ಅಡ್ವಕೇಟ್ ಡಿ.ಕೆ ಶೆಟ್ಟಿಯವರು ಓರ್ವ ಬ್ಯಾಂಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಕಾನೂನು ಪದವಿಧರ. ಹಲವಾರು ಸಂಘಟನೆಗಳಿಗೆ ಸಲಹೆಗಾರನಾಗಿ ಅಪಾರ ಜನಪ್ರಿಯತೆ ಗಳಿಸಿರುವ ಶೆಟ್ಟರು ಓರ್ವ ಚತುರ ಸಂಘಟಕರೂ ಹೌದು. ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ವಿವಿಧ ಸ್ತರಗಳಲ್ಲಿ ವಿವಿಧ ಉಪ ಸಮಿತಿಗಳ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ತನ್ನ ಕಾರ್ಯ ಕೌಶಲದಿಂದ ಗಮನ ಸೆಳೆದಿದ್ದಾರೆ. ವಿಜಯಾ ಬ್ಯಾಂಕ್ ರಿಟೈರ್ಡ್ ಆಫೀಸರ್ಸ್ ಅಸೋಸಿಯೇಶನ್, ಬಂಟ್ಸ್ ನ್ಯಾಯ ಮಂಡಳಿ ಇವುಗಳ ಅಧ್ಯಕ್ಷ ಸ್ಥಾನದಲ್ಲಿ ತನ್ನ ಗಮನಾರ್ಹ ಸೇವೆಗಳ ಮೂಲಕ ಪರಿಚಯಿಸಿಕೊಂಡಿರುವ ಇವರು ಎಲ್ಲರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ತನ್ನ ಅಧಿಕಾರಾವಧಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಘಟನೆಯನ್ನು ಇನ್ನಷ್ಟು ಸಕ್ರಿಯಗೊಳಿಸುವ ಆಶಯ ಹೊಂದಿರುವ ಶ್ರೀಯುತರು ಮಾಜಿ ಅಧ್ಯಕ್ಷರುಗಳ ಜೊತೆ ಸತತ ಸಂಪರ್ಕದಲ್ಲಿರುತ್ತಾ ಅಸೋಸಿಯೇಶನ್ ಪ್ರಗತಿ ಕುರಿತ ಸಮಾಲೋಚನೆ ಚರ್ಚೆಯಲ್ಲಿರುತ್ತಾ ಸಮಾಜ ಬಾಂಧವರಿಗೆ ಸಂಸ್ಥೆಯ ಮುಖಾಂತರ ದೊರೆಯಬಹುದಾದ ಸವಲತ್ತು ಪ್ರಯೋಜನ ಕುರಿತು ಚಿಂತನೆ ನಡೆಸುತ್ತಾ ಅದನ್ನು ಕಾರ್ಯ ರೂಪಕ್ಕೆ ತರುವಲ್ಲಿ ಪ್ರಾಮಾಣಿಕವಾಗಿ ದುಡಿಯುವ ಕನಸು ಕಂಡಿದ್ದು ತನ್ನ ಸಹವರ್ತಿಗಳ ಸಹಕಾರವನ್ನೂ ಬಯಸುತ್ತಾರೆ.ತನ್ನ ಬಾಲ್ಯದ ದಿನಗಳಿಂದಲೇ ಪ್ರತಿಭಾವಂತರಾಗಿದ್ದ ಶ್ರೀಯುತರು ಮೂಲತ ಬೋಳ ಪರ್ತಿಮಾರು ಗುತ್ತು ಬಲ್ಯಾರು ದಡ್ಡುವಿನವರಾಗಿದ್ದು ಮುಂಬಯಿ ನಗರದ ಹಿರಿಯ ಹೊಟೇಲ್ ಉದ್ಯಮಿ ಶ್ರೀ ಕಾಡ್ಯ ಎಂ ಶೆಟ್ಟಿ ಹಾಗೂ ಸುರತ್ಕಲ್ ಮದ್ಯ ಕುಂಜರ ಬಾಳಿಕೆ ದಿ.ಭವಾನಿ ಕೆ ಶೆಟ್ಟಿ ದಂಪತಿಯ ಸುಪುತ್ರರು. ಇವರೋರ್ವ ಶಿಕ್ಷಣ ಪ್ರೇಮಿಯಾಗಿದ್ದು ಬಡ ವಿದ್ಯಾರ್ಥಿಗಳ ಶಿಕ್ಷಣ ಕುರಿತಂತೆ ಅಪಾರ ಕಾಳಜಿ ವಹಿಸುತ್ತಾರೆ. ಕಾರ್ಕಳ ಕಲ್ಯಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೆಳ್ಮಣ್ ಪಿ.