
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಕರ್ನಾಟಕ ಕಾನೂನು ವಿವಿ, ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಹಾಗೂ ಆಳ್ವಾಸ್ ಸ್ವಾಯತ್ತ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟ -2026 ಸ್ವರಾಜ್ಯ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಮಂಗಳೂರು ಕಸ್ಟಮ್ಸ್ ಇಲಾಖೆಯ ನಿವೃತ್ತ ಅಧೀಕ್ಷಕ ದಿನೇಶ್ ಕುಂದರ್, ಆಳ್ವಾಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಅವಕಾಶಗಳನ್ನು ಒದಗಿಸುತ್ತಿರುವುದು ಪ್ರಶಂಸನೀಯ. ಡಾ. ಎಂ. ಮೋಹನ್ ಆಳ್ವರು ಕರ್ನಾಟಕದ ಶಿಕ್ಷಣ ಕ್ಷೇತ್ರದ ಅನರ್ಘ್ಯ ರತ್ನ. ಆಳ್ವಾಸ್ ಕ್ರೀಡಾ ದತ್ತು ಸ್ವೀಕಾರ ಯೋಜನೆಯಡಿ ದೇಶದ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ತರಬೇತಿ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆಯುತ್ತಿರುವುದು ಸಂಸ್ಥೆಯು ಕ್ರೀಡೆಗೆ ನೀಡುತ್ತಿರುವ ಬದ್ಧತೆಯನ್ನು ತೋರಿಸುತ್ತದೆ ಎಂದರು. ಪ್ರತಿದಿನ ಕನಿಷ್ಠ ಒಂದು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಗಮನ, ಏಕಾಗ್ರತೆ ಹಾಗೂ ಶಾರೀರಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸು ಚುರುಕಾಗಿ ಅಧ್ಯಯನದ ಮೇಲಿನ ಆಸಕ್ತಿ ಹೆಚ್ಚುತ್ತದೆ. ಮಾನಸಿಕ ಸಮತೋಲನ ಕೂಡ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಕ್ರೀಡಾಕೂಟದ ಅಂಗವಾಗಿ ಬಾಲಕರ ಹಾಗೂ ಬಾಲಕಿಯರಿಗಾಗಿ 100 ಮೀ., 200 ಮೀ., 400 ಮೀ. ಮತ್ತು 800 ಮೀ. ಓಟ ಸ್ಪರ್ಧೆಗಳು ನಡೆದವು. ಜೊತೆಗೆ ಬಾಲಕರಿಗೆ 3000 ಮೀಟರ್ ಹಾಗೂ ಬಾಲಕಿಯರಿಗೆ 1500 ಮೀಟರ್ ಓಟದ ಸ್ಪರ್ಧೆಗಳು ನಡೆದವು. ಉದ್ದ ಜಿಗಿತ (ಲಾಂಗ್ ಜಂಪ್), ಶಾಟ್ ಪುಟ್, 4*100 ಮೀಟರ್ ರಿಲೇ ಹಾಗೂ 4*400 ಮೀಟರ್ ರಿಲೇ ಓಟ ಸ್ಪರ್ಧೆಗಳು ನಡೆದವು. ಉದ್ಘಾಟನಾ ಸಂದರ್ಭದಲ್ಲಿ ಹೀಲಿಯಂ ಬಲೂನುಗಳನ್ನು ಆಕಾಶಕ್ಕೆ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಚಿನ್ನದ ಪದಕ ವಿಜೇತೆ ರೇಖಾ ಬಸಪ್ಪ ಕ್ರೀಡಾ ಪ್ರತಿಜ್ಞಾವಿಧಿಯನ್ನು ಓದಿದರು. ನಾಗೇಂದ್ರ ಅಣ್ಣಪ್ಪ ನಾಯಕ್, ಲಕ್ಷ್ಮಿ ವೈಷ್ಣವಿ ಹಾಗೂ ನಝತ್ ಹೊಸ್ರುರ್, ಸರ್ವಜೀತ್ ಹಾಗೂ ಗೀತಾ ಚೌಕಾಸಿ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು. ಸಭಾ ಕಾರ್ಯಕ್ರಮವನ್ನು ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಸ್ವಾಗತಿಸಿ, ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ರೋಷನ್ ಪಿಂಟೋ ವಂದಿಸಿದರು. ಕಾರ್ಯಕ್ರಮವನ್ನು ರಾಜೇಶ್ ಡಿ’ಸೋಜಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಅಂತರಾಷ್ಟ್ರೀಯ ಅಥ್ಲೀಟ್ ದೀಕ್ಷಿತಾ ಆರ್ ಗೌಡರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಕಬಡ್ಡಿ ವಿಶ್ವಕಪ್ ವಿಜೇತ ತಂಡದ ಧನಲಕ್ಷ್ಮಿ ಹಾಗೂ ಆಳ್ವಾಸ್ ಸಂಸ್ಥೆಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.


























































































































