ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯಲ್ಲಿ “ಕನ್ನಡ ಸಾಹಿತ್ಯ ಪ್ರೇರಣೆ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬ್ರಹ್ಮಾವರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಜಿ ರಾಮಚಂದ್ರ ಐತಾಳ್ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಶಾಲಾ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಕನ್ನಡ ಭಾಷೆಯ ಮಹತ್ವವನ್ನು ವಿವರಿಸಿ ಅದನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಸಕ್ರಿಯವಾಗಿ ತೊಡಗಿಕೊಳ್ಳಬೇಕೆಂಬ ಸಂದೇಶವನ್ನು ನೀಡಿದರು.

ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಹನಿಗವನ ರಚನೆ, ಕವನ ಪಠಣ, ಜ್ಞಾಪಕಶಕ್ತಿ ಪರೀಕ್ಷೆ ಹೀಗೆ ಅನೇಕ ಚಟುವಟಿಕೆಗಳನ್ನು ಆಯೋಜಿಸಿದ್ದು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ವೈಯಕ್ತಿಕ ಕಲ್ಪನೆಗಳನ್ನು ಕನ್ನಡದಲ್ಲಿ ಸಮರ್ಥವಾಗಿ ಮಂಡಿಸಿದರು. ಹಲವರು ತಮ್ಮದೇ ಆದ ಕವನಗಳನ್ನು ರಚಿಸಿ ಸವಿನಯವಾಗಿ ಪಠಿಸಿದರು. ಉತ್ತಮ ಪ್ರತಿಭೆಯನ್ನು ತೋರ್ಪಡಿಸಿದ ವಿದ್ಯಾರ್ಥಿಗಳನ್ನು ಸಂಪನ್ಮೂಲ ವ್ಯಕ್ತಿಗಳು ಗೌರವಿಸಿದರು. ಜೊತೆಗೆ ಅಭಿನಯ ಗೀತೆಯನ್ನು ವಿದ್ಯಾರ್ಥಿಗಳ ಮೂಲಕ ಮಾಡಿಸಿದರು. ಕನ್ನಡ ಸಾಹಿತ್ಯದ ವಿವಿದ ಪ್ರಕಾರಗಳಾದ ಯಕ್ಷಗಾನ, ಜನಪದ ಗೀತೆ, ನಾಟಕ, ಏಕಪಾತ್ರ ಅಭಿನಯವನ್ನು ಸಂಪನ್ಮೂಲ ವ್ಯಕ್ತಿಗಳು ಮಾಡುವುದರ ಮೂಲಕ ಮಕ್ಕಳಿಗೆ ಪ್ರಾತ್ಯಕ್ಷಿಕ ಅನುಭವವನ್ನು ನೀಡಿದರು. ಹಾಗೆಯೇ ಭಾಷೆಯ ಮೇಲಿನ ಒಲವು ಹೆಚ್ಚಾಗುವಂತಹ ಸoಗೀತದ ರಸದೌತಣವನ್ನು ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಕಲ್ಪಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಸಂಸ್ಥೆಯ ಅಧ್ಯಕ್ಷರು, ಸಂಪನ್ಮೂಲ ವ್ಯಕ್ತಿಗಳ ಅನುಭವದ ಪ್ರಾತ್ಯಕ್ಷತೆ ಹಾಗೂ ಶಿಕ್ಷಕರ ಮತ್ತು ಮಕ್ಕಳ ಸಹಕಾರ ಅಮೂಲ್ಯವಾಗಿತ್ತು. ಈ ಕಾರ್ಯಕ್ರಮ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕನ್ನಡದ ಮೇಲೆ ಇನ್ನಷ್ಟು ಪ್ರೀತಿಯನ್ನು ಹೊಂದುವ ಮೂಲಕ ‘ಕನ್ನಡ ಸಾಹಿತ್ಯ ಪ್ರೇರಣೆ’ ಈ ಕಾರ್ಯಕ್ರಮದ ಸಾರ್ಥಕತೆಯನ್ನು ವಿದ್ಯಾರ್ಥಿಗಳು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಶ್ರೀಮತಿ ಸುಪ್ರಿತಾ ಪುರಾಣಿಕ್, ನೀಲಾವರ ಶ್ರೀ ಸುರೇಂದ್ರ ಅಡಿಗ, ಶ್ರೀ ಅಚ್ಯುತ್ತ ಪೂಜಾರಿ, ಶ್ರೀಮತಿ ಭಾಗೇಶ್ವರಿ ಮಯ್ಯ ಉಪಸ್ಥಿತರಿದ್ದರು.