ಯು ಕಾಲೇಜಿನ ಅಭಿವೃದ್ಧಿ ಕಾರ್ಯದಲ್ಲಿ ಅಪಾರ ಆಸಕ್ತಿ ವಹಿಸಿರುತ್ತಾರೆ. ಜವಾಬ್ ನ ಸ್ಥಾಪಕ ಸದಸ್ಯರಾಗಿ, ಮಹಾ ಪೋಷಕರಾಗಿ ಸ್ವಸಮುದಾಯ ಬಾಂಧವರ ಏಳಿಗೆಗೆ ಶ್ರಮಿಸಿರುತ್ತಾರೆ. ಆಹಾರ್ ಹೊಟೇಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಹಾಗೂ ಬಂಟರ ಸಂಘ ಮುಂಬಯಿಯ ಚುನಾವಣಾಧಿಕಾರಿಯಾಗಿಯೂ ಮಹತ್ತರ ಸೇವೆ ಸಲ್ಲಿಸಿದ ಶ್ರೀಯುತರು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 30 ವರ್ಷ ಪ್ರಾಮಾಣಿಕ ರೀತಿಯ ಸೇವೆ ಸಲ್ಲಿಸಿದ್ದು ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸದ್ಯ ಅಂಧೇರಿ ಪಶ್ಚಿಮ ನಿವಾಸಿಯಾಗಿದ್ದು ಕೇಂದ್ರ ಸರಕಾರದ ವತಿಯಿಂದ ನೋಟರಿಯಾಗಿಯೂ ಮನ್ನಣೆ ಪಡೆದಿದ್ದು ಅವಿರತ ಕಾರ್ಯಶೀಲರಾಗಿರುವ ಜೊತೆಗೆ ತನ್ನ ಸಮುದಾಯ ಬಾಂಧವರ ಹಿತಾಸಕ್ತಿ ಕುರಿತಂತೆ ಕರ್ತವ್ಯ ನಿರ್ವಹಿಸಿಕೊಂಡು ಬಾಂಬೇ ಬಂಟ್ಸ್ ಅಸೋಸಿಯೇಶನ್ ಇದರ ಸಾರಥ್ಯ ವಹಿಸಿಕೊಂಡು ಕಾರ್ಯ ಮಗ್ನರಾಗಿರುತ್ತಾರೆ. ಇವರ ಅಧ್ಯಕ್ಷ ಸ್ಥಾನ ಆಯ್ಕೆ ಕುರಿತಂತೆ ಜಾಗತಿಕ ಬಂಟರ ಸಂಘದ ಒಕ್ಕೂಟ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಶ್ರೀ ಪ್ರವೀಣ್ ಭೋಜ ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ನಿಕಟ ಪೂರ್ವ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದ್ದಾರೆ.

ಇವರ ಸಮರ್ಥ ನಾಯಕತ್ವದಲ್ಲಿ ಬಾಂಬೇ ಬಂಟ್ಸ್ ಅಸೋಸಿಯೇಶನ್ ಇನ್ನಷ್ಟು ಪ್ರಸಿದ್ಧಿ ಪಡೆಯಲಿ. ಧರ್ಮಪತ್ನಿ ಹೇಮಲತಾ ಶೆಟ್ಟಿ, ಪುತ್ರ ಅರ್ಚಿತ್ ಶೆಟ್ಟಿ, ಸೊಸೆ ಸ್ತುತಿ ಶೆಟ್ಟಿ, ಮಗಳು ದೀನಿಕ ಶೆಟ್ಟಿ, ಅಳಿಯ ದಕ್ಷಿಣ್ ಶೆಟ್ಟಿ, ಮೊಮ್ಮಗಳು ಅಕ್ಷರಾ ಶೆಟ್ಟಿಯವರೊಂದಿಗೆ ಸುಖಿ ಸಂಸಾರ ನಡೆಸುತ್ತಿರುವ ಶ್ರೀಯುತರು ಆರೋಗ್ಯವಂತರಾಗಿ ಕಾರ್ಯ ನಿರ್ವಹಿಸಲು ಸಮರ್ಥರಾಗಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾರೈಸುತ್ತದೆ.
ಲೇಖನ : ಅರುಣ್ ಶೆಟ್ಟಿ ಎರ್ಮಾಳ್