎಡ್. ನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ. ಎ. ಮತ್ತು ಎಂ.ಎಡ್. ಪದವಿಯನ್ನು ಪಡೆದರು. ಭಾರತೀಯ ಅಂಚೆ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿ ಬಳಿಕ ಶಿಕ್ಷಣ ಇಲಾಖೆಯನ್ನು ಸೇರಿ, ಪೆರ್ಮನ್ನೂರು ಪ್ರೌಢ ಶಾಲೆಯಲ್ಲಿ ದುಡಿದು, ಪದೋನ್ನತಿ ಪಡೆದು ಚೇಳಾಯರು ಪ.ಪೂ.ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಮುಂದೆ ಗುರುಪುರ ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದರು.
ಮಂಗಳೂರಿನ ಕದ್ರಿ ಕಂಬಳದಲ್ಲಿ ನೆಲೆಸಿರುವ ಭಾಸ್ಕರ ರೈ ಕುಕ್ಕುವಳ್ಳಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಜಾಗೂ ತುಳು ಸಾಹಿತ್ಯ ಅಕಾಡೆಮಿಗಳ ಸದಸ್ಯರಾಗಿ ದುಡಿದಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಕನ್ನಡ, ತುಳು, ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ, ತಮ್ಮದೆ ಆದ ಶೈಲಿಯಲ್ಲಿ ಬರಹಗಾರರಾಗಿ, ಯಕ್ಷಗಾನದ ಅರ್ಥಧಾರಿಯಾಗಿ, ಪ್ರವಚನಕಾರರಾಗಿದ್ದಾರೆ.
ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾಗಿ, ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ, ಬೆಂಗಳೂರಿನ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಕೆಂದ್ರದಲ್ಲಿ ಬಾನುಲಿ ಪಠ್ಯಗಳನ್ನು ರಚಿಸಿಕೊಟ್ಟಿದ್ದಾರೆ.
ನೆಯಿ-ಪೇರ್, ಒಡ್ಡೋಲಗ, ಯಕ್ಷಿಕಾ, ಅಭಿರಾಮ, ಯಕ್ಷ ಪ್ರಮೀಳಾ, ಯಕ್ಷರ ಚೆನ್ನ, ಪುಳಿಂಚ ಕೃತಿಸ್ಮೃತಿ, ಪನಿಯಾರ, ಗಂದಸಾಲೆ, ಅಬ್ಬಕ್ಕ ಸಂಕಥನ (ಸಂಪಾದಿತ), ಘೋರ ಮಾರಕ, ಗುನ್ಯಾಸುರ ವಧೆ, ಸಾವಯವ ವಿಜಯ, ಧೂಮಾಸುರ ಬಂಧನ-ಕರ್ಕಶಾಸುರ ವಧೆ, ಕ್ರಾಂತಿ ಕಹಳೆ, ಉಳ್ಳಾಲ ರಾಣಿ ಅಬ್ಬಕ್ಕ (ಯಕ್ಷಗಾನ) ಮುಂತಾದವು ಇವರ ಪ್ರಕಟಿತ ಕೃತಿಗಳು. ಹರಣಹಾರಿತು, ಎರೆಯನೆಡೆಗೆ, ತುಳುವೆರೆ ಬಲೀಂದ್ರೆ, ಗರತಿ ಮಂಗಣೆ, ಜನ್ಮ ರಹಸ್ಯ, ರಂಭಾ ಶಾಪ, ದಳವಾಯಿ ದೇವಪೂಂಜೆ, ಅಮರ್ ವೀರೆರ್ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಇವರು ‘ಸಂಪರ್ಕ’ ಮಾಸ ಪತ್ರಿಕೆ ಹಾಗೂ ‘ಸದಾಶಯ’ ತ್ರೈಮಾಸಿಕದ ಸಂಪಾದಕರು. ಉಳ್ಳಾಲ ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಕನ್ನಡ ಸಂಘ- ತುಳುಕೂಟಗಳಲ್ಲಿ ಸಕ್ರೀಯರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ತುಳು ವಾರ್ತಾ ವಾಹಿನಿ ‘ನಮ್ಮ ಕುಡ್ಲ’ ಮತ್ತು ’ವಿ4 ಮೀಡಿಯಾ’ ರಂಗಸ್ಥಳದ ಕಾರ್ಯ ನಿರ್ವಾಹಕರು. ಕ್ಯಾಡ್ ಟಿವಿ, ಸಹಾಯ, ನಮ್ಮ ಟಿವಿ, ಡೈಜಿ ವರ್ಲ್ಡ್, ಸ್ಪಂದನ ಮತ್ತು ದೂರದರ್ಶನ ‘ಚಂದನ’ ವಾಹಿನಿಗಳಲ್ಲಿ ನೂರಾರು ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ನಮ್ಮ ಕುಡ್ಲ ಬಳಗ ನಿರ್ಮಿಸಿದ ವಿಶ್ವ ತುಳು ಸಮ್ಮೇಳನ ಮತ್ತು ಧರ್ಮಸ್ಥಳ ಮಹಾನಡಾವಳಿ ಡಿ.ವಿ.ಡಿ. ಗಳಿಗೆ ನಿರೂಪಣಾ ಸಾಹಿತ್ಯ ಬರೆದು ಅವುಗಳನ್ನು ತಮ್ಮದೇ ಧ್ವನಿಯಲ್ಲಿ ಪ್ರಸ್ತುತ ಪಡೆಸಿದ್ದಾರೆ. ‘ಸ್ಪಂದನ’ ವಾಹಿನಿಯಲ್ಲಿ ‘ಕಾವ್ಯ ಸ್ಪಂದನ ‘ಮತ್ತು ‘ಪಟ್ಲ-ಗಾನ-ಯಾನ ‘ಎಂಬ ವಿನೂತನ ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ, ‘ಚಂದನ’ ದೂರದರ್ಶನದಲ್ಲಿ ‘ಮಂದಾರ ರಾಮಾಯಣ’ ಕಾವ್ಯ ರೂಪಕ, ಮಂಗಳೂರು ಆಕಾಶವಾಣಿ ಮೂಲಕ ‘ಗಾಂಪಣ್ಣನ ತಿರ್ಗಾಟ’ ತುಳು ಸರಣಿ, ಸಾರಂಗ್ ರೇಡಿಯೋದಲ್ಲಿ ‘ಊರು – ಕೇರಿ’ ಇತ್ಯಾದಿ ಅವರ ಜನಪ್ರಿಯ ಕಾರ್ಯಕ್ರಮಗಳು ಸಾಹಿತ್ಯಾಸಕ್ತರ ಮನಗೆದ್ದಿವೆ.
ಕರ್ನಾಟಕ ರಾಜ್ಯ ಮಟ್ಟದ ಆರ್ಯಭಟ ಪ್ರಶಸ್ತಿ, ಸುವರ್ಣ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿದ್ಯಾರತ್ನ ಪ್ರಶಸ್ತಿ , ಸೌರಭ, ಸಾಧನಾ, ನೂಪುರ, ಕಾರಂತ ಸದ್ಭಾವನಾ ಪ್ರಶಸ್ತಿಗಳು ದೊರೆತಿವೆ. ಕಾಸರಗೋಡು ಬದಿಯಡ್ಕದ ತುಳುವೆರೆ ಅಯನೊ ಪ್ರಶಸ್ತಿ , ಮುಂಬಯಿ ಕಾವ್ಯ ಪ್ರಶಸ್ತಿ, ಸಾಂಗ್ಲಿ ತುಳುನಾಡ್ ಸಂಘದಿಂದ ‘ಪೆರ್ಮೆದ ತುಳುವೆ’ ಪ್ರಶಸ್ತಿ, ಯು.ಎ.ಇ.ಬಂಟ್ಸ್ ಸಂಘದ ‘ಬಂಟ ವಿಭೂಷಣ’ ಉಪಾಧಿ, ದುಬೈ, ಅಬುಧಾಬಿ, ಕತಾರ್, ಓಮನ್, ಬಹ್ರೈನ್, ಅಮೇರಿಕಾ, ಚೆನ್ನೈ, ಮುಂಬೈ,ದೆಹಲಿಯ ವಿವಿಧ ಸಂಘಟನೆಗಳಿಂದ ಸನ್ಮಾನ ಅವರಿಗೆ ಲಭಿಸಿವೆ. ತುಳು ಮತ್ತು ಕನ್ನಡ ಭಾಷೆಯಲ್ಲಿ ಕಥೆ, ಕವಿತೆ, ಲೇಖನ ಮತ್ತು ಸಂಶೋಧನಾ ಪ್ರಬಂಧಗಳನ್ನು ರಚಿಸಿರುವುದಲ್ಲದೆ, ತಮ್ಮ ಕರ್ನಾಟಕ ಯಕ್ಷಭಾರತಿ ಪುತ್ತೂರು ತಂಡದ ಮೂಲಕ ದೇಶಾದ್ಯಂತ ಕನ್ನಡ ಮತ್ತು ತುಳು ಯಕ್ಷಗಾನ ಪ್ರದರ್ಶನಗಳನ್ನು ನೀಡಿ ಜನಜಾಗೃತಿ ಮೂಡಿಸಿದ್ದಾರೆ. ಶೇಣಿ-ಸಾಮಗರಂತಹ ಹಿರಿಯ ಕಲಾವಿದರೊಂದಿಗೆ ಹಲವು ಯಕ್ಷಗಾನ ತಾಳಮದ್ದಳೆ ಮತ್ತು ಧ್ವನಿ ಸುರುಳಿಗಳಲ್ಲಿ ಪಾಲ್ಗೊಂಡಿದ್ದಾರೆ.
ಹಂಪಿ ವಿಶ್ವವಿದ್ಯಾನಿಲಯ ಹೊರತಂದ ‘ತುಳು ಸಾಹಿತ್ಯ ಚರಿತ್ರೆ’ಯಲ್ಲಿ ತುಳು ಯಕ್ಷಗಾನದ ಬಗ್ಗೆ ವಿಸ್ತಾರವಾದ ಸಂಶೋಧನಾತ್ಮಕ ಲೇಖನವನ್ನು ಬರೆದಿರುವ ಕುಕ್ಕುವಳ್ಳಿಯವರು ಅಕಾಡೆಮಿಯ ತುಳು ಪಠ್ಯ ರಚನಾ ಸಮಿತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಹಕರಿಸಿದ್ದಾರೆ. ತುಳು ಕೂಟ – ತುಳು ಅಕಾಡೆಮಿಗಳ ಬಹುಮಾನಿತ ಪುಸ್ತಕಗಳ ಮೌಲ್ಯ ಮಾಪನ ಮಾಡಿದ್ದಾರೆ. ಯಕ್ಷೋತ್ಸವ, ಯಕ್ಷಗಾನ ಕಲಾ ರಂಗಗಳ ಯಕ್ಷಗಾನ ಆಟ-ಕೂಟ ಸ್ಫರ್ಧೆಗಳಲ್ಲಿ ತೀರ್ಪುಗಾರರಾಗಿದ್ದುದಲ್ಲದೆ, ಕಮ್ಮಟ-ಕಾರ್ಯಾಗಾರಗಳ ನಿರ್ದೇಶಕ-ವಿದ್ವಾಂಸರಾಗಿ ದುಡಿದಿದ್ದಾರೆ. ‘ನೀಲಾಂಜನ’, ‘ಭರಣಿ ಜ್ಯೋತಿ ಇತ್ಯಾದಿ ಭಕ್ತಿಗೀತೆಗಳ ಧ್ವನಿಸುರುಳಿಗೆ ಸುಪ್ರಭಾತ ಮತ್ತು ಗೀತ ಸಾಹಿತ್ಯ ರಚಿಸಿದ್ದಾರೆ.
ಈ ಹಿಂದೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಒಂದು ಅವಧಿಗೆ ಸೇವೆ ಸಲ್ಲಿಸಿರುವ ಭಾಸ್ಕರ ರೈ ಕುಕ್ಕುವಳ್ಳಿಯವರು ಮಂಗಳೂರಿನಲ್ಲಿ ಪ್ರಪ್ರಥಮ ಮಹಿಳಾ ಯಕ್ಷಗಾನ ಸಮ್ಮೇಳನ ‘ಯಕ್ಷ ಪ್ರಮಿಳಾ ೨೦೦೪’ನ್ನು ಆಯೋಜಿಸಿದ್ದರು. ಇಪ್ಪತ್ತೈದಕ್ಕೂ ಮೇಲ್ಪಟ್ಟು ಹಿರಿಯ ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿ ಮತ್ತು ಅಶಕ್ತರಿಗೆ ಮಾಸಾಶನಗಳನ್ನು ದೊರಕಿಸಿ ಕೊಡುವಲ್ಲಿ ಶ್ರಮಿಸಿದವರು. ಇವರು ಪುನರ್ ರಚಿತ ತುಳು ಆಕಾಡೆಮಿಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಕಾಡೆಮಿಯ ತ್ರೈಮಾಸಿಕ ’ಮದಿಪು’ ಪತ್ರಿಕೆಯ ಸಂಪಾದಕರೂ ಆಗಿದ್ದಾರೆ. ಕೆಲವು ತುಳು-ಕನ್ನಡ ಧಾರಾವಾಹಿಗಳಲ್ಲೂ ನಟಿಸಿರುವ ಬಹುಮುಖೀ ಸಾಧಕ ‘ಕುಕ್ಕುವಳ್ಳಿ’ಯವರು ‘ಪತ್ತನಾಜೆ’ ತುಳು ಚಲನಚಿತ್ರದ ಶೀರ್ಷಿಕೆ ಗೀತೆ ಬರೆದ ಸಾಹಿತಿ. ದೆಹಲಿ ಕರ್ನಾಟಕ ಸಂಘದಲ್ಲಿ ಜರಗಿದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯಿಲಿ ಮತ್ತು ಆಸ್ಕರ್ ಫೆರ್ನಾಂಡೀಸ್ ಅವರು ಭಾಸ್ಕರ್ ರೈ ಕುಕ್ಕುವಳ್ಳಿಯವರ ತಂಡದಲ್ಲಿ ಯಕ್ಷಗಾನ ವೇಷ ಧರಿಸಿ ಅಭಿನಯಿಸಿದ್ದಾರೆ. ಕೈ ಮುಗಿದ ಭಂಗಿಯಲ್ಲಿರುವ ಇವರ ಸುಂದರ ಯಕ್ಷಗಾನ ರಾಜ ವೇಷವು ಇಂಟರ್ ನೆಟ್ಟಿನಲ್ಲಿ ಲಭ್ಯವಿದ್ದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕಂಪೆನಿಗಳು, ಬ್ಯಾಂಕುಗಳು ಮತ್ತು ಸಂಘ ಸಂಸ್ಥೆಗಳು ಅದನ್ನು ತಮ್ಮ ಜಾಹೀರಾತು ಫಲಕಗಳಲ್ಲಿ ಬಳಸುತ್ತಿರುವುದನ್ನು ಕಾಣಬಹುದು. ಪ್ರಸ್ತುತ ‘ಯಕ್ಷಾಂಗಣ’ ಮಂಗಳೂರು ಇದರ ಕಾರ್ಯಾಧ್ಯಕ್ಷರಾಗಿ ಕಳೆದ ಏಳು ವರ್ಷಗಳಿಂದ ಮಂಗಳೂರಿನಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ನಡೆಸುವುದಲ್ಲದೆ, ಮುಂಬೈ ಅಜೆಕಾರು ಕಲಾಭಿಮಾನಿ ಬಳಗ ಹಾಗೂ ಅವಿಭಜಿತ ಜಿಲ್ಲೆಯ ಸಂಘ-ಸಂಸ್ಥೆಗಳು ಆಯೋಜಿಸುವ ಪ್ರಸಿಧ್ಧರ ಕೂಟಗಳಲ್ಲಿ ಅರ್ಥಧಾರಿಯಾಗಿ ನಿರಂತರ ಭಾಗವಹಿಸುತ್ತಿದ್ದಾರೆ.
ಭಾಸ್ಕರ ರೈ ಕುಕ್ಕುವಳ್ಳಿಯವರು ತಮ್ಮ ಜೀವನ ಸಂಗಾತಿ ಶ್ರೀಮತಿ ವಿದ್ಯಾ ಬಿ. ರೈ(ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ಉಪನ್ಯಾಸಕಿ) , ಪುತ್ರಿ ಕು. ವಿಭಾಲಕ್ಷ್ಮಿ (ಇಂಜಿನೀಯರ್ ವಿದ್ಯಾರ್ಥಿನಿ),ಮಗ ಕು. ವಿಷ್ಣುಸ್ಮರಣ್ ರೈ (ವಿದ್ಯಾರ್ಥಿ)ಇವರೊಂದಿಗೆ ಸುಖೀ ಸಂಸಾರಿಯಾಗಿದ್ದು ಇವರು ಅಪಾರ ಬಂಧು ಮಿತ್ರರ ಸ್ನೇಹವನ್ನು ಸಂಪಾದಿಸಿದ್ದಾರೆ.
ಇವರು ತಮ್ಮ ಬಿಡುವಿನ ಸಮಯವನ್ನು ಪೂರ್ಣವಾಗಿ ಸಾಮಾಜಿಕ ಕಳಕಳಿ, ಕಲೆ, ಭಾಷೆ, ಸಂಸ್ಕೃತಿಗೆ ಮೀಸಲಿಟ್ಟು ಹಲವಾರು ವರ್ಷ ಗಳಿಂದ ಮಾಡಿರುವ ಸಾಧನೆ ಶ್ಲಾಘನೀಯವಾಗಿದೆ. ಇವರ ಉತ್ತಮ ಕಾರ್ಯಚಟುವಟಿಕೆಗಳು ನಿರಂತರವಾಗಿ ಜನಮಾನಸದಲ್ಲಿ ಅಚ್ಚಳಿಯಾಗಿ ಉಳಿದು ಹೊಸ ಸಾಧಕರಿಗೆ ಸ್ಪೂರ್ತಿಯಾಗಲಿ, ಸಾಧನೆಗೆ ಅರ್ಥ ತಂದುಕೊಟ್ಟ ಇವರ ಕಲಾ ಪ್ರತಿಭೆ ಇನ್ನಷ್ಟು ಯಶಸ್ಸಿನ ಉತ್ತುಂಗಕ್ಕೆ ಏರಲಿ.