
ಕಳೆದ 8 ವರ್ಷಗಳ ಹಿಂದೆ 11 ಮಂದಿ ಸಮಾನ ಮನಸ್ಕ ಯುವಕ ಯುವತಿಯರು ಸೇರಿಕೊಂಡು ತಾವು ದುಡಿದ ಒಂದಂಶವನ್ನು ಈ ಸಮಾಜದ ನೆರವಿಗಾಗಿ ಅರ್ಪಿಸಬೇಕೆನ್ನುವ ಉದ್ದೇಶದಿಂದ ತನ್ನ ದಿಟ್ಟ ಸಂದೇಶಗಳಿಂದ ಜನಮನವನ್ನು ತಟ್ಟಿದ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯಂದು ದೇಶ ವಿದೇಶದ ಕ್ಯಾನ್ಸರ್ ರೋಗಿಗಳಿಗೆ ಆಶ್ರಯವನ್ನು ನೀಡುತ್ತಿರುವ ಮುಂಬಯಿ ಮಹಾನಗರದ ದಾದರ್ ನಲ್ಲಿರುವ ಸಂತ ಘಾಡ್ಗೆ ಮಹಾರಾಜ್ ಧರ್ಮಶಾಲೆಯಲ್ಲಿ ಶಿವಾಯ ಫೌಂಡೇಶನ್ ಸಂಸ್ಥೆಯ ಉದ್ದೀಪನವಾಯಿತು. ನಂತರ ಈ ಸಂಸ್ಥೆಯ ಕೆಲಸ, ಕಾರ್ಯ ಚಟುವಟಿಕೆಗಳು ಆಶಕ್ತರ ಸೇವೆಗೆ ಮುಡಿಪಾಗಿಟ್ಟ ಪರಿ ನಿಜವಾಗಿಯೂ ಜನಮನ ತಟ್ಟುವಂತಹುದು. ವೈದ್ಯಕೀಯ ನೆರವಿನೊಂದಿಗೆ ಆರಂಭವಾದ ಶಿವಾಯ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಮತ್ತಷ್ಟು ವಿಸ್ತಾರಗೊಳ್ಳುತ್ತಾ ಹೋಯಿತು. ಮುಂದೆ ಸಂಸ್ಥೆಯು ಪ್ರತಿ ತಿಂಗಳು ವೈದ್ಯಕೀಯ ನೆರವು, ಶೈಕ್ಷಣಿಕ ಸಹಾಯ, ಪ್ರತಿಭಾವಂತ ಸರಕಾರಿ ಶಾಲಾ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೆ.ಇ.ಎಮ್ ಮುನ್ಸಿಪಲ್ ಆಸ್ಪತ್ರೆ ಮುಂಬಯಿಯ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ರೋಗಿಗಳು ಮತ್ತು ರೋಗಿಗಳ ಸಂಬಂಧಿಕರಿಗೆ, ಬೀದಿಬದಿ ನಿರಾಶ್ರಿತರಿಗೆ ಪ್ರತಿ ರವಿವಾರ ಹಾಲು, ಹಣ್ಣು ಹಂಪಲು, ಪಾನೀಯ ಮತ್ತು ಒಂದೊತ್ತಿನ ಊಟ ವಿತರಣೆ, ವೃದ್ಧಾಶ್ರಮ, ಅನಾಥಾಶ್ರಮ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಗಳಿಗೆ ಭೇಟಿ ನೀಡಿ ಅವರ ಮೂಲಭೂತ ಸೌಕರ್ಯಗಳ ಪೂರೈಕೆ, ಬಡ ಕುಟುಂಬಗಳಿಗೆ ತಿಂಗಳ ರೇಷನ್ ಪೂರೈಕೆ, ಬಡ ಕುಟುಂಬಗಳಿಗೆ ಸೋಲಾರ್ ದೀಪ ಅಳವಡಿಕೆಗೆ ನೆರವು, ವಿಧವಾ ವೇತನದಂತಹ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿದೆ.

