ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಿರುವ ನಮ್ಮ ಹಿಂದಿನ ಸಂಸ್ಕೃತಿ, ಸಂಪ್ರದಾಯಗಳನ್ನು ಇಂದಿನ ಯುವ ಪೀಳಿಗೆ ತಿಳಿಸುವ ಕಾರ್ಯದೊಂದಿಗೆ ಮುಂದುವರೆಸಿಕೊಂಡು ಹೋಗಲು ಪ್ರೇರಣೆ ನೀಡಬೇಕು. ಇಂತಹ ಕಾರ್ಯಕ್ಕೆ ಆಟಿಡೊಂಜಿ ಐಸಿರೊ ಕಾರ್ಯಕ್ರಮ ಪೂರಕವಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಭಿಪ್ರಾಯಪಟ್ಟರು. ಬಂಟರ ಸಂಘ ಉಳ್ಳಾಲ ವಲಯ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಬೆಂಗಳೂರು ಬಂಟರ ಸಂಘ ಇವರ ಸಹಯೋಗದೊಂದಿಗೆ ಇಪ್ಪತ್ತ ನಾಲ್ಕು ಗ್ರಾಮಗಳ ಸಮಾಜ ಬಾಂಧವರಿಂದ ಅಸೈಗೋಳಿ ಬಂಟರ ಭವನದಲ್ಲಿ ನಡೆದ ಆಟಿದ ಐಸಿರೊ ಹಾಗೂ ನೂತನ ವಲಯ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘ ಉಳ್ಳಾಲ ವಲಯ ಇದರ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ಮಾತನಾಡಿ, ಸಂಘದ ಎಲ್ಲಾ ಸದಸ್ಯರು ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಸಂಘಟಿತರಾಗಿ ವಿವಿಧ ಸಮಾಜಮುಖಿ ಕಾರ್ಯ ಆಗಬೇಕು ಎಂದರು. ಬಂಟರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ವಿದ್ಯಾರ್ಥಿ ವೇತನ ಹಾಗೂ ಪ್ರಶಸ್ತಿ ಸಮಿತಿಯ ಛೇರ್ಮನ್ ಉಮೇಶ್ ಕುಮಾರ್ ಶೆಟ್ಟಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ದೇವಿಚರಣ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಜಯರಾಮ ಸಾಂತ, ಜಯಪಾಲ ಶೆಟ್ಟಿ ತಲಪಾಡಿ ದೊಡ್ಡಮನೆ, ಚಂದ್ರಹಾಸ ಅಡ್ಯಂತಾಯ ಕುತ್ತಾರುಗುತ್ತು, ಸುರೇಶ್ ಚೌಟ ಕಕ್ಕೆಮಜಲು ಉಪಸ್ಥಿತರಿದ್ದರು.
ಡಾ| ಪ್ರಿಯ ಹರೀಶ್ ಶೆಟ್ಟಿ ಉಪನ್ಯಾಸ ನೀಡಿ, ಹಿಂದಿನ ಕಾಲದಲ್ಲಿ ಆಟಿ ತಿಂಗಳಿಗೆ ವಿಶೇಷವಾದ ಪ್ರಾಧಾನ್ಯತೆ ಇದ್ದು ಈ ಸಂದರ್ಭದಲ್ಲಿ ಪ್ರಕೃತಿದತ್ತವಾದ ಆಹಾರ ಕ್ರಮಗಳನ್ನು ಅನುಸರಿಸುವ ಮೂಲಕ ಆರೋಗ್ಯಕ್ಕೆ ಒತ್ತು ನೀಡಲಾಗುತ್ತಿತ್ತು. ಆದರೆ ಇಂದಿನ ಯುವ ಜನಾಂಗ ಈ ಆಹಾರ ಪದ್ಧತಿಯನ್ನು ಮರೆಯುತ್ತಿದ್ದು ಆಧುನಿಕ ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಆರೋಗ್ಯದ ಕಡೆ ಗಮನ ನೀಡುತ್ತಿಲ್ಲ. ಈ ಪ್ರಕೃತಿಯಲ್ಲಿ ಆಟಿ ತಿಂಗಳ ಆಹಾರ ಕ್ರಮಗಳನ್ನು ಮತ್ತು ಪ್ರಾಕೃತಿಕ ಆಹಾರವನ್ನು ನಮ್ಮ ಆಟಿ ಸಂಸ್ಕೃತಿಯನ್ನು ಅನುಸರಿಸುವ ಕಾರ್ಯ ಆಗಬೇಕು ಎಂದರು.
ಬಂಟರ ಸಂಘ ಉಳ್ಳಾಲ ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಅಧ್ಯಕ್ಷ ಕೆ. ರವೀಂದ್ರ ರೈ ಕಲ್ಲಿಮಾರು, ಉಪಾಧ್ಯಕ್ಷರಾದ ಬಿ. ಮೋಹನ್ ದಾಸ್ ಗಾಂಭೀರ, ಮಲ್ಲಿಕಾ ಎಸ್. ಭಂಡಾರಿ, ಕೋಶಾಧಿಕಾರಿ ಯಶವಂತ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ರಿತೇಶ್ ಶೆಟ್ಟಿ, ಕೆ. ವಿವೇಕ್ ರೈ, ಉಪ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆ ಅರುಂಧತಿ ಎಸ್. ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ನಿಶಾಂತ್ ಶೆಟ್ಟಿ, ಸಿರಿ ಒಕ್ಕೂಟದ ಚಿತ್ರಾ ಜಿ. ಅಡ್ಯಂತಾಯ, ಕ್ರೀಡಾ ವಿಭಾಗದ ಆಕಾಶ್ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಭಾಗ್ಯರಾಜ್ ಮತ್ತು 14 ಗ್ರಾಮ ಸಮಿತಿಗಳ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣದೊಂದಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ 70 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಮತ್ತು ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಅಭಿನಂದನಾ ಭಾಷಣ ಮಾಡಿದರು.





































































