ಶಿವಾಯ ಫುಡ್ ಡ್ರೈವ್ ಇದು ಶಿವಾಯ ಸಂಸ್ಥೆಯ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು. ಸರಕಾರಿ ಆಸ್ಪತ್ರೆಯ ಹೊರ ರೋಗಿಗಳು ಮತ್ತು ಅವರ ಸಂಬಂಧಿಕರು ದೂರದ ಊರು, ರಾಜ್ಯಗಳಿಂದ ಚಿಕಿತ್ಸೆಗಾಗಿ ಕೆ.ಇ.ಎಂ ಮತ್ತು ಟಾಟಾದಂತಹ ಆಸ್ಪತ್ರೆಗೆ ಪ್ರತಿನಿತ್ಯ ಬರುತ್ತಾರೆ. ದಿನನಿತ್ಯ ಅಂತವರಿಗೆ ಊಟ ತಿಂಡಿಗಾಗಿ ಹೋಟೆಲ್ ಗಳನ್ನು ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇದನ್ನು ಮನಗಂಡ ಶಿವಾಯದ ಸದಸ್ಯರು ಪ್ರತಿ ಆದಿತ್ಯವಾರ ಇಂತವರ ಹೊಟ್ಟೆಯ ಹಸಿವು ತಣಿಸುವ ಕೆಲಸವನ್ನು ಅತ್ಯಂತ ಕಾಳಜಿಯಿಂದ ಮಾಡಿಕೊಂಡು ಬರುತ್ತಿದ್ದಾರೆ. ಪ್ರಾರಂಭದಲ್ಲಿ ತಿಂಗಳಿಗೆ ಸುಮಾರು 250- 300 ಮಂದಿಗೆ ವಿತರಣೆಯಾಗುತ್ತಿದ್ದ ಆಹಾರ ಇವತ್ತು ಸಾವಿರ ಜನರನ್ನೂ ಮೀರಿದೆ. ಕಳೆದ 8 ವರ್ಷಗಳಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಆಹಾರದ ಅನ್ನ ದಾನ ಮಾಡಿದ ಸಮಾಧಾನ ಶಿವಾಯ ಫೌಂಡೇಶನ್(ರಿ.) ಸಂಸ್ಥೆಯದ್ದು. ಪ್ರತಿ ವರ್ಷ ಚಳಿಗಾಲ ಬಂತೆಂದರೆ ಶಿವಾಯದ ಸದಸ್ಯರು ಮುಂಬೈಯ ರಸ್ತೆಗಳಲ್ಲಿ ರಾತ್ರಿ ಬ್ಲಾಂಕೇಟ್ ವಿತರಣೆಗಳಲ್ಲಿ ತೊಡಗುತ್ತಾರೆ. ಚಳಿಗಾಲದಲ್ಲಿ ಬೀದಿ ಬದಿಯನ್ನು ಆಶ್ರಯಿಸುವವರೂ ಕೂಡ ಬೆಚ್ಚಗಿನ ನಿದ್ದೆಯಿಂದ ವಂಚಿತರಾಗಬಾರದು ಎಂಬುವುದು ಶಿವಾಯ ಸಂಸ್ಥೆಯ ಸದಸ್ಯರ ಕಾಳಜಿ.

ಶಿವಾಯ ಫೌಂಡೇಶನ್ ಸಂಸ್ಥೆ ಕೇವಲ ಮುಂಬೈ ಮಹಾನಗರಕ್ಕೆ ಸೀಮಿತವಾಗಿ ನಿಂತಿಲ್ಲ. ಪ್ರತೀ ವರ್ಷ ಊರಿನಲ್ಲಿ ಸರಕಾರಿ ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಸಹಾಯ ನೀಡುತ್ತಾ ಲಕ್ಷಾಂತರ ರೂಪಾಯಿಗಳನ್ನು ಶೈಕ್ಷಣಿಕ ಯೋಜನೆಗಳಿಗೆ ವ್ಯಯಿಸಿದೆ. ಜೊತೆಗೆ ಕಳೆದ ವರ್ಷದಿಂದ ತನ್ನ ಸಮಸ್ತ ಜೀವನವನ್ನೇ ಸಮಾಜ ಸೇವೆಗಾಗಿ ಮುಡಿಪಾಗಿಸಿದ ವ್ಯಕ್ತಿಗಳನ್ನು ಗುರುತಿಸಿ ‘ಶಿವಾಯ ಪ್ರೇರಣಾ ಪ್ರಶಸ್ತಿ’ಯನ್ನು ನೀಡಿ ಸಮಾಜ ಸೇವೆಯ ಮಹತ್ವವನ್ನು ಈ ಸಮಾಜಕ್ಕೆ ತಿಳಿಸಿ ಕೊಡುವುದರ ಮೂಲಕ ಇತರರು ಆಶಕ್ತರ ಸೇವೆಗೆ ಮುಂದೆ ಬರುವಂತೆ ಪ್ರೇರೇಪಿಸುವ ಕೆಲಸಕ್ಕೆ ಚಾಲನೆ ನೀಡಿದೆ. ಕಳೆದ ವರ್ಷ ಪಡುಬಿದ್ರಿ ಬಂಟರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶಕ್ತರ ಪಾಲಿನ ದೇವತೆ ಸುಮಾರು 200ಕ್ಕೂ ಹೆಚ್ಚು ಮಂದಿ ತಮ್ಮ ಮನೆಯವರಿಂದಲೇ ತಿರಸ್ಕಾರಗೊಂಡಿರುವ ಅನಾಥರು, ಬೀದಿ ಬದಿ ನಿರಾಶ್ರಿತರು, ಅಂಗವಿಕಲರು, ಮಾನಸಿಕ ಅಸ್ವಸ್ಥರನ್ನು ಸಲಹುತ್ತಿರುವ ಕಾರ್ಕಳದ ಹೊಸ ಬೆಳಕು ಆಶ್ರಮದ ತನುಜಾ ತರುಣ್ ಅವರಿಗೆ ಶಿವಾಯ ಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಿದೆ.
ಕೊಪ್ಪಳ ಗವಿಸಿದ್ದೇಶ್ವರ ಮಠದಲ್ಲಿ ಶಿವಾಯ ಸಂಸ್ಥೆಗೆ ಗೌರವ : ಯಾವುದೇ ಪ್ರಚಾರದ ಅಬ್ಬರವಿಲ್ಲದೆ, ಆಡಂಬರಕ್ಕೆ ಎಡೆ ಮಾಡಿಕೊಡದೆ ತಾನಾಯಿತು ತನ್ನ ಕೆಲಸವಾಯಿತು ಎಂದು ತನ್ನ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಶಿವಾಯ ಫೌಂಡೇಶನ್ ಸಂಸ್ಥೆಯ ಕೆಲಸ ಕಾರ್ಯಗಳ ಕಾರ್ಯವೈಖರಿಗೆ ದೂರದ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರನ ಆಶೀರ್ವಾದವೂ ಸಿಕ್ಕಿದೆ. ದಕ್ಷಿಣದ ಕುಂಭ ಮೇಳವೆಂದೇ ಪ್ರಸಿದ್ಧಿ ಪಡೆದ ಪ್ರತೀ ವರ್ಷ ಲಕ್ಷಾಂತರ ಜನರು ಒಂದೆಡೆ ಸೇರುವ ಕೊಪ್ಪಳ ಗವಿ ಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ಧಾರ್ಮಿಕ ವೇದಿಕೆಯಲ್ಲಿ ಕನ್ನಡನಾಡಿನ ಶ್ರೇಷ್ಠ ಶರಣರ ಸಮ್ಮುಖದಲ್ಲಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವೆಂಕಟೇಶ್ ಕುಮಾರ್, ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮುಂತಾದವರ ಸಮಕ್ಷಮದಲ್ಲಿ ಶಿವಾಯ ಪೌಂಡೇಶನ್ ಸಂಸ್ಥೆಯು ಆಶಕ್ತರಿಗೆ ನೀಡುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಗವಿ ಸಿದ್ದೇಶ್ವರ ಮಠದ ಪೂಜ್ಯ ಅಭಿನವ ಶ್ರೀಗಳು ಸೇವಾ ಸಾಧಕ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಮುಂಬೈ ಮತ್ತು ಊರಿನ ಹಲವು ಸಾಮಾಜಿಕ ಸಂಸ್ಥೆಗಳು ಶಿವಾಯ ಸಂಸ್ಥೆಯ ಸೇವಾ ಚಟುವಟಿಕೆಗಳಿಗಾಗಿ ಅಭಿನಂದಿಸಿ ಗೌರವಿಸಿದ್ದಾರೆ. ಆದರೆ ಇದರ ಗೊಡವೆಗೆ ಹೋಗದ ಶಿವಾಯ ಫೌಂಡೇಶನ್ ಸದಸ್ಯರು ಬದುಕು ಸಮಾಜಕ್ಕರ್ಪಿತ ಎಂದು ತಮ್ಮ ಸೇವಾ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದಾರೆ. ಸುದ್ದಿಗಾಗಿ ಸೇವೆ ಮಾಡಬೇಡ, ಸೇವೆ ಮಾಡಿ ಸುದ್ದಿಯಾಗಬೇಡ, ಸದ್ದಿಲ್ಲದೆ ಸೇವೆ ಮಾಡು ಎಂಬ ಮಾತನ್ನು ಶಿವಾಯ ಫೌಂಡೇಶನ್ ಅಕ್ಷರಶಃ ಪಾಲಿಸಿಕೊಂಡು ಬರುತ್ತಿದೆ ಎಂದರೆ ತಪ್ಪಾಗಲಾರದು. ಪ್ರಾರಂಭದಲ್ಲಿ 11 ಜನ ಸಮಾನ ಮಾನಸ್ಕರಿಂದ ಪ್ರಾರಂಭವಾದ ಶಿವಾಯ ಫೌಂಡೇಶನ್ (ರಿ.) ಸಂಸ್ಥೆಯಲ್ಲಿ ಈಗಲೂ ಇರುವುದು ನೂರ ಹತ್ತು ಮಂದಿ ಮಾತ್ರ. ಶಿವಾಯದ ಪ್ರತಿ ಸದಸ್ಯರು ತಾವು ದುಡಿದ ಒಂದಂಶ ಸಮಾಜ ಸೇವೆಗೆ ಮೀಸಲು ಎಂಬ ಪ್ರತಿಜ್ಞೆಯಂತೆ ಕೆಲಸ ಮಾಡುತ್ತಾರೆ. ಈ ಸಂಸ್ಥೆಯಲ್ಲಿ ಜಾತಿ ಭೇದವಿಲ್ಲ, ಸಣ್ಣವ ದೊಡ್ಡವವೆಂಬ ತಾರತಮ್ಯವಿಲ್ಲ. ಸದಸ್ಯರಿಗೆ ಇಂತಿಷ್ಟೇ ದೇಣಿಗೆ ನೀಡಬೇಕೆಂಬ ನಿಯಮವಿಲ್ಲ. ಸೇವಾಹಿ ಪರಮೋ ಧರ್ಮ ಎನ್ನುವ ಶಿವಾಯ ಸಂಸ್ಥೆ ಕಳೆದ ಎಂಟು ವರ್ಷಗಳಲ್ಲಿ ಅಶಕ್ತರ ಸೇವೆಗಾಗಿ ವಿತರಿಸಿದ ಮೊತ್ತ ಒಂದು ಕೋಟಿಯನ್ನೂ ಮೀರಿರುವುದು ಹನಿಗೂಡಿ ಹಳ್ಳ ಎಂಬ ಮಾತಿಗೆ ಒಂದು ಚಿಕ್ಕ ಉದಾಹರಣೆ ಎನ್ನಬಹುದು.
ಶಾರದಾ ಶ್ಯಾಮ್ ಶೆಟ್ಟಿ ವೇದಿಕೆಯಲ್ಲಿ ಪ್ರೇರಣಾ – 2026 : ಕರ್ಮಭೂಮಿ ಮುಂಬೈ ಮತ್ತು ಊರಿನಲ್ಲಿ ಸದಾ ಕ್ರಿಯಾಶೀಲವಾಗಿ ಸೇವಾ ಚಟುವಟಿಕೆಗಳನ್ನು ಸಂಘಟಿಸುತ್ತಾ ಸುತ್ತಲಿನ ಸಮಾಜಕ್ಕೆ ಪ್ರೇರಣಾದಾಯಕವಾಗಿರುವ ಶಿವಾಯ ಫೌಂಡೇಶನ್ ಈ ವರ್ಷದ ವಾರ್ಷಿಕ ಸಂಭ್ರಮಕ್ಕೆ ಪ್ರೇರಣಾ -2026 ಎಂಬ ಶೀರ್ಷಿಕೆ ನೀಡಿ ಮತ್ತಷ್ಟು ಯುವ ಸಮುದಾಯವನ್ನು ಸಮಾಜ ಸೇವೆಗೆ ಆಕರ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಮುಂಬಯಿಯ ಹೆಸರಾಂತ ಉದ್ಯಮಿ, ಸಮಾಜಸೇವಕ, ಶಿವಾಯ ಸಂಸ್ಥೆಗೆ ಪ್ರಾರಂಭದಿಂದಲೂ ಆಶೀರ್ವದಿಸಿ, ಪ್ರೋತ್ಸಾಹ ನೀಡುತ್ತಾ ಬಂದಿರುವ ಶ್ಯಾಮ್ ಎನ್. ಶೆಟ್ಟಿಯವರ ಹೆಸರನ್ನು ಈ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದ ವೇದಿಕೆಗೆ ನೀಡಿದೆ. ಶ್ಯಾಮ್ ಎನ್. ಶೆಟ್ಟಿ ಮುಂಬಯಿ ಮಹಾನಗರದಲ್ಲಿ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾಗಿ, ಫೆಡರೇಷನ್ ಆಫ್ ಹೋಟೇಲ್ಸ್ ಮಹಾರಾಷ್ಟ್ರದ ಉಪಾಧ್ಯಕ್ಷರಾಗಿ, ಓರ್ವ ಚಲನಚಿತ್ರ ನಿರ್ಮಾಪಕರಾಗಿ, ಬಹುದೊಡ್ಡ ಕಲಾ ಪ್ರೋತ್ಸಾಹಕರಾಗಿ ‘ಪ್ರೀತಿಯ ಶಾಮಣ್ಣ’ ಎಂದೇ ಜನಮಾನಸದಲ್ಲಿ ಚಿರಪರಿಚಿತರಾಗಿರುವವರು. ಅವರ ಪತ್ನಿ ಶಾರದಾ ಎಸ್. ಶೆಟ್ಟಿ ಕೂಡ ಬಾಂಬೇ ಬಂಟ್ಸ್ ಅಸೋಸಿಯೇಷನ್ ಮಾಜಿ ಮಹಿಳಾ ಕಾರ್ಯಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದವರು.
ಶಿವಾಯ ಫೌಂಡೇಶನ್ನಿನ ಈ ವರ್ಷದ ವಾರ್ಷಿಕ ಕಾರ್ಯಕ್ರಮವು ಮಾರ್ಚ್ 15ರ ಭಾನುವಾರದಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಜೂಹಿನಗರದಲ್ಲಿರುವ ಬಂಟ್ಸ್ ಸೆಂಟರ್ ನಲ್ಲಿ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಣಿತ ಭಜನಾ ಸ್ಪರ್ಧೆ, ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆ ಮತ್ತು ಐಲೇಸಾ ತಂಡದಿಂದ ಗಾನವೈಭವ, ಪ್ರೇರಣಾ ಪ್ರಶಸ್ತಿ ಪ್ರಧಾನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಧ್ಯಾಹ್ನ 1:30 ಗಂಟೆಗೆ ಸರಿಯಾಗಿ ಜರಗಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರು ವಹಿಸಲಿದ್ದು, ಧರ್ಮದರ್ಶಿ ರಮೇಶ್ ಎಂ. ಪೂಜಾರಿ (ಅಧ್ಯಕ್ಷರು ಶನೀಶ್ವರ ಮಂದಿರ ನೆರುಲ್) ಶುಭಾಶೀರ್ವಚನ ನೀಡಲಿದ್ದಾರೆ. ಬೋಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ್ ಶೆಟ್ಟಿ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಪ್ರಸಾದ್ ರೈ ಕಲಾಯಿಗುತ್ತು ಉದ್ಯಮಿ, ಸಂದೇಶ್ ಶೆಟ್ಟಿ ಇನ್ನಂಜೆ ಉದ್ಯಮಿ ಪುಣೆ, ಬಂಟರ ಸಂಘ ಮುಂಬೈಯ ನವಿ ಮುಂಬೈ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಗೀತಾ ಶೆಟ್ಟಿ ಮುಂತಾದ ಗಣ್ಯರ ಉಪಸ್ಥಿತಿ ಇರಲಿದೆ.
ಸಮಾರೋಪ ಸಮಾರಂಭದ ವೇದಿಕೆಯ ಅಧ್ಯಕ್ಷತೆಯನ್ನು ಶಿವಾಯ ಫೌಂಡೇಶನ್ನಿನ ಗೌರವಾಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನವಿ ಮುಂಬೈಯ ನಗರ ಸೇವಕ ಸುರೇಶ್ ಶೆಟ್ಟಿ, ಗೌರವ ಅತಿಥಿಗಳಾಗಿ ಬಾಂಬೇ ಬಂಟ್ಸ್ ಅಸೋಸಿಯೇಶನ್ನಿನ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಐಕಳ ಕಿಶೋರ್ ಕೆ. ಶೆಟ್ಟಿ, ನಿತ್ಯಾನಂದ ಸೇವಾ ಸಂಘ ಬೇಲಾಪುರ ಅಧ್ಯಕ್ಷ ಭಾಸ್ಕರ್ ಶೆಟ್ಟಿ, ನವಿ ಮುಂಬೈ ಹೋಟೆಲ್ ಅಸೊಸಿಯೇಷನ್ ಅಧ್ಯಕ್ಷ ದಯಾನಂದ ಶೆಟ್ಟಿ, ತುಳುಕೂಟ ಐರೋಲಿಯ ಗೌರವಾಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರಿ, ಬಂಟರ ಸಂಘ ಮುಂಬೈಯ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಬಿಜೆಪಿ ಸೌತ್ ಸೆಲ್ ಮಹಾರಾಷ್ಟ್ರದ ಕಾರ್ಯದರ್ಶಿ ಸದಾನಂದ ಪೂಜಾರಿ, ಬಂಟರ ಸಂಘ ಮುಂಬೈಯ ನವಿ ಮುಂಬೈ ಪ್ರಾದೇಶಿಕ ಸಮಿತಿಯ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಮಾಳ ಮುಂತಾದ ಗಣ್ಯರು ಆಗಮಿಸಲಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಶಿವಾಯ ಫೌಂಡೇಶನ್ ಸಂಸ್ಥೆಯು ಸಮಾಜಕ್ಕೆ ತಮ್ಮ ಅಪೂರ್ವ ಸೇವೆಗಳ ಮೂಲಕ ಸಮಾಜದ ಆಸ್ತಿಯಾಗಿರುವ ಮತ್ತು ಸಮಾಜಕ್ಕೆ ಪ್ರೇರಣೆಯಾಗಿರುವ ವ್ಯಕ್ತಿಗಳನ್ನು ಗುರುತಿಸಿ ಕೊಡಮಾಡುವ ಶಿವಾಯ ಪ್ರೇರಣಾ -2026 ಪ್ರಶಸ್ತಿಯನ್ನು ನವಿಮುಂಬಯಿ ಉದ್ಯಮಿ, ಮೂಕಾಂಬಿಕಾ ಮಂದಿರದ ನಲ್ಲೂರು ಅಣ್ಣಿ ಸಿ. ಶೆಟ್ಟಿ ಸ್ವೀಕರಿಸಲಿದ್ದಾರೆ. ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮವು ಜರಗಲಿದ್ದು ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಅಭಿವೃದ್ಧಿಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಸುರೇಂದ್ರ ಕೆ. ಶೆಟ್ಟಿ ಮತ್ತು ಪದ್ಮಶಾಲಿ ಸೇವಾ ಸಮಾಜ ಇದರ ಅಧ್ಯಕ್ಷ ಕೃಷ್ಣಾನಂದ ಶೆಟ್ಟಿಗಾರ್ ಅಶಕ್ತ ಸಮಾಜಕ್ಕಾಗಿ ಮಾಡಿದ ಸೇವೆಗಾಗಿ ಶಿವಾಯ ಸಂಸ್ಥೆಯ ಸನ್ಮಾನ ಸ್ವೀಕರಿಸಲಿದ್ದಾರೆ. ಶಿವಾಯ ಫೌಂಡೇಶನ್ ಇದರ ಈ ವಾರ್ಷಿಕ ಕಾರ್ಯಕ್ರಮಕ್ಕೆ ನಗರದ ಎಲ್ಲಾ ಕಲಾಭಿಮಾನಿ ಬಂಧುಗಳು ಆಗಮಿಸಿ ಆಶೀರ್ವಾದಿಸಬೇಕೆಂದು ಶಿವಾಯ ಫೌಂಡೇಶನ್ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9152775530 ಅಥವಾ 9702833310 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.


























































































































